ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆಯ ಉಡುಪಿನೊಂದಿಗೆ ಹೊಸ ಸ್ಟೈಲ್‌

Last Updated 12 ಜನವರಿ 2021, 19:30 IST
ಅಕ್ಷರ ಗಾತ್ರ

ಕೋವಿಡ್‌–19 ಕಾರಣದಿಂದ ಕಚೇರಿಗೆ ಹೋಗುವುದು, ಶಾಪಿಂಗ್‌ ಮಾಡುವುದು, ಪಿಕ್ನಿಕ್ ಹೋಗುವುದು ಈ ಎಲ್ಲವಕ್ಕೂ ಕೆಲವು ತಿಂಗಳುಗಳಿಂದ ಬ್ರೇಕ್ ಹಾಕಿದ್ದೇವೆ. ಈ ನಡುವೆ ಉಳಿತಾಯದ ದೃಷ್ಟಿಯಿಂದ ಉಡುಪು ಖರೀದಿ ಮಾಡುವುದನ್ನೂ ನಿಲ್ಲಿಸಿದ್ದೇವೆ. ಈಗ ಎಲ್ಲಾದರೂ ಹೋಗಬೇಕು ಅಂದುಕೊಂಡು ವಾರ್ಡ್‌ರೋಬ್‌ನಲ್ಲಿ ಇಣುಕಿದರೆ ಹಿಂದೆ ಧರಿಸಿದ್ದ ಬಟ್ಟೆಗಳೇ ಕಾಣಿಸುತ್ತಿವೆ, ಎಲ್ಲವೂ ಹಳೆಯದಾಗಿದೆ ಎನ್ನಿಸಲು ಶುರುವಾಗಿದೆ ಎನ್ನುವುದು ಹಲವರ ಅಳಲು.

ಹೌದು, ಕೊರೊನಾ ಬಂದಾಗಿನಿಂದ ಮನೆಯಲ್ಲೇ ಇರುವ ಕಾರಣದಿಂದ ಹೊಸ ಉಡುಪುಗಳ ಅಗತ್ಯವೂ ಇರಲಿಲ್ಲ. ಆದರೆ ಅನಿವಾರ್ಯ ಸಂದರ್ಭದಲ್ಲಿ ಹೊರಗೆ ಹೋಗುವಾಗ ಇರುವ ಉಡುಪುಗಳಲ್ಲೇ ಒಂದಿಷ್ಟು ಮಿಕ್ಸ್ ಅಂಡ್ ಮ್ಯಾಚ್ ಮಾಡಿಕೊಂಡು ಧರಿಸಿದರೆ ಹೊಸ ಬಟ್ಟೆಯ ಧರಿಸಿದಂತಹ ಖುಷಿ ಸಿಗುವುದಲ್ಲದೇ ಟ್ರೆಂಡ್ ಸೃಷ್ಟಿಸಿದಂತಾಗುತ್ತದೆ.

‘ವಾರ್ಡ್‌ರೋಬ್‌ನಲ್ಲಿ ಇರುವ ಜೀನ್ಸ್, ಟಾಪ್‌, ಪಲಾಜೊ, ಶರ್ಟ್, ಸ್ಕರ್ಟ್‌.. ಹೀಗೆ ಬೇರೆ ಬೇರೆಯದರೊಂದಿಗೆ ಹೊಂದಿಸಿಕೊಂಡು ಧರಿಸಿದರೆ, ಹಳೆಯದನ್ನೇ ಮಿಕ್ಸ್ ಅಂಡ್ ಮ್ಯಾಚ್ ಮಾಡಿ ತೊಟ್ಟರೆ ಹೊಸ ನೋಟ ಸಿಗುವಂತೆ ಮಾಡಬಹುದು’ ಎನ್ನುತ್ತಾರೆ ವಸ್ತ್ರವಿನ್ಯಾಸಕಿ ಸಪ್ನಾ ಎಂ.ಆರ್‌.

* ಕಚೇರಿಗೆ ಹೋಗುವಾಗ ಫಾರ್ಮಲ್ ಟ್ರೌಸರ್ ಪ್ಯಾಂಟ್‌ಗಳನ್ನು ಹೆಚ್ಚು ಬಳಸುತ್ತಿದ್ದಿರಾ, ಈಗ ಅದನ್ನು ಬಳಸದೇ ಹಾಗೇ ವಾರ್ಡ್‌ರೋಬ್‌ನಲ್ಲಿ ಇರಿಸಿದ್ದೀರಾ? ಹಾಗಾದರೆ ಟ್ರೌಸರ್ ಪ್ಯಾಂಟ್‌ನೊಂದಿಗೆ ಸ್ವೆಟ್‌ಶರ್ಟ್‌ ಹಾಗೂ ಟ್ರೈನರ್‌ ಶೂ ಧರಿಸಿ.
* ಕಾಲರ್ ಇರುವ ಶರ್ಟ್‌ ಎಲ್ಲಾ ರೀತಿಯ ಉಡುಪಿನೊಂದಿಗೂ ಹೊಂದುತ್ತದೆ. ಅದನ್ನು ಜೀನ್ಸ್ ಅಥವಾ ನಿಮ್ಮ ಬಳಿ ಇರುವ ಜಾಗರ್ ವಿನ್ಯಾಸದ ಟ್ರೌಸರ್‌ನೊಂದಿಗೆ ಧರಿಸಿ. ಜಾಗರ್‌ನೊಂದಿಗೆ ಸ್ವೆಟರ್‌ ಅಥವಾ ಚೌಕುಳಿ ಇರುವ ಶರ್ಟ್‌ ಅನ್ನೂ ಧರಿಸಬಹುದು.
* ಟೀ ಶರ್ಟ್‌ ಧರಿಸಲು ಸುಲಭ ಹಾಗೂ ಆರಾಮದಾಯಕವೂ ಹೌದು. ಇದು ಎಲ್ಲದರೊಂದಿಗೂ ಹೊಂದುತ್ತದೆ. ಚಳಿಗಾಲದಲ್ಲಿ ಸ್ಕರ್ಟ್ ಹಾಗೂ ಬ್ಲೇಜರ್‌ನೊಂದಿಗೆ ಟೀ ಶರ್ಟ್ ಧರಿಸಬಹುದು. ಇದು ಭಿನ್ನ ನೋಟ ಸಿಗುವಂತೆ ಮಾಡುತ್ತದೆ.
* ಹಲವರು ಮತ್ತೆ ಮತ್ತೆ ಒಂದೇ ಕಾಂಬಿನೇಷನ್‌ ಉಡುಪುಗಳನ್ನು ಬಳಸುತ್ತಾರೆ. ಅದು ನಮಗೆ ಧರಿಸಲು ಸುಲಭ ಹಾಗೂ ಆರಾಮದಾಯಕ ಎನ್ನುವುದು ನಮ್ಮ ಭಾವನೆ. ಆದರೆ ಅದು ನಮಗೇ ಬೇಸರ ತರಿಸಬಹುದು. ಆ ಕಾರಣಕ್ಕೆ ವಾರ್ಡ್‌ರೋಬ್‌ನಲ್ಲಿ ನಿಮಗೆ ಇಷ್ಟ ಎನ್ನಿಸುವ ಬಟ್ಟೆ ತೆಗೆದುಕೊಳ್ಳಿ. ಅದರೊಂದಿಗೆ ನೀವು ಹಿಂದೆ ಧರಿಸದ ಪ್ಯಾಂಟ್ ಅಥವಾ ಟಾಪ್‌ನೊಂದಿಗೆ ಹೊಂದಿಸಿಕೊಳ್ಳಿ.
* ಸಾಮಾನ್ಯವಾಗಿ ಪಲಾಜೊ ಧರಿಸುವುದು ಸುಲಭ ಹಾಗೂ ಎಲ್ಲಾ ಕಾಲಕ್ಕೂ ಅದು ಸೂಕ್ತ. ಪಲಾಜೊದೊಂದಿಗೆ ಟೀ ಶರ್ಟ್ ಧರಿಸಿ, ಕತ್ತಿಗೆ ಸ್ಟೋಲ್ ಸುತ್ತಿಕೊಂಡರೆ ಟ್ರೆಂಡಿ ಲುಕ್ ಸಿಗುತ್ತದೆ. ಅಲ್ಲದೇ ಇದು ಕಚೇರಿ, ಶಾಪಿಂಗ್, ಪಿಕ್ನಿಕ್ ಎಲ್ಲಾ ಕಡೆಗೂ ಸೂಕ್ತ ಕೂಡ.
* ಬಣ್ಣ ಬಣ್ಣದ ಹೂವಿನ ವಿನ್ಯಾಸವಿರುವ ಶರ್ಟ್‌ ಅಥವಾ ಟಾಪ್‌ನೊಂದಿಗೆ ಬಿಳಿ ಬಣ್ಣದ ಬೂಟ್ಸ್ ಧರಿಸಿ. ಜಾಗರ್‌ನೊಂದಿಗೆ ರಬ್ಬರ್ ಸೋಲ್‌ ಇರುವ ಶೂ ಧರಿಸಿ.
* ವಿಭಿನ್ನ ಬಣ್ಣಗಳು ಸದಾ ಟ್ರೆಂಡ್‌ನಲ್ಲಿರುತ್ತವೆ. ನೇರಳೆ ಹಾಗೂ ಹಳದಿ, ಕೆಂಪು–ಹಸಿರು, ನೀಲಿ–ಕಿತ್ತಳೆ ಈ ರೀತಿ ಭಿನ್ನ ಬಣ್ಣದ ಉಡುಪುಗಳನ್ನು ಮಿಕ್ಸ್ ಅಂಡ್ ಮ್ಯಾಚ್ ಮಾಡಿ ಧರಿಸಿ.
* ನಿಮ್ಮ ಟಾಪ್ ಅಥವಾ ಜೀನ್ಸ್‌ಗೆ ಹೊಸ ನೋಟ ಸಿಗಬೇಕು ಎಂದರೆ ನಿಮ್ಮ ಸ್ನೇಹಿತೆ, ಅಕ್ಕ–ತಂಗಿ ಅಥವಾ ರೂಮ್‌ಮೇಟ್‌ನ ವಾರ್ಡ್‌ರೋಬ್‌ನಿಂದ ಎರವಲು ಪಡೆಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT