ಸೋಮವಾರ, ಮಾರ್ಚ್ 1, 2021
24 °C
ಸೇಡಂನ ಗುಂಡಳ್ಳಿ ಸರ್ಕಾರಿ ಶಾಲೆಯಲ್ಲಿ ಕಿರಿಯರಿಗೆ ವಿದ್ಯಾರ್ಥಿಗಳಿಂದ ಪಾಠ

83 ವಿದ್ಯಾರ್ಥಿಗಳಿಗೆ ಏಕಾಂಗಿ ಶಿಕ್ಷಕ!

ಪ್ರಜಾವಾಣಿ ವಾರ್ತೆ/ಅವಿನಾಶ್ ಎಸ್. ಬೋರಂಚಿ Updated:

ಅಕ್ಷರ ಗಾತ್ರ : | |

83 ವಿದ್ಯಾರ್ಥಿಗಳಿಗೆ ಏಕಾಂಗಿ ಶಿಕ್ಷಕ!

ಸೇಡಂ; ವಿದ್ಯಾರ್ಥಿಗಳಿಗೆ ಅನುಕೂಲ ವಾಗಲೆಂದು ಸರ್ಕಾರ ಬಿಸಿಯೂಟ, ಕ್ಷೀರಭಾಗ್ಯ ಮತ್ತು ಶೂಭಾಗ್ಯ ಸೇರಿದಂತೆ ಹಲ ಯೋಜನೆಗಳನ್ ಪರಿಚಯಿಸಿದೆ. ಇಷ್ಟೆಲ್ಲಾ ಜಾರಿಗೆ ತರುವ ಸರ್ಕಾರ ಶಿಕ್ಷಕರ ನೇಮಕಾತಿಯಲ್ಲಿ ಮಾತ್ರ ಹಿಂದೇಟು ಹಾಕುತ್ತಿದೆ. ವಿದ್ಯಾರ್ಥಿಗಳನ್ನು ಗುಣ ಮಟ್ಟದ ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.ಇದಕ್ಕೆ ನಿದರ್ಶನ ಎಂಬಂತೆ ಸೇಡಂ ತಾಲ್ಲೂಕಿನ ಗುಂಡಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 83 ವಿದ್ಯಾರ್ಥಿಗಳಿದ್ದು,  ಒಬ್ಬರೇ ಶಿಕ್ಷಕ ಪಾಠ ಮಾಡುತ್ತಾರೆ. ಜೊತೆಗೆ ಶಾಲೆಯ ಸಕಲ ಕಾರ್ಯಗಳನ್ನು ಸಹ ಮಾಡುತ್ತಾರೆ. ಈ ಜವಾಬ್ದಾರಿಯನ್ನು ಒಂದೂವರೆ ವರ್ಷದಿಂದ ನಿಭಾಯಿಸುತ್ತಿದ್ದಾರೆ.ಅವರ ಹೆಸರು ಶಿಕ್ಷಕ ರಾಜಶೇಖರ ಟೈಗರ್. 1 ರಿಂದ 7ನೇ ತರಗತಿಯವರೆಗೆ ಒಟ್ಟು 83 ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿಯುತ್ತಾರೆ. 5 ಶಿಕ್ಷಕರು ಇರಬೇಕಾದ ಕಡೆ ಒಬ್ಬರೇ ಎಲ್ಲವನ್ನೂ ಮಾಡು ತ್ತಿದ್ದಾರೆ. ಮಕ್ಕಳಿಗೆ ಯಾವುದೇ ರೀತಿ ಯಲ್ಲೂ ತೊಂದರೆಯಾಗಂತೆ ನಿರ್ವ ಹಿಸಲು ಪ್ರಯತ್ನ ನಡೆಸಿದ್ದಾರೆ.

ಶಿಕ್ಷಕರು ಅಥವಾ ಅತಿಥಿ ಶಿಕ್ಷಕರ ನೇಮಕಾತಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಲ ಬಾರಿ ಮನವಿ ಸಲ್ಲಿಸಲಾಗಿದೆ.ಶಿಕ್ಷಕರನ್ನು ಕಳುಹಿಸುವ ಆಶ್ವಾಸನೆ ಮಾತುಗಳನ್ನೆ ಹಲ ಬಾರಿ ಹೇಳಿದ್ದಾರೆ.  ಆದರೆ ಕಳೆದ ಒಂದುವರೆ ವರ್ಷದಿಂದ ಯಾವ ಶಿಕ್ಷಕರೂ ಸಹ ಇಲ್ಲಿ ಬಂದಿಲ್ಲ. ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮೋನಯ್ಯ ವಿಶ್ವಕರ್ಮ ಅವರ ನೇತೃತ್ವದಲ್ಲಿ ಕೋರಿದರೂ ಯಾವುದೇ ರೀತಿ ಪ್ರಯೋಜನವಾಗಿಲ್ಲ.ಮಕ್ಕಳಲ್ಲಿ ಕಲಿಯುವ ಉತ್ಸಾಹವಿದ್ದರೂ ಮತ್ತು ಪ್ರತಿ ನಿತ್ಯ ಹಾಜರಾಗುತ್ತಿದ್ದರೂ ಶಿಕ್ಷಕರ ಕೊರತೆ ಮಾತ್ರ ತೀವ್ರವಾಗಿ ಕಾಡುತ್ತಿದೆ. ಏನೂ ಮಾಡಬೇಕೆಂದು ದಿಕ್ಕು ತೋಚುತ್ತಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು.ಶಾಲೆಗೆ ಒಟ್ಟು ನಾಲ್ಕು ಕೋಣೆಗಳಿವೆ. ಇಡೀ ಕಟ್ಟಡವೇ ಶಿಥಿಲಾವ್ಯಸ್ಥೆಯಲ್ಲಿದ್ದು, ಇಂದು ಅಥವಾ ನಾಳೆ ಉರುಳಿ ಬೀಳುವ ಸ್ಥಿತಿಯಲ್ಲಿದೆ.  ಎರಡು ಕೋಣೆಗಳಲ್ಲಂತೂ ಮಳೆ ನೀರು ಸೋರುತ್ತದೆ.ಕಟ್ಟಡದ ಒಳಭಾಗದ ಮೇಲ್ಛಾವಣಿ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಜಾಸ್ತಿ ಮಳೆ ಬಂದರಂತೂ ಎಲ್ಲ ವಿದ್ಯಾರ್ಥಿಗಳನ್ನು ಒಂದೇ ಕೋಣೆಯಲ್ಲಿ ಸೇರಿಸಿ ಪಾಠ ಮಾಡುತ್ತೇನೆ ಶಿಕ್ಷಕ ರಾಜಶೇಖರ ಟೈಗರ್ ತಿಳಿಸಿದರು.‘ಬೆಳಿಗ್ಗೆಯಿಂದ ಸಂಜೆಯವರೆಗೆ ಪಾಠ ಮಾಡುತ್ತೇನೆ. ಅನಾರೋಗ್ಯದ ಮಧ್ಯೆಯೂ ಪಾಠ ಮಾಡುವುದು ತಪ್ಪಿಸುವುದಿಲ್ಲ. ವೈಯಕ್ತಿಕ ಸಮಸ್ಯೆ ಹಲವಿದ್ದರೂ ಶಾಲೆಗೆ ಹೆಚ್ಚು ಗಮನ ನೀಡುತ್ತೇನೆ. ರಜೆಯೂ ಹಾಕದೇ ಕರ್ತವ್ಯ ನಿರ್ವಹಿಸುತ್ತೇನೆ.  ಮಕ್ಕಳಿಗೆ ತೊಂದರೆ ಯಾಗಬಾರದು ಎಂಬ ಉದ್ದೇಶ ನನ್ನದು ಎಂದು ಅವರು ತಿಳಿಸಿದರು.ಶಾಲೆಯಲ್ಲಿ ಸುಸಜ್ಜಿತ ನೀರಿನ ಟ್ಯಾಂಕ್‌ ಇಲ್ಲ. ಸಾರ್ವಜನಿಕ ಕೊಳವೆ ಬಾವಿಯನ್ನೇ ವಿದ್ಯಾರ್ಥಿಗಳು ಕುಡಿ ಯಲು ಅವಲಂಬಿಸಿದ್ದಾರೆ.  ಶಿಕ್ಷಕ ಬಾರ ದಿದ್ದರೆ, ಶಾಲೆ ಬಾಗಿಲು ಯಾರೂ ತೆಗೆಯುವುದಿಲ್ಲ.  ಹೀಗಾಗಿ ರಾಜಶೇಖರ್‌ ಅವರು ರಜೆ ಹಾಕುವುದೇ ಅಪರೂಪ ಎಂದು ಗ್ರಾಮಸ್ಥರು ತಿಳಿಸಿದರು.

*

ಗುಂಡಳ್ಳಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಇರುವುದು ಗಮನದಲ್ಲಿದೆ. ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಸೂಚಿಸಲಾಗಿದೆ.  ಶೀಘ್ರವೇ ಸಮಸ್ಯೆ ಬಗೆಹರಿಸಲಾಗುವುದು

-ಚಂದ್ರಕಾಂತ ರೆಡ್ಡಿ , ಕ್ಷೇತ್ರ ಶಿಕ್ಷಣಾಧಿಕಾರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.