ಸೋಮವಾರ, ಮಾರ್ಚ್ 1, 2021
30 °C

5 ಕೊಠಡಿ: 616 ವಿದ್ಯಾರ್ಥಿ ಅಭ್ಯಾಸ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

5 ಕೊಠಡಿ: 616 ವಿದ್ಯಾರ್ಥಿ ಅಭ್ಯಾಸ!

ಸಿಂಧನೂರು: ತಾಲ್ಲೂಕಿನ ಗುಂಜಳ್ಳಿ ಗ್ರಾಮ ಹೋಬಳಿ ಕೇಂದ್ರ. ಇಲ್ಲಿನ ಸರ್ಕಾರಿ ಶಾಲೆಯಲ್ಲಿ ತಲಾ 30 ಮಕ್ಕಳು ಕೂಡಬಹುದಾದ 5 ಕೊಠಡಿಗಳಲ್ಲಿ 616 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಅಬ್ಬಬ್ಬಾ ಎಂದರೆ 200 ಮಕ್ಕಳಿಗೆ ಸಾಕಾಗಬಹುದಾದ ಈ ಕೊಠಡಿಗಳಲ್ಲಿ 616 ವಿದ್ಯಾರ್ಥಿಗಳನ್ನು ಅದೇಗೆ ತುಂಬುತ್ತಾರೆನ್ನುವುದೇ ಯಕ್ಷ ಪ್ರಶ್ನೆಯಾಗಿದೆ.ಕೆಲ ತರಗತಿಗಳ ಮಕ್ಕಳನ್ನು ಶಾಲಾ ಅಂಗಳದಲ್ಲಿ, ಮತ್ತೆ ಕೆಲ ತರಗತಿಗಳ ಮಕ್ಕಳನ್ನು  ಶಾಲಾ ಮುಂಭಾಗದ  ಬೀದಿಯಲ್ಲಿ ಕುಳ್ಳಿರಿಸಿ ಪಾಠ ಮಾಡುತ್ತಿರುವುದನ್ನು ನೋಡುವುದೇ ಒಂದು ವಿಸ್ಮಯ. ಕೊಠಡಿಯಲ್ಲಿ ಬೋಧಿಸುವ ಶಿಕ್ಷಕರ ಧ್ವನಿ ಮುಂಭಾಗದ ವಿದ್ಯಾರ್ಥಿಗಳಿಗೆ, ಮುಂಭಾಗದಲ್ಲಿ ಪಾಠ ಮಾಡುವ ಶಿಕ್ಷಕರ ಬೋಧನೆ ಕೊಠಡಿಗಳಲ್ಲಿರುವ ಮಕ್ಕಳಿಗೆ ಪರಸ್ಪರ ಪ್ರತಿಧ್ವನಿಸುತ್ತಿರುತ್ತದೆ. ಒಳಗಿನವರ ಪಾಠವನ್ನು ಹೊರಗಿನವರು, ಹೊರಗಿನವರ ಪಾಠವನ್ನು ಒಳಗಿನವರು ಕೇಳಬಹುದು. ಹೀಗಾಗಿ ಯಾವ ಮಕ್ಕಳಿಗೂ ಶಿಕ್ಷಕರು ಹೇಳಿದ ವಿಷಯಗಳು ತಿಳಿಯದೇ ಕೇವಲ ಹಾಜರಿ ಹಾಕಿ ಹೋಗುವುದೇ ವಿದ್ಯಾರ್ಥಿಗಳ ಕೆಲಸವಾಗಿದೆ.ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರೌಢಶಾಲೆ ಮಕ್ಕಳಿಗೆ ಅಭ್ಯಾಸಕ್ಕೆ ಅವಕಾಶ ಮಾಡಿಕೊಡಲಾಗಿದೆ.  ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕರು, ಪ್ರಥಮ ದರ್ಜೆ ಸಹಾಯಕರು, ವೃತ್ತಿ ಶಿಕ್ಷಕರು, ಪರಿಚಾರಕರು ಇಲ್ಲ. ಕಳೆದ ಎರಡು ವರ್ಷಗಳಿಂದ ಇದೇ ಪರಿಸ್ಥಿತಿಯಿದ್ದು ಯಾವುದೇ ಬದಲಾವಣೆ ಆಗಿಲ್ಲ.ಪರಿಸ್ಥಿತಿ ಮನಗಂಡು ಜಿಲ್ಲಾ ಪಂಚಾಯಿತಿಯು ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ 2009ನೇ ಸಾಲಿನಲ್ಲಿ ಗ್ರಾಮದಲ್ಲಿರುವ 1 ಎಕರೆ 20 ಗುಂಟೆ ಸರ್ಕಾರಿ ಜಾಗೆಯನ್ನು ಪ್ರೌಢಶಾಲೆಗೆಂದು ಪಡೆದು ಕಟ್ಟಡ ನಿರ್ಮಾಣಕ್ಕಾಗಿ 43.33 ಲಕ್ಷ ರೂಪಾಯಿ ಕಾಯ್ದಿಟ್ಟು 8 ಕೊಠಡಿ ನಿರ್ಮಾಣ ಮಾಡಲು ಕ್ಯಾಸುಟೆಕ್ ಸಂಸ್ಥೆಗೆ ಸೂಚಿಸಿದೆ.ಕಾಮಗಾರಿ ಅನುಷ್ಠಾನದ ಆದೇಶ ನೀಡಿ ಎರಡು ವರ್ಷ ಕಳೆಯುತ್ತಾ ಬಂದಿದ್ದರೂ ಇಲ್ಲಿಯವರೆಗೂ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭಿಸಿಲ್ಲ. ಇದಕ್ಕೆ ಕ್ಯಾಸುಟೆಕ್ ಹೇಳುವ ಸಬೂಬು ಬೇರೆಯೇ ಆಗಿದೆ. ಕಪ್ಪುಮಣ್ಣು ಇರುವುದರಿಂದ ಕಟ್ಟಡ ಭದ್ರವಾಗಿರಬೇಕಾದರೆ, ಬುನಾದಿಯನ್ನು ಹೆಚ್ಚು ಆಳದಿಂದ ಕಟ್ಟಬೇಕಾಗುತ್ತದೆ. ಕಾರಣ ಇನ್ನೂ 8 ಲಕ್ಷ ರೂಪಾಯಿ ಹೆಚ್ಚುವರಿಯಾಗಿ ನೀಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರನ್ನು ಕೋರಿದೆ.ಆದರೆ ಉಪ ನಿರ್ದೇಶಕರು ತಮ್ಮಲ್ಲಿ ಹಣ ಇಲ್ಲ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಹಣ ಪಡೆಯಬಹುದು ಎಂದು ತಿಳಿಸಿರುವುದಲ್ಲದೆ, ಶಾಸಕರಿಗೂ  8 ಲಕ್ಷ ರೂಪಾಯಿ ಅನುದಾನ ನೀಡುವಂತೆ ವಿನಂತಿಸಿಕೊಂಡಿದ್ದಾರೆಂದು ಹೇಳಲಾಗಿದೆ.ಒಂದು ತಿಂಗಳೊಳಗೆ ಪ್ರೌಢಶಾಲಾ ಕಟ್ಟಡ ಪ್ರಾರಂಭಿಸದಿದ್ದರೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಮುಂದೆ ವಿದ್ಯಾರ್ಥಿಗಳು ಪಾಲಕರೊಂದಿಗೆ ಪ್ರತಿಭಟನೆಗಿಳಿಯುವುದಾಗಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಹನುಮನಗೌಡ ಎಚ್ಚರಿಸಿದ್ದಾರೆ.   

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.