ಸೋಮವಾರ, ಏಪ್ರಿಲ್ 19, 2021
28 °C
ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ

Karnataka Budget 2021: ದೇವನಹಳ್ಳಿಗೂ ಬರಲಿದೆಯೇ ಮೆಟ್ರೊ?

ಎಂ.ಮುನಿನಾರಾಯಣ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಒಂದು ಶತಮಾನದ ಇತಿಹಾಸವಿರುವ ಪುರಸಭೆ ಅಭಿವೃದ್ಧಿಗಾಗಿ ಮಾ. 5ರಂದು ವಿಧಾನಸಭೆಯಲ್ಲಿ ಮಂಡನೆಯಾಗಲಿರುವ ಬಜೆಟ್‌ನಲ್ಲಿ ವಿಶೇಷ ಅನುದಾನ ಮೀಸಲಿಡುವ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನ್ಯಾಯ ಒದಗಿಸುತ್ತಾರೆ ಎನ್ನುವ ಭರವಸೆ ಈ ಭಾಗದ ಜನರದ್ದು.

ಯಡಿಯೂರಪ್ಪ ಈ ಭಾಗಕ್ಕೆ ಬಂದಾಗಲೆಲ್ಲಾ ನಮ್ಮ ಸರ್ಕಾರ ಬಂದರೆ ಈ ಭಾಗಕ್ಕೆ ವಿಶೇಷ ಪ್ರಾತಿನಿಧ್ಯ ನೀಡಿ ಅಭಿವೃದ್ಧಿಗೆ ಸಹಕರಿಸುವುದಾಗಿ ಘೋಷಣೆ ಮಾಡುತ್ತಲೇ ಇದ್ದರು. ಈಗ ಅವರೇ ಮುಖ್ಯಮಂತ್ರಿಯಾಗಿರುವ ಕಾರಣ ಈ ಭಾಗದಲ್ಲಿ ಜ್ವಲಂತ ಸಮಸ್ಯೆಗಳಾದ ಕುಡಿಯುವ ನೀರಿನ ಪೂರೈಕೆ, ನಿರುದ್ಯೋಗಿ ಯುವಕರಿಗೆ ಉದ್ಯೋಗ ಅವಕಾಶ, ಸ್ವಚ್ಛತೆ, ಒಳಚರಂಡಿ ವ್ಯವಸ್ಥೆ, ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಸರ್ಕಾರ ವಿಶೇಷ ಅನುದಾನ ನೀಡಲಿದೆ ಎನ್ನುವ ನಿರೀಕ್ಷೆ ಇದೆ.

ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆಗೆ ಒತ್ತಾಯ: ವಿಜಯಪುರ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿವೆ. 50 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ತಾಲ್ಲೂಕುಮಟ್ಟದ ಎಲ್ಲ ಇಲಾಖೆಗಳು ಕಾರ್ಯ ನಿರ್ವಹಿಸಲು ಕಟ್ಟಡ ಸೇರಿದಂತೆ ಎಲ್ಲ ಸೌಕರ್ಯಗಳಿದ್ದು, ತಾಲ್ಲೂಕು ಕೇಂದ್ರವನ್ನಾಗಿ ಮಾಡಬೇಕು ಎಂದು ಈ ಹಿಂದೆಯೂ 60ಕ್ಕೂ ಹೆಚ್ಚು ದಿನಗಳ ಕಾಲ ಹೋರಾಟ ನಡೆದಿದೆ.

ಈಗಿನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಆರ್. ಅಶೋಕ ಅವರಿಗೂ ಮನವಿ ನೀಡಲಾಗಿದೆ. ಯಡಿಯೂರಪ್ಪ ಅವರೂ ಭರವಸೆ ನೀಡಿದ್ದಾರೆ. ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ ಎನ್ನುವ ಭರವಸೆ ಇದೆ. ಇಲ್ಲಿ ಸರ್ಕಾರಿ ಪದವಿ ಕಾಲೇಜು ಆಗಬೇಕು. ಕೆಎಸ್ಆರ್‌ಟಿಸಿ ಬಸ್ ಡಿಪೊ ನಿರ್ಮಾಣವಾಗಬೇಕು ಎನ್ನುತ್ತಾರೆ ತಾಲ್ಲೂಕು ನಿರ್ಮಾಣ ಹೋರಾಟ ಸಮಿತಿ ಅಧ್ಯಕ್ಷ ಬಿ.ಕೆ. ಶಿವಪ್ಪ.

ದೇವನಹಳ್ಳಿ ಜಿಲ್ಲಾ ಕೇಂದ್ರ ಘೋಷಣೆ ನಿರೀಕ್ಷೆ: ದೇವನಹಳ್ಳಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡಬೇಕು ಎನ್ನುವ ಒತ್ತಾಯವೂ ಇದೆ. ಮೆಟ್ರೊ ಸೌಲಭ್ಯವನ್ನು ದೇವನಹಳ್ಳಿವರೆಗೂ ವಿಸ್ತರಣೆ ಮಾಡಬೇಕು. ದೇವನಹಳ್ಳಿ ಮತ್ತು ವಿಜಯಪುರ ಪಟ್ಟಣಗಳಲ್ಲಿ ಹೈಟೆಕ್ ಬಸ್ ನಿಲ್ದಾಣಗಳು ನಿರ್ಮಾಣವಾಗಬೇಕು. ಹುಬ್ಬಳ್ಳಿ-ಧಾರವಾಡ ಮಾದರಿಯಲ್ಲಿ ದೇವನಹಳ್ಳಿ ಮತ್ತು ವಿಜಯಪುರ ಪಟ್ಟಣಗಳನ್ನು ಅವಳಿ ನಗರಗಳನ್ನಾಗಿ ಮಾಡಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಕೊಡಬೇಕೆಂಬ ಒತ್ತಾಯವೂ ಇದೆ.

‘ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪೂರೈಕೆ ಆಗುವ ಕಾವೇರಿ ನೀರನ್ನು ದೇವನಹಳ್ಳಿಗೂ ಪೂರೈಸಬೇಕು. ಎಚ್.ಎನ್. ವ್ಯಾಲಿ ಯೋಜನೆಯಡಿ ನೀರು ತುಂಬಿಸುತ್ತಿರುವ 9 ಕೆರೆಗಳ ಸಂಖ್ಯೆಯನ್ನು ಏರಿಕೆ ಮಾಡಿ ಕನಿಷ್ಠ 40 ಕೆರೆಗಳಿಗೆ ನೀರು ತುಂಬಿಸುವಂತಹ ಕೆಲಸವಾಗಬೇಕು. ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮೂಲಕ ಸ್ಥಾಪನೆಯಾಗುತ್ತಿರುವ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಸರೋಜಿನಿ ಮಹಿಷಿ ವರದಿಯಂತೆ ಉದ್ಯೋಗ ನೀಡಬೇಕು. ಜಿಲ್ಲಾ ಆಸ್ಪತ್ರೆಯನ್ನು ದೇವನಹಳ್ಳಿಯಲ್ಲಿ ನಿರ್ಮಿಸಬೇಕು. ಈ ಎಲ್ಲ ಬೇಡಿಕೆಗಳ ಬಗ್ಗೆ ಸರ್ಕಾರ ಮನವಿ ಸಲ್ಲಿಸಲಾಗಿದೆ. ಬಜೆಟ್‌ನಲ್ಲಿ ಕಾದು ನೋಡಬೇಕು’ ಎನ್ನುತ್ತಾರೆ ಶಾಸಕ ನಿಸರ್ಗ ನಾರಾಯಣಸ್ವಾಮಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು