ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಭಾರತದ ಕಡೆಗಣನೆ

Last Updated 1 ಫೆಬ್ರುವರಿ 2020, 20:00 IST
ಅಕ್ಷರ ಗಾತ್ರ

ಸರ್ವವ್ಯಾಪಿಯಾಗಿರುವ ಪ್ರಗತಿ ಕುಂಠಿತ ಮತ್ತು ಅರ್ಥ ವ್ಯವಸ್ಥೆ ಎದುರಿಸುತ್ತಿರುವ ತೊಡಕುಗಳ ಅಲ್ಲಗಳೆಯುವಿಕೆ 2020ರ ಆರ್ಥಿಕ ಸಮೀಕ್ಷೆಯ ಧೋರಣೆಯಾಗಿತ್ತು. ಈಗಾಗಲೇ ಇರುವ ‘ಭಾರತದಲ್ಲಿ ತಯಾರಿಸಿ’ಗೆ ‘ಭಾರತದಲ್ಲಿ ಜೋಡಿಸಿ’ ಎಂಬುದನ್ನು ಸೇರಿಸಿ ಭಾರತವನ್ನು ರಫ್ತು ಕೇಂದ್ರವಾಗಿಸುವುದು ಮತ್ತು ಖಾಸಗೀಕರಣಕ್ಕೆ ಪ್ರೋತ್ಸಾಹ ಹಾಗೂ ಸಂಪತ್ತು ಸೃಷ್ಟಿ ಸಮೀಕ್ಷೆಯ ಗಮನ ಕೇಂದ್ರವಾಗಿತ್ತು. ಕೈಗಾರಿಕೆ, ತಯಾರಿಕೆ, ಮೂಲಸೌಕರ್ಯಕೇಂದ್ರಿತ ಆರ್ಥಿಕತೆಗೆ ಸಮೀಕ್ಷೆ ನೀಡಿದ ಒತ್ತನ್ನು ಹಣಕಾಸು ಸಚಿವೆ ಅನುಮೋದಿಸಿದ್ದಾರೆ.

ಸಮೀಕ್ಷೆಯು ಮುಂದಿಟ್ಟ ‘ಥಾಲಿನಾಮಿಕ್ಸ್‌’ ಅಥವಾ ಸಾಮಾನ್ಯ ಜನರ ಕಾಳಜಿಯು ಆಹಾರದ ವೆಚ್ಚದ ಇಳಿಕೆ ಮಾತ್ರವೇ ಆಗಿದೆ ಎಂಬುದಕ್ಕೂ ಅವರು ಸಮ್ಮತಿಯ ಮುದ್ರೆ ಒತ್ತಿದ್ದಾರೆ. ಆಹಾರದ ವೆಚ್ಚ ಇಳಿಕೆಯು ಕೃಷಿಕ, ಗ್ರಾಮೀಣ ಮತ್ತು ಕೃಷಿ ಆರ್ಥಿಕತೆಯ ಮೇಲೆ ಬೀರುವ ಪರಿಣಾಮಗಳೇನು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ಮಾಡಲಾಗಿಲ್ಲ. ವಾಸ್ತವದಲ್ಲಿ, ಗ್ರಾಮೀಣ ಮತ್ತು ಕೃಷಿ ವಲಯದ ಸಮಸ್ಯೆಗಳು, ನೈಸರ್ಗಿಕ ಸ್ಥಿತಿ, ಉತ್ಪಾದಕತೆ ಮತ್ತು ಜೀವನೋಪಾಯಗಳ ನಡುವಣ ನಂಟನ್ನು ಗುರುತಿಸುವಲ್ಲಿನ ವೈಫಲ್ಯಗಳನ್ನು ಕಡಗಣಿಸುವ ಪ್ರವೃತ್ತಿ ಈ ಬಜೆಟ್‌ನಲ್ಲಿಯೂ ಮುಂದುವರಿದಿದೆ.

ಗ್ರಾಮೀಣ ವ್ಯವಸ್ಥೆ ಮತ್ತು ಕೃಷಿ ಆರ್ಥಿಕತೆ ನಡುವಣ ಸಂಕೀರ್ಣ ಸಂಬಂಧವನ್ನು ಅರ್ಥ ಮಾಡಿಕೊಳ್ಳುವುದನ್ನು ನಿರ್ಲಕ್ಷಿಸಿರುವ ಬಜೆಟ್‌, ಗ್ರಾಮೀಣ ಮತ್ತು ನಗರ ಹಾಗೂ ಕೃಷಿ ಮತ್ತು ಕೈಗಾರಿಕೆ ನಡುವಣ ವಿಭಜನೆಗೆ ಇನ್ನಷ್ಟು ಪೋಷಣೆ ಒದಗಿಸಿದೆ. ರೈತರು, ದೇಶ ಮತ್ತು ಸಮಾಜವು ಹೊರಗಿರಿಸಬಹುದಾದ ಪ್ರಜೆಗಳು ಎಂದು ಬಜೆಟ್‌ನಲ್ಲಿ ಹೇಳಿಲ್ಲದಿದ್ದರೂ ಅಂತಹ ನಿರೀಕ್ಷೆ ಇರುವುದು ಇನ್ನೂ ಕಳವಳಕಾರಿ.

2018ರಲ್ಲಿ ಪ್ರಧಾನ ಮಂತ್ರಿ ಕಿಸಾನ್‌ ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಘೋಷಿಸಿ, ಮುಖ್ಯವಾಗಿ ಅದರಿಂದಲೇ ಈ ಸರ್ಕಾರ ಪುನರಾಯ್ಕೆಗೊಂಡಿತ್ತು. ಅದೇ ಸರ್ಕಾರ ಈಗ ರೈತರು ಮತ್ತು ಕೃಷಿ ವಿಚಾರಗಳನ್ನು ಆಹಾರ ಅರ್ಥಶಾಸ್ತ್ರದ ಅಡಿಟಿಪ್ಪಣಿಗೆ ಸೀಮಿತಗೊಳಿಸಿದ್ದರಲ್ಲಿ ಆಶ್ಚರ್ಯವೇನಾದರೂ ಇದೆಯೇ? ಕೃಷಿ ಮತ್ತು ಗ್ರಾಮೀಣ ಭಾಗಕ್ಕೆ ಸಂಬಂಧಿಸಿದ ವಿಚಾರಗಳನ್ನು ‘ಮಹತ್ವಾಕಾಂಕ್ಷಿ ಭಾರತ’ ಶೀರ್ಷಿಕೆ ಅಡಿಯಲ್ಲಿ ಸೇರಿಸಿದಂತೆ ತೋರುತ್ತದೆ.

ಕೃಷಿ ಕ್ಷೇತ್ರವನ್ನು ಹಣಕಾಸು ಮತ್ತು ಮಾರುಕಟ್ಟೆ ವ್ಯವಸ್ಥೆಯ ಜತೆ ಜೋಡಿಸುವ ವಿಚಾರವನ್ನು ಪುನರುಚ್ಚರಿಸಲಾಗಿದೆ. ಈ ಮೂಲಕ, ಸಣ್ಣ ಮತ್ತು ಅತಿಸಣ್ಣ ರೈತರ ಪ್ರತಿಕೂಲ ಸ್ಥಿತಿಯನ್ನು ಇನ್ನಷ್ಟು ಕಂಗೆಡಿಸಲು ಸರ್ಕಾರ ಮುಂದಾಗಿದೆ. ಇಂತಹ ಜೋಡಣೆಯು ಸಣ್ಣ ರೈತರ ಸಂಪನ್ಮೂಲ ಮತ್ತು ಶ್ರಮವನ್ನು ಶೋಷಿಸುತ್ತದೆ; ಅವರು ಬಂಡವಾಳ, ರಾಸಾಯನಿಕಗಳು ಮತ್ತು ತಂತ್ರಜ್ಞಾನ ಮಾರುಕಟ್ಟೆಗೆ ಶರಣಾಗುವಂತೆ ಮಾಡುತ್ತದೆ ಎಂಬುದನ್ನು ಮರೆತುಬಿಡಲಾಗಿದೆ.

ರೈತನನ್ನು ಅನ್ನದಾತ ಎಂದು ಕರೆಯಲಾಗುತ್ತಿದ್ದರೂ ಆತನ ಒಟ್ಟು ಜೀವನ, ಜೀವನೋಪಾಯ ಅವಕಾಶಗಳ ಸುಧಾರಣೆಗೆ ನೈಜವಾಗಿ ಯಾವುದೇ ಅನುದಾನವನ್ನು ನೀಡಲಾಗಿಲ್ಲ.

ಒಣ ಜಮೀನುಗಳನ್ನು ಸೌರಶಕ್ತಿ ಉತ್ಪಾದನಾ ಪಾರ್ಕ್‌ಗಳಾಗಿ ಪರಿವರ್ತಿಸುವ ಶಿಫಾರಸು ಇದೆ. ಕೃಷಿ ಉತ್ಪನ್ನಗಳಿಗೆ ನಾಗರಿಕ ವಿಮಾನಯಾನ ಸೌಲಭ್ಯ ಒದಗಿಸುವುದಕ್ಕಾಗಿ ಕೃಷಿ ಉಡಾನ್ ಎಂಬ ಯೋಜನೆ ಘೋಷಿಸಲಾಗಿದೆ. ಏಕ ಬೆಳೆಯು ಹಾನಿಕರ ಮತ್ತು ಪರಿಸರ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂಬುದನ್ನು ಮರೆತಿರುವ ಹಣಕಾಸು ಸಚಿವರು ‘ಒಂದು ಜಿಲ್ಲೆ, ಒಂದು ಉತ್ಪನ್ನ’ದ ಶಿಫಾರಸು ಮುಂದಿಟ್ಟಿದ್ದಾರೆ.

ಪ್ರಧಾನ ಮಂತ್ರಿ ಕಿಸಾನ್‌ ಯೋಜನೆಯು ರೈತರು ಮತ್ತು ದೇಶವನ್ನು ಸಮೃದ್ಧವಾಗಿಸುವ ಐದು ರತ್ನಗಳಲ್ಲಿ ಒಂದು ಎಂದು ಪದೇ ಪದೇ ಹೇಳಲಾಗುತ್ತಿದೆ. ಗ್ರಾಮೀಣ ಭಾರತಕ್ಕೆ ರೂಪಿಸಲಾದ ಹಲವು ಯೋಜನೆಗಳು ಈಗಿನ ಪ್ರಬಲ ಪ್ರವೃತ್ತಿಗೆ ಹೊಂದುತ್ತಿಲ್ಲ ಅಥವಾ ವಿರೋಧಾಭಾಸಕರವಾಗಿವೆ. ಬಿತ್ತನೆ ಬೀಜದ ವಿಚಾರಕ್ಕೆ ಸಂಬಂಧಿಸಿ ಈ ಯೋಜನೆಗಳನ್ನು ವಿಶ್ಲೇಷಣೆಗೆ ಒಳಪಡಿಸಬೇಕಿದೆ. ಬಿತ್ತನೆ ಬೀಜದ ಸಂರಕ್ಷಣೆ ಮತ್ತು ಗ್ರಾಮೀಣ ಮಹಿಳೆಯ ಪಾತ್ರದ ಮಹತ್ವಕ್ಕೆ ಮನ್ನಣೆ ನೀಡುವುದಕ್ಕಾಗಿ ಧಾನ್ಯಲಕ್ಷ್ಮಿ ಎಂಬ ಯೋಜನೆಯನ್ನು ಹಣಕಾಸು ಸಚಿವೆ ಮುಂದಿಟ್ಟಿದ್ದಾರೆ. ಬಿತ್ತನೆ ಬೀಜ ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸಲು ಮಹಿಳೆಯರ ಸ್ವ ಸಹಾಯ ಸಂಘಗಳು ಈ ಯೋಜನೆ ಅಡಿಯಲ್ಲಿ ಸಾಲ ಪಡೆಯುವುದು ಸಾಧ್ಯವಿದೆ. ದೇಶದ ರೈತರು ಅಂತರರಾಷ್ಟ್ರೀಯ ಬಿತ್ತನೆ ಬೀಜ ಸಂಸ್ಥೆಗಳಿಗೆ ತಲೆಬಾಗುವಂತೆ ಮಾಡಲು ಸರ್ಕಾರ ಅತ್ಯಂತ ಸಕ್ರಿಯವಾಗಿ ಕೆಲಸ ಮಾಡುತ್ತಿರುವಾಗಲೇ ಧಾನ್ಯಲಕ್ಷ್ಮಿ ಯೋಜನೆಯನ್ನು ಪ್ರಕಟಿಸಲಾಗಿದೆ.

ಕಳಕಳಿಯ ಸಮಾಜ ಸೃಷ್ಟಿಗೆ ಉತ್ತೇಜನ ನೀಡಲಾಗುವುದು ಎಂದು ಸಚಿವೆ ಹೇಳಿದ್ದಾರೆ. ಆದರೆ, ಕೃಷಿ ಸಂಬಂಧಿ ಸಮಸ್ಯೆಗಳಿಂದ ಮುಖ್ಯಸ್ಥರು ಆತ್ಮಹತ್ಯೆ ಮಾಡಿಕೊಂಡಿರುವ ಕುಟುಂಬಗಳಿಗೆ ಯಾವುದೇ ವಿಶೇಷ ನೆರವಿನ ಉಲ್ಲೇಖ ಇಲ್ಲ. ದೇಶವನ್ನು ಕಾಡುತ್ತಿರುವ ನೀರಿನ ತೀವ್ರ ಬಿಕ್ಕಟ್ಟಿನತ್ತ ಗಮನ ಹರಿಸಲಾಗಿದೆ. ನೀರಿನ ಸಮಸ್ಯೆ ತೀವ್ರವಾಗಿರುವ ನೂರು ಜಿಲ್ಲೆಗಳಲ್ಲಿ ನೀರು ಸಂರಕ್ಷಣೆಗೆ ಯೋಜನೆಗಳಿವೆ. ಆದರೆ, ಅದಕ್ಕಾಗಿ ಗಣನೀಯವಾದ ಅನುದಾನವಾಗಲಿ, ಸಮಗ್ರ ನೀರು ಬಳಕೆಯ ಯೋಜನೆಗಳಾಗಲಿ ಇಲ್ಲ.

ಗ್ರಾಮೀಣ ಭಾರತದ ಹತ್ತಾರು ಸಮಸ್ಯೆಗಳಿಗೆ ಪರಿಹಾರ ಹುಡುಕುವ ನೀತಿ ರೂಪಿಸಲು ಬೇಕಾದ ಮುನ್ನೋಟ ಈ ಬಜೆಟ್‌ನಲ್ಲಿ ಇಲ್ಲ. ಹಾಗೆಯೇ ಅಗತ್ಯ ಅನುದಾನವನ್ನೂ ನೀಡಲಾಗಿಲ್ಲ. ಗ್ರಾಮೀಣ ಕರ್ನಾಟಕದ ದೊಡ್ಡ ಪ್ರಮಾಣದ ಜಮೀನುಗಳಲ್ಲಿ ಬೇಸಾಯ ಮಾಡಲಾಗಿಲ್ಲ. ಆಹಾರ ಬೆಳೆಯಲ್ಲಿ ಇಳಿಕೆ, ಬರಗಾಲ ಮತ್ತು ಪ್ರವಾಹವು ಬಹುದೊಡ್ಡ ವಿನಾಶ ತಂದಿಟ್ಟಿದೆ. ಲಕ್ಷಾಂತರ ಜನರನ್ನು ಸಂಕಷ್ಟದ ಸ್ಥಿತಿಗೆ ತಲುಪಿಸಿದೆ. ನಮ್ಮ ಚುನಾಯಿತ ಪ್ರತಿನಿಧಿಗಳ ಬಳಗವು ಆಡಳಿತ ಪಕ್ಷದ ಮುಖವಾಣಿಯಂತೆ ವರ್ತಿ
ಸುತ್ತಿದೆ. ಇವರಲ್ಲಿ ಬಹಳಷ್ಟು ಮಂದಿಗೆ ಗ್ರಾಮೀಣ ಸಮಸ್ಯೆಗಳ ಬಗ್ಗೆ ಯಾವ ಕಾಳಜಿಯೂ ಇಲ್ಲ. ಈ ಪ್ರವೃತ್ತಿ ಮತ್ತು ನಮ್ಮ ರಾಜ್ಯದ ಈಗಿನ ಸ್ಥಿತಿಗೆ ಇಂತಹ ಪ್ರತಿನಿಧಿಗಳನ್ನು ಆಯ್ಕೆ ಮಾಡಿದ ಮತದಾರರೇ ಹೊಣೆಗಾರರು.

–ಎ.ಆರ್‌.ವಾಸವಿ, ಸಾಮಾಜಿಕ ಮಾನವಶಾಸ್ತ್ರಜ್ಞೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT