ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಬಜೆಟ್‌ 2020| ಕೃಷಿ ಉತ್ಪನ್ನಗಳಿಗೆ ಕಿಸಾನ್‌ ರೈಲು

ಉತ್ಪನ್ನಗಳ ಮೌಲ್ಯ ವರ್ಧನೆಗೆ ಕ್ರಮ
Last Updated 1 ಫೆಬ್ರುವರಿ 2020, 19:35 IST
ಅಕ್ಷರ ಗಾತ್ರ
ADVERTISEMENT
""

ನವದೆಹಲಿ: ಸಂಕಷ್ಟದಲ್ಲಿರುವ ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರೈತರ ಆದಾಯವನ್ನು 2022ಕ್ಕೆ ದ್ವಿಗುಣಗೊಳಿಸುವ ಕ್ರಮಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಈ ನಿಟ್ಟಿನಲ್ಲಿ ಕೃಷಿ ವಲಯದ ಸಮಗ್ರ ಅಭಿವೃದ್ಧಿಗೆ 16 ಅಂಶಗಳ ಯೋಜನೆಗಳನ್ನು ಪ್ರಸ್ತಾಪಿಸಲಾಗಿದೆ.

ಕೃಷಿ ಉತ್ಪನ್ನಗಳ ಸಾಗಾಣಿಕೆಗೆ ಅನುಕೂಲ ಕಲ್ಪಿಸಲು ಮತ್ತು ಮೌಲ್ಯವರ್ಧನೆಗಾಗಿ ‘ಕಿಸಾನ್‌ ರೈಲು’ ಮತ್ತು ‘ಕೃಷಿ ಉಡಾನ್‌’ ಎನ್ನುವ
ವಿಭಿನ್ನ ಯೋಜನೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ.

ಶೀಘ್ರ ಕೊಳೆತುಹೋಗುವ ವಸ್ತುಗಳನ್ನು ತ್ವರಿತವಾಗಿ ಸಾಗಿಸಲು ‘ಕಿಸಾನ್‌ ರೈಲು’ ಆರಂಭಿಸಲು (ಪಿಪಿಪಿ) ಉದ್ದೇಶಿಸಲಾಗಿದೆ. ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಭಾರತೀಯ ರೈಲ್ವೆ ಈ ಯೋಜನೆಯನ್ನು ಅನುಷ್ಠಾನಗೊಳಿಸಲಿದೆ. ತರಕಾರಿಗಳು, ಹಣ್ಣುಗಳು, ಡೈರಿ ಉತ್ಪನ್ನಗಳು, ಮೀನು, ಮಾಂಸ ಮುಂತಾದ ಆಹಾರ ಉತ್ಪನ್ನಗಳನ್ನು ಶೀತಲೀಕರಣ ಸೌಲಭ್ಯದ ಪಾರ್ಸಲ್‌ ವಾಹನಗಳಲ್ಲಿ ಸಾಗಿಸಲಾಗುವುದು. ಇದಕ್ಕಾಗಿ ಎಕ್ಸ್‌ಪ್ರೆಸ್‌ ಮತ್ತು ಸರಕು ಸಾಗಾಣಿಕೆ ರೈಲುಗಳಲ್ಲಿ ಶೀತಲೀಕರಣ ಹೊಂದಿರುವ ಬೋಗಿಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ.

‘ಕೃಷಿ ಉಡಾನ್‌‘ ಯೋಜನೆಯನ್ನು ನಾಗರಿಕ ವಿಮಾನ ಯಾನ ಸಚಿವಾಲಯವು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ಆರಂಭಿಸಲಿದೆ. ವಿಶೇಷವಾಗಿ ಈಶಾನ್ಯ ರಾಜ್ಯಗಳು ಮತ್ತು ಬುಡಕಟ್ಟು ಜಿಲ್ಲೆಗಳಲ್ಲಿ ಹೆಚ್ಚು ಅನುಕೂಲವಾಗಲಿದೆ.

‘ಪ್ರಧಾನ ಮಂತ್ರಿ ಕಿಸಾನ್‌ ಉರ್ಜಾ ಸುರಕ್ಷಾ ಉಥಾನ್‌ ಮಹಾಭಿಯಾನ’ (ಪಿಎಂ ಕೆಯುಎಸ್‌ಯುಎಂ) ಯೋಜನೆಯನ್ನು ವಿಸ್ತರಿಸಲು ಉದ್ದೇಶಿಸಲಾಗಿದೆ. ಈ ಯೋಜನೆ ಅಡಿಯಲ್ಲಿ ಸೌರ ವಿದ್ಯುತ್‌ ಪಂಪ್‌ಗಳನ್ನು ಸ್ಥಾಪಿಸಲು 20 ಲಕ್ಷ ರೈತರಿಗೆ ಹಣಕಾಸು ನೆರವು ನೀಡಲು ಉದ್ದೇಶಿಸಲಾಗಿದೆ. ಜತೆಗೆ, 15 ಲಕ್ಷ ಸೌರ ವಿದ್ಯುತ್‌ ಪಂಪ್‌ಗಳನ್ನು ಗ್ರಿಡ್‌ ಜತೆ ಸಂಪರ್ಕ ಸಾಧಿಸಲು 15 ಲಕ್ಷ ರೈತರಿಗೆ ಹಣಕಾಸಿನ ನೆರವು ಒದಗಿಸಲು ಪ್ರಸ್ತಾಪಿಸಲಾಗಿದೆ. ಇದು ಶೇಕಡ 11ರಷ್ಟು ಹೆಚ್ಚಳವಾಗಿದೆ.

ಕಳೆದ ವರ್ಷದ ಬಜೆಟ್‌ನಲ್ಲಿ ಈ ಯೋಜನೆಯನ್ನು ಘೋಷಿಸಿ ₹34,422 ಕೋಟಿ ಮೀಸಲಿಡಲಾಗಿತ್ತು. ಈ ಯೋಜನೆಯಿಂದ ರೈತರು ಡೀಸೆಲ್‌ ಮತ್ತು ಸೀಮೆಎಣ್ಣೆ ಮೇಲೆ ಅವಲಂಬನೆಯಾಗುವುದನ್ನು ಕಡಿಮೆ ಮಾಡಲಾಗಿದ್ದು, ಸೌರಶಕ್ತಿ ಬಳಕೆಯ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಜತೆಗೆ, ಸೌರ ವಿದ್ಯುತ್‌ ಘಟಕಗಳನ್ನು ಸ್ಥಾಪಿಸುವ ಮೂಲಕ ವಿದ್ಯುತ್‌ ಅನ್ನು ಮಾರಾಟ ಮಾಡುವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಬರಡು ಭೂಮಿಯಲ್ಲೂ ಸೌರ ವಿದ್ಯುತ್‌ ಘಟಕಗಳನ್ನು ಸ್ಥಾಪಿಸಿ ಆದಾಯ ಪಡೆಯುವ ಯೋಜನೆ ರೂಪಿಸಲಾಗಿದೆ.

ಸಾಲ ಸೌಲಭ್ಯ: 2020–21ನೇ ಸಾಲಿನಲ್ಲಿ ಕೃಷಿಕರಿಗೆ ₹15 ಲಕ್ಷ ಕೋಟಿ ಸಾಲ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ. ಇದುವರೆಗೆ ₹13.5 ಲಕ್ಷ ಕೋಟಿಯ ಗುರಿ ಹೊಂದಲಾಗಿತ್ತು. ನಬಾರ್ಡ್‌ನ ಮರುಹಣಕಾಸು ಯೋಜನೆಯನ್ನು ಸಹ ವಿಸ್ತರಿಸಲಾಗುವುದು ಎಂದು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.

ತೋಟಗಾರಿಕೆ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಲು ಮತ್ತು ರಫ್ತು ಅವಕಾಶಗಳನ್ನು ಹೆಚ್ಚಿಸಲು ಕ್ಲಸ್ಟರ್‌ ಆಧಾರದಲ್ಲಿ ’ಒಂದು ಜಿಲ್ಲೆ ಒಂದು ಉತ್ಪನ್ನ’ ಯೋಜನೆ ರೂಪಿಸಲು ಉದ್ದೇಶಿಸಲಾಗಿದೆ.

2025ರ ವೇಳೆಗೆ ಜಾನುವಾರುಗಳಲ್ಲಿಕಾಣಿಸಿಕೊಳ್ಳುವ ಕಾಲುಬಾಯಿ ಜ್ವರ ಮತ್ತು ಬ್ರುಸೆಲ್ಲೊಸಿಸ್‌ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಉದ್ದೇಶಿಸಲಾಗಿದೆ. ಕೃತಕ ಗರ್ಭಧಾರಣೆ ವ್ಯಾಪ್ತಿಯನ್ನು ಈಗಿರುವ ಶೇಕಡ 30ರಿಂದ ಶೇಕಡ 70ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ. 2025ರ ವೇಳೆಗೆ ಹಾಲು ಸಂಸ್ಕರಣಾ ಸಾಮರ್ಥ್ಯವನ್ನು ಈಗಿನ 53.5 ಮಿಲಿಯನ್‌ ಮೆಟ್ರಿಕ್‌ ಟನ್‌ ನಿಂದ 108 ಮಿಲಿಯನ್‌ ಮೆಟ್ರಿಕ್‌ ಟನ್‌ಗೆ ದ್ವಿಗುಣಗೊಳಿಸುವ ಯೋಜನೆಯನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.

***

‘ಬೆಂಗಳೂರು ಉಪನಗರ ರೈಲು ಯೋಜನೆಗೆ ಅನುಮೋದನೆ ನೀಡಲಾಗಿದೆ. ನಮ್ಮಬಹಳ ವರ್ಷದ ಬೇಡಿಕೆ ಈಡೇರಿದೆ.ಕೇಂದ್ರ ಹಾಗೂ ರಾಜ್ಯದ ಸಹಯೋಗದಲ್ಲಿ ಯೋಜನೆ ಪೂರ್ಣಗೊಳಿಸುತ್ತೇವೆ. ಹೊಸ ತೆರಿಗೆ ಹಾಕದ ವಿನೂತನ ಬಜೆಟ್‌ ಇದು.ಬಡವರು ಮತ್ತು ಗ್ರಾಮೀಣ ಭಾಗಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ರೈತರ ಆದಾಯ ಹೆಚ್ಚಳ ಸಹಿತ ಸಮಗ್ರ ಅಭಿವೃದ್ಧಿಗೆ ಬಜೆಟ್ ನಲ್ಲಿ ಅನುಕೂಲ ಕಲ್ಪಿಸಲಾಗಿದೆ. ದೇಶದ ಪ್ರಗತಿಗೆ ಇದು ಪೂರಕ’

ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

***

‘ಬಜೆಟ್‌ ಅತ್ಯಂತ ನಿರಾಶಾದಾಯಕವಾಗಿದೆ. ದೇಶದ ಪ್ರಗತಿಯ ಆಶಯವನ್ನು ಇದರಿಂದ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಶಿಕ್ಷಣದಂತಹ ಕ್ಷೇತ್ರಗಳಿಗೆದುಡ್ಡು ಹಂಚಿಕೆಯನ್ನು ಕಡಿಮೆ ಮಾಡಿರುವುದು ಸರಿಯಲ್ಲ,ಕೌಶಲ ಅಭಿವೃದ್ಧಿಗೆ₹ 3 ಸಾವಿರ ಕೋಟಿ ಇಟ್ಟರೂ, ಅದರಿಂದ ಏನು ಮಾಡಲಾಗುತ್ತದೆ ಎಂಬ ವಿವರ ಇಲ್ಲ. ಕಿಸಾನ್‌ ಉಡಾನ್‌ನಂತಹ ಹೆಸರಿನ ಯೋಜನೆಯಿಂದ ಕೃಷಿಕರಿಗೆ ಏನು ಲಾಭವೋ ಗೊತ್ತಿಲ್ಲ. ಉದ್ಯೋಗ ಸೃಷ್ಟಿಯ ಸ್ಪಷ್ಟ ಯೋಜನೆ ಇಲ್ಲ’

ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

***

‘ಕೃಷಿ ಉಡಾನ್‌ ಯೋಜನೆಯಲ್ಲಿ ಯಾವ ಬೋರೇಗೌಡ ತೆಗೆದುಕೊಂಡು ಹೋಗುತ್ತಾನೆ? ಅಂಬಾನಿ, ಅದಾನಿ ಮಾತ್ರ ತೆಗೆದುಕೊಂಡು ಹೋಗಲು ಸಾಧ್ಯ. 1–2 ಎಕರೆ ಜಮೀನು ಇರುವ ರೈತರಿಗೆ ಪೂರಕವಾದ ಯೋಜನೆ ರೂಪಿಸಿಲ್ಲ. ರೈತರ ಮೂಗಿಗೆ ಕೇವಲ ತುಪ್ಪ ಸವರಲಾಗಿದೆ. ಉದ್ಯೋಗ ಸೃಷ್ಟಿಗೂ ಆದ್ಯತೆ ಇಲ್ಲ. ಈ ಬಾರಿಯೂ ಬೆಂಗಳೂರಿನವರು ಖುಷಿ ಪಡಲಿ ಎಂದು ಹಣ ಮೀಸಲಿಡದೆ ರೈಲು ಯೋಜನೆ ಪ್ರಕಟಿಸಿರುವುದುನಗೆಪಾಟಲಿನ ವಿಚಾರ’

ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT