ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಜಿಲ್ಲೆಗೆ ಬೇಕಿದೆ ಶಾಶ್ವತ ಕುಡಿವ ನೀರಿನ ಯೋಜನೆ

ತಾಲ್ಲೂಕಿನಲ್ಲಿ ನನೆಗುದಿಗೆ ಬಿದ್ದ ಒಳಚರಂಡಿ ಯೋಜನೆ, ಬಯಲೇ ಆಶ್ರಯ, ಅರಿವಿನ ಕೊರತೆ
Last Updated 4 ಮಾರ್ಚ್ 2020, 7:42 IST
ಅಕ್ಷರ ಗಾತ್ರ

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಕುಡಿವ ನೀರಿನ ಶಾಶ್ವತ ಯೋಜನೆ ಇಲ್ಲದಿದ್ದರಿಂದ ‍ಪ್ರತಿ ಬೇಸಿಗೆಯಲ್ಲಿ ನೀರಿಗಾಗಿ ಪರದಾಡುವ ಪರಿಸ್ಥಿತಿ ಇದೆ.

ಇದರ ಜೊತೆಗೆ ಜಿಲ್ಲೆಯಾಗಿ 10 ವರ್ಷ ಕಳೆದರೂ ಯಾದಗಿರಿ ಸೇರಿದಂತೆ ಶಹಾಪುರ, ಸುರಪುರದಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದಾಗಿದೆ. ಇದ್ದರೂ ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದು ಬಯಲೇ ಆಶ್ರಯವಾಗಿದೆ. ಜಾಗೃತಿ ಮೂಡಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.

ಸುರಪುರದಲ್ಲಿ ತೀವ್ರ ಸಮಸ್ಯೆ: ರಾಜಮನೆತನ ಆಳ್ವಿಕೆ ನಡೆಸಿರುವ ಸುರಪುರ ನಗರದಲ್ಲಿ ನೀರಿಗಾಗಿ ವಾರಗಟ್ಟಲೆ ಕಾಯುವಂತ ಪರಿಸ್ಥಿತಿ ಇದೆ. ಬೇಸಿಗೆಯಲ್ಲಿ ವಾರ ಅಥವಾ 15 ದಿನಕ್ಕೊಮ್ಮೆ ನೀರು ಬರುತ್ತವೆ. 50–60 ವರ್ಷಗಳ ಹಳೆಯದಾದ ಜಾಕ್‌ ವೆಲ್‌ ಇದ್ದು, ಅದರ ದುರಸ್ತಿಯಲ್ಲಿ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ.

ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಹೊಸ ಜಾಕ್‌ ವೆಲ್‌ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಸರ್ಕಾರದ ಅವಧಿ ಮುಗಿದು ಹೋದ ಮೇಲೆ ಯೋಜನೆ ನನೆಗುದಿಗೆ ಬಿದ್ದಿದೆ. ಇದರಿಂದ ಕಾಗದದಲ್ಲಿ ಮಾತ್ರ ಯೋಜನೆ ಉಳಿದುಕೊಂಡಿದೆ. ಹೀಗಾಗಿ ಇದು ಕಾರ್ಯಗತವಾಗಲು ಸರ್ಕಾರ ಮನಸು ಮಾಡಬೇಕಿದೆ. ಅಲ್ಲದೆ ಬಜೆಟ್‌ನಲ್ಲಿ ಹಣ ಮೀಸಲಿಟ್ಟು, ಯೋಜನೆ ಮಾಡಬೇಕಿದೆ.

ಡ್ಯಾಂನಿಂದ ಬಿಟ್ಟರೆ ನೀರು!: ಸುರಪುರಕ್ಕೆ ನಾರಾಯಣಪುರದ ಬಸವಸಾಗರ ಜಲಾಶಯದಿಂದ ನೀರು ಬಿಟ್ಟರೆ ಮಾತ್ರ ಕುಡಿಯಲು ಮತ್ತಿತರ ಚಟುವಟಿಕೆಗೆ ಉಪಯೋಗವಾಗುತ್ತದೆ. ಇಲ್ಲದಿದ್ದರೆ ನೀರಿನ ಸಂಕಷ್ಟ ಎದುರಿಸಬೇಕಾಗುತ್ತದೆ. ಕಿರು ನೀರು ಸರಬರಾಜು ನೀರು ಯೋಜನೆ ಮೂಲಕ ಪೂರೈಸಿದರೂ ಸಮಸ್ಯೆ ತಪ್ಪಿದ್ದಲ್ಲ.

ಅಧಿಕಾರಿಗಳು ಜಿಲ್ಲೆಯಲ್ಲಿ ಮುಂಜಾಗ್ರತೆ ಕ್ರಮ ಕೈಗೊಳ್ಳುವುದು ಬಿಟ್ಟು ಬೇಸಿಗೆಯಲ್ಲಿ ನೀರಿನ ಯೋಜನೆ ರೂಪಿಸುವುದರಿಂದ ಅದರಲ್ಲಿಯೇ ಕಾಲ ಕಳೆಯುತ್ತಾರೆ. ಆ ಯೋಜನೆ ರೂಪಿಸುವುದರೊಳಗೆ ನಂತರ ಬೇಸಿಗೆ ಕಳೆದು ಮಳೆಗಾಲ ಆರಂಭವಾಗುತ್ತದೆ. ಹೀಗಾಗಿ ಇದು ನೀಗಲಾರದ ಸಮಸ್ಯೆ ಆಗಿದೆ.

ಶಹಾಪುರದಲ್ಲೂ ಸಮಸ್ಯೆ:ಕೃಷ್ಣಾ, ಭೀಮಾ ನದಿ ಹರಿಯುವ ಶಹಾಪುರ ನಗರ ಸೇರಿದಂತೆ ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ಹೆಚ್ಚು ಇದೆ. ನಗರದ ಫಿಲ್ಟರ್‌ ಬೆಡ್‌ನಲ್ಲಿ ನೀರುಕಡಿಮೆಯಾದರೆ ತೀವ್ರ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಶಾಶ್ವತ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಹಣ ಬಿಡುಗಡೆಯಾದರೂ ಯಾವುದೇ ಕಾಮಗಾರಿ ಆರಂಭವಾಗಿಲ್ಲ. ಅಲ್ಲದೆ ಯೋಜನೆಯೂ ಹಾಳಾಗಿದೆ. ಹೀಗಾಗಿ ಇಲ್ಲಿಯೂ ಶಾಶ್ವತ ಕುಡಿವ ನೀರಿನ ಸಮಸ್ಯೆ ಇದೆ.

ಶಹಾಪುರ ತಾಲ್ಲೂಕಿನ ಹುರಸಗುಂಡಗಿ ಬಳಿಯಿಂದ ನಗರಕ್ಕೆ ನೀರು ಪೂರೈಸಲು ಯೋಜನೆ ರೂಪಿಸಲಾಗಿದೆ. ಆದರೆ, ಅದು ಕಾರ್ಯಗತವಾಗಿಲ್ಲ. ಇಲ್ಲಿ ಬೇಸಿಗೆ ವೇಳೆ ನೀರಿನ ಸಮಸ್ಯೆ ಹೆಚ್ಚಾಗುತ್ತದೆ. ನಗರದ ಹಳೆ ಬಡಾವಣೆಗಳಲ್ಲಿ ಮಾತ್ರ ನೀರಿನ ಸಮಸ್ಯೆ ಸ್ವಲ್ಪಮಟ್ಟಿಗೆ ಇಲ್ಲ. ಆದರೆ, ಹೊಸ ಬಡಾವಣೆಗಳಲ್ಲಿ ನೀರು ಲಭ್ಯತೆ ಪ್ರಮಾಣ ಕಡಿಮೆ. ಅಂತರ್ಜಲ ಮಟ್ಟವೂ ಕುಸಿಯುವ ಪರಿಣಾಮ ಎದುರಿಸಬೇಕಾಗುತ್ತದೆ.

ಯಾದಗಿರಿ ನಗರ ಹೊರತಲ್ಲ: ನಗರಕ್ಕೆ ಹೊಂದಿಕೊಂಡು ಭೀಮಾ ನದಿ ಇರುವುದರಿಂದ ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆ ಇದ್ದರೂ ಪೈಪ್‌ಗಳು ಮಧ್ಯದಲ್ಲಿ ಒಡೆದುಹೋಗಿ ನೀರು ಪೋಲಾಗುವ ಪ್ರಮಾಣ ಹೆಚ್ಚಿದೆ.

ನಗರಸಭೆ ಅನುಮತಿ ಇಲ್ಲದೆ ರಸ್ತೆ ಅಗೆಯುವುದರಿಂದ ಪೈಪ್‌ ಒಡೆದುಹೋಗಿ ನೀರಿನ ಸಮಸ್ಯೆ ಉಂಟಾಗುತ್ತದೆ. ಅಲ್ಲದೆ ಹಳೆ ಪೈಪ್‌ಗಳು ಇದ್ದು, ಕೆಲವೊಮ್ಮೆ ಮಣ್ಣು ಮಿಶ್ರಿತ ನೀರು ಬರುತ್ತವೆ. ಹೀಗಾಗಿ ಇವು ಕುಡಿಯಲು ಯೋಗ್ಯವಾಗಿರುವುದಿಲ್ಲ. ಹೀಗಾಗಿ ಇವೆಲ್ಲವುಗಳಿಗೆ ಪರಿಹಾರವಾಗಿ ಶಾಶ್ವತ ಕುಡಿವ ನೀರಿನ ಯೋಜನೆ ಬಜೆಟ್‌ನಲ್ಲಿ ಘೋಷಿಸಿ ಅನುಷ್ಠಾನಕ್ಕೆ ತರಬೇಕು ಎನ್ನುವುದು ಜಿಲ್ಲೆಯ ಸಾರ್ವಜನಿಕರ ಒತ್ತಾಯವಾಗಿದೆ.

*
ಸುರಪುರ ನಗರದ ನೀರು ಸರಬರಾಜು ಯೋಜನೆ ಓಬೀರಾಯನ ಕಾಲದ್ದು. ಮುಂದಿನ 50 ವರ್ಷದ ಜನಸಂಖ್ಯೆಗೆ ಅನುಗುಣವಾಗಿ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಬೇಕು.
-ಮಲ್ಲಯ್ಯ ಕಮತಗಿ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT