ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Budget 2021: ಕೊರತೆ ಬಜೆಟ್‌ ಸಾಧ್ಯತೆ, ಇಂದು ಮಧ್ಯಾಹ್ನ ಮಂಡನೆ

ಕೃಷಿ, ಆರೋಗ್ಯ, ಪ್ರವಾಸೋದ್ಯಮ ಕ್ಷೇತ್ರಗಳಿಗೆ ಹೆಚ್ಚು ಒತ್ತು
Last Updated 7 ಮಾರ್ಚ್ 2021, 19:45 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಸಂಕಷ್ಟ ಮತ್ತು ಆರ್ಥಿಕ ಹಿಂಜರಿತದ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೋಮವಾರ ಬಜೆಟ್‌ ಮಂಡಿಸಲಿದ್ದು, ಸಾಲ ಪಡೆಯುವ ಪ್ರಮಾಣ ಹೆಚ್ಚಿಸುವುದರ ಜತೆಗೆ ಕೊರತೆ ಬಜೆಟ್‌ ಮಂಡಿಸುವ ಸಾಧ್ಯತೆ ಇದೆ.

‘ಕೊರತೆ ಬಜೆಟ್‌ ಮಂಡಿಸುವುದಿಲ್ಲ’ ಎಂದು ಯಡಿಯೂರಪ್ಪ ಇತ್ತೀಚೆಗೆ ಹೇಳಿದ್ದರೂ, ‘ಬಜೆಟ್‌ ಗಾತ್ರ ತಗ್ಗಿಸುವ ಮತ್ತು ಕೊರತೆ ಬಜೆಟ್‌ ಮಂಡಿಸುವ ಸಾಧ್ಯತೆ ಹೆಚ್ಚು’ ಎಂಬುದು ಆರ್ಥಿಕ ವಲಯದ ಲೆಕ್ಕಾಚಾರ.

ಇವೆಲ್ಲದರ ನಡುವೆಯೂ ಕೃಷಿ, ಮಹಿಳೆಯರು, ಆರೋಗ್ಯ ಕ್ಷೇತ್ರ, ಪ್ರವಾಸೋದ್ಯಮಕ್ಕೆ ಹೆಚ್ಚಿನ ಅನುದಾನ, ಹೊಸ ಯೋಜನೆಗಳನ್ನು ಪ್ರಕಟಿಸುವ ನಿರೀಕ್ಷೆಗಳಿವೆ ಎಂದೂ ಮೂಲಗಳು ಹೇಳಿವೆ.

ಆರ್ಥಿಕ ಸಮೀಕ್ಷೆ ಕೊರತೆ ಬಜೆಟ್‌ನ ಸುಳಿವು ನೀಡಿದೆ. ರಾಜ್ಯದ ಒಟ್ಟು ವರಮಾನದಲ್ಲಿ ಶೇ 93 ರಷ್ಟು ಬಾಬ್ತು ಸಂಬಳ, ಪಿಂಚಣಿ, ಬಡ್ಡಿ ಪಾವತಿಯ ಬದ್ಧತಾ ವೆಚ್ಚಕ್ಕೇ ವ್ಯಯವಾಗುತ್ತದೆ. ಅಭಿವೃದ್ಧಿಗೆ ಶೇ 7 ರಷ್ಟು ಮಾತ್ರ ಲಭ್ಯವಾಗಲಿದೆ. ಹೀಗಾಗಿ ಜನಪ್ರಿಯ ಯೋಜನೆಗಳಿಗೆ ಹಣ ಹೊಂದಿಸಲು ಹೆಚ್ಚಿನ ಸಾಲ ಮಾಡುವುದು ಅನಿವಾರ್ಯ ಎಂದು ಹಣಕಾಸು ಇಲಾಖೆ ಮೂಲಗಳು ತಿಳಿಸಿವೆ.

ಕೋವಿಡ್‌ ಲಾಕ್‌ಡೌನ್‌ ಬಳಿಕ ರಾಜ್ಯದ ಆರ್ಥಿಕ ವೃದ್ಧಿ ದರ (ಎಸ್‌ಜಿಡಿಪಿ) ಕೇಂದ್ರಕ್ಕೆ ಹೋಲಿಸಿದರೆ ತುಸು ಹೆಚ್ಚಾಗಿದ್ದರೂ, ಆಶಾದಾಯಕವಾಗಿಲ್ಲ. ಹೀಗಾಗಿ ಹೆಚ್ಚು ಸಾಲ ಮಾಡುವುದು ರಾಜ್ಯಕ್ಕೆ ಅನಿವಾರ್ಯ. ಲಾಕ್‌ಡೌನ್‌ ಬಳಿಕ ಆದಾಯ ಸಂಗ್ರಹದ ಪ್ರಮಾಣ ತೀರಾ ಕಡಿಮೆ ಇತ್ತು. ಕೇಂದ್ರಸರ್ಕಾರ ಜಿಎಸ್‌ಟಿ ಪರಿಹಾರ ಕೊಡದೇ ಇದ್ದ ಕಾರಣ, ಅಭಿವೃದ್ಧಿ ಕಾರ್ಯಗಳಿಗಾಗಿ ₹33 ಸಾವಿರ ಕೋಟಿ ಹೆಚ್ಚುವರಿ ಸಾಲಮಾಡಲು ಈಗಾಗಲೇ ನಿರ್ಧರಿಸಿದೆ. ಇದರಿಂದ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲು ಅನುಕೂಲವಾಗುತ್ತದೆ ಎನ್ನುವುದು ಸರ್ಕಾರದ ಲೆಕ್ಕಾಚಾರ.

ರಾಜ್ಯದ ಸಾಲದ ಪ್ರಮಾಣ ಈಗ ₹ 3.68 ಲಕ್ಷ ಕೋಟಿ ಇದೆ. ₹ 33 ಸಾವಿರ ಕೋಟಿ ಸಾಲ ತೆಗೆದುಕೊಂಡರೆ, ಒಟ್ಟು ಸಾಲವು ₹ 4 ಲಕ್ಷ ಕೋಟಿ ಮೀರಲಿದೆ ಎಂದು ಹೇಳಲಾಗಿದೆ.

‘ಆರ್ಥಿಕ ಶಿಸ್ತು ಇಲ್ಲಿಯವರೆಗೆ ಹಳಿ ತಪ್ಪಿರಲಿಲ್ಲ. ಈಗ ₹46 ಸಾವಿರ ಕೋಟಿ ಹಣಕಾಸು ಕೊರತೆ ಇದೆ. ₹33 ಸಾವಿರ ಕೋಟಿ ಸಾಲ ಪಡೆದರೆ, ಕೊರತೆ ಪ್ರಮಾಣ ₹93 ಸಾವಿರ ಕೋಟಿ ದಾಟಬಹುದು. ಬದ್ಧತಾ ವೆಚ್ಚದ ಪ್ರಮಾಣ ಹೆಚ್ಚಾಗಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಅತ್ಯಲ್ಪ ಹಣ ವೆಚ್ಚ ಮಾಡಲಾಗುತ್ತಿದೆ. ಬಡವರಿಗೆ ಮನೆ, ರಸ್ತೆ, ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ಹೇಗೆ’ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT