ಸೋಮವಾರ, ಜುಲೈ 4, 2022
25 °C

Karnataka Budget | ಬಲವಾಗಬೇಕಿತ್ತು ಕೃಷಿ ಬಿಕ್ಕಟ್ಟಿನ ನಿರ್ವಹಣೆ

ಡಾ.ಪ್ರಕಾಶ ಭಟ್‌ Updated:

ಅಕ್ಷರ ಗಾತ್ರ : | |

Prajavani

ಬಜೆಟಿಂಗ್‌ ಪ್ರತಿ ವರ್ಷದ ಪ್ರಕ್ರಿಯೆಯಾದರೂ ನಿರ್ವಾತದಲ್ಲಿ ನಡೆಯುವಂತಹದಲ್ಲ. ಹಿಂದಿನ ವರ್ಷದ ಬಜೆಟ್, ಅದನ್ನಾಧರಿಸಿದ ಖರ್ಚು, ಖರ್ಚಿನಿಂದಾದ ಸಾಧನೆ ಮತ್ತು ಅವುಗಳಿಂದಾದ ಧನಾತ್ಮಕ ಪ್ರಭಾವಗಳು ಗಣನೆಗೆ ಬರುತ್ತವೆ. ಹಿಂದಿನ ಆರ್ಥಿಕ ವರ್ಷದಲ್ಲಿ ಯಾವ ಚಟುವಟಿಕೆಗಳೆಲ್ಲ ಗೆದ್ದವು? ಯಾವು ಸೋತವು? ಹೊಸ ಸನ್ನಿವೇಶ ಬೇಡುವ ಹೊಸ ಚಟುವಟಿಕೆಗಳ ನೀತಿಗಳು ಯಾವವು?

ಇವೆಲ್ಲವು ಬಜೆಟಿಂಗ್‌ ಪ್ರಕ್ರಿಯೆಗೆ ಒಳಸುಳಿಗಳಾಗಬೇಕು. ಇವೆಲ್ಲವನ್ನು ಆಧರಿಸಿ, ಪರಾಮರ್ಶಿಸಿ ಈ ವರ್ಷದ ಬಜೆಟ್‌ ಸಿದ್ಧವಾಗುತ್ತದೆ. ಆರ್ಥಿಕ ಹಾಗೂ ಭೌತಿಕ ಗುರಿಗಳ ಹೊಂದಾಣಿಕೆಯನ್ನು ಬಜೆಟ್‌ನಲ್ಲಿ ಸಾಧಿಸಬೇಕಾಗಿರುವುದರಿಂದ ಯಾವ ಚಟುವಟಿಕೆಗೆ ಎಷ್ಟು ಹಣ ಎನ್ನುವುದರ ನಿರ್ಣಯಕ್ಕೂ ಹಿಂದಿನ ಅನುಭವವೇ ಮಾರ್ಗದರ್ಶಿಯಾಗಿರುತ್ತದೆ.

ರಾಜ್ಯದ 2022–23ರ ಬಜೆಟ್‌ ಗಮನಿಸಿದಾಗ ಈ ಎಲ್ಲವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆಯೇ ಎಂಬ ಅನುಮಾನ ಬರುವುದು ಹೌದು. ಗ್ರಾಮೀಣಾಭಿವೃದ್ಧಿ, ಗ್ರಾಮೀಣ ಉದ್ಯೋಗ ಹಾಗೂ ಕೃಷಿ ವಿಭಾಗಗಳನ್ನು ಗಮನಿಸಿದಲ್ಲಿ ಹಲವು ಕ್ರಮಗಳನ್ನು ಬಜೆಟ್‌ ಸೂಚಿಸುವುದು ಕಾಣುತ್ತದೆ. ಚುನಾವಣೆ ಮುಂದಿರುವಾಗ ಬಜೆಟ್‌ ಮಂಡಿಸುವಾಗ ಒಂದು ಕಣ್ಣು ಆ ಕಡೆಗೂ ಇರುವುದು ಸಹಜ.

ಒಟ್ಟು ವೆಚ್ಚದ ₹2,65,730 ಕೋಟಿಯಲ್ಲಿ ₹33,700 ಕೋಟಿ ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ ಕೊಟ್ಟಿರುವುದು ಈಗಿನ ಕೃಷಿ ಸಂದರ್ಭದಲ್ಲಿ ಕಡಿಮೆಯೇ. ಮಹಿಳೆಯರ ಸಬಲೀಕರಣ (₹ 43,183 ಕೋಟಿ) ಹಾಗೂ ಮಕ್ಕಳ ಅಭ್ಯುದಯ (₹ 40,944 ಕೋಟಿ) ನೀಡಿರುವುದನ್ನು ಗಮನಿಸಿದರೆ ಕೃಷಿ ಹಾಗೂ ಪೂರಕ ಚಟುವಟಿಕೆಗಳಿಗೆ ದೊರೆತ ಅನುದಾನದ ಕೊರತೆ ಸ್ಪಷ್ಟವಾಗಬಲ್ಲದು.

ಕೃಷಿ ಯಂತ್ರೋಪಕರಣಕ್ಕೆ ‘ರೈತ ಶಕ್ತಿ’ ಯೋಜನೆಯಲ್ಲಿ ಪ್ರತಿ ಎಕರೆಗೆ ನೀಡುವ ಡೀಸೆಲ್‌ ಸಹಾಯಧನ ಕೃಷಿಯ ಈಗಿನ ಸಮಸ್ಯೆಗೆ ಉತ್ತರವಾಗಿ ಬಂದದ್ದೇನೊ ಹೌದು. ಅದನ್ನು ಹೇಗೆ ನಿರ್ವಹಿಸಲಾಗುತ್ತದೆ ಎನ್ನುವುದು ಸ್ಪಷ್ಟವಿಲ್ಲ. ಈಗ ಇರುವ ಕೃಷಿ ಯಂತ್ರಧಾರೆಯನ್ನು ಹೋಬಳಿಗಳಿಗೆ ವಿಸ್ತರಿಸಿರುವುದು ಸ್ವಾಗತಾರ್ಹ. ಕೃಷಿಕರಿಗೆ ನೀಡುವ ಬಡ್ಡಿ ರಿಯಾಯಿತಿ ಸಾಲ ಸರಿಯಾಗಿ ನಿರ್ವಹಿಸಿದಲ್ಲಿ ಉಪಯುಕ್ತವಾದೀತು. 

ಇಂದಿನ ಪ್ಯಾಂಡೆಮಿಕ್‌ ಸನ್ನಿವೇಶದಲ್ಲಿ ಕೋವಿಡ್‌ ನಂತರದ ಆರೋಗ್ಯ ನಿರ್ಹವಣೆ ಕಷ್ಟವಾಗುತ್ತಿರುವಾಗ ಯಶಸ್ವಿನಿ ಯೋಜನೆಯನ್ನು ‘ಪರಿಷ್ಕೃತ’ ರೂಪದಲ್ಲಿ ಅನುಷ್ಠಾನ ಮಾಡಲು ₹300 ಕೋಟಿ ಅನುದಾನ ನೀಡಿರುವುದು ಸ್ವಾಗತಾರ್ಹ. ಆದರೆ, ಪರಿಷ್ಕರಣೆ ಮಾಡಿರುವುದೇನು? ಅನುದಾನ ಇಷ್ಟು ಎಂದು ಹೇಗೆ ನಿರ್ಣಯಿಸಲಾಯಿತು ಎಂಬುದು ಸ್ಪಷ್ಟವಿಲ್ಲದೆ ಹೆಚ್ಚಿನದನ್ನು ಹೇಳಲು ಸಾಧ್ಯವಿಲ್ಲ.

ಹಾಲು ಉತ್ಪಾದಕರಿಗಾಗಿ ಕ್ಷೀರ ಸಮೃದ್ಧಿ ಬ್ಯಾಂಕ್‌ ಸ್ಥಾಪನೆಯ ಪ್ರಸ್ತಾಪವೂ ಬಜೆಟ್‌ನಲ್ಲಿದೆ. ಇದರಲ್ಲಿ ರಾಜ್ಯ ಸರ್ಕಾರ ₹100 ಕೋಟಿ ಷೇರು ಬಂಡವಾಳ ತೊಡಗಿಸಿರುವುದರಿಂದ ಸಂಕಷ್ಟದಲ್ಲಿರುವ ಹಾಲು ಉತ್ಪಾದಕರಿಗೆ ನೆರವಾಗಬಹುದು. ಗೋಶಾಲೆಗಳ ಸಾಧಕ–ಬಾಧಕದ ಚರ್ಚೆ ಇನ್ನೂ ನಡೆಯುತ್ತಿದೆಯಾದರೂ ಸರ್ಕಾರ ಅದಕ್ಕೆ ₹50 ಕೋಟಿ ಅನುದಾನ ಮೀಸಲಿಟ್ಟಿದೆ. ಹಿಂದಿನ ವರ್ಷದ ಬಜೆಟ್‌ನಲ್ಲಿ ಏನು ಸಾಧನೆಯಾಗಿದೆ ಎನ್ನುವುದು ಸ್ಪಷ್ಟವಾಗಿಲ್ಲ. ಇಷ್ಟಾದರೂ ಗೋವುಗಳ ದತ್ತು ಪ್ರೋತ್ಸಾಹ ಹೊಸ ವಿಚಾರ ಹೌದು. ಇದು ದಕ್ಷ ರೀತಿಯಲ್ಲಿ ಜಾರಿಯಾಗಬೇಕು. ಅದಕ್ಕೆ ಅವಶ್ಯ ವ್ಯವಸ್ಥೆಯನ್ನು ಸರ್ಕಾರ ಯೋಚಿಸಿ, ಅನುಷ್ಠಾನ ಮಾಡಬೇಕು.

ಕೆರೆಗಳ ಅಭಿವೃದ್ಧಿಯೂ ಒಳ್ಳೆಯ ವಿಚಾರ. ಆದರೆ, ರಾಜ್ಯದಲ್ಲಿ ಇಲ್ಲಿಯವರೆಗಿನ ದಾಖಲೆಯೇನೂ ಚೆನ್ನಾಗಿಲ್ಲ. ಇದನ್ನು ಯಾವ ರೀತಿ ಜಾರಿಗೊಳಿಸಬೇಕು ಎಂಬ ಅನುಷ್ಠಾನ ನೀತಿಯು ಹಿಂದಿನ ಸಫಲತೆ–ವಿಫಲತೆಗಳನ್ನಾಧರಿಸಿ ಸಿದ್ಧವಾಗಬೇಕು. ಮಳೆ ನೀರಿನ ದಕ್ಷ ಬಳಕೆಯ ಕುರಿತು ಬಜೆಟ್‌ ಪ್ರಸ್ತಾಪಿಸುವ ಜಲಾಯನ ಅಭಿವೃದ್ಧಿ ಯೋಜನೆಗಳನ್ನು ಮೀರಿ ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಮಳೆ ನೀರಿನ ಸಂರಕ್ಷಣೆ, ವೃಕ್ಷಾರೋಪಣ ಬಗ್ಗೆ ಕಾರ್ಯಸೂಚಿಬೇಕಿತ್ತು. ಇಂದಿನ ಹವಾಮಾನ ಬದಲಾವಣೆ ದಿನಗಳಲ್ಲಿ ಗ್ರಾಮ ಮಟ್ಟದಲ್ಲಿ ಈ ಕ್ರಮಗಳ ಜಾರಿ, ಸಮುದಾಯ ಭಾಗವಹಿಸುವುದು ಒಳ್ಳೆಯ ಕಾರ್ಯಕ್ರಮವಾಗಬಹುದಿತ್ತು. ಈ ವಿಷಯದಲ್ಲಿ ಸರ್ಕಾರ ಇನ್ನೊಂದು ವರ್ಷ ಕಳೆದುಕೊಂಡಿತು. ಜಾಗತಿಕ ತಾಪಮಾನ ಬಹುದೊಡ್ಡ ಸಮಸ್ಯೆಯೆಂಬುದು ಸರ್ಕಾರಕ್ಕೆ ಮನದಟ್ಟಾದಂತಿಲ್ಲ.

ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳ ಅಭಿವೃದ್ಧಿಯ ಗುರಿ ಸಾಧನೆಗೆ ಕೊಟ್ಟಿರುವ ₹1,000 ಕೋಟಿಯಿಂದ ಆ ತಾಲ್ಲೂಕುಗಳ ಶಿಕ್ಷಣ, ಆರೋಗ್ಯ, ಅಂಗನವಾಡಿಗಳೆಲ್ಲವೂ ಉದ್ದೇಶಿಸಿದ ಅಭಿವೃದ್ಧಿ ಕಾಣಲೆಂದು ಆಶಿಸಬಹುದು. ಕರ್ನಾಟಕ ಅಪೌಷ್ಟಿಕತೆ ನಿವಾರಣೆಯಲ್ಲಿ ಹಿಂದೆಯೇ ಇರುವುದರಿಂದ ಸಾಮಾನ್ಯ ಅಪೌಷ್ಟಿಕತೆಯ ಮಕ್ಕಳ ಸೃಷ್ಟಿ ಹಾಗೂ ಕ್ಷೀರಭಾಗ್ಯ ಯೋಜನೆಯ ಸೌಲಭ್ಯ ಕೊಟ್ಟಿರುವುದು ಮಕ್ಕಳು ಸಾಮಾನ್ಯ ಅಪೌಷ್ಟಿಕತೆಯಿಂದ ತೀರ ಅಪೌಷ್ಟಿಕತೆಗೆ ಜಾರದಂತೆ ತಡೆಯಲು ಸಹಾಯಕವಾಗಬಹುದು.

(ಲೇಖಕರು: ಕೃಷಿ ತಜ್ಞ, ಪರಿಸರವಾದಿ)

ಇವನ್ನೂ ಓದಿ...

Karnataka Budget: ಬೊಮ್ಮಾಯಿ ಬಜೆಟ್‌ನಲ್ಲಿ ಏನೇನಿದೆ? ಇಲ್ಲಿವೆ ಮುಖ್ಯಾಂಶಗಳು
ರಾಜ್ಯ ಬಜೆಟ್: ನವ ಭಾರತಕ್ಕಾಗಿ ನವಕರ್ನಾಟಕ: ರಾಜ್ಯ ಅಭಿವೃದ್ಧಿಗೆ ಪಂಚಸೂತ್ರಗಳು
ಕರ್ನಾಟಕ ಬಜೆಟ್–2022 | ನೀರಾವರಿಗೆ ಆದ್ಯತೆ; ಎತ್ತಿನಹೊಳೆ ಯೋಜನೆಗೆ 3 ಸಾವಿರ ಕೋಟಿ
Karnataka Budget: ಮೇಕೆದಾಟು ಯೋಜನೆಗೆ ₹1,000 ಕೋಟಿ ಮೀಸಲು–ಬೊಮ್ಮಾಯಿ
Karnataka Budget 2022: ಬೆಂಗಳೂರಿಗೆ ಏನೇನು?
ಬೊಮ್ಮಾಯಿ ಬಜೆಟ್‌: ಕೃಷಿ ಕ್ಷೇತ್ರಕ್ಕೇನು ಕೊಡುಗೆ? ಇಲ್ಲಿದೆ ವಿವರ
ಕರ್ನಾಟಕ ಬಜೆಟ್–2022: ಯಾವ ವಲಯಕ್ಕೆ ಎಷ್ಟು ಅನುದಾನ?
Karnataka Budget: ಯಕ್ಷಗಾನ ಸಮ್ಮೇಳನ, ಕಾಸರಗೋಡು, ಗೋವಾದಲ್ಲಿ ಕನ್ನಡ ಭವನ ಘೋಷಣೆ
Karnataka Budget: ಆರೋಗ್ಯ ಕ್ಷೇತ್ರಕ್ಕೆ ಸಿಕ್ಕಿದ್ದೇನು?
ಬಜೆಟ್ ಪ್ರತಿ ಹಿಡಿದು ಮಿಂಚಿದ ಸಿಎಂ ಬೊಮ್ಮಾಯಿ
ಕರ್ನಾಟಕ ಬಜೆಟ್–2022: ತೆರಿಗೆ ದರದಲ್ಲಿ ಯಥಾಸ್ಥಿತಿ –ಸಿಎಂ ಬೊಮ್ಮಾಯಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು