ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Karnataka Budget 2024 | ಪ್ರತಿಕ್ರಿಯೆಗಳು

Published 17 ಫೆಬ್ರುವರಿ 2024, 0:30 IST
Last Updated 17 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ಸಾಲ ಭಾಗ್ಯ ಕರುಣಿಸಿದ ಮುಖ್ಯಮಂತ್ರಿ

ತಮ್ಮ ಮೊದಲ ಅವಧಿಯಲ್ಲಿ  ಸಾಲ ಮಾಡಿ ಪ್ರತಿ ಪ್ರಜೆಯ ತಲೆಯ ಮೇಲೆ ₹44 ಸಾವಿರಕ್ಕೂ ಅಧಿಕ ಸಾಲದ ಹೊರೆ ಹೊರಿಸಿ, ರಾಜ್ಯದ ಜನತೆಯ ಮೇಲೆ ‘ಸಾಲ ಭಾಗ್ಯ’ ಕರುಣಿಸಿದ್ದರು. ಇವರ ಅವಧಿಯಲ್ಲಿ ಹಳಿ ತಪ್ಪಿದ್ದ ಆರ್ಥಿಕತೆಯನ್ನು ನಮ್ಮ ಸರ್ಕಾರ ಬಂದ ಮೇಲೆ ಸರಿ ಮಾಡಿತ್ತು. ಈಗ ಮತ್ತೆ ₹1 ಲಕ್ಷ ಕೋಟಿಗೂ ಅಧಿಕ ಸಾಲ ಮಾಡಿದ್ದಾರೆ. ಕರ್ನಾಟಕವನ್ನು ಸಾಲದ ಸುಳಿಗೆ ಸಿಲುಕಿಸಲು ಸಿದ್ದರಾಮಯ್ಯ ಹೊರಟಿದ್ದಾರೆ. ‘ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು’ ಎಂಬುದು, ಈ ಸರ್ಕಾರದಲ್ಲಿ ‘ಸರ್ವರಿಗೂ ತೆರಿಗೆ ಸರ್ವರಿಗೂ ಸಾಲದ ಹೊರೆ’ ಎಂಬಂತಾಗಿದೆ. 2021 ರಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರ ಬಜೆಟ್‌ ಭಾಷಣವನ್ನು ಬಹಿಷ್ಕರಿಸಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ಸದಸ್ಯರು ಹೊರನಡೆದಿದ್ದು ಅವರಿಗೆ ನೆನಪಿಲ್ಲವೆ

-ಆರ್‌.ಅಶೋಕ, ವಿರೋಧಪಕ್ಷದ ನಾಯಕ, ವಿಧಾನಸಭೆ

****

ಬಜೆಟ್‌ ಪಾವಿತ್ರ್ಯ ಹಾಳು ಮಾಡಿದ್ದಾರೆ

15 ಬಾರಿ ಬಜೆಟ್‌ ಮಂಡಿಸಿ ₹1.5 ಲಕ್ಷ ಕೋಟಿ ಸಾಲ ಮಾಡಿ ದಾಖಲೆ ಸೃಷ್ಟಿಸಿರುವ ಸಿದ್ದರಾಮಯ್ಯ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಸುಳ್ಳಿನ ಕಂತೆಯ ರಾಜಕೀಯ ಬಜೆಟ್‌ ಮಂಡಿಸಿದ್ದಾರೆ. ಕೇಂದ್ರ ಸರ್ಕಾರವನ್ನು ವಿರೋಧಿಸಲು ಬಜೆಟ್‌ ಬಳಸಿಕೊಂಡಿದ್ದಾರೆ. ಈ ಮೂಲಕ ಬಜೆಟ್‌ನ ಪಾವಿತ್ರ್ಯ
ವನ್ನೇ ಸಿದ್ದರಾಮಯ್ಯ ಹಾಳು ಮಾಡಿದ್ದಾರೆ. ಕೇಂದ್ರದ ಅನುದಾನ ಪಡೆಯಲು ಅನೇಕ ವೇದಿಕೆಗಳಿವೆ. ಜಿಎಸ್‌ಟಿ ಕೌನ್ಸಿಲ್‌ ಇದೆ. ನೀತಿ ಆಯೋಗ ಇದೆ. ಒಂದು ಬಾರಿಯೂ ನೀತಿ ಆಯೋಗದ ಸಭೆಗೆ ಹಾಜರಾಗದೇ ಆ ಸಂದರ್ಭದಲ್ಲಿ ಮಾತನಾಡದೇ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ವಿರೋಧಿಸುತ್ತಿರುವುದು ಅಪ್ಪಟ ರಾಜಕೀಯ. 

-ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ

****

ನಮ್ಮ ಬಜೆಟ್‌ನ ಅಂಕಿ-ಅಂಶಗಳನ್ನು ನೋಡಿ ವಿರೋಧ ಪಕ್ಷಗಳ ನಾಯಕರಿಗೆ ಸಂಕಟದಿಂದ ಕೂರಲು ಆಗಲಿಲ್ಲ. ಗ್ಯಾರಂಟಿಗಳಿಗೆ ಹಣ ಕೊಟ್ಟು ಇಷ್ಟು ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರಲ್ಲ ಎಂದು ಅಸೂಯೆಯಿಂದ ಬಜೆಟ್ ಧಿಕ್ಕರಿಸಿ ಎದ್ದು ಹೋದರು.

-ಡಿ.ಕೆ. ಶಿವಕುಮಾರ್‌, ಉಪಮುಖ್ಯಮಂತ್ರಿ

****

ಕ್ರಿಯಾಶೀಲತೆ, ದೂರದೃಷ್ಟಿ, ಪ್ರಗತಿಯ ಮುನ್ನೋಟ ಇಲ್ಲದ ಬಜೆಟ್‌. ಯುವ ಜನರಿಗೆ, ಉತ್ತರ ಕರ್ನಾಟಕಕ್ಕೆ ಒಂದೇ ಒಂದು ಕಾರ್ಯಕ್ರಮ, ಯೋಜನೆ ಪ್ರಕಟಿಸಿಲ್ಲ. ವೈಫಲ್ಯ ಮುಚ್ಚಿಕೊಳ್ಳಲು ಸಮಯ ವ್ಯರ್ಥ ಮಾಡಿದ್ದಾರೆ.

-ಬಿ.ವೈ.ವಿಜಯೇಂದ್ರ, ಅಧ್ಯಕ್ಷ, ರಾಜ್ಯ ಬಿಜೆಪಿ ಘಟಕ

****

ಸರ್ಕಾರದಿಂದ ಯಾವುದಾದರೂ ಯೋಜನೆ ಜಾರಿ ಮಾಡುವ ಮುನ್ನ ಸಮಗ್ರ ಯೋಜನಾ ವರದಿ(ಡಿಪಿಆರ್‌) ತಯಾರಿಸುತ್ತಾರೆ. ಡಿಪಿಆರ್‌ ಆದ ಮೇಲೆ ಏನೆಲ್ಲಾ ಆಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಈ ಬಜೆಟ್ ಕೂಡ ಹಾಗೆಯೇ ಇದೆ‌

-ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ

****

ಮನಸ್ಸಿದ್ದರೆ, ಜೀವಪರ ಕಾಳಜಿ ಇದ್ದರೆ ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲಬಹುದು ಎಂಬುದಕ್ಕೆ ಈ ಬಜೆಟ್ ಉತ್ತಮ ಉದಾಹರಣೆ. ರಾಜ್ಯ ದಿವಾಳಿಯಾಗುತ್ತದೆ ಎಂಬ ಆರೋಪಕ್ಕೆ ತಕ್ಕ ಉತ್ತರ ಬಜೆಟ್‌ನಲ್ಲಿದೆ

-ಬಿ.ಎನ್.ಚಂದ್ರಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ

****

ಘನತ್ಯಾಜ್ಯ ನಿರ್ವಹಣಾ ಘಟಕವನ್ನು ಬೆಂಗಳೂರು ನಗರದ ಹೊರಗೆ ಮಾಡುವುದು, ಯಶವಂತಪುರ ಜನರ ಸಮಸ್ಯೆಗೆ ಪರಿಹಾರ, ನೂರತ್ತಲ್ಲಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಸೇರಿ ಅನೇಕ ಉತ್ತಮ ಘೋಷಣೆಗಳಿರುವ ಬಜೆಟ್‌.

-ಎಸ್‌.ಟಿ. ಸೋಮಶೇಖರ್‌, ಬಿಜೆಪಿ ಶಾಸಕ, ಯಶವಂತಪುರ

****

ಸಿದ್ದರಾಮಯ್ಯ ಅವರ ಬಜೆಟ್‌ ಮೇಲೆ ಜನತೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದರು. ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ವಿಫಲವಾಗಿದ್ದಾರೆ. ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡಿದ್ದ ಕಾಂಗ್ರೆಸ್ ಈಗ ಸುಮ್ಮನಿದೆ.

-‘ಮುಖ್ಯಮಂತ್ರಿ’ ಚಂದ್ರು, ರಾಜ್ಯಾಧ್ಯಕ್ಷ, ಆಮ್ ಆದ್ಮಿ ಪಾರ್ಟಿ

****

ಅಭಿವೃದ್ಧಿ ಮತ್ತು ಜನರ ಮನಸ್ಸಿನಲ್ಲಿ ಉಳಿಯುವ ಬಜೆಟ್‌ ಅಲ್ಲ. ರಾಜ್ಯದ ಅಭಿವೃದ್ಧಿ, ಆಡಳಿತ ಸುಧಾರಣೆಗೆ ಹಾಗೂ ಭ್ರಷ್ಟಾಚಾರ ನಿಗ್ರಹಕ್ಕೆ ಯಾವುದೇ ಯೋಜನೆ ಅಥವಾ ಕ್ರಮಗಳಿಲ್ಲ.

-ದೀಪಕ್ ಸಿ.ಎನ್., ರಾಜ್ಯ ಪ್ರಧಾನ ಕಾರ್ಯದರ್ಶಿ, ಕೆಆರ್‌ಎಸ್ ಪಕ್ಷ

****

ಬಜೆಟ್‌ನಲ್ಲಿ ಆರ್ಥಿಕ ಶಿಸ್ತಿಲ್ಲ, ಮುಂದಾಲೋಚನೆ ಇಲ್ಲ. ರಾಜ್ಯದ ಬಗ್ಗೆ ಕಾಳಜಿ ಇಲ್ಲ. ಸಾಲ ಮಾಡಿಯಾದರೂ ತುಪ್ಪ ತಿನ್ನು ಎಂಬ ರೀತಿಯ ಬೋಗಸ್‌ ಬಜೆಟ್‌ ಇದಾಗಿದೆ.  

-ಎನ್.ರವಿಕುಮಾರ್, ಸಚೇತಕ, ಬಿಜೆಪಿ 

****

ಸರ್ವತೋಮುಖ ಅಭಿವೃದ್ಧಿಗೆ ಪೂರಕ

ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ‌ ಅನುದಾನ ಮೀಸಲಿಡುವ ಮೂಲಕ ಸರ್ಕಾರಿ ಶಾಲೆ, ಕಾಲೇಜು ಉಳಿವಿಗೆ ಮುಂದಾಗಿರುವುದು ಮಾದರಿ ಕಾರ್ಯ. ಗ್ರಾಮೀಣ ಕೆಫೆ ಪ್ರಾರಂಭದ ಚಿಂತನೆ ಸರ್ವತೋಮುಖ ಅಭಿವೃದ್ಧಿಗೆ ಪೂರಕ.

-ಟಿ.ದಿಲೀಪ್ ಕುಮಾರ್, ಚಿತ್ರದುರ್ಗ

 ****
ಶಿಕ್ಷಣ, ನಗರಾಭಿವೃದ್ಧಿ, ಕೃಷಿಗೆ ಒತ್ತು ನೀಡಲಾಗಿದೆ. ಕ್ರೀಡೆಗೆ ಇನ್ನಷ್ಟು ಬೆಂಬಲ ಬೇಕಿತ್ತು. ಹಣಕಾಸು ಹೊಂದಾಣಿಕೆಗೆ ಕ್ರಮಬದ್ಧ ಯೋಜನೆಗಳನ್ನು ಮಾಡಿ ಬಜೆಟ್‌ನ ಘೋಷಣೆಗಳನ್ನು ಸರಿಯಾದ ರೀತಿಯಲ್ಲಿ ಜಾರಿ ಮಾಡಬೇಕು.

-ಎಚ್.ವಿ.ಯಶಸ್ವಿನಿ, ಶಿವಮೊಗ್ಗ 

****

ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಉದ್ಯಮಿಗಳು ಸಣ್ಣ ಕೈಗಾರಿಕೆಗಳನ್ನು ಆರಂಭಿಸಲು ಹಾಗೂ ಅಸ್ತಿತ್ವದಲ್ಲಿರುವ ಕೈಗಾರಿಕೆಗಳ ಉನ್ನತೀಕರಣಕ್ಕೆ ಶೇ 6ರ ಬಡ್ಡಿ ದರದಲ್ಲಿ ₹10ಕೋಟಿವರೆಗೆ ಸಾಲ ನೀಡಿಕೆ ನಿರ್ಧಾರ ಸ್ವಾಗತಾರ್ಹ.

–ಮಕ್ಮೂರ್ ಅಹಮದ್ ಖಾನ್‌, ಸಾರ್ವಜನಿಕ ಉಡುಪಿ

****

ಸಾಮಾನ್ಯ ವರ್ಗದವರಿಗೆ ಬಜೆಟ್‌ನಲ್ಲಿ ಯಾವುದೇ ಕೊಡುಗೆ ಸಿಕ್ಕಿಲ್ಲ. ಚಿಕ್ಕಮಗಳೂರಿಗೆ ಸ್ಪೈಸ್ ಪಾರ್ಕ್ ಬರಲಿದೆ ಎಂಬುದನ್ನು ಹಲವು ವರ್ಷಗಳಿಂದ ಕೇಳುತ್ತಿದ್ದೇವೆ. ಈ ಬಾರಿಯೂ ಪ್ರಸ್ತಾಪಿಸಲಾಗಿದ್ದು, ಅದು ಜಾರಿಯಾಗಲಿ.

–ಸುಮಾ ಪ್ರಸಾದ್, ಚಿಕ್ಕಮಗಳೂರು

****

ರೈತರಿಗೆ ಅನುಕೂಲ

ಈ ಬಾರಿಯ ಬಜೆಟ್‌ನಲ್ಲಿ ರೈತರ ಬಗ್ಗೆ ಕಾಳಜಿ ವಹಿಸಿ ₹27 ಸಾವಿರ ಕೋಟಿ ಬೆಳೆ ಸಾಲ ವಿತರಣೆ ಗುರಿ ಹೊಂದಿರುವುದು ಸ್ವಾಗತಾರ್ಹ. ಬೆಂಬಲ ಬೆಲೆ ಶೇ 50ರಷ್ಟು ಲಾಭಾಂಶ ಆಧಾರದಡಿ ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದು ಒಳ್ಳೆಯ ಬೆಳವಣಿಗೆ.

– ರಮೇಶ, ಯಾದಗಿರಿ ನಿವಾಸಿ

***

 ಕೌಶಲ ಅಭಿವೃದ್ಧಿಗೆ ಒತ್ತು ಕೊಡಬೇಕಿತ್ತು

ಅಂಜನಾದ್ರಿ ಅಭಿವೃದ್ಧಿಗೆ ₹100 ಕೋಟಿ ಘೋಷಿಸಿದ್ದು ಖುಷಿ ನೀಡಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಿರುವ ಕಾರಣ ಯುವಜನತೆಯಲ್ಲಿ ಕೌಶಲ ಅಭಿವೃದ್ಧಿಗೆ ಸಾಕಷ್ಟು ಒತ್ತುಕೊಡಬೇಕಿತ್ತು. ಉದ್ಯೋಗ ಸೃಜನೆ ಆದ್ಯತೆಯಾಗಬೇಕಾಗಿತ್ತು.

– ಪ್ರತಿಮಾ ಪಟ್ಟಣಶೆಟ್ಟಿ, ಗೃಹಿಣಿ, ಕೊಪ್ಪಳ

***

ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ಯಾರಂಟಿಗಳನ್ನೇ ಕೇಂದ್ರೀಕರಿಸಿಕೊಂಡು ಬಜೆಟ್‌ ಮಂಡಿಸಿದ್ದಾರೆ. ಸಾಧಾರಣ ಬಜೆಟ್‌ ಎನಿಸಿದರೂ ಗ್ಯಾರಂಟಿಗಳಿಂದ ಹೆಣ್ಣು ಮಕ್ಕಳಿಗೆ, ಬಡವರಿಗೆ ತುಂಬಾ ಅನುಕೂಲವಾಗಿದೆ. ಇದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಈ ಯೋಜನೆಗಳಿಗೆ ಬಿಜೆಪಿ ಹಾಗೂ ಜೆಡಿಎಸ್‌ ವಿರೋಧ ಮಾಡುವುದು ಸರಿ ಅಲ್ಲ

–ವಿ.ಗೀತಾ, ಜನವಾದಿ ಮಹಿಳಾ ಸಂಘಟನೆ, ಕೋಲಾರ

***

ಬಡ, ಮಧ್ಯಮ ಕೂಲಿ ಕಾರ್ಮಿಕರ ಬದುಕನ್ನು ಉತ್ತಮಗೊಳಿಸುವ ಆಶಾದಾಯಕ ಬಜೆಟ್‌ ಇದಾಗಿದೆ. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಎಲ್ಲ ದೃಷ್ಟಿಕೋನದಿಂದ ನೋಡುವುದಾದರೆ ಅಭಿವೃದ್ಧಿಯ ಮುನ್ನೋಟದ ಸರ್ವಸ್ಪರ್ಶಿ ಬಜೆಟ್ ಇದಾಗಿದೆ.

‌-ಜಿ.ವಿ.ಗಂಗಪ್ಪ, ಗುಡಿಬಂಡೆ

***

ನೀರಿನ ವಿಚಾರದಲ್ಲಿ ಮೋಸ

ನೀರಾವರಿ ವಿಚಾರದಲ್ಲಿ ಬಯಲುಸೀಮೆಗೆ ಬಜೆಟ್‌ ಮೋಸದ ಪರಾಕಾಷ್ಠೆ ಎನಿಸಿದೆ. ಕೆ.ಸಿ ವ್ಯಾಲಿ ಮತ್ತು ಎಚ್.ಎನ್.ವ್ಯಾಲಿ ಯೋಜನೆಗಳ ಮೂರನೇ ಹಂತದ ಶುದ್ಧೀಕರಣಕ್ಕೆ ತಿಲಾಂಜಲಿ ಇಡಲಾಗಿದೆ. ಯಾವುದೇ ಲಾಭವಿಲ್ಲದ ಎತ್ತಿನಹೊಳೆ ಯೋಜನೆಯ ಜಪ ಮುಂದುವರಿದಿದೆ. ಕೆರೆ, ಕುಂಟೆ, ಕಾಲುವೆಗಳ ಸಮಗ್ರ ಅಭಿವೃದ್ಧಿಗೆ ಒತ್ತು ಕೊಟ್ಟಿಲ್ಲ.

-ಆಂಜನೇಯ ರೆಡ್ಡಿ, ಅಧ್ಯಕ್ಷರು, ಶಾಶ್ವತ ನೀರಾವರಿ ಹೋರಾಟ ಸಮಿತಿ, ಚಿಕ್ಕಬಳ್ಳಾಪುರ

***

ಎಲ್ಲಾ ಕ್ಷೇತ್ರ ಹಾಗೂ ಸಮುದಾಯಗಳ ಜನರನ್ನು ಸಮಾನತೆ ಮತ್ತು ಸಮೃದ್ಧಿಯತ್ತ ಕರೆದೊಯ್ಯುವ ಬಜೆಟ್ ಇದಾಗಿದೆ. ಸ್ವರಾಜ್ಯದ ಸುಸ್ಥಿರ ಹಾಗೂ ಸ್ವಾಭಿಮಾನ ಉತ್ತೇಜನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದ್ಯತೆ ನೀಡಿದ್ದಾರೆ.

– ಜಿ. ಶಿವಣ್ಣ, ಅರ್ಥಶಾಸ್ತ್ರ ಪ್ರಾಧ್ಯಾಪಕ, ರಾಮನಗರ 

***

ರಾಜ್ಯ ಬಜೆಟ್ ಜನಪರವಾಗಿದ್ದರೂ ಅಭಿವೃದ್ಧಿಯ ದೂರದೃಷ್ಟಿ ಇಲ್ಲ. ಸರ್ಕಾರ ಗ್ಯಾರಂಟಿ ಕಾರ್ಯಕ್ರಮಗಳಿಗೆ ಕೊಟ್ಟಿರುವ ಆದ್ಯತೆಯನ್ನು  ರಾಜ್ಯದ ಅಭಿವೃದ್ಧಿ ಹಾಗೂ ತ್ವರಿತ ಆರ್ಥಿಕ ಬೆಳವಣಿಗೆ ಕಡೆಗೂ ಕೊಡಬೇಕು.

– ಪ್ರಶಾಂತ್, ಅಧ್ಯಕ್ಷ, ರಾಮನಗರ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ

***

ಸಾಮಾಜಿಕ ನ್ಯಾಯ, ಸಮನ್ವಯ ದೃಷ್ಟಿಗೆ ಬಜೆಟ್ ಪೂರಕವಾಗಿದೆ. ಮಕ್ಕಳ ಶಿಕ್ಷಣ, ವಸತಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಘೋಷಿಸಿದ ಕಾರ್ಯಕ್ರಮಗಳು ಸಕಾಲದಲ್ಲಿ ಅನುಷ್ಠಾನ ಆಗಬೇಕು.

– ಅನಿತಾ ಪರ್ವತಿಕರ, ಶಿರಸಿ, ಉತ್ತರ ಕನ್ನಡ ಜಿಲ್ಲೆ

******

ಸಾಮಾನ್ಯ ಜನರಿಗೆ ಅನುಕೂಲವಾಗುವ ಯಾವ ಯೋಜನೆಗಳನ್ನೂ ಪ್ರಕಟಿಸಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸಾರಿಗೆ, ವಾಣಿಜ್ಯ, ಆಸ್ತಿ ತೆರಿಗೆ ಹೆಚ್ಚು ಮಾಡಿ, ಬೆಲೆ ಏರಿಕೆ ಬಿಸಿ ಮುಟ್ಟಿಸಿದ್ದಾರೆ.

–ವಿಶ್ವನಾಥ ಖಾನಾಪುರ, ಗದಗ

***

ರಾಜ್ಯದಲ್ಲಿ ಈಗಾಗಲೇ ಮಹಿಳೆಯರಿಗೆ ಉಚಿತ ಸಾರಿಗೆ ಕಲ್ಪಿಸಲಾಗಿದ್ದು, ಬಹಳಷ್ಟು ಮಹಿಳೆಯರಿಗೆ ಅನುಕೂಲವಾಗಿದೆ. ಬಿಎಂಟಿಸಿ ಬಸ್‌ಗಳಲ್ಲಿ ಮಹಿಳೆಯರ ಸುರಕ್ಷತೆಗೆ ವೆಹಿಕಲ್‌ ಟ್ರ್ಯಾಕಿಂಗ್‌ ಮೊಬೈಲ್‌ ಆ್ಯಪ್‌ ಜಾರಿಗೊಳಿಸುತ್ತಿರುವುದು ಉತ್ತಮ

-ಸೌಮ್ಯ, ಮಲ್ಲೇಶ್ವರ

******

ಬಜೆಟ್‌ನಲ್ಲಿ ಘೋಷಿಸಿದ ಎಲ್ಲಾ ಅಭಿವೃದ್ಧಿ ಯೋಜನೆಗಳು ಗ್ಯಾರಂಟಿಯಾಗಿ ರಾಜ್ಯದ ಜನರನ್ನ ತಲುಪಿಸಬೇಕು. ಬೆಂಗಳೂರು ನಗರದ ಸಂಚಾರ ದಟ್ಟಣೆ ನಿವಾರಿಸಲು ಸುರಂಗ ಮಾರ್ಗವನ್ನು ಪ್ರಾಯೋಗಿಕವಾಕ ಹೆಬ್ಬಾಳ ಜಂಕ್ಷನ್‌ನಲ್ಲಿ ಮಾಡುತ್ತಿರುವುದು ಶ್ಲಾಘನೀಯ

-ಅರ್ಚನಾ ಆರ್‌, ಸಹಾಯಕ ಪ್ರಾಧ್ಯಾಪಕಿ, ವಿಜಯ ಪದವಿಪೂರ್ವ ಕಾಲೇಜು

******

ಪ್ರವಾಸೋದ್ಯಮ ಹಾಗೂ ಬೆಂಗಳೂರು ಅಭಿವೃದ್ಧಿಗೆ ಬಜೆಟ್‌ನಲ್ಲಿ ಮುನ್ನೋಟ ಮಾತ್ರ ಇದೆ. ಬಜೆಟ್‌ನಲ್ಲಿ ಪೂರ್ತಿ ಭರವಸೆಗಳೇ ಇwದ್ದು, ಅವುಗಳನ್ನು ಅನುಷ್ಠಾನ ಮಾಡುವುದು ಅನುಮಾನ. ಆದ್ದರಿಂದ, ಸರ್ಕಾರ ಯೋಜನೆಗಳು ಜನರಿಗೆ ತಲುಪುವಂತಾಗಲಿ

-ಬಿ. ಆಶಿಕಾ, ರಾಜರಾಜೇಶ್ವರಿನಗರ

******

ಕನ್ನಡ ಅಭಿವೃದ್ಧಿ ವಿಷಯದಲ್ಲಿ ನಿರಾಸೆ ಮೂಡಿಸಿದ ಬಜೆಟ್. ಶಿಕ್ಷಣ, ವಿದ್ಯುತ್, ಆರೋಗ್ಯ ಇಲಾಖೆಯ ಯೋಜನೆಗಳ ಘೋಷಣೆ ಪ್ರತಿವರ್ಷದಂತೆ ಈ ವರ್ಷವೂ ಯಥಾಪ್ರಕಾರ ಮುಂದುವರಿದಿದೆ. ಇವೆಲ್ಲವೂ ಸಮರ್ಪಕವಾಗಿ ಜಾರಿಗೆ ಬರಬೇಕು. ಕೊನೆ ಹಂತದ ಜನರಿಗೂ ಯೋಜನೆಗಳು ತಲುಪುವಂತಾಗಬೇಕು

-ಎನ್‌. ಮುನಿರಾಜು, ಹೆಣ್ಣೂರು

******

ಸರ್ಕಾರಕ್ಕೆ ಬೇಡವಾದ ಅಂಗವಿಕಲರ ಸಮುದಾಯ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ನೀಡಿದಷ್ಟು ಪ್ರಾಮುಖ್ಯವನ್ನು ಅಂಗವಿಕಲರ ಸಬಲೀಕರಣಕ್ಕೆ ನೀಡದಿರುವುದು ವಿಪರ್ಯಾಸ. ಇವರಿಗೆ ಯಾವುದೇ ನೇರ ಸೌಲಭ್ಯ ಯೋಜನೆ ಘೋಷಿಸದೆ ನಿರೀಕ್ಷೆಗಳನ್ನು ಹುಸಿಮಾಡಿದೆ

-ಚಂದ್ರಶೇಖರ ಪುಟ್ಟಪ್ಪ, ಕರ್ನಾಟಕ ರಾಜ್ಯ ವಿಕಲಚೇತನರ ರಕ್ಷಣಾ ಸಮಿತಿಯ ಕಾರ್ಯಾಧ್ಯಕ್ಷ

******

ಐಐಎಸ್ಸಿ, ಐಐಟಿ ಸಂಸ್ಥೆಗಳಲ್ಲಿ ಕೃತಕ ಬುದ್ದಿಮತ್ತೆ (ಎಐ) ತರಬೇತಿ ಪಡೆಯುವ ಪರಿಶಿಷ್ಟ ಪಂಗಡಗಳ ಎಂಜಿನಿಯರಿಂಗ್ ಪದವೀಧರರಿಗೆ ₹ 15 ಸಾವಿರ ಶಿಷ್ಯವೇತನ ನೀಡಿವುದುದನ್ನು ಸ್ವಾಗತಾರ್ಹ. ಈ ಸೌಲಭ್ಯವನ್ನು ಹಿಂದುಳಿದ ವರ್ಗಗಳ ಪದವೀಧರರಿಗೂ ವಿಸ್ತರಿಸಿದ್ದರೆ ಅನುಕೂಲವಾಗುತ್ತಿತ್ತು

-ರವಿಚಂದ್ರ ಗಗನಮಾಲಿ, ಚಿಕ್ಕಬಿದರಕಲ್ಲು

******

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT