ಬುಧವಾರ, ಡಿಸೆಂಬರ್ 2, 2020
25 °C

ಸಿಂಪಲ್ ಎನರ್ಜಿ ಸಿದ್ಧಪಡಿಸಿದ ಮಾರ್ಕ್‌–2

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Mark 2

ವಿದ್ಯುತ್ ಚಾಲಿತ ಮಾರ್ಕ್‌–2 ಸ್ಕೂಟರ್‌ ಅಭಿವೃದ್ಧಿಪಡಿಸಿರುವ ಬೆಂಗಳೂರು ಮೂಲದ ನವೋದ್ಯಮ ಕಂಪನಿ ‘ಸಿಂಪಲ್ ಎನರ್ಜಿ’ ಅದನ್ನು 2021ರ ಮಾರ್ಚ್‌ ವೇಳೆಗೆ ಮಾರುಕಟ್ಟೆಗೆ ತರುವ ಸಿದ್ಧತೆ ನಡೆಸಿದೆ. ಸುಹಾಸ್ ರಾಜ್‌ಕುಮಾರ್ ಅವರು ಏಳು ಜನರ ಜೊತೆ ಸೇರಿ 2019ರಲ್ಲಿ ಈ ಕಂಪನಿಗೆ ಚಾಲನೆ ನೀಡಿದ್ದರು. ಈ ವರ್ಷದ ಅಂತ್ಯದ ವೇಳೆಗೆ ಒಟ್ಟು 100 ಜನರ ತಂಡ ತಮ್ಮದಾಗಬೇಕು ಎಂಬ ಬಯಕೆ ಅವರಲ್ಲಿ ಇದೆ.

ವಿದ್ಯುತ್ ಚಾಲಿತ ವಾಹನ ಕೊಳ್ಳಬೇಕು ಎಂದು ಬಯಸುವವರು ಕೂಡ ಸಾಮಾನ್ಯವಾಗಿ ಒಂದೆರಡು ವಿಚಾರಗಳ ಬಗ್ಗೆ ದೂರು ಹೇಳುವುದಿದೆ. ವಾಹನಗಳನ್ನು ಚಾರ್ಜ್‌ ಮಾಡಲು ಬೇಕಿರುವ ಸಮಯ ಹಾಗೂ ಚಾರ್ಜ್‌ ಮಾಡಿದ ನಂತರ ಸಂಚರಿಸಬಹುದಾದ ದೂರ ಎರಡು ಪ್ರಮುಖ ವಿಚಾರಗಳು. ವಿದ್ಯುತ್ ಚಾಲಿತ ವಾಹನಗಳು ದುಬಾರಿ ಎಂಬ ಮಾತಂತೂ ಇದ್ದೇ ಇದೆ

ಸಿಂಪಲ್ ಎನರ್ಜಿ ಕಂಪನಿ ಅಭಿವೃದ್ಧಿಪಡಿಸಿರುವ ಸ್ಕೂಟರ್‌ಅನ್ನು ಎರಡು ಬಗೆಯಲ್ಲಿ ಚಾರ್ಜ್‌ ಮಾಡಲು ಸಾಧ್ಯವಿದೆ ಎಂದು ಸುಹಾಸ್ ಹೇಳುತ್ತಾರೆ. ಸಹಜವಾದ ಚಾರ್ಜಿಂಗ್ ಹಾಗೂ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯಗಳು ಈ ವಾಹನದಲ್ಲಿ ಇರಲಿವೆ. ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಬಳಸಿ ಮಾರ್ಕ್‌–2 ವಾಹನದ ಬ್ಯಾಟರಿಯನ್ನು ಶೇಕಡ 80ರಷ್ಟು ಚಾರ್ಜ್‌ ಮಾಡಲು ಕೇವಲ 40 ನಿಮಿಷಗಳು ಸಾಕು ಎನ್ನುವುದು ಸುಹಾಸ್ ಹೇಳಿಕೆ. ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಬಳಸಿದಾಗ ಪೂರ್ತಿಯಾಗಿ ಚಾರ್ಜ್ ಮಾಡಲು 70 ನಿಮಿಷಗಳು ಬೇಕಾಗುತ್ತವೆ. ಸಹಜವಾದ ಚಾರ್ಜಿಂಗ್ ಸೌಲಭ್ಯ ಬಳಸಿಕೊಂಡಾಗ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಲು ಗರಿಷ್ಠ ಮೂರು ತಾಸುಗಳು ಬೇಕಾಗುತ್ತವೆ. ಒಮ್ಮೆ ಚಾರ್ಜ್ ಮಾಡಿಕೊಂಡರೆ ಇಕೊ ಮೋಡ್ ಬಳಸಿ ಗರಿಷ್ಠ 280 ಕಿ.ಮೀ. ಪ್ರಯಾಣಿಸಲು ಸಾಧ್ಯ ಎಂದು ಅವರು ಪ್ರತಿಪಾದಿಸುತ್ತಾರೆ.


ಸುಹಾಸ್ ರಾಜ್‌ಕುಮಾರ್

ಸ್ಪೋರ್ಟ್ ಮೋಡ್‌ನಲ್ಲಿ ಚಾಲನೆ ಮಾಡಿದರೆ 180 ಕಿ.ಮೀ., ನಾರ್ಮಲ್‌ ಮೋಡ್‌ನಲ್ಲಿ ಚಾಲನೆ ಮಾಡಿದರೆ 220 ಕಿ.ಮೀ. ಪ್ರಯಾಣಿಸಲು ಅಡ್ಡಿಯಿಲ್ಲ ಎಂದು ಕಂಪನಿ ಹೇಳಿದೆ. ಈ ಸ್ಕೂಟರ್‌ನಲ್ಲಿ ಏಳು ಇಂಚು ಅಗಲದ ಟಚ್ ಸ್ಕ್ರೀನ್ ಪರದೆ, ಕೆಲವು ಆ್ಯಪ್‌ಗಳು, ಬ್ಲೂಟೂತ್ ಮತ್ತು 4ಜಿ ಸೌಲಭ್ಯ ಇರಲಿದೆ.

ಫಾಸ್ಟ್ ಚಾರ್ಜಿಂಗ್ ಕೇಂದ್ರಗಳನ್ನು ಕಂಪನಿಯು ದೇಶದ ಪ್ರಮುಖ ನಗರಗಳಲ್ಲಿ ಸ್ಥಾಪಿಸುವ ಆಲೋಚನೆಯಲ್ಲಿ ಕೂಡ ಇದೆ. ಆರಂಭಿಕ ಹಂತಗಳಲ್ಲಿ ಕಂಪನಿಯು ಮುಂಬೈ ಮತ್ತು ಬೆಂಗಳೂರು ನಗರಗಳನ್ನು ಗುರಿಯಾಗಿ ಇರಿಸಿಕೊಂಡು ಕೇಂದ್ರಗಳನ್ನು ಆರಂಭಿಸಬಹುದು. ನಂತರದ ದಿನಗಳಲ್ಲಿ ಇತರ ನಗರಗಳ ಕಡೆ ಮುಖ ಮಾಡಬಹುದು. ಮಾರ್ಕ್‌–2 ಸ್ಕೂಟರ್‌ನ ಬಿಡುಗಡೆಯು ಮೊದಲಿಗೆ ಬೆಂಗಳೂರು ಮತ್ತು ಚೆನ್ನೈನಲ್ಲಿ ಆಗಲಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.