ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಸ್ಸಾನ್ ‘ಕಿಕ್ಸ್’ ಆಫ್

ಹೊಸ ಎಸ್ ಯುವಿ, ಸ್ಫೋರ್ಟಿ ಲುಕ್
Last Updated 20 ಡಿಸೆಂಬರ್ 2018, 5:14 IST
ಅಕ್ಷರ ಗಾತ್ರ

ಜಪಾನ್ ತಾಂತ್ರಿಕತೆಯೊಂದಿಗೆ ನಿಸ್ಸಾನ್ ಕಂಪನಿ ಈಗಾಗಲೇ ವಿವಿಧ ಕಾರುಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಈಗ ಸಾಹಸಿ ವಾಹನ ಪ್ರಿಯರಿಗಾಗಿಯೇ ವಿನೂತನ ತಂತ್ರಜ್ಞಾನ ಒಳಗೊಂಡ ‘ನ್ಯೂ ನಿಸಾನ್ ಕಿಕ್ಸ್’ ಎಂಬ ಹೊಸ ಎಸ್‌ಯುವಿ (ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್) ಕಾರನ್ನು ಪರಿಚಯಿಸುತ್ತಿದೆ.

‘ದಿ ಇಂಟಲಿಜೆಂಟ್ ಎಸ್‌ಯುವಿ’ ಎಂಬ ಟ್ಯಾಗ್‌ಲೈನ್ ಜೊತೆ ಪರಿಚಯಿಸಲಾಗುತ್ತಿರುವ ನಿಸ್ಸಾನ್ ಕಿಕ್ಸ್‌ನಲ್ಲಿ ನೂತನ ತಾಂತ್ರಿಕತೆ ಜತೆಗೆ ಹೊಸ ಹೊಸ ಫೀಚರ್‌ಗಳೂ ಮೇಳೈಸಿವೆ. ಇತ್ತೀಚೆಗೆ ಗುಜರಾತಿನ ಭುಜ್ ಸಮೀಪದ ವೈಟ್ ಡೆಸಾರ್ಟ್ ರಸ್ತೆಗಳಲ್ಲಿ ಈ ಕಾರಿನ ಟೆಸ್ಟ್ ಡ್ರೈವ್ ಆಯೋಜಿಸಲಾಗಿತ್ತು.

ಕಂಪನಿಯ ಆಹ್ವಾನದ ಮೇರೆಗೆ ‘ಪ್ರಜಾವಾಣಿ’ ಟೆಸ್ಟ್ ಡ್ರೈವ್‌ನಲ್ಲಿ ಭಾಗವಹಿಸಿತ್ತು. ಡ್ರೈವ್ ಅನುಭವ ಮತ್ತು ಕಾರಿನಲ್ಲಿ ಏನೆಲ್ಲ ವಿಶೇಷಗಳಿವೆ ಎಂಬುದರ ಬಗ್ಗೆ ಇಲ್ಲಿ ಮಾಹಿತಿ ಕೊಡಲಾಗಿದೆ.

ಹೊರ ನೋಟ: ಕಾರಿನ ಮುಂಭಾಗವನ್ನಷ್ಟೇ ನೋಡಿದರೆ, ಸಾಮಾನ್ಯ ಕಾರಿನಂತೆ ಕಾಣುತ್ತದೆ. ಇಡೀ ಕಾರನ್ನು ಗಮನಿಸಿದಾಗಲೇ ಕಿಕ್ಸ್ ಎಸ್‌ಯುವಿಯ ನೈಜ ಆಕಾರ ಸ್ಪಷ್ಟವಾಗುವುದು.

ಈ ಕಾರಿನಲ್ಲಿ ‘ಅಂದ, ಚಂದದ ಜತೆಗೆ ಸುರಕ್ಷತೆಗೂ ಆದ್ಯತೆ ನೀಡಲಾಗಿದೆ. ’ಈ ವಾಹನಕ್ಕೆ ಗ್ರಾಫೀನ್‌ (ಗ್ರಾವಿಟಿ–ಫಿಲಿಕ್‌ ಎನರ್ಜಿ ಅಬ್ಸಾಪ್ರ್ಸನ್‌) ತಂತ್ರಜ್ಞಾನದ ಹೊರ ಕವಚ (ಬಾಡಿ) ಹೊದಿಸಲಾಗಿದೆ’ ಎಂದು ಕಂಪನಿ ಹೇಳಿದೆ. ಅದರಂತೆ ಕವಚ ಕೂಡ ಗಟ್ಟಿಯಾಗಿದೆ ಎನ್ನಿಸುತ್ತದೆ.

ಜತೆಗೆ ಸ್ಫೋರ್ಟಿ ಲುಕ್. ಕಾರಿನ ಸೂರಿನದ್ದು (ಮೇಲ್ಭಾಗ) ಫ್ಲೋಟಿಂಗ್ ರೂಫ್ ವಿನ್ಯಾಸ. ಎರಡು ಬದಿಯಲ್ಲಿ ಜೋಡಿಸಿರುವ ರೂಫ್ ರೈಲ್‌ಗಳು ಗಮನ ಸೆಳೆಯುತ್ತವೆ. ಮುಂಭಾಗದಲ್ಲಿರುವ ಬಂಪರ್ ವಿನ್ಯಾಸ, ಎಲ್‌ಇಡಿ ಡೇ ಟೈಮ್ ರನ್ನಿಂಗ್ ಲೈಟ್ಸ್, ಶಾರ್ಕ್ ಫಿನ್ ಆ್ಯಂಟೆನಾಗಳು, ಫಾಗ್ ಲ್ಯಾಂಪ್‌ಗಳು, ಎದ್ದು ಕಾಣುವಂತಹ ಇಂಡಿಕೇಟರ್‌ಗಳು, ವಿ-ಮೋಷನ್ ಗ್ರಿಲ್ ಕಾರಿನ ಹೊರಾಂಗಣ ಅಂದಕ್ಕೆ ಮೆರುಗು ನೀಡಿವೆ ಅನ್ನಿಸಿತು. ಇವೆಲ್ಲವನ್ನು ಗಮನಿಸಿದರೆ, ಹಿಂದೆ ಚಾಲ್ತಿಯಲ್ಲಿದ್ದ ನಿಸ್ಸಾನ್ ಟೆರೇನ್ ಕಾರ್‌ಗಿಂತ ಇದು ಹೆಚ್ಚು ಸುಂದರವಾಗಿ ಕಾಣಿಸುತ್ತದೆ ಅನ್ನಿಸಿತ್ತು.

ಲೈಟ್‌ಗಳ ಜತೆಗಿರುವ ಎಲ್‍ಇಡಿ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್‍ಗಳು, ಬೂಮ್ ಆಕಾರದ ಎಲ್‌ಇಡಿ ಸಿಗ್ನೇಚರ್ ಲ್ಯಾಪ್ ಟೇಲ್ ಲೈಟ್ ಗಳು, ಆರ್17 5-ಸ್ಪೋಕ್ ಮಶಿನ್ಡ್ ಅಲಾಯ್ ವ್ಹೀಲ್ಸ್ ಗಳು ವಸ್ಥೆಗಳು ಕಾರಿನ ಸೌಂದರ್ಯವನ್ನು ವರ್ಧಿಸಿವೆ. ಜತೆಗೆ, ಹಲವು ಸೌಲಭ್ಯಗಳಿಗೂ ಪೂರಕವಾಗಿ ಕೆಲಸ ಮಾಡುತ್ತವೆ. ಹಿಂಬದಿಯ ಬೂಟ್‌ ಸ್ಪೇಸ್‌ (ಲಗೇಜ್ ಇಡುವ ಡಿಕ್ಕಿ) 400 ಲೀಟರ್ ಸಾಮರ್ಥ್ಯವಿದೆ.

ಒಳಾಂಗಣ ವಿನ್ಯಾಸ: ಕಾರಿನ ಒಳಭಾಗದಲ್ಲಿ ಮೊದಲು ಗಮನ ಸೆಳೆಯುವುದು ಸಿಂಗಲ್‌ ಲೆದರ್ ಹೊದಿಕೆಯ ಡ್ಯಾಷ್ ಬೋರ್ಡ್ ಮತ್ತು ಲೆಗ್‌ರೂಮ್. ಕ್ಯಾಬಿನ್‌ನಲ್ಲಿ ಮಾತ್ರವಲ್ಲ, ಹಿಂಬದಿಯಲ್ಲೂ ಆರಾಮವಾಗಿ ಕುಳಿತುಕೊಳ್ಳುವಷ್ಟು ಸ್ಥಳಾವಕಾಶವಿದೆ. ಈ ಡ್ಯಾಷ್‌ಬೋರ್ಡ್ ನಿಸ್ಸಾನ್ ಕಾರುಗಳಲ್ಲೇ ಮೊದಲ ಬಾರಿಗೆ ಅಳವಡಿಸಿರುವುದು ಎಂದು ಕಂಪನಿಯ ವಿನ್ಯಾಸಗಾರರು ಹೇಳಿದ್ದಾರೆ. ಇದರ ಜತೆಗೆ ಕೀ ಸೆನ್ಸರ್, ಗೇರ್ ಲಿವರ್ ಎದುರಿನಲ್ಲೇ ಇರುವ ಸ್ಟಾರ್ಟ್ ಬಟನ್, ಆಟೊ ಎ.ಸಿ ಸೌಲಭ್ಯಗಳು ಕಾರಿನ ‘ಸ್ಟೇಟಸ್’ ಹೆಚ್ಚಿಸಿವೆ.

ಡ್ಯಾಷ್ ಬೋರ್ಡ್ ಜತೆಗಿರುವ 8 ಇಂಚಿನ ಫ್ಲೋಟಿಂಗ್ ಟಚ್‌ಸ್ಕ್ರೀನ್ ಇನ್ಫೊಟೈನ್‌ಮೆಂಟ್ ಸಿಸ್ಟಂ ಗಮನ ಸೆಳೆಯುತ್ತದೆ. ಹಿತವಾದ ಧ್ವನಿ ಕೇಳುವಂತಹ ಸಿಸ್ಟಂ ಅನ್ನು ಕಂಪನಿ ನೀಡಿದೆ. ಇನ್ನು ಇದರಲ್ಲಿ ಇನ್‌ಬಿಲ್ಟ್ ಆ್ಯಪಲ್ ಕಾರ್‌ಪ್ಲೇ ಮತ್ತು ಆ್ಯಂಡ್ರಾಯ್ಡ್ ಆಟೊ ಅಪ್ಲಿಕೇಷನ್ ಇವೆ. ಸ್ಮಾರ್ಟ್‌ಫೋನ್‌ ಅನ್ನು ಸುಲಭವಾಗಿ ಕನೆಕ್ಟ್ ಮಾಡಬಹುದು. ವೈಫೈ ಇಂಟರ್‌ನೆಟ್ ಕನೆಕ್ಟ್ ಮಾಡಿಕೊಳ್ಳಬಹುದು. ಫೋನಿನಿಂದ ಹಾಡುಗಳನ್ನು ಪ್ಲೇ ಮಾಡಿದಾಗಲೂ ಧ್ವನಿಯ ಗುಣಮಟ್ಟ ಕೇಳುವಂತಿದೆ. ಇನ್‌ಬಿಲ್ಟ್ ನ್ಯಾವಿಗೇಶನ್ ಸಹ ಇದೆ. ವಿಲಾಸಿ ಡ್ಯುಯೆಲ್‍ಟೋನ್ ಬ್ರೌನ್ ಮತ್ತು ಬ್ಲ್ಯಾಕ್ ಒಳಾಂಗಣ ತಿರುಳಿನ ಜೊತೆಗೆ ಕಾರ್ಬನ್ ಫೈಬರ್ ಫಿನಿಶಿಂಗ್ ನೀಡಿರುವುದು ಕಾರಿನ ಇಂಟೀರಿಯರನ್ನು ತಾಜಾಗೊಳಿಸಿವೆ.

ಚಾಲಕನ ಆಸನದ ಅಡ್ಜೆಸ್ಟ್ ಮೆಂಟ್ ಮ್ಯಾನ್ಯುಯೆಲ್ ಆಗಿದೆ. ಆಟೊಮ್ಯಾಟಿಕ್ ಇದ್ದಿದ್ದರೆ ಮತ್ತಷ್ಟು ಚೆನ್ನಾಗಿರುತ್ತಿತ್ತು. ಮುಂಬದಿಯ ಸೀಟಿನಲ್ಲಿ ಶೋಲ್ಡರ್ ರೂಂ ವಿಶಾಲವಾಗಿದೆ. ಸರಾಸರಿ ಎತ್ತರದವರು ಆರಾಮವಾಗಿ ಕುಳಿತುಕೊಳ್ಳುವಂತಿವೆ. ಹಿಂಬದಿಯಲ್ಲಿ ಕುಳಿತುಕೊಳ್ಳುವ ಆಸನಗಳ ನಡುವೆ, ಕೈ ಇಟ್ಟುಕೊಳ್ಳಲು ಲೆದರ್ ಹ್ಯಾಂಡಲ್ ಇದೆ. ಸ್ಟಿಯರಿಂಗ್ ನಲ್ಲಿ ಇನ್ಫೋಟೇನ್ಮೆಂಟ್ ವಾಲ್ಯೂಮ್ ಕಂಟ್ರೋಲರ್ ಗಳಿವೆ. ಚಾಲಕನ ಡೋರ್‌ನಲ್ಲಿ ವಿಂಡೊ ಕಂಟ್ರೋಲರ್‌ಗಳಿವೆ. ಒಳಾಂಗಣದಲ್ಲಿ ಇನ್ನೊಂದಿಷ್ಟು ಸ್ಟೋರೇಜ್ ಸೌಲಭ್ಯಗಳಿದ್ದರೆ ಚೆನ್ನಾಗಿರುತ್ತಿತ್ತು.

ಆರಾಮದ ಸವಾರಿ: ಒಳಾಂಗಣ ವಿನ್ಯಾಸ ಹಿತವಾಗಿರುವುದರಿಂದ, ಕಾರನ್ನು ಆರಾಮಾಗಿ ಚಾಲನೆ ಮಾಡಬಹುದು. ಪೆಟ್ರೋಲ್ ವಾಹನ 1498 ಸಿಸಿ, ಡೀಸೆಲ್ ವಾಹನ 1461 ಸಿಸಿ ಸಾಮರ್ಥ್ಯವಿದ್ದು, ಆರಂಭದಲ್ಲೇ ನುಗ್ಗುತ್ತದೆ. ಗೇರ್ ಲಿವರ್ ಥ್ರೋ ಚೆನ್ನಾಗಿದೆ. ಚಾಲನೆಯ ಆರಂಭದ ವೇಗವೂ ಉತ್ತಮವಾಗಿದೆ.

70 ಕಿ.ಮೀ ನಿಂದ 80 ಕಿ.ಮೀ ವೇಗದಲ್ಲಿ ಗಾಡಿ ಓಡುತ್ತಿದ್ದರೂ ಗೊತ್ತಾಗುವುದಿಲ್ಲ. 150 ಕಿ.ಮೀ ವೇಗದವರೆಗೂ ಓಡಿದಾಗಲೂ ಅಂಥದ್ದೇ ಆರಾಮದ ಚಾಲನೆ ಎನ್ನಿಸಿತು. ಬ್ರೇಕ್ ವ್ಯವಸ್ಥೆ ಉತ್ತಮವಾಗಿದೆ. ಎಷ್ಟೇ ವೇಗದಲ್ಲಿದ್ದರೂ, ಬ್ರೇಕ್ ಹಾಕಿದ ಕೂಡಲೇ ಕಾರು ಗಕ್‌ನೆ ನಿಂತುಬಿಟ್ಟಿತು. ಎಲೆಕ್ಟ್ರಾನಿಕ್ ಬ್ರೇಕ್ ಡಿಸ್ಟ್ರಿಬ್ಯೂಷನ್ ಯುಕ್ತ ಎಬಿಎಸ್ ಇದೆ. ಹೀಗಾಗಿ ಬ್ರೇಕಿಂಗ್ ಉತ್ತಮವಾಗಿದೆ. ಗ್ರೌಂಡ್ ಕ್ಲಿಯರೆನ್ಸ್ 21 ಸೆಂ.ಮೀ ಇದೆ. ಹೀಗಾಗಿ ಹಂಪ್ ಗಳಲ್ಲಿ ಯಾವುದೇ ತೊಂದರೆಯಾಗಲಿಲ್ಲ.

ಟಾಪ್ ಗೇರ್ ನಲ್ಲಿದ್ದು, ವಾಹನದ ವೇಗವನ್ನು ತಕ್ಷಣ ಕಡಿಮೆಗೊಳಿಸಿದರೂ ಚಾಲನೆಯಲ್ಲಿ ವ್ಯತ್ಯಾಸವಾಗುವುದಿಲ್ಲ. ಆ ಹಂತದಲ್ಲೂ ಟಾಪ್ ಗಿಯರ್‌ನಲ್ಲೇ ವಾಹನವನ್ನು ಚಲಾಯಿಸಬಹುದು. ಉಬ್ಬು ತಗ್ಗುಗಳ ಟಾರ್ ರಸ್ತೆಯಲ್ಲೂ ಆರಾಮದಾಯಕ ಡ್ರೈವಿಂಗ್ ಅನುಭವ. ಹೀಗಾಗಿ ಸಸ್ಪೆನ್ಷನ್ ಕೂಡ ಚೆನ್ನಾಗಿದೆ ಎನ್ನಿಸಿತು. ಕಾರಿನಲ್ಲಿ ಪವರ್ ಸ್ಟೀರಿಂಗ್ ಇದೆ.

ಮಂಜು ಮುಸುಕಿದ ಹಾದಿಯಲ್ಲಿ ಸಾಗುವಾಗ ಫಾಗ್ ಲೈಟ್ ಗಳ ಕಾರ್ಯಕ್ಷಮತೆ ಚೆನ್ನಾಗಿತ್ತು. ಹೈಬೀಮ್ ಲೈಟ್ ಕೂಡ ಪರಿಣಾಮಕಾರಿಯಾಗಿತ್ತು. ಸ್ಟಿಯರಿಂಗ್ ಚೆನ್ನಾಗಿದೆ. ಆದರೆ, ಹಾರನ್ ಭಾಗ ತುಸು ಹಾರ್ಡ್ ಎನ್ನಿಸಿತು. ಈ ಕಾರು ಮುಂದಿನ ತಿಂಗಳು (ಜನವರಿ) ಅಧಿಕೃತವಾಗಿ ಮಾರುಕಟ್ಟೆಗೆ ಬರುವ ಕಾರಣದಿಂದ, ಕಂಪನಿ ಇನ್ನೂ ಬೆಲೆ ಪ್ರಕಟಿಸಿಲ್ಲ.

ಇನ್ನಷ್ಟು ವಿಶೇಷಗಳು..

• ಬುದ್ಧಿವಂತ ಟ್ರೇಸ್‍ಕಂಟ್ರೋಲ್(ವಾಹನ ಚಲನಶೀಲತೆ ನಿಯಂತ್ರಣ)
• ಕ್ರೂಸ್‍ಕಂಟ್ರೋಲ್
• ಎಕೊ ಮೋಡ್
• ಹಿಲ್ ಸ್ಟಾರ್ಟ್ ಅಸಿಸ್ಟ್
• ಸ್ಮಾರ್ಟ್ ಮನೂವರಿಬಿಲಿಟಿ –ಚಿಕ್ಕ ಸ್ಥಳದಲ್ಲಿ ತಿರುಗಿಸಲು ಲೀಸ್ಟ್‍ಟರ್ನಿಂಗ್‍ರೇಡಿಯಸ್ (ತನ್ನ ವರ್ಗದಲ್ಲಿಅತ್ಯುತ್ತಮ)

ಶಕ್ತಿಶಾಲಿ ಚಾಲನಾ ಪ್ರದರ್ಶನ
• 1.5ಎಚ್4ಕೆ ಪೆಟ್ರೋಲ್ ಮಾದರಿಗೆ 5 ವೇಗದ ಮ್ಯಾನ್ಯುವಲ್‍ಟ್ರಾನ್ಸ್‍ಮಿಷನ್‍ನಿಂದ ಚಾಲನೆ
• 1.5ಕೆ9ಕೆ ಡಿಸಿಐ ಡೀಸೆಲ್‍ಇಂಜಿನ್‍ಗೆ 6 ವೇಗದ ಮ್ಯಾನ್ಯುವಲ್‍ಟ್ರಾನ್ಸ್‍ಮಿಷನ್‍ನಿಂದ ಚಾಲನೆ

360 ಡಿಗ್ರಿ ಎವಿಎಂ ಕ್ಯಾಮೆರಾ

ಸಾಮಾನ್ಯವಾಗಿ ಪಾರ್ಕಿಂಗ್ ವ್ಯೂ ಕ್ಯಾಮೆರಾಗಳು ಇರುತ್ತವೆ. ಆದರೆ, ಈ ಕಿಕ್ಸ್‌ನಲ್ಲಿ ಹಿಂಬದಿ ಅಷ್ಟೇ ಅಲ್ಲ, 360 ಡಿಗ್ರಿಯಲ್ಲಿನ ದೃಶ್ಯಗಳು ಕಾಣುವಂತಹ ಅರೌಂಡ್ ವ್ಯೂ ಮಾನಿಟರ್ಡ್ ಡಿಸ್ಪ್ಲೆ (ಎವಿಎಂ) ಕ್ಯಾಮರಾ ಅಳವಡಿಸಲಾಗಿದೆ. ಇದರಿಂದ ಕಾರು ಪಾರ್ಕ್ ಮಾಡುವಾಗ ಎಲ್ಲ ದಿಕ್ಕುಗಳಲ್ಲಿರುವ ದೃಶ್ಯಗಳನ್ನು ಗಮನಿಸಲು ಅನುಕೂಲವಾಗುತ್ತದೆ. ಇದರ ಜತೆಗೆ, ಮಳೆ ಬಂದಾಗ, ಆಟೊಮ್ಯಾಟಿಕ್ ಆಗಿ ವೈಪರ್ಸ್ ಗಳು ಕೆಲಸ ಮಾಡಲು ರೇನ್ ಸೆನ್ಸಿಂಗ್ ಸೌಲಭ್ಯವನ್ನೂ ಅಳವಡಿಸಿದ್ದಾರೆ. ಏರ್ ಬ್ಯಾಗ್ ಗಳ ಜತೆಗೆ, ಸೀಟ್‌ಬೆಲ್ಟ್ ರಿಮೈಂಡರ್ ಇದ್ದು, ಸೀಟ್‌ಬೆಲ್ಟ್ ಧರಿಸಿರದಿದ್ದರೆ ವಾರ್ನಿಂಗ್ ನೀಡುತ್ತದೆ. ಈ ಮೂಲಕ ಸುರಕ್ಷತಾ ಸೌಲಭ್ಯಗಳಿಗೆ ಎಲ್ಲಾ ಅವತರಣಿಕೆಗಳಲ್ಲೂ ಆದ್ಯತೆ ನೀಡಲಾಗಿದೆ.

ಇನ್ನಷ್ಟು ವಿಶೇಷಗಳು

* ಗ್ರೌಂಡ್ ಕ್ಲಿಯರೆನ್ಸ್ :21 ಸೆಂಮೀ

* ಬುದ್ಧಿವಂತ ಟ್ರೇಸ್‍ಕಂಟ್ರೋಲ್ (ವಾಹನ ಚಲನಶೀಲತೆ ನಿಯಂತ್ರಣ)

* ಕ್ರೂಸ್‍ಕಂಟ್ರೋಲ್

* ಎಕೊ ಮೋಡ್‌

* ಹಿಲ್ ಸ್ಟಾರ್ಟ್ ಅಸಿಸ್ಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT