ಮಂಗಳವಾರ, ಏಪ್ರಿಲ್ 13, 2021
23 °C

850 ವಿದ್ಯಾರ್ಥಿಗಳಿಗೆ ಮೂರೇ ಕೊಠಡಿ !

ಪ್ರಜಾವಾಣಿ ವಾರ್ತೆ/ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಕೋಲಾರ: ಶಾಲೆಗಳಲ್ಲಿ ಕೊಠಡಿಗಳ ಕೊರತೆಯಿರುವ ಪರಿಣಾಮ ಮರದ ಕೆಳಗೆ ತರಗತಿಗಳನ್ನು ನಡೆಸುವುದು ಎಲ್ಲರಿಗೂ ಗೊತ್ತು. ಆದರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲೂ ಅದೇ ಪರಿಸ್ಥಿತಿಯೇ?ಈ ಪರಿಸ್ಥಿತಿ ವಿಧಾನಸಭೆ ಉಪಚುನಾವಣೆಯ ಮೂಲಕ ರಾಜ್ಯದ ಗಮನ ಸೆಳೆದಿರುವ ಜಿಲ್ಲೆಯ ಬಂಗಾರಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ. ಇಪ್ಪತ್ತೈದು ವರ್ಷದಿಂದಲೂ ಕೊರತೆಗಳ ನಡುವೆಯೇ ಕಾಲೇಜು ನಡೆಯುತ್ತಿದೆ.ಕಾಲೇಜಿನಲ್ಲಿರುವ ಬಿ.ಎ, ಬಿಬಿಎಂ ಮತ್ತು ಬಿಎಸ್‌ಸಿ ಕೋರ್ಸ್‌ಗಳಲ್ಲಿರುವ ನೂರಾರು ವಿದ್ಯಾರ್ಥಿಗಳಿಗೆ ತರಗತಿ ನಡೆಸುವ ಉದ್ದೇಶಕ್ಕೆ ಇರುವುದು ಮೂರು ಸುಸಜ್ಜಿತ ಕೊಠಡಿಗಳು ಮಾತ್ರ. ಹೀಗಾಗಿ ತರಗತಿಗಳನ್ನು ಪಾಳಿ ಪದ್ಧತಿಯಲ್ಲಿ ನಡೆಸುವ ಅನಿವಾರ್ಯವೂ ಸೃಷ್ಟಿಯಾಗಿದೆ. ಮೂರು ಕೋರ್ಸ್‌ಗಳಲ್ಲಿ ಒಟ್ಟು 850 ವಿದ್ಯಾರ್ಥಿಗಳಿದ್ದಾರೆ. ಬೆಳಿಗ್ಗೆ 10ರಿಂದ 1ಗಂಟೆವರೆಗೆ ಬಿಕಾಂ, ಬಿಬಿಎಂ, ಮಧ್ಯಾಹ್ನ 1ರಿಂದ ಸಂಜೆ 4ರವರೆಗೆ ಬಿಎ ತರಗತಿಗಳನ್ನು ನಡೆಸಲಾಗುತ್ತಿದೆ. ಕೊಠಡಿಗಳ ಕೊರತೆಯ ಪರಿಣಾಮ ಕೆಲವು ತರಗತಿಗಳನ್ನು ಮರದ ನೆರಳಲ್ಲಿ ನಡೆಸಲಾಗುತ್ತಿದೆ.ಕಾಲೇಜು ಶುರುವಾಗಿ ಎರಡೂವರೆ ದಶಕಕ್ಕೂ ಹೆಚ್ಚು ಕಾಲವಾಗಿದೆ. 985-86 ಸಾಲಿನಲ್ಲಿ ಆರಂಭವಾದ ಕಾಲೇಜು ಮೊದಲಿಗೆ ಪಟ್ಟಣದ ವಿವೇಕಾನಂದ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿತ್ತು. 1986-87ರಲ್ಲೆ ಸರ್ಕಾರ ಕಾಲೇಜು ಕಟ್ಟಡಕ್ಕೆಂದು 8 ಎಕರೆ ಜಮೀನನ್ನು ಮಂಜೂರು ಮಾಡಿದೆ. ಆದರೆ ಇದುವರೆಗೂ ಕಟ್ಟಡ ಕಟ್ಟಲು ಅನುದಾನವನ್ನೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.2000ರಲ್ಲಿ ಸ್ಥಳೀಯ ಎಪಿಎಂಸಿಯಿಂದ 22 ಲಕ್ಷವನ್ನು ಕಟ್ಟಡಕ್ಕೆಂದು ನೀಡಲಾಗಿತ್ತು. ಅದನ್ನು ಬಳಸಿ ನಿರ್ಮಿಸಲಾದ ಮೂರು ಕೊಠಡಿಗಳೇ ಇಂದಿಗೂ ವಿದ್ಯಾರ್ಥಿಗಳಿಗೆ ಆಧಾರವಾಗಿವೆ. ಕೇಂದ್ರದಿಂದ ಕಾಲೇಜು 2004ರಲ್ಲಿ ಸ್ಥಳಾಂತರವಾಯಿತು. ಅಲ್ಲಿವರೆಗೂ, ಕಾಲೇಜು ಒಂದೇ ಕೊಠಡಿಯಲ್ಲಿ ನಡೆಯುತ್ತಿತ್ತು. ಯಾವ ಸೌಕರ್ಯವೂ ಇಲ್ಲದೆ ಬಿಎ, ಬಿಕಾಂ ಕೋರ್ಸ್‌ಗಳ ಜೊತೆಗೆ ಕಾಲೇಜನ್ನು ಆರಂಭಿಸಲಾಗಿತ್ತು.ಉದ್ಯೋಗಿಗಳು: ಪ್ರಾಂಶುಪಾಲರು ಸೇರಿ ಕಾಲೇಜಿನಲ್ಲಿ 14 ಪೂರ್ಣಕಾಲಿಕ ಬೋಧಕ ಸಿಬ್ಬಂದಿ, 25 ಅತಿಥಿ ಉಪನ್ಯಾಸಕರಿದ್ದಾರೆ. ಬೋಧಕೇತರ ಸಿಬ್ಬಂದಿಯಲ್ಲಿ ಒಬ್ಬ ಕಚೇರಿ ಅಧೀಕ್ಷಕ, ದ್ವಿತೀಯ ದರ್ಜೆ ಸಹಾಯಕರೊಬ್ಬರು ಮತ್ತು ಇಬ್ಬರು ನಾಲ್ಕನೇ ದರ್ಜೆ ನೌಕರರಿದ್ದಾರೆ. ಒಂದು ಕಂಪ್ಯೂಟರ್ ಪ್ರಯೋಗಾಲಯ, ಪ್ರಾಂಶುಪಾಲರ ಕೊಠಡಿ, ಬೋಧಕರ ಕೊಠಡಿ, ಕಚೇರಿ ಕೊಠಡಿ, ಗ್ರಂಥಾಲಯವಿದೆ.ನಿರ್ಲಕ್ಷ್ಯ: ಮಹತ್ವಾಕಾಂಕ್ಷೆಯಿಂದ ಸರ್ಕಾರ ಕಾಲೇಜು ಶುರು ಮಾಡಿರುವುದೇನೋ ಸರಿ. ಆದರೆ ದಶಕಗಳುರುಳಿದರೂ ಕಾಲೇಜಿಗೆ ಅಗತ್ಯವಿರುವ ಕಟ್ಟಡ ಅನುದಾನವನ್ನು ಬಿಡುಗಡೆ ಮಾಡದೆ ಸತಾಯಿಸುತ್ತಿರುವುದು ಮಾತ್ರ ಸರಿಯಲ್ಲ. ಅದರ ದುಷ್ಪರಿಣಾಮ ವಿದ್ಯಾರ್ಥಿಗಳ ಮೇಲಾಗುತ್ತಿದೆ. ಅನುದಾನವನ್ನು ಬಿಡುಗಡೆ ಮಾಡಬೇಕು ಎಂಬ ಪ್ರಯತ್ನಗಳಿಗೆ ಸಕಾರಾತ್ಮಕ ಪ್ರತಿಕ್ರಿಯೆ ಇನ್ನೂ ಸರ್ಕಾರದಿಂದ ದೊರೆತಿಲ್ಲ ಎಂಬುದು ಹೆಸರು ಹೇಳಲು ಬಯಸದ ಸಿಬ್ಬಂದಿಯೊಬ್ಬರ ಅಸಹಾಯಕ ನುಡಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.