ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Budget | ಹೊಳಪು ಕಳೆದುಕೊಂಡ ಅನ್ನದಾತ: ಕೃಷಿ ಬೆಳವಣಿಗೆ ಕಾಣದ ದೂರದೃಷ್ಟಿ

Published 17 ಫೆಬ್ರುವರಿ 2024, 0:30 IST
Last Updated 17 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ಕೃಷಿ ಕ್ಷೇತ್ರ ಈ ಬಜೆಟ್‌ನಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಬೆರಳೆಣಿಕೆಯ ‘ಜನಪ್ರಿಯ’ ಯೋಜನೆಗಳನ್ನು ಹೊರತುಪಡಿಸಿ ಅನುದಾನ ನೀಡಿಕೆ, ಕೃಷಿ ಕ್ಷೇತ್ರದ ಸುಸ್ಥಿರ ಬೆಳವಣಿಗೆಗೆ ಗಮನಹರಿಸಿಲ್ಲ. 

ರಾಜ್ಯ ಬರದಿಂದ ತತ್ತರಿಸುತ್ತಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಇದರ ನಿರ್ವಹಣೆಗೆ ಕೇಂದ್ರ ಹಣ ಬಿಡುಗಡೆ ಮಾಡುತ್ತಿಲ್ಲ, ತಾರತಮ್ಯ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿತ್ಯವೂ ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಆದರೆ, ಮುಂಗಾರು ವೈಫಲ್ಯದಿಂದಾಗಿ ಕೃಷಿ ಕ್ಷೇತ್ರದಲ್ಲಿ ಶೇ 1.8 ರಷ್ಟು(ಸ್ಥಿರ ಬೆಲೆಗಳಲ್ಲಿ) ನಕಾರಾತ್ಮಕ ಬೆಳವಣಿಗೆ ಆಗಿದೆ. ಆದರೆ, ಈ ಸಂಕಷ್ಟದಿಂದ ಪಾರು ಮಾಡಿ ಕೃಷಿ ಕ್ಷೇತ್ರಕ್ಕೆ ಚೈತನ್ಯ ನೀಡುವುದಕ್ಕೆ ತುರ್ತು ಯೋಜನೆಗಳನ್ನು ರೂಪಿಸಬಹುದಿತ್ತು. ‘ಎಲ್‌ನಿನೋ’ ಪರಿಣಾಮ ಇನ್ನೂ ಕೆಲ ವರ್ಷಗಳು ಮುಂದುವರಿಯುವ ಸಾಧ್ಯತೆ ಇರುವುದರಿಂದ ಕೃಷಿ ಕ್ಷೇತ್ರ ಇನ್ನಷ್ಟು ಮಂಕಾಗುವ ಸಾಧ್ಯತೆ ಇದ್ದು, ಕೃಷಿ ಕ್ಷೇತ್ರಕ್ಕೆ ಕಾಯಕಲ್ಪದ ಅಗತ್ಯವಿತ್ತು. ಈ ನಿಟ್ಟಿನಲ್ಲಿ ಬಜೆಟ್‌ ಭರವಸೆ ಮೂಡಿಸಿಲ್ಲ.

ಹೊಸದಾಗಿ ಪ್ರಕಟಿಸಿರುವ ‘ಕರ್ನಾಟಕ ರೈತರ ಸಮೃದ್ಧಿ ಯೋಜನೆ’ ಈಗಾಗಲೇ ಜಾರಿಯಲ್ಲಿರುವ ಕೇಂದ್ರ ಮತ್ತು ರಾಜ್ಯದ ಹಲವು ಕಾರ್ಯಕ್ರಮಗಳ ‘ಚೌಚೌ ಬಾತ್‌’ನಂತಿದೆ. ಈ ಯೋಜನೆಯ ಕುರಿತು ಸ್ಪಷ್ಟತೆಯೂ ಇಲ್ಲ. ಉದಾಹರಣೆಗೆ ಮಣ್ಣಿನ ಗುಣ, ಮಾರುಕಟ್ಟೆ ಬೇಡಿಕೆ ಆಧರಿಸಿ ಬೆಳೆ ಬೆಳೆಯುವುದು, ಮಣ್ಣು ಪರೀಕ್ಷೆ ಮತ್ತು ಗುಣಮಟ್ಟದ ಮಾಹಿತಿ ನೀಡುವ ವಿಚಾರ ಕೇಂದ್ರ ಸರ್ಕಾರದ ‘ಸಾಯಿಲ್‌ ಹೆಲ್ತ್‌ ಕಾರ್ಡ್’ ಯೋಜನೆಯಲ್ಲೇ ಇದೆ. ಇನ್ನು ಕೃಷಿ, ಪಶುಸಂಗೋಪನೆ, ತೋಟಗಾರಿಕೆ, ಹೈನುಗಾರಿಕೆ ಒಳಗೊಂಡ ಸಮಗ್ರ ಕೃಷಿ ಮೂಲಕ ಆದಾಯದಲ್ಲಿ ಸುಸ್ಥಿರತೆ ಕಂಡುಕೊಳ್ಳುವ ಅಂಶದಲ್ಲಿ ಹೊಸತೇನಿದೆ ಎಂಬ ಪ್ರಶ್ನೆ ಮೂಡುವುದು ಸಹಜ. ರಾಜ್ಯದಲ್ಲಿ ಈ ಹಿಂದೆಯೇ ಸಾಕಷ್ಟು ರೈತರು ಈ ರೀತಿಯ ಕೃಷಿ ವಿಧಾನ ಅಳವಡಿಸಿಕೊಂಡಿದ್ದಾರೆ.

ಖಾಸಗಿ ಕಂಪನಿಗಳ ಹಿಡಿತ ತಪ್ಪಿಸಲು ಎಪಿಎಂಸಿ ಕಾಯ್ದೆಯನ್ನು ರದ್ದು ಮಾಡಿರುವ ಸಿದ್ದರಾಮಯ್ಯ ಸರ್ಕಾರ, ಮತ್ತೊಂದು ಕಡೆ ಖಾಸಗಿಯವರಿಗೆ ಹಿಂಬಾಗಿಲಿನಿಂದ ಮಣೆ ಹಾಕಿದೆ. ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ಮೂಲಸೌಕರ್ಯಗಳ ನಿರ್ಮಾಣ ಮಾಡುವ ಉದ್ದೇಶದಿಂದ ಪ್ರಕಟಿಸಿರುವ ಹಲವು ಯೋಜನೆಗಳಲ್ಲಿ ಖಾಸಗಿಯವರಿಗೆ ಮಣೆ ಹಾಕಿರುವುದು ವಿರೋಧಾಬಾಸವೇ ಸರಿ. ‘ಪಿಪಿಪಿ ಮಾದರಿ’ಯಲ್ಲಿ ಪ್ರತಿ ಬಜೆಟ್‌ನಲ್ಲೂ ಶೀತಲಗೃಹಗಳನ್ನು ಪ್ರಕಟಿಸುವುದು ವಾಡಿಕೆ. ರಾಜ್ಯದಲ್ಲಿ ಈವರೆಗೆ ಎಷ್ಟು ಶೀತಲಗೃಹಗಳು ನಿರ್ಮಾಣ ಆಗಿವೆ ಎಂಬ ನಿಖರ ಲೆಕ್ಕವೂ ಸರ್ಕಾರದ ಬಳಿ ಇಲ್ಲ. ಬರೇ ಘೋಷಣೆಗಳಿಂದ ರೈತರಿಗೆ ಆಗುವ ಪ್ರಯೋಜನಗಳೇನು?

ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಸಹಕಾರ, ಪಶುಸಂಗೋಪನೆ ಇಲಾಖೆಗಳ ನಡುವಿನ ಸಮನ್ವಯತೆಗಾಗಿ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ‘ಕೃಷಿ ಅಭಿವೃದ್ಧಿ ಪ್ರಾಧಿಕಾರ’ ರಚನೆಯ ಪ್ರಸ್ತಾಪ ಮಾಡಲಾಗಿದೆ. ಕೃಷಿಗೆ ಸಂಬಂಧಿಸಿದ ಇತರ ಇಲಾಖೆಗಳ ಮಂತ್ರಿಗಳು, ಅಧಿಕಾರಿಗಳನ್ನು ಕರೆದು ಒಂದೆರಡು ಸಭೆಗಳಲ್ಲಿ ಸಮನ್ವಯ ಮಾಡಿ ಮುಗಿಸಬಹುದಾದ ಕೆಲಸಕ್ಕೆ ಹೊಸ ಪ್ರಾಧಿಕಾರದ ಅಗತ್ಯವೇನಿದೆ? ಅನಗತ್ಯ ವೆಚ್ಚಕ್ಕೆ ದಾರಿ ಮಾಡುವ ಸಾಧ್ಯತೆ ಇದೆ.

ಕೃಷಿ ಮತ್ತು ತೋಟಗಾರಿಕೆಗೆ 2023–24 ರಲ್ಲಿ ₹5,860 ಕೋಟಿ ನಿಗದಿ ಮಾಡಲಾಗಿತ್ತು. ಈ ವರ್ಷ ₹6,688 ಕೋಟಿ ನಿಗದಿ ಮಾಡಲಾಗಿದೆ. ಕಳೆದ ಬಾರಿಗಿಂತ ₹828 ಕೋಟಿ ಮಾತ್ರ ಹೆಚ್ಚು ನೀಡಲಾಗಿದೆ. ಇಲಾಖೆಗಳ ವೇತನ, ಭತ್ಯೆ, ಪಿಂಚಣಿ ಮೊತ್ತ ಕಳೆದು ಕೃಷಿ ಅಭಿವೃದ್ಧಿಗೆ ಎಷ್ಟು ಉಳಿಯುತ್ತದೆ ಎಂಬುದು ಯಕ್ಷ ಪ್ರಶ್ನೆ?

ಏತ ನೀರಾವರಿ, ಕುಡಿಯುವ ನೀರಿಗೆ ಆದ್ಯತೆ

ನೀರಾವರಿಯಲ್ಲಿ ‘ಪ್ರತಿಷ್ಠಿತ’ ಬೃಹತ್‌ ಯೋಜನೆಗಳಿಗೆ ಅನುದಾನ ಪ್ರಸ್ತಾಪಿಸಿಲ್ಲ.  ಆದರೆ, ಏತ ನೀರಾವರಿ, ಕೆರೆ ತುಂಬಿಸುವ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದರಿಂದ ನೀರಾವರಿ ವ್ಯಾಪ್ತಿ ಹಿಗ್ಗಲಿದೆ. ಇದಕ್ಕಾಗಿ ಸುಮಾರು ₹15,389 ಕೋಟಿ ಅನುದಾನ ನೀಡಲಾಗಿದೆ.

ಇಲಾಖೆಗೆ ಕಳೆದ ವರ್ಷಕ್ಕಿಂತ ₹135 ಕೋಟಿಯಷ್ಟು ಹೆಚ್ಚು ಅನುದಾನ ನೀಡಲಾಗಿದೆ. ಕಳೆದ ವರ್ಷ ₹19,044 ಕೋಟಿ ನೀಡಲಾಗಿತ್ತು. ಈ ಬಾರಿ ₹19,197 ಕೋಟಿ ಒದಗಿಸಲಾಗಿದೆ.

*ಕರ್ನಾಟಕ ನೀರಾವರಿ ನಿಗಮದ ವ್ಯಾಪ್ತಿಯ ವಿವಿಧ ಜಿಲ್ಲೆಗಳ ಏತ ನೀರಾವರಿಗೆ ₹7,280 ಕೋಟಿ ಒದಗಿಸಲಾಗಿದ್ದು, 97,698 ಹೆಕ್ಟೇರ್‌ಗೆ ನೀರುಣಿಸಲಾಗುವುದು.

* ಕೆಬಿಜೆಎನ್ಎಲ್‌ ಅಡಿ ₹3,779 ಕೋಟಿ ವೆಚ್ಚದಲ್ಲಿ ವಿವಿಧ ಜಿಲ್ಲೆಗಳಲ್ಲಿ 1,09,350 ಹೆಕ್ಟೇರ್‌ ಪ್ರದೇಶಕ್ಕೆ ನೀರು ಒದಗಿಸಲಾಗುವುದು.

*ಕೊಪ್ಪಳ ಜಿಲ್ಲೆ ಯಲಬುರ್ಗಾ– ಕುಕನೂರು ತಾಲ್ಲೂಕಿನಲ್ಲಿ 38 ಕೆರೆಗಳನ್ನು ತುಂಬಿಸಲು ₹970 ಕೋಟಿ, ರಾಯಚೂರು ಜಿಲ್ಲೆ ಮಸ್ಕಿ ತಾಲ್ಲೂಕಿನ ಪಾಮನಕಲ್ಲೂರು ಮತ್ತು ಇತರ ಕಡೆ, ನಾರಾಯಣಪುರ ಬಲದಂಡೆ ಕಾಲುವೆಯಿಂದ ₹990 ಕೋಟಿ ವೆಚ್ಚದಲ್ಲಿ ನೀರಾವರಿ ಸೌಲಭ್ಯ.

*ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ ₹2000 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಮತ್ತು ಇತರ ಕಾಮಗಾರಿಗಳು. 

*ಕಲಬುರಗಿ ನಗರಕ್ಕೆ ಕುಡಿಯುವ ನೀರು ಸರಬರಾಜಿಗೆ ಬೆಣ್ಣೆತೊರಾ ಜಲಾಶಯಕ್ಕೆ ಭೀಮಾ ಮತ್ತು ಕಾಗಿಣಾ ನದಿಗಳಿಂದ ನೀರು ತುಂಬಿಸುವ ಯೋಜನೆಗೆ ₹365 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT