ಗುರುವಾರ , ಜೂನ್ 30, 2022
24 °C
ಮಾರುತಿ ಸುಜುಕಿ ಬಲೆನೊ

ಮೊದಲ ನೋಟದಲ್ಲೇ ಆಕರ್ಷಿಸುವ ಬಲೆನೊ

ಇ.ಎಸ್. ಸುಧೀಂದ್ರ ಪ್ರಸಾದ್ Updated:

ಅಕ್ಷರ ಗಾತ್ರ : | |

Prajavani

ಆರು ವರ್ಷಗಳ ನಂತರ ಹೊಸ ಸ್ವರೂಪದೊಂದಿಗೆ ರಸ್ತೆಗಿಳಿದಿರುವ ಮಾರುತಿ ಸುಜುಕಿ ಬಲೆನೊ ಹೆಸರಷ್ಟನ್ನೇ ಉಳಿಸಿಕೊಂಡು ಹೊಸತನದೊಂದಿಗೆ ಮರು ಪರಿಚಯಗೊಂಡಿದೆ. 20ಕ್ಕೂ ಹೆಚ್ಚು ಸುರಕ್ಷತಾ ಸೌಲಭ್ಯಗಳು, 40ಕ್ಕೂ ಹೆಚ್ಚು ಫೀಚರ್ಸ್‌ಗಳೊಂದಿಗೆ ಬಲೆನೊ ಈಗ ಸುದ್ದಿಯಲ್ಲಿದೆ.

ಒಳ ಹಾಗೂ ಹೊರಗಿನ ಸ್ವರೂಪಗಳು ಬದಲಾಗಿವೆ. ಎಂಜಿನ್‌ ಮತ್ತಷ್ಟು ಹೊಸತನದಿಂದ ಕೂಡಿದೆ. ತಂತ್ರಜ್ಞಾನದಲ್ಲೂ ಹಲವು ಹೊಸತುಗಳೊಂದಿಗೆ ಬಲೆನೊ ಗ್ರಾಹಕರನ್ನು ಆಕರ್ಷಿಸಲು ಸಜ್ಜಾಗಿದೆ.

ಆಕರ್ಷಕ ವಿನ್ಯಾಸ

ಕಾರಿನ ಮುಂಭಾಗ ಬಲೆನೊ ಎಂದೆನಿಸಿದರೂ, ಹೊಸ ವಿನ್ಯಾಸ ಜೇನುಗೂಡು ಮಾದರಿಯ ಷಟ್ಕೋನ ಮಾದರಿಯ ಗ್ರಿಲ್‌, ಪಕ್ಕದಲ್ಲಿ ಹೊಸ ಸ್ವರೂಪದ ಹೆಡ್‌ಲೈಟ್‌, ಅದರೊಳಗೆ ಪ್ರೊಜೆಕ್ಟರ್‌ ಹೆಡ್‌ಲ್ಯಾಂಪ್ಸ್‌ ಮತ್ತು ಕೆಳಗೆ ಮೂರು ಆಕರ್ಷಕ ಹಗಲು ದೀಪಗಳು (ಡಿಆರ್‌ಎಲ್‌), ಕೆಳಗೆ ಫಾಗ್ ಲ್ಯಾಂಪ್‌ಗಳು ಕಾರಿಗೆ ಹೊಸ ಮೆರಗು ನೀಡಿವೆ.


ಮಾರುತಿ ಸುಜುಕಿ ಬಲೆನೊ ಇನ್ಫೊಟೈನ್ಮೆಂಟ್ ಸಿಸ್ಟಂ

ಹಾಗೆಯೇ ಹಿಂದಿನ ಬಲೆನೊ ಗಮನಿಸಿದ್ದರೆ ಬಾನೆಟ್‌ ಬಾಗಿದ ಮೂಗಿನಂತೆ ಕಾಣುತ್ತಿತ್ತು. ಆದರೆ ಈಗ ಬಾನೆಟ್‌ ತುಸು ಸಮತಟ್ಟುಗೊಳಿಸಲಾಗಿದೆ. ಇದರಿಂದಾಗಿ ಕಾರು ಈಗ ಇನ್ನಷ್ಟು ಅಗಲವಾಗಿ ಕಾಣಿಸುತ್ತದೆ. ಇದು ರಸ್ತೆ ಮೇಲೆ ಹೆಚ್ಚು ಗಮನ ಸೆಳೆಯುವಂತಿದೆ.

ಎರಡೂ ಬದಿಗಳಲ್ಲಿ ಬಲೆನೊ ಮೂಲ ವಿನ್ಯಾಸದಿಂದ ಹೊರಗುಳಿಯದಿದ್ದರೂ, ಕೆಲವೊಂದು ಗಮನಾರ್ಹ ಬದಲಾವಣೆಯನ್ನು ಕಾಣಬಹುದು. ಭುಜದ ಗೆರೆ ಹಿಂದಿನ ಬಲೆನೊಗಿಂತಲೂ ತೀಕ್ಷಣವಾಗಿದೆ. ಕಿಟಕಿ ಸುತ್ತ ನೀಡಿರುವ ಕ್ರೋಮ್ ಪಟ್ಟಿಯೂ ಬಲೆನೊ ರೂಪಕ್ಕೆ ಇನ್ನಷ್ಟು ಮೆರುಗು ನೀಡಿದೆ. ಆರು ಆಕರ್ಷಕ ಬಣ್ಣಗಳಲ್ಲಿ ಬಲೆನೊ ಲಭ್ಯ.

ಹಿಂಬದಿಯಿಂದಲೂ ಬಲೆನೊಗೆ ನಾವೀನ್ಯತೆ ಸ್ಪರ್ಶ ನೀಡಲಾಗಿದೆ. ಹೊಸ ಮಾದರಿಯ ಬಂಪರ್‌ ಹಾಗೂ ಇಂಗ್ಲಿಷ್‌ನ ‘ಸಿ’ ಆಕಾರದ ದೀಪಗಳು ಕಾರಿನ ಅಗಲವನ್ನು ಹೆಚ್ಚಿಸಿದಂತೆ ಅನಿಸುತ್ತದೆ. ಒಟ್ಟಾರೆಯಾಗಿ ಬಾಹ್ಯ ವಿನ್ಯಾಸದಲ್ಲಿ ಬಲೆನೊ, ಮಾರುತಿ ಸುಜುಕಿ ಕಾರು ಪ್ರಿಯರಿಗೆ ಇನ್ನಷ್ಟು ಸನಿಹವಾಗುವಂತಿದೆ.


ಮಾರುತಿ ಸುಜುಕಿ ಬಲೆನೊ ಒಳಗಿನ ಹೆಡ್ಸ್ ಅಪ್ ಡಿಸ್‌ಪ್ಲೇ

ಇಷ್ಟು ಮಾತ್ರವಲ್ಲ, ಬಲೆನೊ ಈಗ ಉದ್ದದಲ್ಲೂ ಅರ್ಧ ಸೆಂಟಿ ಮೀಟರ್‌ ಕಡಿತಗೊಂಡಿದೆ. ಹಾಗೆಯೇ ಒಂದು ಸೆಂ.ಮೀ. ಎತ್ತರವೂ ತಗ್ಗಿದೆ (ಉದ್ದ– 3990ಮಿಮೀ, ಅಗಲ– 1745 ಮಿ.ಮೀ., ಎತ್ತರ– 1500ಮಿ.ಮೀ.). ಹಿಂಬದಿಯಲ್ಲಿ ಸರಂಜಾಮು ಇಡುವ ಜಾಗ ಈಗ ಹಿಂದಿಗಿಂತ ತುಸು ಕಡಿಮೆಯಾಗಿದೆ. (318 ಲೀಟರ್‌. ಹಿಂದಿನ ಮಾದರಿಯಲ್ಲಿ 339 ಲೀ). ಆದರೆ ಒಂದು ಕುಟುಂಬದ ಪ್ರಯಾಣಕ್ಕೆ ಅಗತ್ಯವಿರುವ ವಸ್ತುಗಳನ್ನು ಹೊಂದಿಸಲು ತೊಂದರೆ ಇಲ್ಲದಂತೆ ವ್ಯವಸ್ಥೆ ಮಾಡಲಾಗಿದೆ.

ಪ್ರತಿಬಾರಿ ಮಾರುತಿ ತೂಕ ಇಳಿಸಿಕೊಂಡು ಇಂಧನ ಕ್ಷಮತೆ ಹೆಚ್ಚಿಸುತ್ತಿತ್ತು. ಆದರೆ ಈ ಬಾರಿ 40 ಕೆ.ಜಿ. ತೂಕ ಹೆಚ್ಚಿಸಿಕೊಂಡಿದೆ. ಇದರಿಂದಾಗಿ ಕಾರಿನ ನಿಯಂತ್ರಣ ಈಗ ಇನ್ನಷ್ಟು ಹೆಚ್ಚಿದೆ.

ಒಳಾಂಗಣದಲ್ಲಿ ಎಲ್ಲವೂ ಹೊಸತು

ಬಲೆನೊ ಹೊಸ ಮಾದರಿಯ ಒಳಭಾಗದಲ್ಲಿ ಎಲ್ಲವೂ ಹೊಸತು. ಆಕರ್ಷಕ ಕಪ್ಪು ಬಣ್ಣದ ಡ್ಯಾಷ್‌ ಬೋರ್ಡ್‌. ಅದರ ಆಕರ್ಷಕ ಉಬ್ಬು ತಗ್ಗುಗಳು. ನಡುವೆ ಕ್ರೋಮ್‌ ಪಟ್ಟಿಯ ಸೆಳಕು. ಹೊಸ ವಿನ್ಯಾಸದ ಹವಾನಿಯಂತ್ರಣ ವೆಂಟ್‌ಗಳು, ಇವುಗಳನ್ನು ಹೊಂದಿಸುವ ಗುಂಡಿಗಳೂ ಹೊಸ ಮಾದರಿಯದ್ದಾಗಿದೆ.


ಮಾರುತಿ ಸುಜುಕಿ ಬಲೆನೊದ ಹಿಂಭಾಗದಲ್ಲಿ ಸಿ ಆಕಾರದ ಟೇಲ್ ಲ್ಯಾಂಪ್‌

9 ಇಂಚಿನ ದೊಡ್ಡದಾದ ಇನ್ಫೊಟೈನ್ಮೆಂಟ್ ಸಿಸ್ಟಮ್ ಕಾರಿನ ಒಳಾಂಗಣ ವಿನ್ಯಾಸದ ಆಕರ್ಷಣೆ. ಸ್ಟಿಯರಿಂಗ್‌ ವೀಲ್‌ ಕೂಡಾ ಹೊಸ ರೂಪ ಪಡೆದಿದೆ. ಕೆಳಗೆ ಸಮತಟ್ಟಾದ ಹಾಗೂ ಮೇಲ್ಭಾಗದಲ್ಲಿ ವೃತ್ತಾಕಾರದ ಸ್ಟಿಯರಿಂಗ್‌ ಚಾಲನೆಯ ಹಿತವನ್ನು ಹೆಚ್ಚಿಸುತ್ತದೆ. ಬಾಗಿಲುಗಳ ಒಳಭಾಗದ ವಿನ್ಯಾಸವೂ ಆಕರ್ಷಕವಾಗಿದೆ. ಆಧುನಿಕ ವಿನ್ಯಾಸದ ಒಳಾಂಗಣಕ್ಕೆ ತಕ್ಕಂತೆ ಆಸನಗಳೂ ಹಿತಕರವಾಗಿವೆ. ಬೆನ್ನು, ಪಕ್ಕೆಲಬು, ಸೊಂಟಕ್ಕೆ ಆರಾಮ ನೀಡುವ ಆಸನಗಳು ಬಲೆನೊದಲ್ಲಿದೆ. ಹಾಗೆಯೇ ಬಾಗಿಲಿಗೆ ಒಂದು ಮೆತ್ತನೆಯ ಕುಷನ್ ನೀಡಿರುವುದರಿಂದ ಮುಂಗೈ ಇಡುವಲ್ಲಿ ಹಿತಕರ ಅನುಭವ ಸಿಗಲಿದೆ.

ಹಿಂಭಾಗದ ಆಸನಗಳೂ ಹೆಚ್ಚು ಆರಾಮದಾಯಕವಾಗಿವೆ. 6 ಅಡಿ ಉದ್ದ ಇರುವವರೂ ಆರಾಮವಾಗಿ ಕೂರುವಷ್ಟು ಸ್ಥಳಾವಕಾಶ ಕಲ್ಪಿಸಲಾಗಿದೆ.

ಹೆಡ್ಸ್‌ ಅಪ್ ಡಿಸ್‌ಪ್ಲೇ

ಟಾಕೊ ಮೀಟರ್‌ನಲ್ಲಿ ನೋಡಬಹುದಾದ ಕಾರಿನ ವೇಗ, ಆರ್‌ಪಿಎಂ, ಗೇರ್‌ನ ಮಾಹಿತಿ ನೀಡುವ ಸುಂದರ ಪಾರದರ್ಶಕ ಗಾಜಿನ ಮೇಲೆ ಮೂಡುವ ಅಕ್ಷರಗಳು ಹೊಸ ಬಲೆನೊದ ಗಮನಾರ್ಹ ಅಂಶ. ಹವಾನಿಯಂತ್ರಣದ ಮಾಹಿತಿ, ಸಮಯ ಇಲ್ಲಿ ಕಾಣಸಿಗಲಿದೆ. ಚಾಲನೆ ಸಂದರ್ಭದಲ್ಲಿ ಈ ಮಾಹಿತಿಗಾಗಿ ಹುಡುಕಾಡುವ ಅಗತ್ಯವಿಲ್ಲ. ಕಣ್ಣೆದುರೇ ಮಾಹಿತಿ ನೀಡುವ ಈ ಹೆಡ್ಸ್‌ ಅಪ್ ಡಿಸ್ಪ್ಲೇ ಈ ವಿಭಾಗದಲ್ಲಿ ಒಂದು ವಿಲಾಸಿ ಸೌಕರ್ಯ. ಇದರಲ್ಲೇ ನ್ಯಾವಿಗೇಷನ್ ಕೂಡಾ ಅಳವಡಿಸುವ ಅವಕಾಶವೂ ಇತ್ತು. ಆದರೆ ದಿಕ್ಕು ಮಾತ್ರ ತೋರಿಸಲಿದೆ.

360 ಡಿಗ್ರಿ ಕ್ಯಾಮೆರಾ

ಕಾರಿನ ಹಿಮ್ಮುಖ ಚಲನೆ, ಪಾರ್ಕಿಂಗ್‌ ಸಂದರ್ಭದಲ್ಲಿ ಹೆಚ್ಚು ನೆರವಾಗಬಲ್ಲ 360 ಡಿಗ್ರಿ ಕ್ಯಾಮೆರಾ ಬಲೆನೊದ ಮತ್ತೊಂದು ಆಕರ್ಷಣೆ. ಹಿಮ್ಮುಖ ಚಲನೆಯಲ್ಲಿ ಕಾರಿನ ನಾಲ್ಕೂ ದಿಕ್ಕಿನಲ್ಲಿರುವ ಕ್ಯಾಮೆರಾಗಳು ಕೆಲಸ ಆರಂಭಿಸಿ ಅದರಿಂದ ಬರುವ ದೃಶ್ಯ ಪರದೆ ಮೇಲೆ ಮೂಡುತ್ತದೆ. ಇದು ಮುಂದಕ್ಕೆ ಚಲಿಸುವಾಗಲೂ ಬಳಸಬಹುದಾಗಿದೆ.

ಬಲೆನೊ ಸೌಕರ್ಯಗಳು

ಕಾರಿನ ಬಾಗಿಲುಗಳ ಒಳಭಾಗದಲ್ಲಿ ನೀರಿನ ಬಾಟಲಿಗಳನ್ನು ಇಡಲು ಸಾಕಷ್ಟು ಸ್ಥಳಾವಕಾಶ. ಮುಂಭಾಗದ ಡ್ಯಾಶ್‌ ಬೋರ್ಡ್‌ನಲ್ಲಿರುವ ಗ್ಲೋ ಬಾಕ್ಸ್‌, ಕಪ್‌ ಹೋಲ್ಡರ್‌, ಮುಂದೆ ಹಾಗೂ ಹಿಂಬದಿ ಆಸನದಲ್ಲಿ ಎ.ಸಿ. ವೆಂಟ್ಸ್‌ ಮತ್ತು ಯುಎಸ್‌ಬಿ ಚಾರ್ಜರ್‌ ಸೌಕರ್ಯ, 12 ವೋಲ್ಟ್ ಚಾರ್ಜರ್‌ ಎಲ್ಲವೂ ಇದೆ. ಬಾಗಿಲು ತೆರೆದರೆ ನೆಲಕ್ಕೆ ಬೆಳಕು ನೀಡುವ ದೀಪಗಳನ್ನು ಬಾಗಿಲ ಕೆಳಭಾಗದಲ್ಲಿ ಅಳವಡಿಸಿರುವುದು ಕತ್ತಲೆಯಲ್ಲಿ ಹೆಚ್ಚು ಪ್ರಯೋಜನವಾಗಲಿದೆ.


ಬೆಲೆನೊದ ಮುಂಭಾಗದಲ್ಲಿನ ಹೊಸ ಹೆಡ್‌ಲೈಟ್‌

ಮುಂಭಾಗದ ಎರಡು ಸೀಟುಗಳ ನಡುವೆ ಆರ್ಮ್ ರೆಸ್ಟ್ ನೀಡಲಾಗಿದೆ. ಅದರೊಳಗೆ ಒಂದಷ್ಟು ಸ್ಥಳಾವಕಾಶಗಳನ್ನೂ ಕಲ್ಪಿಸಲಾಗಿದೆ. ಹಿಂಭಾಗದ ಆಸನಗಳಿಗೆ ಪ್ರತ್ಯೇಕ ಎಸಿ ವೆಂಟ್‌ ಹಾಗೂ ಮೊಬೈಲ್ ಹಾಗೂ ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳ ಚಾರ್ಜ್ ಮಾಡಲು ಎ ಹಾಗೂ ಸಿ ಟೈಪ್ ಯುಎಸ್‌ಬಿ ಪೋರ್ಟಲ್ ನೀಡಲಾಗಿದೆ. 

ಕೀಲೆಸ್‌ ಎಂಟ್ರಿ ಜತೆಗೆ ಮೊಬೈಲ್‌ ಸ್ಮಾರ್ಟ್‌ ಆ್ಯಪ್ ಬಳಕೆ ಮೂಲಕ ಟೆಲಿಮೆಟಿಕ್ಸ್‌ ಅನ್ನು ಪರಿಪೂರ್ಣವಾಗಿ ಬಲೆನೊದಲ್ಲಿ ಅಳವಡಿಸಲಾಗಿದೆ.

ಸುರಕ್ಷತೆಗೆ ಆದ್ಯತೆ

ಹೊಸ ಬಲೆನೊದಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 6 ಏರ್ ಬ್ಯಾಗ್‌ಗಳನ್ನು ನೀಡುವ ಮೂಲಕ ಕಾರಿನೊಳಗಿರುವವರ ಜೀವ ರಕ್ಷಣೆಗೆ ಮಾರುತಿ ಸುಜುಕಿ ಹೆಚ್ಚು ಒತ್ತು ನೀಡಿದಂತಿದೆ. ಇಬಿಡಿಯೊಂದಿಗೆ ಎಬಿಎಸ್‌, ಬ್ರೇಕ್ ಅಸಿಸ್ಟ್‌, ಹಿಲ್‌ ಹೋಲ್ಡ್‌ನೊಂದಿಗೆ ಇಸಿಎಸ್‌, ಹಿಂಬದಿ ಪಾರ್ಕಿಂಗ್ ಸೆನ್ಸರ್‌, ಸ್ಪೀಡ್ ವಾರ್ನಿಂಗ್‌, ಸೀಟ್‌ ಬೆಲ್ಟ್‌ ಎಚ್ಚರಿಕೆ ಸೇರಿದಂತೆ ಹಲವು ಸುರಕ್ಷತಾ ಸೌಲಭ್ಯಗಳು ಇದರಲ್ಲಿವೆ.

16 ಇಂಚುಗಳ ಪ್ರಿಸಿಷನ್ ಕಟ್ ಅಲಾಯ್‌ ವೀಲ್‌ ಕಾರಿನ ಅಂದದ ಜತೆಗೆ ರಸ್ತೆ ಹಿಡಿತ ಮತ್ತು ಗ್ರೌಂಡ್ ಕ್ಲಿಯರೆನ್ಸ್‌ಗೂ ನೆರವಾಗಿದೆ.

ಇಂಧನ ಕ್ಷಮತೆ ಹಚ್ಚಿಸಿದ ಎಂಜಿನ್‌

1197 ಸಿಸಿಯ ನಾಲ್ಕು ಸಿಲೆಂಡರ್‌ನ ಪೆಟ್ರೋಲ್ ಎಂಜಿನ್‌ ಇದಾಗಿದೆ. ಆರು ಸಾವಿರ ಆರ್‌ಪಿಎಂಗೆ 90 ಅಶ್ವ ಶಕ್ತಿಯನ್ನು ಇದು ಉತ್ಪಾದಿಸಬಲ್ಲದು. ಹೊಸ ಬಲೆನೊದಲ್ಲಿ ಒಂದೇ ಮಾದರಿಯ ಪೆಟ್ರೋಲ್ ಎಂಜಿನ್‌ ಲಭ್ಯ. 4400 ಆರ್‌ಪಿಎಂಗೆ 113 ನ್ಯೂಟನ್ ಮೀಟರ್‌ ಟಾರ್ಕ್‌ ಉತ್ಪಾದಿಸಬಲ್ಲದು. ಹಿಂದಿನ ಬಲೆನೊ ಎಂಜಿನ್ ಮಾದರಿಯನ್ನೇ ಇದು ಹೋಲುತ್ತಿದ್ದರೂ ಡ್ಯುಯಲ್ ಜೆಟ್‌ನ ನಾಲ್ಕು ಸಿಲೆಂಡರ್‌ ಹೊಂದಿರುವ ಕೆ–ಶ್ರೇಣಿಯ ಎಂಜಿನ್ ಇದಾಗಿದೆ.


ಬಲೆನೊ ಮುಂಭಾಗದ ಆಸನ

5 ಗೇರ್ ಮ್ಯಾನುಯಲ್ ಹಾಗೂ ಆಟೊ ಗೇರ್‌ ಕೂಡಾ ಹೊಂದಿದೆ. ಆಟೊ ಗೇರ್‌ಗೆ ಇಲ್ಲಿ ಎಜಿಎಸ್‌ ಎಂದು ಮಾರುತಿ ಸುಜುಕಿ ಕರೆದಿದೆ. 2 ಸಾವಿರ ಆರ್‌ಪಿಎಂಗಿಂತ ಕಡಿಮೆ ಇದ್ದಾಗ ತುಸು ಹೆಚ್ಚಿನ ಶಕ್ತಿಯನ್ನು ಬೇಡುವಂತೆ ಭಾಸವಾಗುತ್ತದೆ. ಎತ್ತರದ ಜಾಗ ಹಾಗೂ ವಾಹನ ಹಿಂದಿಕ್ಕುವಾಗ ಇನ್ನಷ್ಟು ಶಕ್ತಿ ಬೇಕು ಎಂದೆನಿಸದೇ ಇರದು. ಎಂಜಿನ್‌ ಸಾಮರ್ಥ್ಯ ತುಸು ಕಡಿಮೆ ಎಂದೆನಿಸಿದರೂ, ಹೆದ್ದಾರಿ ಹಾಗೂ ನಗರದೊಳಗಿನ ರಸ್ತೆಯಲ್ಲಿ ಹೆಚ್ಚು ಆಪ್ತವಾಗುತ್ತದೆ. ಇದಕ್ಕೆ ಕಾರಣ ಮೃದುವಾದ ಮ್ಯಾನುಯಲ್ ಗೇರ್‌. ಹೀಗಾಗಿ ಗೇರು ಬದಲಿಸುವುದು ತ್ರಾಸದಾಯಕವಲ್ಲದ ಕಾರಣ ಚಾಲನೆ ಹಿತ ನೀಡುತ್ತದೆ. ಇನ್ನು ಆಟೊ ಗೇರ್ ಕೂಡಾ ಶ್ರಮ ಕಡಿಮೆ ಮಾಡುತ್ತದೆ.

ಎಂಜಿನ್‌ನಲ್ಲಿ ಮಾಡಿರುವ ಬದಲಾವಣೆಯಿಂದಾಗಿ ಶೇ 15ರಷ್ಟು ಇಂಧನ ಕ್ಷಮತೆ ಹೆಚ್ಚಿದೆ. ಹೀಗಾಗಿ ಈ ವಿಭಾಗದಲ್ಲಿ ಈವರೆಗಿನ ಅತಿ ಹೆಚ್ಚು (ಮ್ಯಾನುಯಲ್ ಗೇರ್‌ ಬಾಕ್ಸ್‌– ಪ್ರತಿ ಲೀಟರ್ ಪೆಟ್ರೋಲ್‌ಗೆ 22.5 ಕಿ.ಮೀ ಹಾಗೂ ಆಟೊಮ್ಯಾಟಿಕ್‌ ಗೇರ್‌ ಕಾರು 22.94 ಕಿ.ಮೀ) ಇಂಧನ ಕ್ಷಮತೆ ನೀಡುತ್ತದೆ ಎನ್ನುವುದು ಕಂಪೆನಿಯ ಹೇಳಿಕೆ. ದೆಹಲಿಯಲ್ಲಿ ಮಾರುತಿ ಸುಜುಕಿ ಬಲೆನೊ ಎಕ್ಸ್ ಶೋರೂಂ ಬೆಲೆಯನ್ನು ಮಾರುತಿ ಸುಜುಕಿ ₹6.35ಲಕ್ಷದಿಂದ 9.49ಲಕ್ಷಕ್ಕೆ ನಿಗದಿಪಡಿಸಿದೆ.


ಬಲೆನೊ ಸ್ಮಾರ್ಟ್ ಕನೆಕ್ಟ್‌

ಸುಂದರ ಹೊರಭಾಗ, ಆಕರ್ಷಕ ಒಳ ವಿನ್ಯಾಸ, ಮೃದುವಾದ ಚಾಲನಾ ಅನುಭವ, ರಸ್ತೆಯಲ್ಲಿ ಎಲ್ಲರ ಗಮನ ಸೆಳೆಯುವ ಹೊಸ ವಿನ್ಯಾಸ, ಜೇಬಿಗೆ ಹೊರೆಯಾಗದ ಇಂಧನ ಕ್ಷಮತೆ, ಹಲವು ಸುರಕ್ಷತಾ ಸೌಕರ್ಯಗಳಿರುವ ಬಲೆನೊದಲ್ಲಿ ಒಂದಷ್ಟು ಇಲ್ಲ ಎನ್ನುವ ಕೊರತೆಯೂ ಇವೆ. ಇತ್ತೀಚೆಗೆ ಹಲವು ಕಾರುಗಳಲ್ಲಿ ಸಾಮಾನ್ಯ ಹಾಗೂ ಜನರ ನಿರೀಕ್ಷೆಯೂ ಆಗಿರುವ ಸನ್‌ ರೂಫ್‌, ವೆಂಟಿಲೇಟೆಡ್ ಸೀಟು ಇದರಲ್ಲಿ ಇಲ್ಲ. ಹಾಗೆಯೇ ವಿಲಾಸಿ ಕಾರುಗಳಲ್ಲಿ ಸಾಮಾನ್ಯವಾಗಿರುವ ವೈರ್‌ಲೆಸ್ ಮೊಬೈಲ್ ಚಾರ್ಜರ್‌ ಇದರಲ್ಲಿ ಇಲ್ಲ ಎನ್ನುವುದನ್ನು ಬಿಟ್ಟರೆ, ಉಳಿದಂತೆ ನಗರವಾಸಿಗಳ ಮೆಚ್ಚಿನ ಕಾರು ಎನಿಸಿಕೊಳ್ಳುವ ಎಲ್ಲಾ ಗುಣಲಕ್ಷಣಗಳು ಇದರಲ್ಲಿವೆ.


ಮಾರುತಿ ಸುಜುಕಿ ಬಲೆನೊ ಒಳಗೆ 360 ಡಿಗ್ರಿ ದೃಶ್ಯ ಸೌಕರ್ಯ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು