ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಲಂಕಾರಕ್ಕೆ ಸೈ.. ಆಪದ್ಬಾಂಧವಳಿಗೆ ಜೈ!

Last Updated 24 ಜನವರಿ 2020, 19:30 IST
ಅಕ್ಷರ ಗಾತ್ರ

ಯಾಕೊ ಏನೋ ಈ ಹೇರ್‌ಪಿನ್ ನನ್ನನ್ನು ಚಿಕ್ಕಂದಿನಿಂದಲೂ ಹಿಡಿದು ಈತನಕ ಕಾಡುವ ವಸ್ತುವಾಗಿದೆ. ಆದರೆ, ಅದು ಜಗತ್ತಿನೆದುರು ಸೋಜಿಗವಾಗಿ, ದೊಡ್ಡದಾಗಿ ಯಾವತ್ತೂ ಕಾಣಿಸಲಿಲ್ಲ. ಆದರೆ, ಹಾಗೆಂದು ಯಾವತ್ತೂ ಹೇರ್‌ಪಿನ್‌ ಅನ್ನು ಕಡೆಗಣಿಸುವ ಹಾಗಿಲ್ಲ. ಅದೆಷ್ಟೇ ಚಿಕ್ಕದಾಗಿದ್ದರೂ ಅದರ ಕೆಲಸ ಕಾರ್ಯದ ವಿಸ್ತಾರ ಮಾತ್ರ ದೊಡ್ಡದು. ಹೆಣ್ಣುಮಕ್ಕಳಿಗಂತೂ ಅದಿಲ್ಲದೇ ಬೆಳಗು ರಾತ್ರಿಗಳಾಗುವುದಿಲ್ಲ. ಹೇರ್‌ಪಿನ್‌ ಹೆಣ್ಣುಮಕ್ಕಳ ದಿನನಿತ್ಯದ ಬದುಕಿನಲ್ಲಿ ಅದೆಷ್ಟು ಹಾಸುಹೊಕ್ಕಾಗಿದೆ ಎಂದರೆ, ಹಗಲು ಹೊರ ಹೊರಟರೆ, ತಲೆಗೆ ವಿಧ-ವಿಧವಾದ ಹೇರ್‌ಸ್ಟೈಲ್ ಮಾಡಿಕೊಳ್ಳಲು ಹೇರ್‌ಪಿನ್‌ ಬೇಕು. ರಾತ್ರಿ ಮಲಗುವ ಮುನ್ನ ಇಡೀ ದಿನ ಹಣೆಗೆ, ಮುಖಕ್ಕೆ, ಕುತ್ತಿಗೆಗೆ ಕಚಗುಳಿ ಇಡುವ, ಅಷ್ಟೆ ಏಕೆ ಬಸ್‌ನಲ್ಲಿ, ರಸ್ತೆಯಲ್ಲಿ, ಲಿಫ್ಟ್‌ನಲ್ಲಿ, ಅಕ್ಕಪಕ್ಕ ಹಾದು ಹೋಗುವ ಗಂಡಸರನ್ನು ಒಂದು ಕ್ಷಣ ಚಂಚಲಗೊಳಿಸಿದ ಕೂದಲನ್ನು ಗದರಿಸಿ ಸುತ್ತಿ ಎತ್ತಿ ಕಟ್ಟಿಹಾಕಲು ಹೇರ್‌ಪಿನ್‌ ಬೇಕು. ಅದೆಷ್ಟು ವಿಧವಾದ ಹೇರ್‌ಪಿನ್‌ಗಳಿವೆ ಎಂದರೆ, ಉದ್ದನೆಯ, ಗಿಡ್ಡನೆಯ, ದಪ್ಪನೆಯ, ಅಗಲವಾದ, ತೆಳ್ಳಗಿನ ಅಲ್ಲದೆ ಬನಾನಾಕ್ಲಿಪ್, ಸೈಡ್‌ಕ್ಲಿಪ್, ಸೆಂಟರ್‌ಕ್ಲಿಪ್, ಸಾದಾಕ್ಲಿಪ್, ಹೀಗೆ... ಬೆಳೆಯುತ್ತ ಹೋಗುವ ಹೇರ್‌ಪಿನ್‌ ಜಾತಿ ಜನಾಂಗದ ಬಗೆಗೆ ಜನರು ತಲೆ ಕೆಡಿಸಿಕೊಂಡಿಲ್ಲ. ಇಲ್ಲದಿದ್ದರೆ, ಅವುಗಳಿಗೂ ಜಾತಿಯ, ಧರ್ಮದ, ಪಂಗಡದ, ಮೀಸಲಾತಿಯ ಹಣೆಪಟ್ಟಿ ಕಟ್ಟಿಬಿಡುತ್ತಿದ್ದರು ಅನಿಸುತ್ತದೆ. ಪಾಪ ಅರಾಮಾಗಿದಾವೆ ಹೇರ್‌ಪಿನ್‌ಗಳು. ಮನುಷ್ಯರಾಗಿದ್ದರೆ, ಮಾತೇ ಬೇರೆ.

ಇನ್ನು ಇವುಗಳ ದರಬಾರು, ಆಳ್ವಿಕೆಯನ್ನು ನೋಡಿದಾಗ ಹೆಣ್ಣುಮಕ್ಕಳ ಪುಟ್ಟ ಪರ್ಸ್‌ನಿಂದ ಹಿಡಿದು ಟ್ರಝರಿ, ಕಪಾಟು, ದೊಡ್ಡ-ದೊಡ್ಡ ವ್ಯಾನಿಟಿ ಬ್ಯಾಗ್‌ ತನಕ, ಅಲ್ಲದೆ ಅಡುಗೆಮನೆಯಿಂದ ಹಿಡಿದು, ಹೊರಮನೆ, ಒಳಕೋಣೆ, ಅಂಗಳದವರೆಗೂ ಹೇರ್‌ಪಿನ್‌ನ ದಿನನಿತ್ಯದ ಪ್ರಯಾಣ ಸಾಗುವುದನ್ನು ನೋಡುತ್ತೇವೆ. ಇನ್ನು ಇದಕ್ಕೆ ಯಾವ ಮೇಲು– ಕೀಳುಗಳಿಲ್ಲ. ಲಿಂಗ– ಬೇಧಗಳಿಲ್ಲ ಎನ್ನುವುದಕ್ಕೆ ಉದಾಹರಣೆಯಾಗಿ ಪುಟ್ಟ ಗುಡಿಸಲಿನಿಂದ ಹಿಡಿದು ದೊಡ್ಡ ದೊಡ್ಡ ಬಂಗಲೆಯವರೆಗೂ ಇದು ತನ್ನತನ ಉಳಿಸಿಕೊಂಡಿದೆ. ಒಂದು ಅಂದಾಜಿನ ಪ್ರಕಾರ ಹೆಣ್ಣು ಅಲಂಕಾರದ ಬಗೆಗೆ ಯಾವಾಗ ಗಮನ ಕೊಡಲಾರಂಭಿಸಿದಳೋ ಆವಾಗ ಇದು ಹುಟ್ಟಿಕೊಂಡಿತು ಅನ್ನಬಹುದು. ಇತಿಹಾಸ ನೋಡಿದರೆ, ಗ್ರೀಕರ ಕಾಲದಲ್ಲಿ ಈ ಹೇರ್‌ಪಿನ್‌ ಹುಟ್ಟಿಕೊಂಡಿದ್ದನ್ನು ನಾವು ಕಾಣುತ್ತೇವೆ.

ಈ ಸಂದರ್ಭದಲ್ಲಿ ನೆನಪಾಗುವ ಒಂದು ಸಂಗತಿಯನ್ನು ನಾನಿಲ್ಲಿ ಹೇಳಲೇಬೇಕು. ನಾನು ಎಂ.ಎ. ಓದುವಾಗ ಧಾರವಾಡ ಹಾಸ್ಟೆಲ್‌ನಲ್ಲಿ ಇದ್ದಾಗಿನ ಘಟನೆ. ನಮ್ಮ ವಾರ್ಡನ್ ಶಾಂತಕುಮಾರಿ ಮೇಡಂ ಯಾವಾಗಲಾದರೊಮ್ಮೆ ಸಂಜೆ ಮೀಟಿಂಗ್ ಕರೆಯುತ್ತಿದ್ದರು. ಆ ಸಂದರ್ಭದಲ್ಲಿ ಗದ್ದಲದ ಸ್ಥಳಗಳಲ್ಲಿ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಹೇಗೆ ಎಂಬುದರ ಬಗೆಗೆ ಹೇಳುವುದು ನನಗೀಗಲೂ ನೆನಪಿದೆ. ರಸ್ತೆಯಲ್ಲಿ ನಡೆದು ಹೋಗುವಾಗ ಹಾಗೂ ಸಂತೆ, ಮಾರ್ಕೆಟ್‌ನಂತಹ ಸಾರ್ವಜನಿಕ ಸ್ಥಳಗಳಲ್ಲಿ, ಅಕ್ಕಪಕ್ಕದಲ್ಲಿ ನಡೆದುಹೋಗುವವರು ತಪ್ಪಾಗಿ ವರ್ತಿಸಿದರೆ, ಬಸ್‌ನಲ್ಲಿ ಪಕ್ಕದ ಸೀಟಿನಲ್ಲಿ ಕುಳಿತ ಗಂಡಸು ಕೆಟ್ಟದಾಗಿ ನಡೆದುಕೊಂಡರೆ, ಹೇರ್‌ಪಿನ್‌ ಅನ್ನು ಕೈಯಲ್ಲಿ ಹಿಡಿದುಕೊಂಡು, ಅದರಿಂದ ಚುಚ್ಚಿ ಆ ಮೂಲಕ ಎಚ್ಚರಿಸುವುದಷ್ಟೇ ಅಲ್ಲದೆ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದರ ಬಗೆಗೆ ಹೇಳುತ್ತಿದ್ದರು. ನಂತರ ನಾನು ಅದನ್ನು ಎಷ್ಟೋ ಬಾರಿ ಬಳಸಿ ರಕ್ಷಿಸಿಕೊಂಡದ್ದಿದೆ. ಹೆಣ್ಣುಮಕ್ಕಳಾದ ನಮಗೆ ಅದರಿಂದಾಗುವ ಉಪಯೋಗ ಮತ್ತು ಸಹಾಯವನ್ನು ನೆನಪಿಸಿಕೊಂಡರೆ, ಯಾವ ಆಪದ್ಬಾಂಧವನಿಗಿಂತಲೂ ಇದು ಕಡಿಮೆಯೇನಲ್ಲ.

ಆಗೆಲ್ಲ ಪ್ರತಿ ಮನೆಯ ಮುಂಬಾಗಿಲ ಹಿಂಬದಿಗೆ ಒಂದು ಚೀಲ ಜೋತುಬಿದ್ದಿರುತ್ತಿತ್ತು. ಆ ಚೀಲವನ್ನು ತಲೆ ಬಾಚಿಯಾದ ಮೇಲೆ ಬಾಚಣಿಗೆಯಲ್ಲಿ ಬಂದು ಅರಾಮಾಗಿ ಪವಡಿಸುತ್ತಿದ್ದ ಕೂದಲುಗಳನ್ನು ಹಾಕಲು ಬಳಸುತ್ತಿದ್ದೆವು. ಎಲ್ಲಿಯವರೆಗೆ ಅದನ್ನು ತುಂಬಿಸುತ್ತಿದ್ದೆವೆಂದರೆ, ಆ ಚೀಲ ತುಂಬಿ ತುಳುಕಿದರೂ ಒತ್ತಿ ಒತ್ತಿ ಮತ್ತದೆ ಹೊಟ್ಟೆಯಾಕಾರದ ಚೀಲಕ್ಕೆ ನಮ್ಮ ಕೂದಲುಗಳು ಆಹಾರವನ್ನೊದಗಿಸುತ್ತಿದ್ದವು. ಈ ಕೂದಲು ಕೂಡಿಡುವ ಮಾತನ್ನು ಇಲ್ಲಿ ಹೇಳಲು ಕಾರಣವೇನೆಂದರೆ, ನಮಗೆ ಹೇರ್‌ಪಿನ್‌ಗಳು ದೊರಕುತ್ತಿದ್ದುದು ಅದೇ ಕೂದಲುಗಳಿಂದ. ಕೂದಲನ್ನು ಕೊಟ್ಟು ಹೇರ್‌ಪಿನ್‌ ಅನ್ನು ಖರೀದಿಸುತ್ತಿದ್ದೆವು.

‘ಪಿನ್ನಾ.. ಸೂಜಿ.. ದಾರಾ.. ಡಬ್ಬಣಾ.. ಕೂದಲಾ.. ಅದವೇನ್ರಿ..!’

ಕೂದಲಾ.. ದಾರಾ.. ಸೂಜಿ.. ದಬ್ಬಣಾ.. ಹೇರಪಿನ್ನಾ.. ಎಂದು ಕೊರವರ ಹೆಂಗಸರು ಕೂಗುತ್ತ ಊರ ಹಾದಿ– ಬೀದಿ, ಓಣಿಯಲೆಲ್ಲಾ ಓಡಾಡಿಕೊಂಡು, ಹಳಸಲು ಪಳಸಲು ಕೊಟ್ಟದ್ದನ್ನು ತಿಂದುಕೊಂಡು, ಸಿಂಬಳ ಸುರಿಸುವ ಮಕ್ಕಳನ್ನು ಕಂಕುಳಲ್ಲೋ, ಮಗ್ಗುಲಲ್ಲೋ ಕಟ್ಟಿಕೊಂಡು ತಿರುಗಾಡುವ ಆ ದೃಶ್ಯ ಈಗಲೂ ನನ್ನ ಕಣ್ಣ ಮುಂದೆ ಕಟ್ಟಿದಂಗಿದೆ. ವರ್ಷದಲ್ಲಿ ಮಳೆಗಾಲದ ಎರಡರಿಂದ ಮೂರು ತಿಂಗಳು ಹೊರತುಪಡಿಸಿದರೆ, ಬಾಕಿ ಎಂಟು ತಿಂಗಳೂ ಅವರು ಬಂದರೆಂದರೆ, ನಮ್ಮೆದುರು ಬಣ್ಣದ ಜಗತ್ತು ತೆರೆದುಕೊಳ್ಳುತ್ತಿತ್ತು. ಹರಕು ಸೀರೆ, ಎಣ್ಣೆಗಾಣದ ಕೆದರಿದ ತಲೆಗೂದಲು, ಎಲೆ-ಅಡಿಕೆಯಿಂದ ಕೆಂಪಾದ ಬಾಯಿ, ಮೊಣಕೈವರೆಗೂ ಹಾಕಿಸಿಕೊಂಡ ಹಚ್ಚಗಿನ ಹಚ್ಚೆ, ಇವೆಲ್ಲದರ ನಡುವೆಯೂ ಅವರು ನನಗೆ ದೇವಲೋಕದ ಅಪ್ಸರೆಯರಂತೆ ಕಾಣುತ್ತಿದ್ದರು. ಬಗಲಿಗೆ ಜೋತುಬಿದ್ದ ಜೋಳಿಗೆಯಲ್ಲಿ ಮೂರ‍್ನಾಲ್ಕು ಕಂಪಾರ್ಟಮೆಂಟ್‌ಗಳಿರುತ್ತಿದ್ದವು. ನಾವು ಕೊಡುವ ಕೂದಲನ್ನು, ತಂಗಳು ರೊಟ್ಟಿಯನ್ನು, ಪಲ್ಯವನ್ನು, ಸಿಹಿಯನ್ನು ಜೋಳಿಗೆಯ ಒಂದೊಂದು ವಿಭಾಗಕ್ಕೆ ಸುರುವಿಕೊಳ್ಳುತ್ತಿದ್ದರು. ಅವರು ತರುವ ಆ ಚಂದದ, ಬಣ್ಣದ, ನಾನಾ ನಮೂನೆಯಾಕಾರದ, ಹೇರ್‌ಪಿನ್ನಿನ ಎದುರು ಇದೆಲ್ಲಾ ನನಗೆ ಯಾವತ್ತೂ ಅಸಹ್ಯವಾಗಿ ಹಾಗೂ ದೊಡ್ಡದಾಗಿ ಕಾಣಲಿಲ್ಲಾ.

ನಾವು ಸಣ್ಣವರಿದ್ದಾಗ ಮನೆಯಲ್ಲಿ ಒಂದೇ ವಾರಿಗೆಯವರಾದ ನಾವು ನಾಲ್ಕೈದು ಜನ ಹೆಣ್ಮಕ್ಕಳಿದ್ದೆವು. ನಮಗೆ ಹೇರ್‌ಪಿನ್‌ನಲ್ಲಿ ಆಯ್ಕೆ ಇದ್ದದ್ದು ಬಹಳ ಕಡಿಮೆ. ಕಪ್ಪು ಬಣ್ಣದ ಹೇರ್‌ಪಿನ್‌ಗಳು ಹಾಗೂ ಅದರಲ್ಲೇ ಅಗಲವಾದ ಇಲ್ಲವೇ ತೆಳುವಾದ ನಮೂನೆಗಳು. ಅವುಗಳನ್ನು ಹೊರತುಪಡಿಸಿದರೆ, ಬೇರೆ ಬೇರೆ ಬಣ್ಣ ಮೆತ್ತಿಕೊಂಡವುಗಳು ಮಾತ್ರ ಇರುತ್ತಿದ್ದವು. ಈ ಮಾತನ್ನು ಹೇಳಲು ಕಾರಣವೇನೆಂದರೆ, ಮೊನ್ನೆ ಹುಬ್ಬಳ್ಳಿಯ ಬಟರ್ ಮಾರ್ಕೆಟ್‌ಗೆ ಮಗಳಿಗೆಂದು ಮತ್ತೆ ನನ್ನ ಕುದುರೆಬಾಲಕ್ಕೆಂದು ಹೇರ್‌ಪಿನ್‌ ತರಲು ಹೋಗಿದ್ದೆ. ಲೆಕ್ಕವಿಲ್ಲದ ಬಣ್ಣದ ಮತ್ತು ಜರಿ, ಬಟ್ಟೆ, ಮುತ್ತು, ಹರಳು ಜಡಿದ ಇನ್ನೂ ಏನೇನೋ ಅಂದ ಚಂದ ಮಾಡಿಕೊಂಡು ಕುಳಿತ ಆ ಹೇರ್‌ಪಿನ್‌ಗಳು ಮಗಳಿಗೆ ಸಮಾಧಾನವನ್ನು ನೀಡುವಲ್ಲಿ ಅಸಫಲವಾದವು. ಅಷ್ಟೊಂದು ಆಯ್ಕೆಗಳಿದ್ದೂ ಮಗಳು ಇನ್ನೂ ಬೇರೆಯದನ್ನೇ ಬೇಡುತ್ತಿದ್ದಳು. ಅವಳ ಕಲ್ಪನೆಯಲ್ಲಿ ಅದಾವ ಹೇರ್‌ಪಿನ್‌ಗಳಿದ್ದವೋ ಆ ದೇವರು ಮಾತ್ರ ಬಲ್ಲ. ಆದರೆ, ನಮಗೆ ಆ ಸಂದರ್ಭದಲ್ಲಿ ಅಷ್ಟೇ ಮಿತಿಯಲ್ಲಿ ಮನೆಯ ಎಲ್ಲರೂ ಸಂತಸದಿಂದ ಹಂಚಿಕೊಳ್ಳುತ್ತಿದ್ದೆವು. ಅದೆಷ್ಟೇ ಬೇರೆಯವುಗಳನ್ನು ತೆಗೆದುಕೊಂಡರೂ ದಿನವೂ ‘ಅದು ನನ್ನದು.. ಇದು ನಿನ್ನದು..’ ಎಂದು ಜಗಳ ನಡೆಯುತ್ತಿತ್ತು. ಮತ್ತೆ ಆ ಜಗಳ ಕೂದಲನ್ನು ಹರಡದಂತೆ ಹಿಡಿದಿಡುವ ಹೇರ್‌ಪಿನ್‌ನಿಂದ ಶುರುವಾಗಿ ತಲೆಗೂದಲನ್ನು ಎಳೆದಾಡಿ ಹರಡುವವರೆಗೆ ಕೊನೆಗೊಳ್ಳುತ್ತಿತ್ತು. ಇಷ್ಟೆಲ್ಲಾ ನಡೆದರೂ ನಾವು ಮುಖ ಅತ್ತಿತ್ತ ಮಾಡಿ ಸಿಟ್ಟಾಗುತ್ತಿದ್ದಿಲ್ಲಾ.

ಈ ಹೇರ್‌ಪಿನ್‌ನಿಂದ ಆದ ಅವಾಂತರಗಳು ಅಷ್ಟಿಷ್ಟಲ್ಲ. ಪ್ರತಿದಿನದ ಬಸ್ ಪ್ರಯಾಣದಲ್ಲಿ ಒಂದಿನ ನನ್ನ ಬಾಜು ಕುಳಿತ ಹೆಣ್ಣುಮಗಳು ‘ಮೇಡಂ, ಒಂದ್ ಹೇರ‍್ಪಿನ್ ಇದ್ರ ಕೊಡ್ರಿ’ ಎಂದು ಕೇಳಿದಳು. ಸೀರೆ ಉಟ್ಟ ಅವಳನ್ನು ತುಸು ಸೂಕ್ಷ್ಮವಾಗಿ ಅವಲೋಕಿಸಿದೆ. ಪಾಪ, ನೆರಿಗೆಯಲ್ಲೋ ಅಥವಾ ಇನ್ನೆಲ್ಲೊ ವ್ಯತ್ಯಾಸವಾಗಿ ಸಮಸ್ಯೆಯಾಗಿರಬೇಕೆಂದುಕೊಂಡು ವ್ಯಾನಿಟಿಯ ಒಳಪಾಕೀಟಿನೊಳಗೆ ಕೈ ಆಡಿಸಿದೆ. ಇಲ್ಲಿ ಇನ್ನೊಂದು ವಿಚಾರ ಹೇಳಲೇಬೇಕು ನಾನು. ಹೊರಗೆ ಕೆಲಸಕ್ಕೆ ಹೋಗುವವರ ಬ್ಯಾಗ್‌ಗಳು ಜಾದೂಗಾರನ ಟೋಪಿಯಿದ್ದಂತೆ. ಹ್ರಾಂ.. ಹ್ರೀಂ.. ಹ್ರೂಂ.. ಎಂಬ ಯಾವ ಮಂತ್ರ ಉಚ್ಛರಿಸದೆ ಏನೇ ಕೇಳಿದರೂ ತಕ್ಷಣ ಕೈಯಲ್ಲಿ ಬಂದುಬಿಡುತ್ತವೆ. ಹಾಗಾಗಿ ನಾ ಒಂದು ಹೇರ್‌ಪಿನ್‌ ತೆಗೆದು ಅವಳಿಗೆ ಕೊಟ್ಟೆ. ಮತ್ತೆ ಅವಳು ಅದನ್ನು ಎಲ್ಲಿ ಹಾಕಿಕೊಳ್ಳುತ್ತಾಳೆ ಎಂಬ ಕುತೂಹಲ ನನಗೂ ಹಾಗೂ ನನ್ನ ಪಕ್ಕದಲ್ಲಿ ಕುಳಿತ ಸಹವರ್ತಿ ಸಪ್ನಾಳಿಗೂ ಇತ್ತು. ಆದರೆ, ನೇರವಾಗಿ ಅವಳನ್ನು ನೋಡುವುದು ನನಗೆ ಸರಿಯೆನಿಸಲಿಲ್ಲ. ಆದರೆ, ನನ್ನ ಎಡಮಗ್ಗುಲಲ್ಲಿ ಸಪ್ನಾ ಹಾಗೂ ಬಲಮಗ್ಗುಲಲ್ಲಿ ಆ ಹೆಣ್ಣುಮಗಳು ಕುಳಿತಿದ್ದು, ನಾ ನಡುವೆ ಕುಳಿತಿದ್ದುದು ಸಪ್ನಾಳಿಗೆ ಅವಳನ್ನು ಅವಲೋಕಿಸಲು ಅನುಕೂಲವಾಗಿತ್ತು. ತಕ್ಷಣ ಸಪ್ನಾ ತನ್ನ ಬಲಗೈನಿಂದ ನನ್ನನ್ನು ತಿವಿದು ಆ ಹೆಣ್ಣುಮಗಳನ್ನು ನೋಡುವಂತೆ ಸನ್ನೆ ಮಾಡಿದಳು. ನೋಡುತ್ತೇನೆ, ಅಬ್ಬಾ! ಬ್ಯಾಗಿನಿಂದ ಹೂಮಾಲೆ ತೆಗೆದು ಚಂದಮಾಡಿ ಮುಡಿಯುವುದರಲ್ಲಿದ್ದಾಳೆ. ಆ ಸಂದರ್ಭದಲ್ಲಿ ನನ್ನ ಮುಖ ನೋಡಿ ಸಪ್ನಳಿಗೆ ನಗು. ಈಗಲೂ ನನ್ನ ಬೆಪ್ಪುತನಕ್ಕೆ ನಂಗೇ ನಗು ಬರುತ್ತದೆ.

ಇದಕ್ಕಿಂತ ಭಿನ್ನವಾದ ಮತ್ತೊಂದು ಘಟನೆ. ಅದೆಷ್ಟು ಹತ್ತಿರವೀ ಹೇರ್‌ಪಿನ್‌ ಎಂದರೆ, ಕಟ್ಟಿಕೊಂಡ ಗಂಡನ ಹತ್ತಿರವೂ ಹೇಳಿಕೊಳ್ಳಲಾರದ ಸಮಸ್ಯೆಗೆ ಇದು ಪರಿಹಾರದ ರೂಪದಲ್ಲಿ ಬಂದು ನಿಲ್ಲುತ್ತದೆ. ಅಂಥದೊಂದು ಸಂದರ್ಭ ಹೇಗೆ ಬಂದಿತೆಂದರೆ, ಪತಿಯೊಂದಿಗೆ ಪ್ರಯಾಣಿಸುತಿದ್ದೆ ಕಾರಿನಲ್ಲಿ. ಊರು ತಲುಪುವುದಿನ್ನು ಹತ್ತು ನಿಮಿಷವಿರುವಾಗಲೇ, ನನ್ನ ಚೂಡಿದಾರದ ಕಸಿ ಠಪ್ ಎಂದು ಮಧ್ಯದಲ್ಲಿ ಕಿತ್ತುಬಿಟ್ಟಿತು. ಏನು ಮಾಡೋದು ಆಗ ನೆನಪಾದ ಗೆಳತಿ ಈ ಹೇರ್‌ಪಿನ್‌. ಬ್ಯಾಗ್‌ ತಡಕಾಡಿ ಹೇರ್‌ಪಿನ್‌ ತೆಗೆದು ಕಸಿಯನ್ನು ಹೊರತೆಗೆದು ಮತ್ತೆ ಗಂಟು ಹಾಕಿ ಪೋಣಿಸಿಕೊಂಡೆ. ನಾನು ಕುಳಿತದ್ದು ಹಿಂದಿನ ಸೀಟಿನಲ್ಲಿ. ಅಲ್ಲಿಯೇ ಕುಳಿತು ಸರಿಪಡಿಸಿಕೊಂಡೆ. ಆಗ ಆ ಹೇರ್‌ಪಿನ್‌ ಮರ್ಯಾದೆ ಉಳಿಸಿತು ಎಂದು ಬೇರೆ ಹೇಳಬೇಕಾಗಿಲ್ಲ. ಹೆಣ್ಣುಮಕ್ಕಳಿಗೆ ಎಂಥೆಂಥ ಸಂದರ್ಭಗಳು ಧುತ್ತೆಂದು ಬಂದು ಎದುರಾಗುತ್ತವೆ ಎಂದು ಅಂದಾಜಿಸಲಾಗದು. ಆ ಗಳಿಗೆಯಲ್ಲಿ ಹೇರ್‌ಪಿನ್‌, ಪಿನ್ನು, ಕ್ಲಿಪ್ ಆತ್ಮೀಯ ಗೆಳತಿಯರಂತೆ ಸಹಾಯಕ್ಕೆ ನಿಲ್ಲುತ್ತವೆ.

ನನ್ನ ನಾದಿನಿಯ ಮದುವೆ ಇತ್ತು. ಮದುವೆಗೆ ಹೊರಗಿನವರನ್ನು ಮೇಕಪ್ ಮಾಡಲು ಕರೆಸಿರಲಿಲ್ಲ, ನಾವೇ ಮಾಡಿದರಾಯಿತೆಂದು. ಅವಳ ಕೂದಲು ಅಷ್ಟೇನು ಉದ್ದವಿರದ ಕಾರಣ, ಚೌರಿ(ಸಪ್ಲಿಮೆಂಟ್) ಹಾಕಿದ್ದೆವು. ಮದುವೆಯ ಎಲ್ಲ ಸಂಪ್ರದಾಯಗಳು ಮುಗಿದವು. ಸಮಯ ಮಧ್ಯಾಹ್ನ ಮೀರುತ್ತಿತ್ತು. ಮದುಮಕ್ಕಳನ್ನು ಊಟಕ್ಕೆ ಎಬ್ಬಿಸಿರಿ ಎಂದು ಹಿರಿಯರು ಸಲಹೆ ನೀಡಿದರು. ನಾನು ಅವರಿಬ್ಬರನ್ನು ಕರೆದುಕೊಂಡು ಹಿರಿಯರೆಲ್ಲರಿಗೂ ನಮಸ್ಕಾರ ಮಾಡಿಸುವ ಕಾರ್ಯಕ್ರಮ ಶುರು ಮಾಡಿದೆ. ಶುಭಕಾರ್ಯಗಳೇನೆ ಇರಲಿ ಮುಕ್ತಾಯದ ಹಂತವೆಂದರೆ, ಸೇರಿದ ಎಲ್ಲ ಹಿರಿಯರ ಕಾಲು ಮುಟ್ಟಿ ನಮಸ್ಕರಿಸುವುದು ಸಂಪ್ರದಾಯ. ತದನಂತರ ಮದುಮಕ್ಕಳನ್ನು ಊಟಕ್ಕೆ ಕರೆದೊಯ್ಯುವುದಿತ್ತು. ಮತ್ತೆ ಹಿರಿಯರು ಎಲ್ಲೆಲ್ಲಿ ಕುಳಿತಿರುತ್ತಾರೋ ಅಲ್ಲಿಗೆ ಹೋಗಿ ನಮಸ್ಕರಿಸಬೇಕು. ಶುರುವಾಯಿತು ಬಾಗಿ ಹಣೆಯನ್ನು ಅವರ ಪಾದಗಳಿಗೆ ಹಚ್ಚಿ ನಮಸ್ಕರಿಸುವ ಕೆಲಸ. ಹಂದರದಲ್ಲಿ ಕುರ್ಚಿಯ ಮೇಲೆ ಕುಳಿತವರೆಲ್ಲರ ಕಾಲು ಮುಗಿದಾಯಿತು. ಇನ್ನು ಮುಖ್ಯವಾದವರೆಂದರೆ, ಗಂಡನ ತಂದೆ– ತಾಯಿ ಅಂದರೆ ಅತ್ತೆ– ಮಾವರಿಗೆ ನಮಸ್ಕರಿಸಲು ನನ್ನ ನಾದಿನಿ ಬಾಗಿದಳು. ಮರಳಿ ಮೇಲೇಳುವುದರಲ್ಲಿಯೇ ಸೇರಿದ ಎಲ್ಲರೂ ನಗುತ್ತಿರುವುದು ಕಾಣಿಸಿತು. ಯಾಕೆಂದು ಅರ್ಥವಾಗದೇ ಅತ್ತಿತ್ತ ನೋಡುತ್ತೇನೆ. ಪಕ್ಕದಲ್ಲಿದ್ದ ನನ್ನ ಪುಟ್ಟ ಮಗನ ಕೈಯಲ್ಲಿ ಅವರತ್ತೆಯ ಜಡೆ. ಅಂದರೆ, ಜಡೆಯೊಂದಿಗೆ ಸೇರಿಸಿ ಹೆಣೆದ ಚೌರಿ ನೆಲಕ್ಕೆ ಉದುರಿ ಬಿದ್ದಿತ್ತು. ಅವನು ಅದನ್ನು ಕೈಯಲ್ಲಿ ಹಿಡಿದು ತಿರುಗಿಸುತ್ತ ಆಟವಾಡುತ್ತಿದ್ದಾನೆ. ನನ್ನ ಪರಿಸ್ಥಿತಿಯೋ ನಗು ಬಂದರೂ ನಗುವ ಹಾಗಿಲ್ಲ. ಆದದ್ದಿಷ್ಟೇ ಕತ್ತರಿಸಿದ್ದ ಅವಳ ಮೊಂಡ ಕೂದಲಿಗೂ ಮತ್ತು ಚೌರಿ(ಸಪ್ಲಿಮೆಂಟಿ)ಗೂ ಅನೇಕ ಹೇರ್‌ಪಿನ್‌ಗಳನ್ನು ಸಿಕ್ಕಿಸಿ ಜೋಡಿಸಿದ್ದೆವು. ನಮಸ್ಕಾರಕ್ಕೆಂದು ಅವಳು ಎಲ್ಲರ ಬಳಿ ನಡೆದು ಹೋಗಿ ಬಾಗಿ ನಮಸ್ಕರಿಸಿ ಅವಳಿಗೆ ಬೇಸರವಾಯಿತೋ ಇಲ್ಲವೋ (ಬೇಸರವಾಗದೇ ಏನು, ಹೆಣ್ಣಾಗಿ ವ್ಯಕ್ತಪಡಿಸುವ ಹಾಗಿಲ್ಲ) ಆ ಜಡೆಗೆ ಬೇಸರವಾಗಿ ಅದು ಮೂಲ ಜಡೆಯೊಂದಿಗೆ ಸಿಟ್ಟು ಮಾಡಿಕೊಂಡು ಕೆಳಗೆ ಬಿದ್ದುಬಿಟ್ಟಿತ್ತು. ಈಗಲೂ ನಮ್ಮ ಇಡೀ ಕುಟುಂಬದಲ್ಲಿ ಬಿಟ್ಟೂಬಿಡದೇ ನಗೆಯುಕ್ಕಿಸುವ ಘಟನೆಯಾಗಿ ಉಳಿದದ್ದು ಈ ಹೇರ್‌ಪಿನ್‌ನಿಂದಲೇ.

ಬಹಳ ಸಂದರ್ಭಗಳಲ್ಲಿ ಹೆಣ್ಣುಮಕ್ಕಳನ್ನು ಸಂಭಾಳಿಸುವ ಇದು ನಿರ್ಜೀವವೆನಿಸಿದರೂ ಕೂಡ ಅಕ್ಕನೋ, ಅವ್ವನೋ, ಅಪ್ಪನೋ, ಅಣ್ಣನೋ, ಗೆಳೆಯನೋ ಆಗುವ ಪರಿಗೆ ಈಗಲೂ ನಿರುತ್ತರೆ ನಾನು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT