ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ಅವತಾರಗಳಲ್ಲಿ ‘ಫಾರ್ಚ್ಯೂನರ್’ ಕಾರು

Last Updated 6 ಜನವರಿ 2021, 10:44 IST
ಅಕ್ಷರ ಗಾತ್ರ

ರಗೆಡ್ ಎಸ್‌ಯುವಿಗಳಲ್ಲಿ ಒಂದಾಗಿರುವ ಟೊಯೊಟಾ ಫಾರ್ಚ್ಯೂನರ್ ಕಾರು ಹೊಸ ವರ್ಷದ ಆರಂಭದಲ್ಲಿ ಎರಡು ಹೊಸ ಅವತಾರಗಳನ್ನು ತಾಳಿದೆ. ‘ನ್ಯೂ ಫಾರ್ಚ್ಯೂನರ್’ ಮತ್ತು ‘ಫಾರ್ಚ್ಯೂನರ್ ಲೆಜೆಂಡರ್’ ಹೆಸರಿನ ಎರಡು ಕಾರುಗಳನ್ನು ಟೊಯೊಟಾ ಕಿರ್ಲೋಸ್ಕರ್ ಮೋಟರ್ (ಟಿಕೆಎಂ) ಕಂಪನಿಯು ಬುಧವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಎರಡೂ ಕಾರುಗಳ ಬುಕಿಂಗ್‌ ಆರಂಭವಾಗಿದ್ದು, ಆನ್‌ಲೈನ್‌ ಮೂಲಕವೂ ಬುಕ್ ಮಾಡುವ ಸೌಲಭ್ಯವನ್ನು ಕಂಪನಿ ನೀಡಿದೆ.

ನ್ಯೂ ಫಾರ್ಚ್ಯೂನರ್‌ ಕಾರಿನಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ನೀಡಲಾಗಿದೆ. ಯಾವ ಎಂಜಿನ್‌ನ ಕಾರು ಆಯ್ಕೆ ಮಾಡಿಕೊಂಡರೂ, ಮ್ಯಾನ್ಯುವಲ್ ಅಥವಾ ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್ ಸೌಲಭ್ಯ ಆಯ್ದುಕೊಳ್ಳುವ ಅವಕಾಶ ಇದೆ. ಪೆಟ್ರೋಲ್ ಎಂಜಿನ್ ಹೊಂದಿರುವ ಕಾರಿನ ಎಕ್ಸ್‌ ಷೋರೂಂ ಬೆಲೆ ₹ 29.98 ಲಕ್ಷದಿಂದ ಆರಂಭವಾಗುತ್ತದೆ. ಡೀಸೆಲ್‌ ಎಂಜಿನ್ ಕಾರಿನ ಬೆಲೆಯು ₹ 32.48 ಲಕ್ಷದಿಂದ ಆರಂಭವಾಗುತ್ತದೆ ಎಂದು ಕಂಪನಿ ಹೇಳಿದೆ.

ಪೆಟ್ರೋಲ್‌ ಎಂಜಿನ್‌ನ ಸಾಮರ್ಥ್ಯ 2.7 ಲೀಟರ್. ಡೀಸೆಲ್ ಎಂಜಿನ್ ಸಾಮರ್ಥ್ಯ 2.8 ಲೀಟರ್. ಡೀಸೆಲ್ ಎಂಜಿನ್ ಕಾರಿನಲ್ಲಿ ಫೋರ್ ವೀಲ್ ಡ್ರೈವ್ ಸೌಲಭ್ಯ ಕೂಡ ನೀಡಲಾಗಿದೆ.

ನ್ಯೂ ಫಾರ್ಚ್ಯೂನರ್‌ನ ಕೆಲವು ವೈಶಿಷ್ಟ್ಯಗಳು: ಗಡುಸಾಗಿ ಕಾಣಿಸುವ ಮುಂಭಾಗದ ಗ್ರಿಲ್, ಹೊಸ ವಿನ್ಯಾಸದ ಹೆಡ್‌ಲ್ಯಾಂಪ್‌, ಟಚ್‌ಸ್ಕ್ರೀನ್ ಸೌಲಭ್ಯದ ಜೊತೆ ಆ್ಯಂಡ್ರಾಯ್ಡ್ ಆಟೊ/ಆ್ಯಪಲ್ ಕಾರ್‌ಪ್ಲೇ ವ್ಯವಸ್ಥೆ, ಕಾರನ್ನು ಕಡೆಯ ಬಾರಿ ಪಾರ್ಕ್‌ ಮಾಡಿದ್ದು ಎಲ್ಲಿ ಎಂಬುದನ್ನು ತಿಳಿದುಕೊಳ್ಳುವ ಸೌಲಭ್ಯ ಇದರಲ್ಲಿ ಇದೆ. ಒಟ್ಟು ಎಂಟು ಬಣ್ಣಗಳಲ್ಲಿ ಈ ಕಾರು ಲಭ್ಯವಾಗಲಿದೆ. ‘ಇದರಲ್ಲಿ ಸುಧಾರಿತ ಎಂಜಿನ್‌ ಅಳವಡಿಸಲಾಗಿದೆ. ಈ ಕಾರಣದಿಂದಾಗಿ ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿರುವ ಎಂಜಿನ್ ಕೂಡ 500 ಎನ್‌ಎಮ್‌ ಟಾರ್ಕ್‌ ಉತ್ಪಾದಿಸುತ್ತದೆ’ ಎಂದು ಟೊಯೊಟಾ ಮೋಟರ್‌ನ ಮುಖ್ಯ ಎಂಜಿನಿಯರ್ ಯೋಶಿಕಿ ಕೊನಿಶಿ ತಿಳಿಸಿದರು.

ಫಾರ್ಚ್ಯೂನರ್ ಲೆಜೆಂಡರ್: ಹೆಚ್ಚು ಸ್ಟೈಲಿಶ್ ಆಗಿರುವ ‘ಲೆಜೆಂಡರ್’ ಹೆಸರಿನ, ಫಾರ್ಚ್ಯೂನರ್ ಕಾರಿನ ಇನ್ನೊಂದು ಅವತಾರವನ್ನೂ ಟಿಕೆಎಂ ಕಂಪನಿ ಬುಧವಾರ ಬಿಡುಗಡೆ ಮಾಡಿದೆ. ಇದು 2.8 ಲೀಟರ್ ಸಾಮರ್ಥ್ಯದ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ದೊರೆಯಲಿದೆ. ಇದರ ಎಕ್ಸ್‌ ಷೋರೂಂ ಬೆಲೆ ₹ 37.58 ಲಕ್ಷ. ಬಹುತೇಕ ಆಧುನಿಕ ಎಸ್‌ಯುವಿಗಳಲ್ಲಿ ಇರುವಂತೆ ವೈರ್‌ಲೆಸ್‌ ಸ್ಮಾರ್ಟ್‌ಫೋನ್‌ ಚಾರ್ಜರ್, ಡ್ಯುಯಲ್ ಟೋನ್ ಬ್ಲಾಕ್‌ರೂಫ್‌ ಈ ಕಾರಿನಲ್ಲೂ ಇವೆ.

‘ನಾವು ಈ ಹೊಸ ಕಾರುಗಳಿಗೆ ಮಹಾನಗರಗಳಿಂದ ಮಾತ್ರವೇ ಅಲ್ಲದೆ ಮೂರನೆಯ ಹಂತದ ನಗರಗಳಿಂದಲೂ ದೊಡ್ಡ ಮಟ್ಟದಲ್ಲಿ ಬೇಡಿಕೆ ಬರಲಿದೆ ಎಂಬ ನಿರೀಕ್ಷೆಯಲ್ಲಿ ಇದ್ದೇವೆ’ ಎಂದು ಬಿಡುಗಡೆ ಸಮಾರಂಭದಲ್ಲಿ ಟಿಕೆಎಂ ಕಂಪನಿಯ ಹಿರಿಯ ಉಪಾಧ್ಯಕ್ಷ ನವೀನ್ ಸೋನಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT