ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್ 2020 ‌| ರಕ್ಷಣೆಗೆ ಸಿಗಲಿಲ್ಲ ಸಾಕಷ್ಟು ಹಣ: ಭಾಷಣದಲ್ಲಿ ಉಲ್ಲೇಖವೂ ಇರಲಿಲ್ಲ

ಆದ್ಯತೆಗಳು ಬದಲಾದವೇ?
Last Updated 1 ಫೆಬ್ರುವರಿ 2020, 12:40 IST
ಅಕ್ಷರ ಗಾತ್ರ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಫೆ.1) ಮಂಡಿಸಿದ ಬಜೆಟ್‌ನಲ್ಲಿ ರಕ್ಷಣಾ ಇಲಾಖೆಗೆ ನಿರೀಕ್ಷೆಯಷ್ಟುಅನುದಾನ ಸಿಗಲಿಲ್ಲ.ಇದೇ ಸರ್ಕಾರದ ಹಿಂದಿನ ಅವಧಿಯಲ್ಲಿ ರಕ್ಷಣಾ ಸಚಿವರಾಗಿದ್ದ ಇಂದಿನ ವಿತ್ತ ಸಚಿವರ 2 ಗಂಟೆ 41 ನಿಮಿಷಗಳ ಸುದೀರ್ಘ ಭಾಷಣದಲ್ಲಿ ರಕ್ಷಣಾ ಇಲಾಖೆಯ ಉಲ್ಲೇಖವೂ ಬರಲಿಲ್ಲ. ರಕ್ಷಣಾ ಕ್ಷೇತ್ರಗಳಿಗಿಂತಲೂ ಇತರ ಕ್ಷೇತ್ರಗಳಿಗೆ ಸರ್ಕಾರ ಹೆಚ್ಚು ಮಹತ್ವ ನೀಡಿತೆ ಎನ್ನುವ ಪ್ರಶ್ನೆಯನ್ನೂ ಈ ಬೆಳವಣಿಗೆ ಹುಟ್ಟುಹಾಕಿತು.

ನಂತರ ಬಿಡುಗಡೆಯಾದ ದಾಖಲೆಗಳಲ್ಲಿ ರಕ್ಷಣೆಗೆ ₹ 3.37 ಲಕ್ಷ ಕೋಟಿ ಅನುದಾನ ನೀಡಿರುವ ಮಾಹಿತಿ ಲಭ್ಯವಾಯಿತು. ರಕ್ಷಣೆಗಾಗಿ ಮೀಸಲಿರಿಸಿರುವ ಈ ಮೊತ್ತವು ಆರ್ಥಿಕ ವೃದ್ಧಿ ದರದ (ಜಿಡಿಪಿ) ಶೇ 1.5ರಷ್ಟು ಮಾತ್ರವೇ ಇದೆ. 1962ರಚೀನಾ ಯುದ್ಧದ ನಂತರ ರಕ್ಷಣೆಗೆ ಮೀಸಲಿರಿಸಿರುವ ಅತ್ಯಂತ ಕಡಿಮೆ ಅನುಪಾತ ಇದು ಎಂದುತಜ್ಞರು ವಿಶ್ಲೇಷಿಸಿದ್ದಾರೆ.

ಆದರೂ ಒಟ್ಟಾರೆ ಅನುದಾನದ ಮೊತ್ತವನ್ನು ಗಮನಿಸಿದರೆ ಕಳೆದ ಬಜೆಟ್‌ನಲ್ಲಿ ನೀಡಿದ್ದ ಮೊತ್ತಕ್ಕಿಂತ ಈ ಬಾರಿ ಶೇ 5.8ರಷ್ಟು ಅನುದಾನ ಹೆಚ್ಚಾಗಿದೆ.ಕಳೆದ ಮಧ್ಯಂತರ ಬಜೆಟ್‌ನಲ್ಲಿ ರಕ್ಷಣಾ ಇಲಾಖೆಗೆ ಸರ್ಕಾರ ₹ 3.18 ಲಕ್ಷ ಕೋಟಿ ನೀಡಿತ್ತು.

ಭಾರತೀಯ ಸೇನೆಯು ಪದೇಪದೇ ಎರಡು ಯುದ್ಧಭೂಮಿಗಳ ಅಪಾಯವನ್ನು ಪ್ರಸ್ತಾಪಿಸುತ್ತಿದೆ. ಚೀನಾ ಗಡಿಯಲ್ಲಿ ಯುದ್ಧೋಪಕರಣಗಳ ನಿಯೋಜನೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯನ್ನು ಪ್ರತಿಪಾದಿಸುತ್ತಿದೆ. ಸೇನೆಯ ಹಲವು ದೀರ್ಘಕಾಲೀನ ಯೋಜನೆಗಳ ಉದ್ದೇಶವೂ ಇದನ್ನೇ ಬಿಂಬಿಸುವಂತಿದೆ. ಅನುದಾನ ಕೊರತೆಯಿಂದಾಗಿ ಇಂಥ ಯತ್ನಗಳಿಗೆ ಹಿನ್ನಡೆಯಾಗುವ ಅಪಾಯ ಕಂಡು ಬಂದಿದೆ.

ಬಜೆಟ್ ದಾಖಲೆಗಳ ಪ್ರಕಾರ ಈ ಸಾಲಿನಲ್ಲಿ ಕೇಂದ್ರ ಸರ್ಕಾರವುಸಶಸ್ತ್ರಪಡೆಗಳ ಆಧುನೀಕರಣ, ಯುದ್ಧ ನೌಕೆ, ಯುದ್ಧ ವಿಮಾನಮತ್ತು ಹೊಸ ಯುದ್ಧೋಪಕರಣಗಳ ಖರೀದಿಗಾಗಿ (ಕ್ಯಾಪಿಟಲ್ ಹೆಡ್)₹ 1.18 ಲಕ್ಷ ಕೋಟಿಯನ್ನು ನಿಗದಿಪಡಿಸಿದೆ. ದೈನಂದಿನ ಕಾರ್ಯನಿರ್ವಹಣೆ ಮತ್ತು ವೇತನ ಪಾವತಿಗಾಗಿ (ರೆವೆನ್ಯು ಹೆಡ್) ₹ 2.18 ಲಕ್ಷ ಕೋಟಿಯನ್ನು ಮೀಸಲಿಟ್ಟಿದೆ.

ಇದರ ಜೊತೆಗೆ ರಕ್ಷಣಾ ಇಲಾಖೆಯ ಪಿಂಚಣಿಗೆ ₹ 1.33 ಲಕ್ಷ ಕೋಟಿ ಮೀಸಲಿಡಲಾಗಿದೆ. ಕಳೆದ ವರ್ಷ ಪಿಂಚಣಿಗಾಗಿ ₹ 1.17 ಲಕ್ಷ ಕೋಟಿ ನೀಡಲಾಗಿತ್ತು.

ಕಳೆದ ಬಜೆಟ್‌ಗೆ ಹೋಲಿಸಿದರೆ ದೀರ್ಘಕಾಲದ ಕಾರ್ಯಯೋಜನೆಗೆ (ಕ್ಯಾಪಿಟಲ್) ₹ 10,306.2 ಕೋಟಿ ಮಾತ್ರ ಹೆಚ್ಚಿನ ಅನುದಾನ ಸಿಕ್ಕಿದೆ. ಅನುದಿನದ ಕಾರ್ಯಚಟುವಟಿಕೆಗೆ ನೀಡಿದ ಅನುದಾನದಲ್ಲಿ (ರೆವಿನ್ಯು) ₹ 3,183.84 ಕೋಟಿ ಮಾತ್ರ ಹೆಚ್ಚಳವಾಗಿದೆ.

ನಿರೀಕ್ಷಿತ ಮಟ್ಟದ ಅನುದಾನ ದೊರೆಯದಿರುವುದು ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಗಳ ದೀರ್ಘಕಾಲೀನ ಯೋಜನೆಗಳ ಮೇಲೆ ಪರಿಣಾಮ ಬೀರಲಿದೆ. ಭೂಸೇನೆಯು ಚೀನಾ ಮತ್ತು ಪಾಕಿಸ್ತಾನದ ಗಡಿಯಲ್ಲಿ ನಿಯೋಜಿಸಲೆಂದು ಈಗಾಗಲೇ ಅತ್ಯಾಧುನಿಕ ಶಸ್ತ್ರಾಸ್ತ್ರಗಳಾದ ಎಂ777 ಲಘು ಫಿರಂಗಿಗಳು, ಕೆ–9 ವಜ್ರ ಸ್ವಯಂಚಾಲಿತ ಗನ್ ಮತ್ತು ದೇಶೀ ನಿರ್ಮಿತ ಧನುಷ್ ಫಿರಂಗಿಗಳ ಖರೀದಿ ಪ್ರಕ್ರಿಯೆಆರಂಭಿಸಿದೆ. ಈ ಉಪಕರಣಗಳಿಗೆ ಹಣ ಪಾವತಿ ಒಪ್ಪಂದಗಳೂ ಈಗಾಗಲೇ ನಡೆದಿವೆ.

ಪಿ8ಐ ವಿಮಾನಗಳು ಮತ್ತು ಮೈನ್ ನಿರೋಧಕ ನೌಕೆಗಳನ್ನು ಖರೀದಿಸಬೇಕು ಎಂದುಕೊಂಡಿದ್ದ ನೌಕಾಪಡೆಯು ಸಂಪನ್ಮೂಲ ಕೊರತೆಯಿಂದ ತನ್ನ ಯೋಜನೆಗಳನ್ನು ಮುಂದೂಡಬೇಕಾಗಬಹುದು.

ಬಜೆಟ್ ಕುರಿತು ಪ್ರತಿಕ್ರಿಯಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ‘ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಈ ಬಜೆಟ್ ಹೊಸ ಮತ್ತು ಆತ್ಮವಿಶ್ವಾಸಿಭಾರತಕ್ಕೆಮುನ್ನುಡಿ ಬರೆದಿದೆ. ಇದು ಭರವಸೆದಾಯಕ ಮತ್ತು ಪ್ರಗತಿ ಸೂಚಕ ಬಜೆಟ್. ಭಾರತವನ್ನು ಆರೋಗ್ಯವಂತ ಮತ್ತು ಸಂಪದ್ಭರಿತ ರಾಷ್ಟ್ರವನ್ನಾಗಿ ರೂಪಿಸಲಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT