ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Budget 2021 | ಆರ್ಥಿಕ ಪುನಶ್ಚೇತನ: ಕೈತಪ್ಪಿದ ಅವಕಾಶ

Last Updated 8 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಕೈಗಾರಿಕೆ, ಸೇವಾ ವಲಯ ರಾಜ್ಯದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಸಿವೆ, ಜಿಎಸ್‌ಡಿಪಿ ಬೆಳವಣಿಗೆಗೆ ಕೊಡುಗೆ ನೀಡುತ್ತಿವೆ. ಐ.ಟಿ., ಐ.ಟಿ. ಆಧಾರಿತ ಸೇವಾ ವಲಯ, ಬಿ.ಟಿ., ರಸ್ತೆ ಮೂಲಸೌಕರ್ಯ ಅಭಿವೃದ್ಧಿಯಂತಹ ಕ್ಷೇತ್ರಗಳಲ್ಲಿ ಎಫ್‌ಡಿಐ ಆಕರ್ಷಿಸಲು ಅಗತ್ಯವಿರುವ ಸೌಲಭ್ಯ ರಾಜ್ಯದಲ್ಲಿಲ್ಲ ಎಂಬುದನ್ನು 2020–21ನೆ ಸಾಲಿನ ಆರ್ಥಿಕ ಸಮೀಕ್ಷೆ ಗುರುತಿಸಿದೆ. ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತ ಯೋಜನೆಯು ರಾಜ್ಯ ಬಜೆಟ್‌ನಲ್ಲಿ ಕೂಡ ಕಾಣಿಸಿದೆ. ಆದರೆ, ಮೂಲಸೌಕರ್ಯ ಅಭಿವೃದ್ಧಿ, ಕೈಗಾರಿಕೆ ಮತ್ತು ಲೋಕೋಪಯೋಗಿ ಇಲಾಖೆಗಳ ಕೆಲಸಗಳಿಗೆ ಆದ್ಯತೆ ನೀಡಿ ಉದ್ಯೋಗ ಸೃಷ್ಟಿಗೆ ಒತ್ತು ನೀಡಿರುವುದು ದೊಡ್ಡ ಪ್ರಮಾಣದಲ್ಲಿಲ್ಲ.

ಕರಾವಳಿ ಅಭಿವೃದ್ಧಿ ಮಂಡಳಿ ಮೂಲಕ, ಕರಾವಳಿ ಭಾಗದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಕೆಲವು ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕಾಗಿತ್ತು. ಅಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಇದು ನೆರವಾಗುತ್ತದೆ. ಮಣ್ಣಿನಲ್ಲಿ ಕರಗದ ತ್ಯಾಜ್ಯಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವ ಮೂಲಸೌಕರ್ಯ ಕಲ್ಪಿಸಲು ಒಟ್ಟು ₹ 11 ಕೋಟಿ ತೆಗೆದಿರಿಸಿರುವುದು ಕೂಡ ಪ್ರಶಂಸಾರ್ಹ.

ಹಲವು ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಪ್ರಸ್ತಾವ ಇದೆಯಾದರೂ, ಈ ಯೋಜನೆಗಳು ಪೂರ್ಣಗೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಔಷಧ ಪಾರ್ಕ್‌, ಪ್ಲಾಸ್ಟಿಕ್‌ ಪಾರ್ಕ್‌ ಹಾಗೂ ಜವಳಿ ಪಾರ್ಕ್‌ಅನ್ನು ಕೇಂದ್ರ ಸರ್ಕಾರದ ನೆರವಿನೊಂದಿಗೆ ಆರಂಭಿಸುವುದು ಕೈಗಾರಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಗಳು. ವಿದ್ಯುತ್ ಚಾಲಿತ ವಾಹನಗಳಿಗೆ ಆದ್ಯತೆ ನೀಡಿರುವುದು ಒಳ್ಳೆಯ ನಡೆ. ಬೆಂಗಳೂರು–ಮುಂಬೈ ಹಾಗೂ ಬೆಂಗಳೂರು–ಚೆನ್ನೈ ಕೈಗಾರಿಕಾ ಕಾರಿಡಾರ್‌ಗಳಲ್ಲಿ ಟೌನ್‌ಶಿಪ್‌ ನಿರ್ಮಾಣದ ಪ್ರಸ್ತಾವ ಇದೆ. ಇದು ಕಾರ್ಯರೂಪಕ್ಕೆ ಬಂದರೆ, ಬೆಂಗಳೂರಿನ ಜನಸಂದಣಿ ತಗ್ಗಿಸಲು ಸಾಧ್ಯವಾಗಬಹುದು. ಆದರೆ, ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆ ಸಕಾಲದಲ್ಲಿ ಅನುಷ್ಠಾನಕ್ಕೆ ತರುವುದು ಸವಾಲಿನ ಕೆಲಸ.

ಬಂಡವಾಳ ವೆಚ್ಚ ಈ ಬಜೆಟ್‌ನಲ್ಲಿ ಕಡಿಮೆಯಾಗಿದೆ. ಆರ್ಥಿಕ ಮೂಲಸೌಕರ್ಯವನ್ನು ಉತ್ತಮಪಡಿಸಲು ಗಮನ ನೀಡಿ, ಆರ್ಥಿಕ ಪುನಶ್ಚೇತನಕ್ಕೆ ಮತ್ತಷ್ಟು ವೇಗ ನೀಡಬಹುದಿತ್ತು. ಆದರೆ, ಅದಕ್ಕೆ ಸಂಬಂಧಿಸಿದ ಪ್ರಯತ್ನಗಳು ತೀರಾ ಕಡಿಮೆ.

(ಲೇಖಕ:ಅರ್ಥಶಾಸ್ತ್ರ ಪ್ರಾಧ್ಯಾಪಕ, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆ, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT