ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊಂಪಾದ ಕೂದಲಿಗೆ ಬೇವಿನೆಣ್ಣೆ!

Last Updated 3 ಜನವರಿ 2020, 19:30 IST
ಅಕ್ಷರ ಗಾತ್ರ

ತಲೆಯಲ್ಲಿ ಹೊಟ್ಟಿನ ಸಮಸ್ಯೆ ಹೇಳಿಕೇಳಿ ಬರುವಂತಹದ್ದಲ್ಲ. ಕೂದಲಿರುವ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಬಾರಿ ಈ ಬಿಳಿ ಬಣ್ಣದ ಹೊಟ್ಟು ಕಾಡುತ್ತದೆ. ಬುರುಡೆಯಲ್ಲಿ ಕೆರೆತ, ಕೆರೆದರೆ ಇನ್ನಷ್ಟು ಬಿಳಿ ಪುಡಿಗಳು ಎದ್ದು ರೇಜಿಗೆ ಹುಟ್ಟಿಸುತ್ತವೆ. ಜೊತೆಗೆ ಒಂದೇ ಸಮನೆ ಉದುರುವ ಕೂದಲು, ಹೊಟ್ಟಿನ ಸಮಸ್ಯೆ ಅತಿಯಾದರೆ ಬುರುಡೆಯ ಮೇಲೆ ಎದ್ದು ಉರಿ ಹೆಚ್ಚಿಸುವ ಮೊಡವೆಗಳು.. ಇದಕ್ಕೆಲ್ಲ ಬೇಕಾದಷ್ಟು ಔಷಧಿ, ಹೊಟ್ಟುನಿರೋಧಕ ಶಾಂಪೂ, ಕೀಟಾಕೊನೊಝೋಲ್‌ನಂತಹ ರಾಸಾಯನಿಕಯುಕ್ತ ದ್ರಾವಣ ಮಾರುಕಟ್ಟೆಯಲ್ಲಿ ಲಭ್ಯ. ಇವು ಕೆಲವೊಮ್ಮೆ ಅಡ್ಡ ಪರಿಣಾಮ ಉಂಟು ಮಾಡಬಹುದು. ತಲೆ ಬುರುಡೆ ಹಾಗೂ ಕೂದಲು ಇನ್ನೊಂದಿಷ್ಟು ಒಣಗಿಕೊಂಡು ಸಮಸ್ಯೆ ವಿಪರೀತಕ್ಕೆ ಹೋಗಬಹುದು. ಆದರೆ ಈ ಹೊಟ್ಟಿನ ಸಮಸ್ಯೆಗೆ ಒಂದಿಷ್ಟು ಮನೆಮದ್ದುಗಳು ಪರಿಹಾರ ಒದಗಿಸಬಲ್ಲವು. ಮೊಸರು, ಲೋಳೆಸರ, ಮೆಂತ್ಯದ ಪ್ಯಾಕ್‌ ಕೂಡ ಮನೆಮದ್ದಾಗಿ ಶಮನ ನೀಡಬಲ್ಲವು. ಇವುಗಳ ಜೊತೆಗೆ ಕಹಿ ಬೇವಿನೆಣ್ಣೆ ಮುಂಚೂಣಿಯಲ್ಲಿ ನಿಲ್ಲುತ್ತದೆ. ಇದರಲ್ಲಿರುವ ಶೀಲಿಂಧ್ರ ನಿರೋಧಕ ಗುಣ ಹೊಟ್ಟನ್ನು ನಿವಾರಿಸುವುದಲ್ಲದೇ ನಿಮ್ಮ ಕೂದಲಿಗೆ ಹಾನಿ ಮಾಡದೆ ಬುರುಡೆಯಲ್ಲೂ ತೇವಾಂಶ ಉಳಿಸುತ್ತದೆ.

ಈ ಬೇವಿನೆಣ್ಣೆ ಬಳಸಿ ಮನೆಯಲ್ಲೇ ವಿವಿಧ ಬಗೆಯ ಹೊಟ್ಟು ನಿರೋಧಕ ಶಾಂಪೂ ತಯಾರಿಸಿಕೊಳ್ಳಬಹುದು.

ಬೇವಿನೆಣ್ಣೆ ಶಾಂಪೂ: ಯಾವುದಾದರೂ ಹರ್ಬಲ್‌ ಮೂಲದ ಅಥವಾ ಆಯುರ್ವೇದದ ಶಾಂಪೂ ತೆಗೆದುಕೊಳ್ಳಿ. ನೆಲ್ಲಿಕಾಯಿ ಮತ್ತು ಬ್ರಾಹ್ಮಿಯುಕ್ತ ಶಾಂಪೂ ಒಳ್ಳೆಯದು. ಜೊತೆಗೆ ಎರಡು ಟೀ ಚಮಚ ಬೇವಿನೆಣ್ಣೆ.

ಶಾಂಪೂ ಬಾಟಲ್‌ಗೆ ಬೇವಿನೆಣ್ಣೆ ಮಿಶ್ರ ಮಾಡಿ ಚೆನ್ನಾಗಿ ಕುಲುಕಿ. ಈ ಮಿಶ್ರಣವನ್ನು ನಿಯಮಿತವಾಗಿ ಕೂದಲು ತೊಳೆಯಲು ಬಳಸಿ. ಕೂದಲನ್ನು ಒದ್ದೆ ಮಾಡಿಕೊಂಡು ಇದಕ್ಕೆ ಶಾಂಪೂ ಲೇಪಿಸಿ ಚೆನ್ನಾಗಿ ಉಜ್ಜಿ ನೊರೆ ಬರಿಸಿ. 2–3 ನಿಮಿಷಗಳ ಕಾಲ ಹಾಗೇ ಬಿಟ್ಟು ತಣ್ಣೀರಿನಿಂದ ಕೂದಲು ಹಾಗೂ ತಲೆ ಬುರುಡೆಯನ್ನು ಚೆನ್ನಾಗಿ ತೊಳೆಯಿರಿ.

ಬೇವಿನೆಣ್ಣೆ, ರೋಸ್‌ಮರಿ ಹಾಗೂ ಟೀ ಟ್ರೀ ಎಣ್ಣೆ: ಬೇವಿನೆಣ್ಣೆ 2 ಟೀ ಚಮಚ, ರೋಸ್‌ಮರಿ ಎಣ್ಣೆ– 2 ಟೀ ಚಮಚ, ಟೀ ಟ್ರೀ ಎಣ್ಣೆ– 1–2 ಹನಿ

ಎಲ್ಲವನ್ನೂ ಸಣ್ಣ ಕಪ್‌ನಲ್ಲಿ ಮಿಶ್ರ ಮಾಡಿ. ಇದನ್ನು ಎಲ್ಲಿ ಹೊಟ್ಟಾಗಿದೆಯೋ ಅಲ್ಲಿ ಚೆನ್ನಾಗಿ ಲೇಪಿಸಿ. 10– 15 ನಿಮಿಷಗಳ ಕಾಲ ಮಸಾಜ್‌ ಮಾಡಿ. 15– 20 ನಿಮಿಷ ಹಾಗೆಯೇ ಬಿಡಿ. ನಂತರ ಯಾವುದಾದರೂ ಹರ್ಬಲ್‌ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ. ವಾರಕ್ಕೊಮ್ಮೆ ಹೊಟ್ಟು ಹೋಗುವ ತನಕ ಈ ಚಿಕಿತ್ಸೆ ಮಾಡಬಹುದು.

ಮೊಸರು ಮತ್ತು ಬೇವಿನೆಣ್ಣೆ: ಮೊಸರು– ಒಂದು ಕಪ್‌, ಬೇವಿನೆಣ್ಣೆ– 2 ಟೀ ಚಮಚ, ಸಣ್ಣ ಕಪ್‌ನಲ್ಲಿ ಮೊಸರು ಹಾಗೂ ಬೇವಿನೆಣ್ಣೆ ಮಿಶ್ರ ಮಾಡಿ. ಇದನ್ನು ಹೊಟ್ಟಿರುವ ಜಾಗಕ್ಕೆ ಹಚ್ಚಿ ಅರ್ಧ ತಾಸು ಬಿಟ್ಟು ಹರ್ಬಲ್‌ ಶಾಂಪೂವಿನಿಂದ ತೊಳೆಯಿರಿ.

ಬೇವಿನೆಣ್ಣೆ ಮತ್ತು ಆಲಿವ್‌ ಎಣ್ಣೆ: ಬೇವಿನೆಣ್ಣೆ– 1 ಟೀ ಚಮಚ, ಆಲಿವ್‌ ಎಣ್ಣೆ– 2 ಟೀ ಚಮಚ

ಎರಡನ್ನೂ ಮಿಶ್ರ ಮಾಡಿ ತಲೆಬುರುಡೆಗೆ ಲೇಪಿಸಿ, 10 ನಿಮಿಷಗಳ ಕಾಲ ಮಸಾಜ್‌ ಮಾಡಿ. ಅರ್ಧ ತಾಸಿನ ನಂತರ ಒಳ್ಳೆಯ ಶಾಂಪೂ ಬಳಸಿ ತೊಳೆದುಕೊಳ್ಳಿ.

ಬೇವಿನೆಣ್ಣೆ ಮತ್ತು ಆ್ಯಪಲ್‌ ಸಿಡಾರ್‌ ವಿನೆಗರ್‌: ಬೇವಿನೆಣ್ಣೆ– 1 ಟೀ ಚಮಚ

ಆ್ಯಪಲ್‌ ಸಿಡಾರ್‌ ವಿನೆಗರ್‌– 2 ಟೀ ಚಮಚ

ಎರಡನ್ನೂ ಮಿಶ್ರ ಮಾಡಿ ಹೊಟ್ಟಾದ ಜಾಗಕ್ಕೆ ಲೇಪಿಸಿ. 20 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT