ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಬಣ್ಣ ಕಳೆದುಕೊಳ್ಳದ ಗೋರಂಟಿ

Last Updated 9 ಫೆಬ್ರುವರಿ 2021, 8:57 IST
ಅಕ್ಷರ ಗಾತ್ರ

ಈಚೆಗೆ ಕಾಜಲ್‌ ಅಗರ್‌ವಾಲ್‌, ನೇಹಾ ಕಕ್ಕರ್‌, ಗೌಹರ್‌ ಖಾನ್‌... ಹೀಗೆ ಸೆಲೆಬ್ರಿಟಿಗಳ ವಿವಾಹಗಳು ನಡೆದವು. ಯಾವುದೇ ಬಾಲಿವುಡ್‌ ವಿವಾಹವಿರಲಿ, ಗಣ್ಯರ ಮದುವೆಯ ಸಂಭ್ರಮವಿರಲಿ, ಅಲ್ಲಿ ಕಂಡು ಬರುವ ಸಾಮಾನ್ಯ ಸಂಗತಿ ಎಂದರೆ ಮೆಹೆಂದಿ.

ಬಾಲಿವುಡ್‌, ಸ್ಯಾಂಡಲ್‌ವುಡ್‌ ಸೇರಿ ಎಲ್ಲ ಚಿತ್ರರಂಗದವರ ವಿವಾಹದಲ್ಲೂ ಗಮನ ಸೆಳೆಯುವ ಕಾರ್ಯಕ್ರಮ ಮೆಹೆಂದಿ. ಕೈಗೆ ಹಚ್ಚುವ ಮದರಂಗಿ ಕೈಗಳಲ್ಲಿ ಬಣ್ಣ ಮೂಡಿಸುವ ಮೊದಲೇ ಸಂಭ್ರಮದ ವಾತಾವರಣ ಸೃಷ್ಟಿಸುತ್ತಿದೆ. ಬಾಲಿವುಡ್‌ ಶೈಲಿಯ ಮದುವೆ ಟ್ರೆಂಡ್‌ ಆಗಿರುವ ಈ ಸಂದರ್ಭದಲ್ಲಿ ‌ಮೆಹೆಂದಿ ಹಾಕುವ ಕಲೆಯೂ ವಿವಾಹದ ಅವಿಭಾಜ್ಯ ಹಾಗೂ ಪ್ರಮುಖ ಅಂಗವಾಗಿ ಮಾರ್ಪಟ್ಟಿದೆ.

ಗೋರಂಟಿ ಎನ್ನುವುದು ಹೆಣ್ಣುಮಕ್ಕಳ ಇಷ್ಟದ ಅಲಂಕಾರ ಸಾಮಗ್ರಿ. ವಿವಾಹವಲ್ಲದೆಯೂ ಹಬ್ಬ, ಉತ್ಸವಗಳ ಸಂದರ್ಭಗಳಲ್ಲೂ ಮಹಿಳೆಯರು ಗೋರಂಟಿಯನ್ನು ಕೈಗೆ, ತಲೆಗೂದಲಿಗೆ ಹಚ್ಚಿಕೊಳ್ಳಲು ಇಷ್ಟ ಪಡುತ್ತಿದ್ದಾರೆ. ಚರ್ಮಕ್ಕೆ, ಕೂದಲಿಗೆ ಅದು ನೀಡುವ ಕಾಂತಿಗೆ ಮರುಳಾಗದವರಿಲ್ಲ.

ಜನಪ್ರಿಯ ವಿನ್ಯಾಸಗಳು

ತಮ್ಮ ಮದುವೆ ಹೀಗೆಯೇ ನಡೆಯಬೇಕು ಎಂದು ಕನಸು ಕಟ್ಟಿಕೊಳ್ಳುವ ಯುವತಿಯರು ಮದರಂಗಿ ವಿನ್ಯಾಸವನ್ನೂ ಮೊದಲೇ ಹುಡುಕಿಟ್ಟುಕೊಂಡಿರುತ್ತಾರೆ. ಮದುವೆ ಸರಳವಾಗಿರಲಿ, ಭರ್ಜರಿಯಾಗಿರಲಿ ಮೆಹೆಂದಿಯ ಹಾಜರಿಯಂತೂ ಇದ್ದೇ ಇರುತ್ತದೆ.‌

ವಿವಾಹದ ಮುಹೂರ್ತಕ್ಕೆ ಎರಡು ದಿನಗಳ ಮೊದಲು ಮದರಂಗಿಯ ಸಡಗರ ಆರಂಭವಾಗುತ್ತದೆ. ವಧುವಿಗಾಗಿಯೇ ವಿಶೇಷ ರೀತಿಯ ಚಿತ್ತಾರಗಳು ಇವೆ. ಗಣೇಶ, ನವಿಲು, ಶಂಖ, ಕಮಲ, ವರನು ವಧುವಿಗೆ ಕುಂಕುಮ ಇಡುವುದು, ಡೋಲು, ನಗಾರಿ ಸಾಲು ಇಂಥ ವಿನ್ಯಾಸಗಳು ಈಗ ಜನಪ್ರಿಯ.

ಎರಡೂ ಕೈಗಳನ್ನು ಸೇರಿಸಿ ಹಿಡಿದಾಗ ಒಂದು ಚಿತ್ರ ಪೂರ್ಣಗೊಳ್ಳುವ ಸ್ವರೂಪದ ಚಿತ್ತಾರದ (ಸೀಕ್ವೆನ್ಸ್) ಟ್ರೆಂಡ್ ಈಗಲೂ ಮುಂದುವರಿದಿದೆ. ವಿನ್ಯಾಸಗಳಲ್ಲಿ ಹೂಗಳ ಆಯ್ಕೆ ಮೊದಲಿನಿಂದಲೂ ಜನಪ್ರಿಯ. ವಿವಾಹ ಶುಭಾಶಯಗಳೂ ಮದರಂಗಿ ವಿನ್ಯಾಸದಲ್ಲಿ ಮೂಡಿಸಬೇಕು ಎಂಬ ಬೇಡಿಕೆಯೂ ಹೆಚ್ಚಳವಾಗಿದೆ. ಕೆಲವು ಸೃಜನಶೀಲರು ವಧು–ವರರ ಭಾವಚಿತ್ರಗಳನ್ನೂ ಮದರಂಗಿಯಲ್ಲಿ ಪಡಿಮೂಡಿಸುವ ಸ್ಟೈಲ್ ಆರಂಭಿಸಿದ್ದಾರೆ.

ಕೈ ಅರ್ಧ ಭಾಗಕ್ಕಷ್ಟೇ ಮದರಂಗಿ ಹಾಕುವುದು, ದೊಡ್ಡ ಹೂಗಳು ಎದ್ದು ಕಾಣುವಂಥ ವಿನ್ಯಾಸ, ಬೆರಳುಗಳಿಗೆ ಮಾತ್ರ ವಿನ್ಯಾಸ, ಕೈಯನ್ನು ಬಳ್ಳಿಯಂತೆ ಆವರಿಸಿಕೊಳ್ಳುವ ವಿಧಾನ, ಕೈ ಹಿಂಭಾಗಕ್ಕೆ ಮಾತ್ರ ವಿನ್ಯಾಸ, ಮಂಡಲಗಳನ್ನು ರಚಿಸುವುದು, ಬೆರಳ ತುದಿಗಳಿಗೆ ಟೋಪಿಯ ವಿನ್ಯಾಸ, ಗಿಡದಲ್ಲಿ ಅರಳಿದ ಗುಲಾಬಿ ಹೂವುಗಳು, ಆಭರಣ ವಿನ್ಯಾಸ ಈಗ ಜನರ ಅಚ್ಚುಮೆಚ್ಚಿನವು.

ಡಿಸೈನ್‌ನಲ್ಲಿ ಪತಿಯ ಹೆಸರಿನ ಅಕ್ಷರಗಳನ್ನು ಬಿಡಿಸಿ ಅದನ್ನು ಹುಡುಕಲು ಹೇಳುವ ಪದ್ಧತಿಯೂ ಕೆಲವರಲ್ಲಿ ಇವೆ. ರಾಜಸ್ಥಾನಿ ಹಾಗೂ ಅರೆಬಿಕ್‌ ಪದ್ಧತಿಗಳು ಹೆಚ್ಚು ಜನ ಮೆಚ್ಚುವ ವಿನ್ಯಾಸಗಳು. ಈಚೆಗೆ ಮದರಂಗಿಯ ಜೊತೆ ಝರಿ, ಕುಂದಣ್‌ಗಳನ್ನು ಬಳಸುವ ಪದ್ಧತಿಯೂ ಬಂದಿದೆ. ಗೋರಂಟಿ ಹಚ್ಚಿ ಅದು ಒಣಗುತ್ತ ಬಂದಂತೆ ಅದಕ್ಕೆ ನಿಂಬೆಹಣ್ಣಿನ ರಸ, ಸಕ್ಕರೆ ನೀರು ಮಾಡಿ ಹಚ್ಚಿ ಮತ್ತೆ ಹಸಿಯಾಗಿ ಇಡುವುದರಿಂದ ಬಣ್ಣ ಇನ್ನಷ್ಟು ಗಾಢವಾಗಿ ಮೂಡಿ ಬರುತ್ತದೆ. ತೆಂಗಿನಎಣ್ಣೆ, ಆಲಿವ್‌ ಎಣ್ಣೆಗಳನ್ನು ಹಚ್ಚಿದರೂ ಮದರಂಗಿಯ ಬಣ್ಣ ಇನ್ನಷ್ಟು ಉತ್ತಮವಾಗುತ್ತದೆ ಎನ್ನುತ್ತಾರೆ ಪರಿಣತರು.

ಮೊದಲೆಲ್ಲ ಸಂಬಂಧಿಕರೇ ಮದರಂಗಿ ಹಚ್ಚುತ್ತಿದ್ದರೆ ಈಗ ಅದಕ್ಕಾಗಿಯೇ ಮೆಹೆಂದಿ ಕಲಾವಿದರೂ ಸಿಗುತ್ತಿದ್ದಾರೆ. ಮದರಂಗಿ ಕಲೆಯ ಪರಿಣತರು ತಮ್ಮ ಬಳಿ ಕ್ಯಾಟಲಾಗ್‌ ಇರಿಸಿಕೊಳ್ಳುತ್ತಾರೆ. ಅದನ್ನು ತೋರಿಸಿ ಇಷ್ಟದ ವಿನ್ಯಾಸ ಆಯ್ಕೆ ಮಾಡಿಕೊಳ್ಳುವಂತೆ ಸೂಚಿಸುತ್ತಾರೆ. ಅಂತರ್ಜಾಲ ಜಾಲಾಡಿ ತಮ್ಮ ಇಷ್ಟದ ವಿನ್ಯಾಸಗಳನ್ನು ಆಯ್ಕೆ ಮಾಡಿಕೊಳ್ಳುವವರೂ ಹೆಚ್ಚಾಗಿದ್ದಾರೆ.

ಸಂಸ್ಕೃತದ ಮೆಂದಿಕಾ ಎಂಬ ಶಬ್ದದಿಂದ ಬಂದ ಮೆಹೆಂದಿ ಸೌಂದರ್ಯವರ್ಧಕವಾಗಿ ಬಳಕೆಯಾಗಲು ಆರಂಭವಾಗಿಯೇ ಐದು ಸಾವಿರ ವರ್ಷಗಳು ಕಳೆದಿವೆ ಎನ್ನಲಾಗಿದೆ. ಹಿಂದೂ ಹಾಗೂ ಮುಸ್ಲಿಂ ಎರಡೂ ಧರ್ಮೀರು ಇದಕ್ಕೆ ಅಪಾರ ಮಹತ್ವ ನೀಡಿದ್ದಾರೆ. ದೇಹವನ್ನು ತಂಪಾಗಿಡುವ ಈ ಗಿಡಮೂಲಿಕೆ ಆಧುನಿಕ ಸೌಂದರ್ಯವರ್ಧಕಗಳ ನಡುವೆಯೂ ತನ್ನ ಮಹತ್ವ ಒಂದಿನಿತೂ ಕಳೆದುಕೊಂಡಿಲ್ಲ. ಭಾರತ, ಪಾಕಿಸ್ತಾನ, ನೇಪಾಳ ಹಾಗೂ ಅರೇಬಿಕ್‌ ರಾಷ್ಟ್ರಗಳಲ್ಲಿ ಈಗಲೂ ಹೆನ್ನಾದ ಬಳಕೆ ಹೆಚ್ಚು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT