ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ವಿಮಾನ ನಿಲ್ದಾಣ: ಅಡಚಣೆ ಪರಿಹಾರ ಯಾವಾಗ?

Last Updated 5 ಮಾರ್ಚ್ 2020, 2:10 IST
ಅಕ್ಷರ ಗಾತ್ರ

ರಾಯಚೂರು: ನಗರದ ಹೊರವಲಯದ ಯರಮರಸ್‌ ಹತ್ತಿರ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ 400 ಎಕರೆ ಜಾಗ ಮೀಸಲಿಟ್ಟರೂ ತಾಂತ್ರಿಕ ಅಡಚಣೆ ಕಾರಣಕ್ಕಾಗಿ ಯೋಜನೆ ಜಾರಿಯಾಗುತ್ತಿಲ್ಲ. ತಾಂತ್ರಿಕ ಅಡಚಣೆ ದೂರಮಾಡಿ ವಿಮಾನ ನಿಲ್ದಾಣ ನಿರ್ಮಿಸಲು ಈ ವರ್ಷದ ಬಜೆಟ್‌ನಲ್ಲಿ ಅನುದಾನ ಘೋಷಿಸಬಹುದು ಎನ್ನುವ ನಿರೀಕ್ಷೆ ಹೆಚ್ಚಾಗಿದೆ.

ಕಲಬುರ್ಗಿ ಹಾಗೂ ಬೀದರ್‌ ಜಿಲ್ಲೆಗಳು ಅಕ್ಕಪಕ್ಕದಲ್ಲಿದ್ದರೂ ವಿಮಾನ ನಿಲ್ದಾಣಗಳು ಉದ್ಘಾಟನೆಗೊಂಡಿವೆ. ಆರ್‌ಟಿಪಿಎಸ್‌, ವೈಟಿಪಿಎಸ್‌ ವಿದ್ಯುತ್‌ ಸ್ಥಾವರಗಳು ಸೇರಿದಂತೆ ಖಾಸಗಿ ಉದ್ಯಮಗಳು ರಾಯಚೂರಿನಲ್ಲಿ ಸಾಕಷ್ಟಿದ್ದು, ಗಣ್ಯಾತೀಗಣ್ಯರು ಮೇಲಿಂದ ಮೇಲೆ ನಗರಕ್ಕೆ ಭೇಟಿ ನೀಡುತ್ತಾರೆ. ಸಮಯದ ಉಳಿತಾಯ ಹಾಗೂ ಸಂಚಾರ ಅಡಚಣೆ ತಪ್ಪಿಸುವುದಕ್ಕಾಗಿ ರಾಯಚೂರಿನಲ್ಲಿಯೂ ವಿಮಾನ ನಿಲ್ದಾಣದ ಅಗತ್ಯವಿದೆ.

ವೈಟಿಪಿಎಸ್‌ ಸ್ಥಾಪನೆ ಪೂರ್ವದಲ್ಲೇ ವಿಮಾನ ನಿಲ್ದಾಣ ನಿರ್ಮಿಸಲು ಜಾಗ ಮೀಸಲಿಡಲಾಗಿತ್ತು. ವಿಮಾನ ನಿಲ್ದಾಣ ಗಮನದಲ್ಲಿಟ್ಟುಕೊಂಡು ವೈಟಿಪಿಎಸ್‌ ಚಿಮಣಿ ನಿರ್ಮಾಣ ಹಾಗೂ ವಿದ್ಯುತ್‌ ಕಂಬಗಳನ್ನು ಅಳವಡಿಸುವ ಕಾರ್ಯ ಮಾಡಿದ್ದರೆ, ಯಾವುದೇ ತಾಂತ್ರಿಕ ಅಡಚಣೆ ಎದುರಾಗುತ್ತಿರಲಿಲ್ಲ. ಸರ್ಕಾರಿ ಅನುದಾನದಲ್ಲೇ ತಾಂತ್ರಿಕ ಅಡಚಣೆ ನಿರ್ಮಾಣ ಮಾಡಿದ್ದಲ್ಲದೆ, ಅಡಚಣೆಗಳನ್ನು ತೆಗೆದುಹಾಕುವ ಕೆಲಸಕ್ಕೂ ಸರ್ಕಾರ ಅನುದಾನ ಪ್ರಕಟಿಸುವ ಅನಿವಾರ್ಯತೆ ಇದೆ. ವಿಮಾನ ನಿಲ್ದಾಣಕ್ಕೆ ಪರ್ಯಾಯ ಜಾಗಗಳು ನಗರದಿಂದ ದೂರದಲ್ಲಿದ್ದು, ಅಲ್ಲಿಗೆ ಸಂಪರ್ಕ ರಸ್ತೆಗಳು ಹಾಗೂ ಇತರೆ ಮೂಲ ಸೌಕರ್ಯಗಳ ನಿರ್ಮಾಣಕ್ಕಾಗಿ ನೂರಾರು ಕೋಟಿ ವ್ಯಯಿಸಬೇಕಾಗುತ್ತದೆ.

ಯರಮರಸ್‌ನಲ್ಲಿ ಉತ್ತರ–ದಕ್ಷಿಣ ಸಮತಟ್ಟಾಗಿ ರನ್‌ವೇ ನಿರ್ಮಾಣಕ್ಕೆ ಮೊದಲು ಯೋಜಿಸಲಾಗಿತ್ತು. ಚಿಮಣಿ ಅಡ್ಡ ಬರುತ್ತಿರುವುದರಿಂದ ದಿಕ್ಕು ಬದಲಿಸಿ ರನ್‌ವೇ ನಿರ್ಮಾಣ ಮಾಡಿದರೆ, ವಿದ್ಯುತ್‌ ಕಂಬಗಳ ಅಡ್ಡ ಬರುತ್ತವೆ ಎಂಬುದನ್ನು ತಜ್ಞರು ಹೇಳಿದ್ದಾರೆ. ಈ ಅಡಚಣೆಗಳನ್ನು ತೆಗೆದು ಬೇರೆಡೆ ಸ್ಥಳಾಂತರಿಸಲು ತಗಲುವ ವೆಚ್ಚದ ಬಗ್ಗೆ ಜಿಲ್ಲಾಡಳಿತವು ಸಮೀಕ್ಷೆ ಕೈಗೊಳ್ಳಲು ಮುಂದಾಗಿದೆ. ವಿಮಾನ ನಿಲ್ದಾಣ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಹಸಿರು ನಿಶಾನೆ ದೊರೆತರೆ ಮುಂದಿನ ಕಾರ್ಯಗಳು ಸುಗಮವಾಗುತ್ತವೆ.

ಜವಾಹರಲಾಲ್‌ ನೆಹರು ಅವರು ಪ್ರಧಾನಿಯಾಗಿದ್ದಾಗ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದ ವಿಮಾನವನ್ನು ಯರಮರಸ್‌ ಬಯಲಿನಲ್ಲಿಯೇ ಭೂಸ್ಪರ್ಶ ಮಾಡಿಸಲಾಗಿತ್ತು. ಅದೇ ಜಾಗ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಯೋಗ್ಯ ಎಂದು ಅಂದೇ ಗುರುತಿಸಲಾಗಿತ್ತು. ಜಿಲ್ಲೆಯ ರಾಜಕೀಯ ಮುಖಂಡರ ಇಚ್ಛಾಶಕ್ತಿ ಕೊರತೆ ಕಾರಣದಿಂದಲೂ ವಿಮಾನ ನಿಲ್ದಾಣ ನಿರ್ಮಾಣ ಆಗಿರಲಿಲ್ಲ. ಇದೀಗ ಐಐಐಟಿ, ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು, ರಿಮ್ಸ್‌ ವೈದ್ಯಕೀಯ ಕಾಲೇಜು, ಹಟ್ಟಿ ಚಿನ್ನದ ಗಣಿಯಂತಹ ಸರ್ಕಾರಿ ಸಂಸ್ಥೆಗಳು ಅಭಿವೃದ್ಧಿ ಪಥದಲ್ಲಿವೆ.

ಶಿಕ್ಷಣ, ವ್ಯಾಪಾರ ಅಭಿವೃದ್ಧಿಗಾಗಿ ಸಂಪರ್ಕ ಕ್ಷೇತ್ರದ ಪ್ರಗತಿಗಾಗಿ ರಾಯಚೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ತುರ್ತು ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT