ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮರ್ಸಿಡಿಸ್ ಮಿ’ಕನೆಕ್ಟೆಡ್ ಕಾರ್ ವ್ಯವಸ್ಥೆ

Last Updated 20 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಭಾರತದಲ್ಲಿ ಕನೆಕ್ಟೆಡ್ ಕಾರ್‌ ಪರಿಕಲ್ಪನೆ ಈಗಷ್ಟೇ ಪ್ರಚಲಿತಕ್ಕೆ ಬರುತ್ತಿದೆ. ಆಂಡ್ರಾಯ್ಡ್ ಮತ್ತು ಐಒಎಸ್ ಮೂಲಕ ಕಾರಿನ ಕೆಲವು ಫೀಚರ್‌ಗಳನ್ನು ನಿಯಂತ್ರಿಸುವ ಮತ್ತು ತಯಾರಿಕಾ ಕಂಪನಿ ಜತೆ ಕಾರು ಸದಾ ಸಂಪರ್ಕದಲ್ಲಿ ಇರುವ ವ್ಯವಸ್ಥೆಯೇ ಕನೆಕ್ಟೆಡ್ ಕಾರ್‌. ಐಷಾರಾಮಿ ಕಾರುಗಳ ತಯಾರಿಕಾ ಕಂಪನಿ ಮರ್ಸಿಡಿಸ್ ಬೆಂಜ್ ತನ್ನ ಕಾರುಗಳಿಗೆ, 'ಮರ್ಸಿಡಿಸ್ ಮಿ' ಎಂಬ ಕಾರ್‌ ಕನೆಕ್ಟ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ.

ಚಾಲಕ ಮತ್ತು ಕಾರು ಆನ್‌ಲೈನ್‌ ಮೂಲಕ ಕನೆಕ್ಟ್ ಆಗಿ ಇರುವುದು ಇಂದಿನ ಜರೂರತ್ತು. ಕಾರಿನ ಪ್ರತಿ ಚಲನವಲನವನ್ನೂ ಕುಳಿತಲ್ಲೇ ಅರಿತುಕೊಳ್ಳುವ ಮತ್ತು ಸನಿಹದಲ್ಲಿ ಇಲ್ಲದಿದ್ದರೂ ಕಾರಿನ ಹಲವು ಫೀಚರ್‌ಗಳನ್ನು ಆಪರೇಟ್ ಮಾಡುವ ಸೌಲಭ್ಯ ಇದ್ದರೆ ಎಷ್ಟು ಚಂದವಿರುತ್ತದೆ. ಇಂತಹ ಒಂದು ಸಾಧ್ಯತೆಯನ್ನು ಮರ್ಸಿಡಿಸ್‌ ಬೆಂಜ್ ತನ್ನ ಗ್ರಾಹಕರಿಗೆ ಒದಗಿಸುತ್ತಿದೆ. ಕಂಪನಿಯು ಈಚೆಗಷ್ಟೇ ‘ಮರ್ಸಿಡಿಸ್ ಮಿ’ ಎಂಬ ಕನೆಕ್ಟೆಡ್ ಕಾರ್ ಸಲ್ಯೂಷನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

‘ಮರ್ಸಿಡಿಸ್ ಮಿ’ ಎಂಬುದು ಒಂದು ಅಡಾಪ್ಟರ್‌ ಮತ್ತು ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್ ಹೊಂದಿರುವ ವ್ಯವಸ್ಥೆ. 2019ನೇ ಸಾಲಿನಲ್ಲಿ ಖರೀದಿಸಿದ ಎಲ್ಲಾ ಕಾರುಗಳಿಗೆ ಈ ಅಡಾಪ್ಟರ್ ಅನ್ನು ಉಚಿತವಾಗಿ ನೀಡಲಾಗುತ್ತದೆ. ಅದಕ್ಕೂ ಹಿಂದಿನ ವರ್ಷಗಳ ಮಾಡೆಲ್‌ಗಳಿಗೆ ಈ ಅಡಾಪ್ಟರ್ ಅನ್ನು ಖರೀದಿಸಿ, ಅಳವಡಿಸಬೇಕಾಗುತ್ತದೆ. 2007ರ ನಂತರ ಮಾರಾಟವಾದ ಎಲ್ಲಾ ಮರ್ಸಿಡಿಸ್‌ ಬೆಂಜ್ ಕಾರುಗಳಿಗೆ ಈ ಅಡಾಪ್ಟರ್‌ ಅಳವಡಿಸಬಹುದು.

ಬೆಂಜ್‌ ಕಾರಿನ ಆನ್‌ಬೋರ್ಡ್ ಡಯಾಗ್ನಿಸಿಸ್‌-ಒಬಿಡಿ ಪೋರ್ಟ್‌ಗೆ ಈ ಅಡಾಪ್ಟರ್ ಅಳವಡಿಸಬೇಕು ಮತ್ತು ಚಾಲಕನ ಸ್ಮಾರ್ಟ್‌ಫೋನ್‌ನಲ್ಲಿ ‘ಮರ್ಸಿಡಿಸ್ ಮಿ’ ಅಪ್ಲಿಕೇಷನ್ ಇನ್‌ಸ್ಟಾಲ್ ಮಾಡಿದರಾಯಿತು. ಯಾವುದೇ ಬೆಂಜ್ ಕಾರು ಕನೆಕ್ಟೆಡ್ ಕಾರ್ ಆಗಿ ಪರಿವರ್ತನೆ ಆಗುತ್ತದೆ.

ಹೀಗೆ ಕನೆಕ್ಟ್‌ ಮಾಡಲಾದ ಕಾರಿನ ಹಲವು ಪೀಚರ್‌ಗಳನ್ನು ಆನ್‌ಲೈನ್‌ ಮೂಲಕ ನಿಯಂತ್ರಿಸಲು ಅವಕಾಶವಿದೆ. ಕಾರನ್ನು ಲಾಕ್‌-ಅನ್‌ಲಾಕ್ ಮಾಡುವ ವ್ಯವಸ್ಥೆ ಇದೆ. ಕಾರನ್ನು ಪಾರ್ಕ್ ಮಾಡಿದ್ದೀರಿ, ಆದರೆ ಅದನ್ನು ಲಾಕ್ ಮಾಡುವುದನ್ನು ಮರೆತಿದ್ದೀರಿ ಎಂದಿಟ್ಟುಕೊಳ್ಳಿ. (ಬಹುತೇಕ ಕಾರುಗಳು ಸ್ವಯಂಚಾಲಿತವಾಗಿ ಲಾಕ್ ಆಗುತ್ತವೆ. ಆದರೆ ಹಳೆಯ ಕೆಲವು ಕಾರುಗಳಲ್ಲಿ ಈ ಸೌಲಭ್ಯ ಇಲ್ಲ). ಕಾರನ್ನು ಲಾಕ್ ಮಾಡಿಲ್ಲ ಎಂಬುದು ನೆನಪಾದಾಗ, ಅದನ್ನು ಲಾಕ್ ಮಾಡಲು ಮತ್ತೆ ಕಾರಿನ ಬಳಿ ಹೋಗುವ ಅವಶ್ಯಕತೆ ಇಲ್ಲ. ತಾವು ಇರುವಲ್ಲಿಂದಲೇ ಮರ್ಸಿಡಿಸ್ ಮಿ ಅಪ್ಲಿಕೇಷನ್ ಮೂಲಕ ಕಾರನ್ನು ಲಾಕ್ ಮಾಡಿದರೆ ಆಯಿತು.

ಇದರಲ್ಲಿ ಡೆಸಿಗ್ನೇಷನ್ ಟು ಕಾರ್ ಎಂಬ ಮತ್ತೊಂದು ಸೌಲಭ್ಯ ಇದೆ. ಕಾರನ್ನು ಯಾವುದೋ ದೂರದ ಅಥವಾ ದಟ್ಟಣೆಯ ಪಾರ್ಕಿಂಗ್ ಲಾಟ್‌ನಲ್ಲಿ ನಿಲ್ಲಿಸಿದ್ದೀರಿ ಎಂದಿಟ್ಟುಕೊಳ್ಳಿ. ಅದನ್ನು ಹುಡುಕುವುದು ಸ್ವಲ್ಪ ಕಷ್ಟದ ಕೆಲಸ. ಮೆಟ್ರೊ ನಗರಗಳ ಶಾಪಿಂಗ್ ಮಾಲ್‌ಗಳಲ್ಲಿ ಇಂತಹ ಸಮಸ್ಯೆ ಸಾಮಾನ್ಯ. ಕಾರನ್ನು ಎಲ್ಲಿ ಪಾರ್ಕ್ ಮಾಡಿದ್ದೀವಿ ಎಂಬುದನ್ನು ಹುಡುಕುವುದೇ ದೊಡ್ಡ ಕೆಲಸವಾಗಿ ಬಿಡುತ್ತದೆ. ಅಂತಹ ಸಂದರ್ಭದಲ್ಲಿ ಡೆಸಿಗ್ನೇಷನ್ ಟು ಕಾರ್ ಪೀಚರ್ ಆನ್ ಮಾಡಿದರೆ ಆಯಿತು. ಕಾರು ಎಲ್ಲಿದೆ, ಯಾವ ದಿಕ್ಕಿನಲ್ಲಿದೆ, ಎಷ್ಟು ದೂರದಲ್ಲಿದೆ ಎಂಬ ಮಾಹಿತಿಯನ್ನು ಇದು ನೀಡುತ್ತದೆ. ಜಿಪಿಎಸ್ ಆಧರಿಸಿ ಕೆಲಸ ಮಾಡುವ ಈ ಫೀಚರ್, ಕಾರು ಇರುವಲ್ಲಿಗೆ ಹೇಗೆ ಹೋಗಬೇಕು ಎಂಬುದರ ನಕ್ಷೆಯನ್ನೂ ತೋರಿಸುತ್ತದೆ. ಇದೇ ರೀತಿ ಕೆಲಸ ಮಾಡುವ ಪಾರ್ಕ್‌ಡ್ ಕಾರ್ ಲೊಕೇಟರ್‌ ಫೀಚರ್ ಸಹ ಇದರಲ್ಲಿದೆ.

ಕಾರಿನ ಟೈರ್ ಪ್ರೆಷರ್‌ಗೆ ಸಂಬಂಧಿಸಿದ ಮಾಹಿತಿಯನ್ನೂ ಇದು ಒದಗಿಸುತ್ತದೆ. ಕಾರಿನ ಯಾವ ಚಕ್ರದ ಟೈರ್‌ನಲ್ಲಿ ಗಾಳಿ ಕಡಿಮೆಯಾಗಿದೆ ಮತ್ತು ಎಷ್ಟು ಕಡಿಮೆಯಾಗಿದೆ ಎಂಬುದನ್ನು ಇದು ತಿಳಿಸುತ್ತದೆ. ಟೈರ್ ಹೆಚ್ಚು ಬಿಸಿಯಾಗಿ, ಗಾಳಿಯ ಒತ್ತಡ ಹೆಚ್ಚಾಗಿದ್ದರೆ ಅದನ್ನೂ ತಿಳಿಸುತ್ತದೆ. ಎರಡೂ ಸಂದರ್ಭಗಳಲ್ಲಿ ಗಾಳಿಯ ಒತ್ತಡವನ್ನು ಸರಿಯಾದ ಮಟ್ಟಕ್ಕೆ ತರದಿದ್ದರೆ, ಟೈರ್ ಸಿಡಿಯುವ ಅಪಾಯವಿರುತ್ತದೆ. ಹೆದ್ದಾರಿ ಪಯಣದಲ್ಲಿ ಈ ಅಪಾಯದ ಸಾಧ್ಯತೆ ಹೆಚ್ಚು. ಕಾರಿನ ಆನ್‌ ಬೋರ್ಡ್ ಸಿಸ್ಟಂ ಇದನ್ನು ತಿಳಿಸುತ್ತದೆಯಾದರೂ, ಮರ್ಸಿಡಿಸ್ ಮಿ ಇದಕ್ಕೆ ಇನ್ನೂ ಹೆಚ್ಚು ಒತ್ತು ನೀಡುತ್ತದೆ. ಇದನ್ನು ಟೈರ್ ಪ್ರೆಷರ್ ಮ್ಯಾನೇಜ್‌ಮೆಂಟ್ ಸಿಸ್ಟಂ (ಟಿಪಿಎಂಎಸ್) ಎಂದು ಕರೆಯಲಾಗುತ್ತದೆ. ಈ ಸಿಸ್ಟಂ ಅನ್ನು ಮರ್ಸಿಡಿಸ್ ಮಿ, ಚಾಲಕನೊಂದಿಗೆ ಕನೆಕ್ಟ್ ಮಾಡುತ್ತದೆ ಅಷ್ಟೆ.

ಕಾರಿನ ಸ್ವಾಸ್ಥತೆ ಕುರಿತ ಮಾಹಿತಿಯನ್ನೂ ಮರ್ಸಿಡಿಸ್ ಮಿ, ಚಾಲಕನೊಂದಿಗೆ ಹಂಚಿಕೊಳ್ಳುತ್ತದೆ. ಕಾರಿನ ಎಂಜಿನ್ ಆಯಿಲ್ ಮಟ್ಟ ಸರಿಯಾಗಿದೆಯೇ, ಕೂಲಂಟ್ ಅಗತ್ಯವಿರುವಷ್ಟು ಇದೆಯೇ, ಬ್ರೇಕ್ ಪ್ಯಾಡ್ ಸುಸ್ಥಿತಿಯಲ್ಲಿ ಇವೆಯೇ, ಏರ್‌ ಫಿಲ್ಟರ್ ಶುದ್ಧವಾಗಿದೆಯೇ ಎಂಬ ಮಾಹಿತಿಯನ್ನು ಇದು ಹಂಚಿಕೊಳ್ಳುತ್ತದೆ. ಈಗಿನ ಸ್ಥಿತಿಯಲ್ಲಿ ಕಾರನ್ನು ಎಷ್ಟು ದೂರ ಚಲಾಯಿಸಬಹುದು ಅಥವಾ ಚಲಾಯಿಸಬಾರದೇ ಎಂಬ ಸೂಚನೆಯನ್ನೂ ಮರ್ಸಿಡಿಸ್ ಮಿ ನೀಡುತ್ತದೆ. ಯಾವುದೇ ದೂರದ ಪ್ರಯಾಣವನ್ನು ಯೋಚಿಸುವ ಮುನ್ನ ಈ ಎಲ್ಲಾ ಅಂಶಗಳನ್ನು ಪರಿಶೀಲಿಸಬೇಕು. ಚಾಲಕನ ಪರವಾಗಿ ಈ ಕೆಲಸವನ್ನು ಮರ್ಸಿಡಿಸ್ ಮಿ ಮಾಡುತ್ತದೆ.

ಸ್ಪೀಡ್ ಅಲರ್ಟ್, ಸೀಟ್‌ಬೆಲ್ಟ್ ರಿಮೈಂಡರ್ ಸೇರಿದಂತೆ 25ಕ್ಕೂ ಹೆಚ್ಚು ಫೀಚರ್‌ಗಳು ಈ ವ್ಯವಸ್ಥೆಯಲ್ಲಿ ಇವೆ. ಈ ವ್ಯವಸ್ಥೆಯ ಖರೀದಿ ದುಬಾರಿ ಏನಲ್ಲ. ಪ್ರತಿ ಅಡಾಪ್ಟರ್‌ನ ಬೆಲೆ ₹ 5 ಸಾವಿರ ಮಾತ್ರ.

ಆ್ಯಪ್‌ ಮೂಲಕ ಖರೀದಿ

ಮರ್ಸಿಡಿಸ್ ಕಾರುಗಳನ್ನು ಸರ್ವಿಸ್‌ ಮಾಡಿಸಲು ಈ ಅಪ್ಲಿಕೇಶನ್ ಅನ್ನು ಬಳಸಬಹುದು. ಈ ಸವಲತ್ತು ಶೀಘ್ರದಲ್ಲೇ ಜಾರಿಯಾಗಲಿದೆ. ಮುಂದಿನ ದಿನಗಳಲ್ಲಿ ಮರ್ಸಿಡಿಸ್ ಬೆಂಜ್ ಕಾರುಗಳನ್ನು 'ಮರ್ಸಿಡಿಸ್ ಮಿ' ಅಪ್ಲಿಕೇಶನ್ ಮೂಲಕವೇ ಬುಕ್ ಮಾಡುವ ಮತ್ತು ಖರೀದಿಸುವ ಸವಲತ್ತೂ ಬರಲಿದೆ. ಕಾರಿನ ಬಣ್ಣ, ಸೀಟಿನ ಬಣ್ಣ, ಅಲ್ಹಾಯ್ ವ್ಹೀಲ್ ವಿನ್ಯಾಸ, ಕಾರಿನಲ್ಲಿರುವ ಫೀಚರ್ ಗಳ ಆಯ್ಕೆ
ಇವೆಲ್ಲವನ್ನೂ ಮರ್ಸಿಡಿಸ್ ಮಿ ಅಪ್ಲಿಕೇಷನ್ ಮೂಲಕವೇ ಆಯ್ಕೆ ಮಾಡಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT