ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್‌ ಡ್ರೈವ್‌: ಸದೃಢ, ಶಕ್ತಿಯುತ ನೆಕ್ಸಾನ್‌.ಇವಿ 

Published 15 ಸೆಪ್ಟೆಂಬರ್ 2023, 16:56 IST
Last Updated 15 ಸೆಪ್ಟೆಂಬರ್ 2023, 16:56 IST
ಅಕ್ಷರ ಗಾತ್ರ

ಟಾಟಾ ಆಲ್‌–ನ್ಯೂ ನೆಕ್ಸಾನ್‌.ಇವಿ– ‘ದ ಗೇಮ್‌ ಚೇಂಜರ್‌’ ಎಂಬ ಘೋಷವಾಕ್ಯದೊಂದಿಗೆ ಹೊರ ಬಂದಿದೆ. ಅದಕ್ಕೆ ತಕ್ಕಂತೆ ಆಧುನಿಕ ತಂತ್ರಜ್ಞಾನ, ಇನ್ಫೋಟೈನ್‌ಮೆಂಟ್‌, ಆ್ಯಪ್‌ಗಳ ವೈಶಿಷ್ಟ್ಯಗಳೊಂದಿಗೆ ಸದೃಢ ಹಾಗೂ ಶಕ್ತಿಯುತ ಕಾರ್ಯದಕ್ಷತೆಯೊಂದಿಗೆ ಆಕರ್ಷಕ ನೋಟವನ್ನೂ ಹೊಂದಿದೆ.

ಆಲ್‌–ನ್ಯೂ ನೆಕ್ಸಾನ್‌.ಇವಿ ತನ್ನ ಹಿಂದಿನ ಮಾದರಿಗಳಿಗಿಂತ ವಿಭಿನ್ನವಾಗಿದ್ದು, ‘ಕಾಂಪ್ಯಾಕ್ಟ್‌ ಎಸ್‌ಯುವಿ’ ಕಾರ್ಯಸಾಧನಗಳನ್ನು ಒಳಗೊಂಡಿದೆ. ಮುಂಭಾಗದ ಬಾನೆಟ್‌ ಭಿನ್ನ ವಿನ್ಯಾಸವನ್ನು ಪಡೆದುಕೊಂಡಿದ್ದು, ಗಮನಸೆಳೆಯುವ ಜೊತೆಗೆ ಕಾರ್ಯನಿರ್ವಹಣೆಯಲ್ಲಿ ಸಹಕಾರಿಯಾಗಿದೆ. ಆ್ಯನಿಮೇಟೆಡ್‌ ಎಲ್‌ಇಡಿ ಲೈಟ್ಸ್‌ ಮನೋಲ್ಲಾಸದ ಜೊತೆಗೆ ಕಾರಿನ ಬ್ಯಾಟರಿ ಪ್ರಮಾಣ ತಿಳಿಸುವ, ಸ್ವಾಗತ, ವಂದನೆ ಹೇಳುವ ದೀಪಗಳು ಆ್ಯನಿಮೇಟೆಡ್‌ ಆಗಿ ಬೆಳಗುತ್ತವೆ. ಲೋ ರೋಲಿಂಗ್‌ ರೆಸಿಸ್ಟನ್ಸ್‌ ಟೈರ್‌ನೊಂದಿಗಿನ ಏರೊಡೈನಾಮಿಕ್‌ ಅಲಾಯ್‌ ವೀಲ್‌ಗಳು ಪ್ರಥಮ ನೋಟದಲ್ಲೇ ಬೆರಗುಗೊಳಿಸುತ್ತವೆ.

ಸದೃಢ ಕಾರ್ಯದಕ್ಷತೆಯನ್ನು ಹೊಂದಿರುವ ಆಲ್‌–ನ್ಯೂ ನೆಕ್ಸಾನ್‌.ಇವಿ ಎಲ್ಲ ರೀತಿಯ ರಸ್ತೆಗಳಲ್ಲೂ ತನ್ನ ಓಟವನ್ನು ವೃದ್ಧಿಸಿಕೊಳ್ಳುತ್ತದೆ. ಇಕೊ, ಸಿಟಿ, ಸ್ಪೋರ್ಟ್ಸ್‌ ಡ್ರೈವ್‌ ಮೋಡ್‌ಗಳನ್ನು ಆಯ್ದುಕೊಂಡು ಚಾಲನೆ ಮಾಡಿದರೆ, ಅದಕ್ಕೆ ತಕ್ಕಂತೆ ಕಾರು ಪ್ರತಿಕ್ರಿಯಿಸುತ್ತದೆ. ಕಲ್ಲು, ಮಣ್ಣು, ಗುಡ್ಡಗಳಲ್ಲೂ ಸ್ಪೋರ್ಟ್ಸ್‌  ಡ್ರೈವ್‌ ಮೋಡ್‌ ಸುಲಭವಾಗಿ ಎಲ್ಲವನ್ನೂ ಹಿಂದಿಕ್ಕಿ ಮುನ್ನುಗ್ಗುವ ಶಕ್ತಿಯನ್ನು ಹೊಂದಿದೆ. ಡಿಸೇಲ್‌ ಮಾದರಿಯ ಎಸ್‌ಯುವಿಗಳಿಗೂ ಸ್ಪರ್ಧೆ ನೀಡುವಂತೆ ಸದೃಢತೆಯನ್ನು ಆಲ್‌–ನ್ಯೂ ನೆಕ್ಸಾನ್‌.ಇವಿ ಹೊಂದಿದೆ.

ಲಾಂಗ್ ರೇಂಜ್‌ ಮತ್ತು ಮೀಡಿಯಂ ರೇಂಜ್‌ನೊಂದಿಗೆ ಲಭ್ಯವಿರುವ ಆಲ್‌–ನ್ಯೂ ನೆಕ್ಸಾನ್‌.ಇವಿ, ಕ್ರಮವಾಗಿ 106.4 ಕೆಡಬ್ಲ್ಯು, 95 ಕೆ.ಡಬ್ಲು ಎಲೆಕ್ಟ್ರಿಕ್‌ ಮೋಟರ್‌ ಶಕ್ತಿಯನ್ನು ಹೊಂದಿದೆ. 40.5 ಕೆಡಬ್ಲ್ಯುಎಚ್‌ ಮತ್ತು 30 ಕೆಡಬ್ಲ್ಯುಎಚ್‌ ಬ್ಯಾಟರಿ ಪ್ಯಾಕ್‌ ಹೊಂದಿದ್ದು, ಶೂನ್ಯದಿಂದ 100 ಕಿಲೋಮೀಟರ್‌ ವೇಗವನ್ನು ಕ್ರಮವಾಗಿ 8.9 ಸೆಕೆಂಡ್‌ ಹಾಗೂ 9.2 ಸೆಕೆಂಡ್‌ ಸಮಯದಲ್ಲಿ ತಲುಪುತ್ತದೆ. ಈ ಸಾಮರ್ಥ್ಯ ಹಿಂದಿನ ಮಾದರಿಗಳಿಗಿಂತ ಉತ್ತಮವಾಗಿದೆ.

ಪ್ಯಾಡಲ್‌ ಶಿಫ್ಟ್‌ ವೈಶಿಷ್ಟ್ಯದೊಂದಿಗೆ ಚಾಲನೆಯನ್ನು ಮತ್ತಷ್ಟು ಸುಗಮಗೊಳಿಸಲಿದೆ. ಲಾಂಗ್‌ ರೇಂಜ್‌ನಲ್ಲಿ ಎಲ್ಲ ಡಿಸ್ಕ್‌ ಬ್ರೇಕ್‌ ಹೊಂದಿದ್ದು, ಮುಂಭಾಗದ ಸಸ್ಪೆನ್ಸನ್‌ ಕಾಯಿಲ್‌ ಸ್ಪ್ರಿಂಗ್‌ನೊಂದಿಗಿದ್ದು, ಹಿಂಭಾಗದಲ್ಲಿ ಟ್ವಿಸ್ಟ್‌ ಬೀಮ್‌– ಡುಯಲ್‌ ಪಾತ್‌ ಸ್ಟ್ರಟ್‌ ಸಾಮರ್ಥ್ಯದಿಂದ ಹೆಚ್ಚಿನ ಸದೃಢತೆಯನ್ನು ನೀಡಿದೆ. ಇದರಿಂದ ಸಣ್ಣ–ಪುಟ್ಟ ಗುಂಡಿ ದಾಟಿದಾಗಲೂ ಅದರ ಅನುಭವ ಪ್ರಯಾಣಿಕರಿಗೆ ಇರುವುದಿಲ್ಲ. ಲೋ ರೋಲಿಂಗ್‌ ರೆಸಿಸ್ಟನ್ಸ್‌ ಟೈರ್‌ಗಳು ಚಾಲನೆ ಹಾಗೂ ಸಾಮರ್ಥ್ಯ ವೃದ್ಧಿಗೆ ಸಹಕಾರಿಯಾಗಿವೆ.

ಬ್ಯಾಟರಿ ಚಾರ್ಜಿಂಗ್‌ ಅನ್ನು ಮೂರು ಆಯ್ಕೆಗಳಲ್ಲಿ ನೀಡಲಾಗಿದ್ದು, ಮನೆಗಳಲ್ಲಿರುವ 3.3 ಕೆಡಬ್ಲ್ಯು ಹಾಗೂ ಬೃಹತ್‌ ಕಟ್ಟಡಗಳಲ್ಲಿರುವ 7.2 ಕೆಡಬ್ಲ್ಯು ಸಾಮರ್ಥ್ಯ ಎಸಿ ವಾಲ್‌ ಬಾಕ್ಸ್‌ನಿಂದ ಕ್ರಮವಾಗಿ 15 ಗಂಟೆ ಹಾಗೂ 6 ಗಂಟೆಯಲ್ಲಿ ಬ್ಯಾಟರಿಯನ್ನು ಪೂರ್ಣ ಚಾರ್ಜ್‌ ಮಾಡಿಕೊಳ್ಳಬಹುದು. 50 ಕೆಡಬ್ಲ್ಯು ಡಿಸಿ ಫಾಸ್ಟ್ ಚಾರ್ಜರ್‌ನಲ್ಲಿ 56 ನಿಮಿಷಗಳಲ್ಲೇ ಪೂರ್ಣ ಚಾರ್ಚ್‌ ಆಗಲಿದೆ. ಒಂದು ಬಾರಿ ಚಾರ್ಚ್‌ ಆದರೆ 465 ಕಿ.ಮೀ ಹಾಗೂ 325 ಕಿ.ಮೀ ಸಂಚಾರ ಸಾಧ್ಯ ಎಂದು ಕಂಪನಿ ಹೇಳಿಕೊಳ್ಳುತ್ತದೆ. ಆದರೆ, ಎಸಿ ಹಾಗೂ ಇತರೆ ವೈಶಿಷ್ಟ್ಯಗಳನ್ನು ಬಳಸಿಕೊಂಡು, ವೇಗದ ಚಾಲನೆ ಮಾಡಿದರೆ ಇಷ್ಟು ಕಿ.ಮೀ ನೀಡುವುದು ಕಷ್ಟಸಾಧ್ಯ. ಕಂಪನಿ ಹೇಳುವುದಕ್ಕಿಂತ ಸುಮಾರು 100 ಕಿ.ಮೀಯಷ್ಟು ಕಡಿಮೆ ನೀಡಬಹುದು. 8 ವರ್ಷದ ಅಥವಾ 1.60 ಲಕ್ಷ ಕಿ.ಮೀವರೆಗೆ ಬ್ಯಾಟರಿ ಪ್ಯಾಕ್‌ ಮತ್ತು ಮೋಟರ್ ವಾರಂಟಿ ಇರುವುದು ಪ್ರಮುಖ ವಿಷಯ. ವಾಹನದ ವಾರಂಟಿ ಮೂರು ವರ್ಷ ಅಥವಾ 1.25 ಲಕ್ಷ ಕಿ.ಮೀ ಆಗಿದೆ.

ಆಲ್‌–ನ್ಯೂ ನೆಕ್ಸಾನ್‌.ಇವಿ ತನ್ನ ಸಾರ್ಮಥ್ಯದೊಂದಿಗೆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಸಾಕಷ್ಟು ಮುಂದಿದೆ. ಐಷಾರಾಮಿ ಸೌಲಭ್ಯಗಳೊಂದಿಗೆ ಹೈಟೆಕ್‌ ತಂತ್ರಜ್ಞಾನ, ಆ್ಯಪ್‌ಗಳನ್ನು ಬೃಹತ್‌ 12.3 ಇಂಚು ಸ್ಕ್ರೀನ್‌ನಲ್ಲಿ ನೋಡಬಹುದು, ಅನುಭವಿಸಬಹುದು. ಕ್ರಿಯೇಟಿವ್‌, ಫಿಯರ್‌ಲೆಸ್‌, ಎಂಪವರ್ಡ್‌ ಬಣ್ಣಗಳ ಆಯ್ಕೆಯಲ್ಲಿ ಮೂರು ಮಾದರಿಗಳಲ್ಲಿ ಲಭ್ಯವಿರುವ ಆಲ್‌–ನ್ಯೂ ನೆಕ್ಸಾನ್‌.ಇವಿ, ಆಯಾ ಮಾದರಿಗಳಲ್ಲಿ ಸೌಲಭ್ಯಗಳು ಬದಲಾಗುತ್ತವೆ. ಅತ್ಯುನ್ನತ ಮಾದರಿಯಲ್ಲಿ ಎಲ್ಲ ರೀತಿಯ ಸೌಲಭ್ಯಗಳಿದ್ದು, ಮಾದರಿಗಳ ಆಯ್ಕೆಯಂತೆ ಅವು ಲಭ್ಯವಾಗಲಿವೆ. ಟರ್ನ್‌ ಇಂಡಿಕೇಟರ್‌ ಕ್ಯಾಮೆರಾ, ರಿವರ್ಸ್‌ ಕ್ಯಾಮೆರಾ ಮತ್ತು 360 ಡಿಗ್ರಿ ಕ್ಯಾಮೆರಾಗಳ ಡಿಸ್‌ಪ್ಲೇ ಕೂಡ ಇದೆ.

ಕಾರಿನಿಂದ ಕಾರಿಗೆ ಚಾರ್ಜಿಂಗ್‌

ನೆಕ್ಸಾನ್‌.ಇವಿ ಪ್ರಮುಖ ವೈಶಿಷ್ಟ್ಯಗಳಲ್ಲಿ ಅಗ್ರಪಂಕ್ತಿಯಲ್ಲಿರುವುದು ಕಾರಿನಿಂದ ಕಾರಿಗೆ ಚಾರ್ಜಿಂಗ್‌. ಇದರೊಂದಿಗೆ ಕಾರಿನಿಂದ ಲೈಟ್‌ ಹಾಗೂ ಇತರೆ ಉಪಕರಣಗಳನ್ನು ಬಳಕೆ ಮಾಡುವ ಸೌಲಭ್ಯ. ನೆಕ್ಸಾನ್‌.ಇವಿಗೆ ಮತ್ತೊಂದು ಅದೇ ಮಾದರಿ ಕಾರಿನಿಂದ ಚಾರ್ಜ್‌ ಮಾಡಿಕೊಳ್ಳಬಹುದು. ವಿಭಿನ್ನ ಮಾದರಿಗಳ ನಡುವೆಯೂ ಈ ಸೌಲಭ್ಯ ಪಡೆದುಕೊಳ್ಳಬಹುದು. ಬ್ಯಾಟರ್‌ ಸಂಪೂರ್ಣ ಡ್ರೈ ಆದಾಗ ಒಂದಷ್ಟು ಕಿ.ಮೀ ಅಂದರೆ ಚಾರ್ಜಿಂಗ್ ಪಾಯಿಂಟ್‌ವರೆಗೆ ಹೋಗಲು ಸ್ನೇಹಿತರ ಕಾರಿನ ನೆರವು ಪಡೆದುಕೊಳ್ಳಲು ಇದು ಅನುಕೂಲಕರ. ನೆಕ್ಸಾನ್‌.ಇವಿ ಬ್ಯಾಟರಿಯಿಂದ ಕಾಪಿ ಮೇಕರ್‌, ಎಲೆಕ್ಟ್ರಿಕ್‌ ಸ್ಟೌ, ಟೇಬಲ್‌ ಲ್ಯಾಂಪ್‌, ಟಿ.ವಿ., ಎಲ್ಇಡಿ ಸ್ಕ್ರೀನ್‌ಗಳಿಗೆ ವಿದ್ಯುತ್‌ ನೀಡಬಹುದು. 

ಡಿಜಿಟಲ್‌ ಸ್ಟೀರಿಂಗ್‌ ವೀಲ್‌ ಹೊಂದಿರುವ ಆಲ್‌–ನ್ಯೂ ನೆಕ್ಸಾನ್‌.ಇವಿ, 12. ಇಂಚು ಟಚ್‌ಸ್ಕ್ರೀನ್‌ನಲ್ಲಿ ಆರ್ಕೇಡ್‌.ಇವಿ ಎಂಬ ಆ್ಯಪ್‌ ಸೂಟ್‌ನಲ್ಲಿ ಪ್ರಯಾಣಿಕರು ಸದಸ್ಯತ್ವ ಹೊಂದಿರುವ ಎಲ್ಲ ಆ್ಯಪ್‌ಗಳನ್ನೂ ಬಳಸಬಹುದು, ಎಲ್ಲ ರೀತಿಯ ಕಂಟೆಂಟ್‌ಗಳನ್ನೂ ವೀಕ್ಷಿಸಬಹುದು. ಇದಕ್ಕಾಗಿಯೇ ವಿಶೇಷವಾಗಿ, ಜೆಬಿಎಲ್‌ನ ಸಬ್‌ವೂಫರ್‌ ಸೇರಿದಂತೆ 9 ಸ್ಪೀಕರ್‌ಗಳಿದ್ದು, ಸಿನಿಮ್ಯಾಟಿಕ್‌ ಸೌಂಡ್ ಸಿಸ್ಟಮ್‌ ಅಳವಡಿಸಲಾಗಿದೆ. ಅಲೆಕ್ಸಾ, ಸಿರಿ, ಗೂಗಲ್‌ ಅಸಿಸ್ಟಂಟ್‌, ನೇಟಿವ್‌ ವಾಯ್ಸ್‌ ಅಸಿಸ್ಟನ್ಸ್‌ ಸೌಲಭ್ಯವಿದ್ದು, ಧ್ವನಿ ಮೂಲಕವೇ ಸನ್‌ ರೂಫ್‌, ಡೋರ್‌, ವಿಂಡೊ ಸೇರಿದಂತೆ ಹಲವು ಸೌಲಭ್ಯಗಳನ್ನು ನಿಯಂತ್ರಿಸಬಹುದಾಗಿದೆ.

ವೈರ್‌ಲೆಸ್‌ ಚಾರ್ಜಿಂಗ್‌ ಆಯ್ಕೆಯನ್ನು ಹೊಂದಿರುವ ನೆಕ್ಸಾನ್‌.ಇವಿನಲ್ಲಿ 45 ಕೆಡಬ್ಲ್ಯು ಸಾಮರ್ಥ್ಯದ ಚಾರ್ಜಿಂಗ್‌ ಪಾಯಿಂಟ್‌ ಅನ್ನು ಸಿ ಟೈಪ್‌ನಲ್ಲಿ ನೀಡಲಾಗಿದೆ. ಹಿಂಭಾಗದ ಪ್ರಯಾಣಿಕರಿಗೂ ಈ ಸೌಲಭ್ಯವಿದೆ. ಮುಂಭಾಗದಲ್ಲಿರುವ ಸೌಲಭ್ಯವನ್ನು ಪಡೆಯಲು ಅಂದರೆ ವೈರ್‌ ಅಳವಡಿಸಲು ಸ್ವಲ್ಪ ಪ್ರಯಾಸ ಪಡಬೇಕು. ಏಕೆಂದರೆ ಇಲ್ಲಿ ಈ ಸ್ಥಳಾವಕಾಶ ಕಡಿಮೆ ಇದೆ.

2020ರಿಂದ ನೆಕ್ಸಾನ್‌ ಹಾದಿ ಆರಂಭವಾಗಿದ್ದು,‌ 2023ರವರೆಗೆ ಪ್ರಮುಖ ಮೈಲಿಗಲ್ಲುಗಳನ್ನು ಸಾಧಿಸಿದೆ. ಇದೀಗ, ನೆಕ್ಸಾನ್‌.ಇವಿದೊಂದಿಗೆ ‘ಗೇಮ್‌ ಚೇಂಜರ್‌’ ಎಂಬ ಘೋಷವಾಕ್ಯದಲ್ಲಿ ಬದಲಾವಣೆಯೊಂದಿಗೆ ಜನರ ಮುಂದಿದೆ. ನೋಟ, ತಂತ್ರಜ್ಞಾನ, ಇನ್ಫೋಟೈನ್‌ಮೆಂಟ್‌ನಲ್ಲಿ ತನ್ನ ವರ್ಗದಲ್ಲೇ ಅತ್ಯುತ್ತಮ ಎನಿಸುವ ನೆಕ್ಸಾನ್‌.ಇವಿ, ಎಲೆಕ್ಟ್ರಾನಿಕ್ ವಾಹನಗಳಲ್ಲಿ ಹೊಸ ಪ್ರಯೋಗಗಳನ್ನೂ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT