ಬುಧವಾರ, ಸೆಪ್ಟೆಂಬರ್ 22, 2021
23 °C
ಭಾರತಕ್ಕೂ ಬರುತ್ತಿದೆ ಟೆಲಿಮೆಟಿಕ್ಸ್‌ ವಿಮಾ ಪದ್ಧತಿ

PV Web Exclusive | ಚಾಲನಾ ಶೈಲಿ ಆಧರಿಸಿದ ವಿಮಾ ಮೊತ್ತ

ಇ.ಎಸ್. ಸುಧೀಂದ್ರ ಪ್ರಸಾದ್‌ Updated:

ಅಕ್ಷರ ಗಾತ್ರ : | |

Prajavani

ವಾಹನಗಳು ಈಗ ಕೇವಲ ಯಾಂತ್ರಿಕ ಸಾಧನಗಳನ್ನು ಹೊಂದಿದ ‘ನಿರ್ಜೀವ ವಸ್ತು’ಗಳಲ್ಲ. ಬದಲಿಗೆ ನಮ್ಮ ಬೇಕು ಬೇಡಗಳನ್ನು ಆಲಿಸುವ ಸೇವಕ, ದಾರಿತಪ್ಪದಂತೆ ನಿಯಂತ್ರಿಸುವ ನಾವಿಕ, ವಾಹನದ ಹೊರಭಾಗದ ಮಾಹಿತಿಯನ್ನು ಚಾಚೂತಪ್ಪದೆ ನೀಡುವ ಆಪ್ತಸಹಾಯಕ. ಹೀಗಾಗಿಯೇ ‘ಟೆಲಿಮ್ಯಾಟಿಕ್ಸ್‌’ ಎಂಬ ಈ ನೂತನ ತಂತ್ರಜ್ಞಾನ ಬಹುಕೋಟಿ ಆದಾಯ ತರಬಲ್ಲ ಉದ್ಯಮವಾಗಿ ಹೊರಹೊಮ್ಮುತ್ತಿದ್ದು, ಇದರತ್ತ ಇಡೀ ಜಗತ್ತಿನ ಕಣ್ಣು ನೆಟ್ಟಿದೆ.

‘ಇನ್ಫೊಟೈನ್ಮೆಂಟ್‌’ ಈಗಿನ ಹೊಸ ಕಾರುಗಳಲ್ಲಿರುವ ಆಕರ್ಷಕ ಸಾಧನ. ದೊಡ್ಡ ಪರದೆ... ಅದ ಮೇಲೆ ಒಂದಷ್ಟು ಆ್ಯಪ್‌ಗಳ ಐಕಾನ್‌ಗಳು, ಕೇಳಿದ ಹಾಡನ್ನು ಪ್ರಸಾರ ಮಾಡುವ, ಮಾರ್ಗದ ನಕ್ಷೆ ತೋರಿಸುವ, ಕಾರಿನಲ್ಲಿರುವ ಇತರ ಬ್ಲೂಟೂತ್ ಸಾಧನಗಳನ್ನು ಪತ್ತೆ ಮಾಡಿ ಸಹಕರಿಸುವ ಇತ್ಯಾದಿ ಸೌಲಭ್ಯಗಳನ್ನು ಇದು ಹೊಂದಿರುತ್ತದೆ. 2016 ರಿಂದಲೇ ಯುರೋಪ್, ಜಪಾನ್, ಅಮೆರಿಕಾದಂತ ರಾಷ್ಟ್ರಗಳಲ್ಲಿನ ವಾಹನಗಳಲ್ಲಿ ಟೆಲೆಮ್ಯಾಟಿಕ್ಸ್ ಸಾಧನ ಕಡ್ಡಾಯವಾಗಿರುವ ಇದು ಭಾರತದಲ್ಲಿ ಈಗ ಸದ್ದು ಮಾಡುತ್ತಿದೆ.

ಅದರಲ್ಲೂ ದೇಶದ ರಸ್ತೆಗಳಲ್ಲಿರುವ 4ಲಕ್ಷ ಟ್ರಕ್ ಹಾಗೂ ಪ್ರಯಾಣಿಕ ವಾಹನಗಳಿಗೆ ಟೆಲಿಮೆಟ್ರಿಕ್ಸ್ ಅಳವಡಿಕೆಯನ್ನು ಕೇಂದ್ರ ಕಡ್ಡಾಯಗೊಳಿಸಿದ ನಂತರವಂತೂ ಇದಕ್ಕೆ ಈಗ ಎಲ್ಲಿಲ್ಲದ ಬೇಡಿಕೆ. ಇಷ್ಟೇ ಮಾತ್ರವಲ್ಲ, ಭವಿಷ್ಯದಲ್ಲಿ ವಾಹನ ವಿಮಾ ಕಂತು ಕಟ್ಟುವುದೂ ಕೂಡಾ ಈ ಸಾಧನದಲ್ಲಿ ದಾಖಲಾಗುವ ಚಾಲನಾ ಶೈಲಿಯನ್ನು ಅವಲಂಬಿಸಿರುತ್ತದೆ.

ಟೆಲಿಮೆಟ್ರಿಕ್ಸ್‌ನ ಮೂರು ಹಂತಗಳು: ಈಗಾಗಲೇ ಟ್ರಕ್‌ ಹಾಗೂ ಸಾರಿಗೆ ಬಸ್ಸುಗಳಲ್ಲಿ ಜಿಪಿಎಸ್ ಅಳವಡಿಸಿರುವುದು ತಿಳಿದಿರುವ ಸಂಗತಿ. ವಾಹನ ಎಲ್ಲಿದೆ, ಎಷ್ಟು ವೇಗದಲ್ಲಿ ಚಲಿಸುತ್ತಿದೆ ಎಂಬಷ್ಟೇ ಮಾಹಿತಿಯನ್ನು ನೀಡುವ ಸಾಧನಗಳನ್ನು ಬಹಳಷ್ಟು ಬೃಹತ್ ವಾಹನಗಳು ಹೊಂದಿವೆ.

ಆದರೆ ಈಗ ಅದರ ಮುಂದಿನ ಹಂತವಾದ ವಾಹನದ ‘ಆರೋಗ್ಯ’ ಸ್ಥಿತಿಯ ಮಾಹಿತಿ ನೀಡುವ ಟೆಲಿಮೆಟಿಕ್ಸ್ ಸದ್ಯ ಭಾರತದಲ್ಲಿ ಪ್ರಚಲಿತವಾಗಿದೆ. ವಾಹನದ ಎಂಜಿನ್ ಆಯಿಲ್, ಕೂಲೆಂಟ್, ಗಾಲಿಗಳಲ್ಲಿನ ಗಾಳಿಯ ಒತ್ತಡ, ಇಂಧನದ ನಿಖರ ಮಾಹಿತಿ, ಬ್ರೇಕ್‌ ಸ್ಥಿತಿಗತಿ, ಬಾಗಿಲು ಹಾಕಿದೆಯೇ ಅಥವಾ ತೆರೆದಿದೆಯೇ ಎಂಬಿತ್ಯಾದಿ ಮಾಹಿತಿಯನ್ನು ನೀಡುವ ಹಂತದ ಟೆಲಿಮೆಟಿಕ್ಸ್‌ ಸದ್ಯ ಬಹಳಷ್ಟು ವಾಹನಗಳಲ್ಲಿ ಅಳವಡಿಸಲಾಗಿದೆ.

ಇದರ ಮುಂದಿನ ಹಂತದಲ್ಲಿ ಈ ಮಾಹಿತಿಯ ಜತೆಗೆ ಚಾಲಕನ ಚಾಲನಾ ವಿಧಾನ ಅಳವಡಿಸಿ ವಿಮಾ ಮೊತ್ತ ನಿರ್ಧರಿಸುವ ವಿಧಾನವೂ ಜಾರಿಗೆ ಬರಲಿದೆ. ಈಗಾಗಲೇ ಮುಂದುವರಿದ ರಾಷ್ಟ್ರಗಳು ಇದನ್ನು ಅಳವಡಿಸಿಕೊಂಡಿವೆ. ಚಾಲಕನ ಚಾಲನಾ ವಿಧಾನ, ವಾಹನ ಚಲಿಸುವ ಪ್ರದೇಶಗಳಿಗೆ ಅನುಗುಣವಾಗಿ ವಾಹನದ ವಿಮಾ ಮೊತ್ತ ನಿರ್ಧಾರವಾಗಲಿದೆ. ಸದ್ಯ ಭಾರತದಲ್ಲಿ ಎರಡು ಪ್ರಮುಖ ವಿಮಾ ಕಂಪನಿಗಳು ಇದನ್ನು ಅಳವಡಿಸಲು ಅಂತಿಮ ಸಿದ್ಧತೆ ನಡೆದಿದೆ.

ಜಿಪಿಎಸ್ ಮತ್ತು ಜಿಎಸ್ಎಂ ಬಳಕೆ: ಆರಂಭದಲ್ಲಿ ಜಿಪಿಎಸ್ ಸಾಧನ ಮಾತ್ರ ಬಳಕೆಯಾಗುತ್ತಿದ್ದ ಟೆಲಿಮೆಟಿಕ್ಸ್‌ನಲ್ಲಿ ಈಗ ಜಿಎಸ್‌ಎಂ ಕೂಡಾ ಬಳಸಲಾಗುತ್ತಿದೆ. ಹೀಗಾಗಿ ಸಿಮ್‌ ಕಾರ್ಡ್‌ ಅಳವಡಿಸಿರುವ ಒಬಿಡಿ (ಆನ್‌ ಬೋರ್ಡ್ ಡಯಾಗ್ನಾಸ್ಟಿಕ್ಸ್‌) ಸಾಧನ ಮೂಲಕ ಈಗ ವಾಹನವಿರುವ ಸ್ಥಳ ಹಾಗೂ ವೇಗದ ಜತೆಗೆ, ವಾಹನದ ಇನ್ನಿತರ ಮಾಹಿತಿಯನ್ನೂ ಅಂಗೈನಲ್ಲೇ ಪಡೆಯಬಹುದು. ಈ ಸಾಧನ ಈಗಾಗಲೇ ಹಲವು ಪ್ರಯಾಣಿಕ ಕಾರುಗಳಲ್ಲಿ ಅಳವಡಿಸಲಾಗಿದೆ. ಬೃಹತ್ ವಾಹನಗಳಲ್ಲೂ ಅಳವಡಿಸುವುದನ್ನು ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ನೀತಿಯನ್ನು ರೂಪಿಸುತ್ತಿದೆ.

‘ಟೆಲಿಮೆಟಕ್ಸ್‌ಗೂ ಒಂದು ಗುಣಮಟ್ಟವನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದೆ. ಎಐಎಸ್‌–140 ಎಂಬ ಗುಣಮಟ್ಟದ ಸಾಧನಗಳನ್ನು ಅಳವಡಿಸಿರುವ ವಾಹನಗಳಿಗೆ ಮಾತ್ರ ನೋಂದಣಿ ಸೌಲಭ್ಯ ದೊರೆಯಲಿದೆ ಎಂಬ ಕಾನೂನು ಸದ್ಯ ದೆಹಲಿ, ಕೇರಳ ಸೇರಿದಂತೆ ಐದು ರಾಜ್ಯಗಳಲ್ಲಿದೆ. ಕರ್ನಾಟಕ ಈವರೆಗೂ ಇಂಥ ಕಾಯ್ದೆಯನ್ನು ಜಾರಿಗೆ ತಂದಿಲ್ಲ. ಆದರೆ ಬಜೆಟ್‌ನಲ್ಲಿ ಇದಕ್ಕಾಗಿ ₹49ಕೋಟಿ ಮೀಸಲಿಟ್ಟಿದೆ’ ಎಂದು ಐಟ್ರಯಾಂಗಲ್ಸ್‌ ಕಂಪನಿ ವ್ಯವಸ್ಥಾಪಕ ನಿರ್ದೇಶಕ ವಾದಿರಾಜ ಕಟ್ಟಿ ಹೇಳಿದರು.

ಕರ್ನಾಟಕ ಮೂಲದ ಐಟ್ರಯಾಂಗಲ್ಸ್ ಕಳೆದ ಹತ್ತು ವರ್ಷಗಳಿಂದ ಈ ಉದ್ದಿಮೆಯಲ್ಲಿದ್ದು, ದೇಶದ ಶೇ 35ರಷ್ಟು ಪಾಲನ್ನು ಹೊಂದಿದೆ. ಆಫ್ರಿಕಾ, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ತನ್ನ ಟೆಲಿಮೆಟಿಕ್ಸ್ ಸಾಧನಗಳನ್ನು ಅಳವಡಿಸಿರುವ ಈ ಕಂಪನಿ ಈವರೆಗೂ 4 ಲಕ್ಷ ಸಾಧನಗಳನ್ನು ಅಳವಡಿಸಿದೆ. ಜತೆಗೆ ಅನ್ಯ ರಾಷ್ಟ್ರಗಳಲ್ಲಿ ಹೆಸರು ಮಾಡಿದ ಭಾರತದ ಏಕೈಕ ಕಂಪನಿ ಎಂಬ ಹೆಸರನ್ನೂ ಪಡೆದಿದೆ.

‘ನಿರ್ಭಯಾ ನಿಧಿ ಮೂಲಕ ವಾಹನಗಳಲ್ಲಿ ಟೆಲಿಮೆಟಿಕ್ಸ್ ಸಾಧನ ಅಳವಡಿಸಲು ಮೂಲಸೌಕರ್ಯ ಸ್ಥಾಪನೆಗೆ ಕೇಂದ್ರ ಸರ್ಕಾರ ಶೇ 75ರಷ್ಟು ಹಾಗೂ ರಾಜ್ಯ ಸರ್ಕಾರ ಶೇ 25ರಷ್ಟು ನೆರವು ನೀಡುತ್ತಿದೆ. ಆ ಮೂಲಕ ರಾಜ್ಯ ಸರ್ಕಾರಗಳು ತಮ್ಮಲ್ಲಿ ವಾಹನಗಳ ಟ್ರ್ಯಾಕಿಂಗ್ ವ್ಯವಸ್ಥೆಗೆ ಮೂಲಸೌಕರ್ಯಗಳನ್ನು ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಐಟ್ರಯಾಂಗಲ್ಸ್ ಕಂಪನಿಯು ಸಾಧನ ಹಾಗೂ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇದರಲ್ಲಿ ರಷ್ಯಾ, ಇಸ್ರೇಲ್, ಐರೋಪ್ಯ ರಾಷ್ಟ್ರಗಳ ಕಂಪನಿಗಳೂ ಇವೆ’ ಎಂದು ಕಟ್ಟಿ ತಿಳಿಸಿದರು.

ವಾಹನದ ಕಿಲೋಮೀಟರ್ ಆಧರಿಸಿ ಹೆದ್ದಾರಿ ಶುಲ್ಕ: ಭಾರತದಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಾತ್ರ ಸದ್ಯ ಟೋಲ್ ಇದೆ. ಆದರೆ ಇದು ರಾಜ್ಯ ಹೆದ್ದಾರಿಗಳಿಗೂ ವಿಸ್ತರಿಸುವ ದಿನಗಳೂ ದೂರವಿಲ್ಲ. ಸದ್ಯ ಇರುವ ಟೋಲ್‌ಗೇಟ್‌ಗಳಲ್ಲಿ ಶುಲ್ಕ ಕಟ್ಟಲು ವಾಹನ ದಟ್ಟಣೆ ಹೆಚ್ಚಾಗುವುದನ್ನು ತಪ್ಪಿಸಲು ಫಾಸ್ಟ್‌ ಟ್ಯಾಗ್ ಅಳವಡಿಸಲಾಗಿದೆ. ಆದರೆ ಟೆಲಿಮೆಟಿಕ್ಸ್ ಮೂಲಕ ವಾಹನ ಸಂಚರಿಸುವ ರಸ್ತೆ ಹಾಗೂ ದೂರ ಆಧರಿಸಿ ಶುಲ್ಕವನ್ನು ಖಾತೆಯಿಂದಲೇ ಪಡೆಯುವ ವ್ಯವಸ್ಥೆಯೂ ಶೀಘ್ರದಲ್ಲಿ ಬರಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ರಷ್ಯಾದ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.

ಈ ವ್ಯವಸ್ಥೆ ಜಾರಿಗೆ ಬಂದಲ್ಲಿ ಅಮೆರಿಕ ಹಾಗೂ ರಷ್ಯಾ ಹೊರತುಪಡಿಸಿದರೆ, ಈ ವ್ಯವಸ್ಥೆ ಅಳವಡಿಸಿದ ಜಗತ್ತಿನ ಮೂರನೇ ರಾಷ್ಟ್ರ ಭಾರತವಾಗಲಿದೆ. ದೇಶದಲ್ಲಿ ಪ್ರತಿ ವರ್ಷ 15ಲಕ್ಷ ವಾಹನಗಳು ರಸ್ತೆಗೆ ಸೇರುತ್ತಿವೆ. ಈ ರೀತಿ ಏರುತ್ತಿರುವ ವಾಹನಗಳ ಸಂಖ್ಯೆಗಳಿಗೆ ಇಂಥ ಸಾಧನಗಳು ಅಗತ್ಯ ಎಂದು ಕಟ್ಟಿ ಅಭಿಪ್ರಾಯಪಟ್ಟರು.

ವಿಮೆಗೆ ಟೆಲಿಮೆಟಿಕ್ಸ್‌– ಐಆರ್‌ಡಿಐ ಒಪ್ಪಿಗೆ: ವಾಹನ ವಿಮೆಯಲ್ಲಿ ಟೆಲಿಮೆಟಿಕ್ಸ್ ಮಾಹಿತಿ ಆಧರಿಸಿ ವಿಮಾ ಮೊತ್ತ ನಿರ್ಧರಿಸುವ ಲೆಕ್ಕಾಚಾರಕ್ಕೆ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಐ)ವು ಅಸ್ತು ಎಂದಿದೆ. ಹೀಗಾಗಿ ಭಾರತದ ಎರಡು ಪ್ರಮುಖ ವಿಮಾ ಕಂಪನಿಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ.

ಹೀಗಾದಲ್ಲಿ ಸದ್ಯ ವಾಹನದ ವಿಮಾ ಮೊತ್ತ ವರ್ಷಗಳು ಕಳೆದಂತೆ ಒಂದು ನಿಗದಿತ ಪ್ರಮಾಣದಲ್ಲಿ ಕಡಿಮೆಯಾಗುವುದರ ಬದಲು, ವಾಹನ ಚಾಲನಾ ಕೌಶಲ್ಯವನ್ನು ಆಧರಿಸಿ ವಿಮೆ ನಿರ್ಧಾರವಾಗಲಿದೆ. ಜತೆಗೆ ನಗರ ವ್ಯಾಪ್ತಿಯಲ್ಲೇ ಸಂಚರಿಸುತ್ತಿದ್ದರೆ ಒಂದು ದರ, ಹೊರವಲಯದಲ್ಲಾದರೆ ಒಂದು, ಗುಡ್ಡಗಾಡು ಪ್ರದೇಶದಲ್ಲಾದರೆ ಮತ್ತೊಂದು ಹೀಗೆ ಪ್ರದೇಶಗಳಿಗೆ ಅನುಗುಣವಾಗಿ ಅಥವಾ ಮೂರೂ ಪ್ರದೇಶಗಳಲ್ಲೂ ಸಂಚರಿಸಿದರೆ ಆ ವರ್ಷದ ಮಾಹಿತಿ ಆಧರಿಸಿ ಮುಂದಿನ ವರ್ಷದ ವಿಮೆ ನಿರ್ಧಾರವಾಗಲಿದೆ.

ಈ ಸೌಲಭ್ಯಗಳಿಗೆ ಟೆಲಿಮೆಟಿಕ್ಸ್‌ನಲ್ಲಿ ಅಳವಡಿಸಿರುವ ಜಿಎಸ್ಎಂ ತಂತ್ರಜ್ಞಾನ ನೆರವಾಗಲಿದೆ. ವಾಹನ ಮಾಹಿತಿಯನ್ನು ಸಂಗ್ರಹಿಸುವ ಟೆಲಿಮೆಟಿಕ್ಸ್ ಅದರೊಳಗಿರುವ ಜಿಎಸ್‌ಎಂ ಸಿಮ್‌ ಮೂಲಕ ಲಭ್ಯವಾಗುವ ಅಂತರ್ಜಾಲ ವ್ಯವಸ್ಥೆಯಿಂದ ಕಾರಿನ ಮಾಹಿತಿಯನ್ನು ವಿಮಾ ಕಂಪನಿಗೆ ರವಾನಿಸಲಿದೆ. ಅದನ್ನು ಆಧರಿಸಿ ವಿಮಾ ಕಂಪನಿಗಳು ದರ ನಿಗದಿಪಡಿಸಲಿವೆ ಎಂದು ಐಟ್ರಯಾಂಗಲ್ಸ್‌ನ ವಾದಿರಾಜ ಅವರು ಮಾಹಿತಿ ನೀಡಿದರು.

ಮಾಹಿತಿ ಗೋಪ್ಯತೆ ಹೇಗೆ?: ಪ್ರತಿ ವಾಹನದಿಂದ ಸಂಗ್ರಹವಾಗುವ ದತ್ತಾಂಶ ಮಾಹಿತಿ ಸೋರಿಕೆ ತಡೆ ಸದ್ಯ ಇರುವ ದೊಡ್ಡ ಸವಾಲು. ಈ ಕುರಿತು ಮಾಹಿತಿ ನೀಡಿದ ವಾದಿರಾಜ ಕಟ್ಟಿ, ’ಮಾಹಿತಿ ದುರ್ಬಳಕೆ ಕುರಿತಂತೆ ಸೈಬರ್ ಭದ್ರತೆ ಕಾನೂನು ಹೊಸದಾಗಿ ರಚನೆಯಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದು ಜಾರಿಗೆ ಬರಲು ಕೆಲ ತಿಂಗಳು ಆಗಬಹುದು. ನಂತರ ಮಾಹಿತಿ ಸಂಗ್ರಹಿಸುವ ಪ್ರತಿ ಕಂಪನಿ ಅಥವಾ ವ್ಯಕ್ತಿಯು ಅದರ ಭದ್ರತೆ ಕುರಿತು ಖಾತ್ರಿ ನೀಡುವುದು ಕಡ್ಡಾಯವಾಗಲಿದೆ. ಇದರಿಂದ ವಾಹನ ಮಾಲೀಕರ ಮಾಹಿತಿ ಗೋಪ್ಯವಾಗಿಯೇ ಉಳಿಯಲಿದೆ’ ಎಂದರು.

ಕೃತಕ ಬುದ್ಧಿಮತ್ತೆ, ದತ್ತಾಂಶ ಸಂಗ್ರಹಕ್ಕೆ ಬಳಕೆಯಾಗುವ ಕ್ಲೌಡ್ ಕಂಪ್ಯೂಟಿಂಗ್ ಹಾಗೂ ಬಿಗ್ ಡೇಟಾ ಹೀಗೆ ಬಹಳಷ್ಟು ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿರುವ ಟೆಲಿಮೆಟಿಕ್ಸ್ ಭವಿಷ್ಯದ ತಂತ್ರಜ್ಞಾನ ಎಂದೇ ಹೇಳಲಾಗುತ್ತಿದೆ. ಸದ್ಯ ಭಾರತದಲ್ಲಿ ಸುಮಾರು ಮೂರು ಕೋಟಿ ಸಾರಿಗೆ ಹಾಗೂ ಪ್ರಯಾಣಿಕ ವಾಹನಗಳಿಗೆ ಇದನ್ನು ಅಳವಡಿಸುವುದು ಬಾಕಿ ಇದೆ. ಜತೆಗೆ ಹೊಸ ವಾಹನಗಳಿಗೆ ಇದು ಕಡ್ಡಾಯವಾಗಬೇಕಿದೆ. ಇದರಿಂದಾಗಿ ಈ ಕ್ಷೇತ್ರ 2022ರ ವೇಳೆಗೆ 500 ದಶಲಕ್ಷ ಡಾಲರ್‌ ಉದ್ದಿಮೆಯಾಗಿ ಬೆಳೆಯಲಿದೆ ಎನ್ನುವುದು ಕಟ್ಟಿ ಅವರ ಲೆಕ್ಕಾಚಾರ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು