ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸಾಮಿ ಸಾಲಕ್ಕೆ ಸಿಕ್ಕಿತೇ ಲಾಭ ?

ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆ ಪ್ರಸ್ತಾವಕ್ಕೆ ಶ್ಲಾಘನೆ
Last Updated 5 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಶಿರಸಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ಮಂಡಿಸಿರುವ ಬಜೆಟ್‌ನಲ್ಲಿ, ಸಹಕಾರ ಸಂಘಗಳಲ್ಲಿ ಅಡಿಕೆ ಬೆಳೆಗಾರರು ಪಡೆದ ದೀರ್ಘಾವಧಿ ಸಾಲಕ್ಕೆ ಶೇ 5ರ ಬಡ್ಡಿ ವಿನಾಯಿತಿ ನೀಡುವುದಾಗಿ ಘೋಷಿಸಿದ್ದಾರೆ. ಈ ಯೋಜನೆ, ಉತ್ತರ ಕನ್ನಡದಲ್ಲಿ ಪ್ರಚಲಿತದಲ್ಲಿರುವ ಆಸಾಮಿ ಸಾಲಕ್ಕೆ ಅನ್ವಯವಾಗಬಲ್ಲದೇ ಎಂಬುದರ ಬಗ್ಗೆ ವಿಶ್ಲೇಷಣೆಗಳು ನಡೆಯುತ್ತಿವೆ.

ಅಡಿಕೆ ಬೆಳೆಗಾರರ ಅಭಿವೃದ್ಧಿ ದೃಷ್ಟಿಯಿಂದ ಪ್ರಾಥಮಿಕ ಸಹಕಾರ ಸಂಘಗಳಲ್ಲಿ ಲಭ್ಯವಿರುವ ಹಣಕಾಸಿನ ಮೂಲಗಳಿಂದ, ಪ್ರತಿ ರೈತ ಕುಟುಂಬಕ್ಕೆ ನೀಡುವ ದೀರ್ಘಾವಧಿ ಕೃಷಿ ಸಾಲದ ಪೈಕಿ ಗರಿಷ್ಠ ₹ 2 ಲಕ್ಷದವರೆಗಿನ ಸಾಲಕ್ಕೆ ಶೇ 5ರಷ್ಟು ಬಡ್ಡಿ ವಿನಾಯಿತಿ ನೀಡಿ ಈ ಮೊತ್ತವನ್ನು ಸರ್ಕಾರ ಭರಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ.

ರೈತರು ಕೃಷಿ ಚಟುವಟಿಕೆಗಳಿಗೆ ಸಹಕಾರ ಸಂಘಗಳಲ್ಲಿ ಆಸಾಮಿ ಸಾಲ (ಖಾತೆಸಾಲ) ಪಡೆಯುತ್ತಾರೆ. ಇದಕ್ಕೆ ಇರುವ ಅಧಿಕ ಬಡ್ಡಿದರ ರೈತರಿಗೆ ಹೊರೆಯಾಗುತ್ತದೆ. ಈ ಕಾರಣಕ್ಕೆ ಆಸಾಮಿ ಸಾಲವನ್ನು ಕೃಷಿ ಸಾಲವೆಂದು ಪರಿಗಣಿಸಬೇಕು ಎಂಬ ಬೇಡಿಕೆ ಬಹುವರ್ಷಗಳಿಂದ ಇತ್ತು. ಈ ಮುಖ್ಯಮಂತ್ರಿ ಮಾಡಿರುವ ಘೋಷಣೆ, ಆಸಾಮಿ ಸಾಲಕ್ಕೆ ಪೂರಕವಾಗಬಹುದೆಂಬ ಆಶಾಕಿರಣ ಸಾಲಗಾರರಲ್ಲಿ ಮೂಡಿದೆ.

‘ಸರ್ಕಾರ ಈ ಯೋಜನೆ ಹೇಗೆ ಅನುಷ್ಠಾನಗೊಳಿಸುತ್ತದೆ ಎಂಬುದರ ಮೇಲೆ ಯಶಸ್ಸು ನಿರ್ಧರಿತವಾಗುತ್ತದೆ. ಇದನ್ನು ಮಾಧ್ಯಮಿಕ ಸಾಲವೆಂದು ಪರಿಗಣಿಸುವ ಅಪಾಯವೂ ಇದೆ. ಆಸಾಮಿಕ್ಕೆ ಈ ವಿನಾಯಿತಿ ಸಿಕ್ಕಿದರೆ ರೈತರಿಗೆ ತುಂಬ ಅನುಕೂಲವಾಗುತ್ತದೆ. ಇಲ್ಲವಾದಲ್ಲಿ ಇದು ಕೇವಲ ಬಜೆಟ್ ಘೋಷಣೆಯಾಗುತ್ತದೆ’ ಎಂದು ಖಾತೆ ಸಾಲಮನ್ನಾ ಹೋರಾಟಗಾರ ಪ್ರಮುಖ ಜಿ.ಎನ್.ಹೆಗಡೆ ಮುರೇಗಾರ್ ಪ್ರತಿಕ್ರಿಯಿಸಿದರು.

‘ಬಜೆಟ್‌ ಮುಖ್ಯಾಂಶದಲ್ಲಿ ಯೋಜನೆಯ ಪ್ರಾಥಮಿಕ ಮಾಹಿತಿಯಷ್ಟೇ ದೊರೆತಿದೆ. ಇದನ್ನು ವಿಶ್ಲೇಷಿಸಿದಾಗ, ಈಗಾಗಲೇ ಅಡಿಕೆ ಸೇರಿದಂತೆ ಎಲ್ಲ ಬೆಳೆಗಳಿಗೆ ಬೆಳೆಸಾಲ ರಿಯಾಯಿತಿ ಇದೆ. ದೀರ್ಘಾವಧಿ ಸಾಲ ₹ 10ಲಕ್ಷದವರೆಗೆ ಶೇ 3ರ ಬಡ್ಡಿಯಲ್ಲಿ ಸಿಗುತ್ತಿದೆ. ಇದರ ಹೊರತಾಗಿ ನೀಡಿರುವ ಆಸಾಮಿ ಸಾಲಕ್ಕೆ ಅನ್ವಯವಾದರೆ ಮಾತ್ರ ರೈತರಿಗೆ ಪ್ರಯೋಜನವಾಗುತ್ತದೆ’ ಎಂದು ಮುಂಡಗನಮನೆ ಸೊಸೈಟಿ ಕಾರ್ಯದರ್ಶಿ ನಾಗಪತಿ ಹೆಗಡೆ ‘ಪ್ರಜಾವಾಣಿ’ಗೆ ತಿಳಿಸಿದರು.

ಅತಿಹೆಚ್ಚು ರೋಗಿಗಳು ದಾಖಲಾಗುವ ಆಸ್ಪತ್ರೆ:

ಜಿಲ್ಲೆಯಲ್ಲಿ ಅತಿಹೆಚ್ಚು ರೋಗಿಗಳು ದಾಖಲಾಗುವ ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಯನ್ನು ಪ್ರಸ್ತುತ ಇರುವ 100 ಹಾಸಿಗೆ ಆಸ್ಪತ್ರೆಯಿಂದ 200 ಹಾಸಿಗೆಗೆ ಉನ್ನತೀಕರಣಗೊಳಿಸಲಾಗಿದೆ. ಈ ಮೂಲಕ ಜನರ ಬಹುವರ್ಷಗಳ ಬೇಡಿಕೆಗೆ ಮನ್ನಣೆ ದೊರೆತಿದೆ. ಈ ಆಸ್ಪತ್ರೆಗೆ ಶಿರಸಿ ತಾಲ್ಲೂಕು ಮಾತ್ರವಲ್ಲದೇ, ಸಿದ್ದಾಪುರ, ಯಲ್ಲಾಪುರ, ಸಾಗರ, ಸೊರಬ, ಹಾನಗಲ್, ಹಾವೇರಿ ಭಾಗಗಳಿಂದಲೂ ರೋಗಿಗಳು ಬರುತ್ತಾರೆ.

1870ರಲ್ಲಿ ಅಂದಿನ ಪುರಸಭೆ ಆಡಳಿತದಲ್ಲಿ ಕಾಟೇಜ್ ಹಾಸ್ಪಿಟಲ್ ಆಗಿದ್ದ, ಈ ಆಸ್ಪತ್ರೆಯನ್ನು 1881ರಲ್ಲಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಕಟ್ಟಲಾಗಿತ್ತು. ಸ್ಥಳೀಯ ಸಂಸ್ಥೆ ಆಶ್ರಯದಲ್ಲಿ ರಾವ್ ಬಹಾದ್ದೂರ್ ಪಿ.ಎನ್.ಪಂಡಿತ ಅವರು 1912ರಲ್ಲಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿದ ಕಾರಣ, ಮರುನಾಮಕರಣಗೊಂಡ ಪಂಡಿತ್ ಸಾರ್ವಜನಿಕ ಆಸ್ಪತ್ರೆ ಇಂದಿಗೂ ಇದೇ ಹೆಸರಿನಲ್ಲಿದೆ.

ಕೈಗಾರಿಕಾ ವಸಾಹತು:

ಸ್ಥಳೀಯ ಶಾಸಕರೂ ಆಗಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ವಿಶೇಷ ಆಸಕ್ತಿ ತೋರಿದ್ದ ಸಿದ್ದಾಪುರ ತಾಲ್ಲೂಕು ಮಲವಳ್ಳಿಯಲ್ಲಿ ಕೈಗಾರಿಕಾ ವಸಾಹತು ಕೇಂದ್ರ ಸ್ಥಾಪನೆಯನ್ನು ಮುಖ್ಯಮಂತ್ರಿ ಬಜೆಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಆದರೆ, ಹೊಸ ಯೋಜನೆಗಳಿಗೆ ನಿರ್ದಿಷ್ಟ ಅನುದಾನ ಘೋಷಣೆ ಮಾಡಿಲ್ಲ ಎಂಬುದು ಕಾಂಗ್ರೆಸ್ ಪ್ರಮುಖರ ಆರೋಪವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT