–ಕಾವ್ಯ ಡಿ.
ಎಸ್ಐಪಿ (ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್) ಭಾರತದಲ್ಲಿ ಜನಪ್ರಿಯ ಹೂಡಿಕೆ ವಿಧಾನವಾಗಿ ರೂಪುಗೊಳ್ಳುತ್ತಿದೆ. ಪ್ರತಿ ತಿಂಗಳೂ ಸಣ್ಣ ಮೊತ್ತದ ಹೂಡಿಕೆ ಮೂಲಕ ಬೆಲೆ ಏರಿಕೆಯ ಪ್ರಮಾಣವನ್ನು ಮೀರಿ ಲಾಭ ಗಳಿಸಿಕೊಳ್ಳಲು ಇರುವ ಅವಕಾಶವೇ ಎಸ್ಐಪಿ ಹೆಚ್ಚು ಜನಪ್ರಿಯವಾಗಲು ಕಾರಣ. ಕೆಲವು ತಂತ್ರಗಳನ್ನು ಬಳಸಿ ಎಸ್ಐಪಿ ಹೂಡಿಕೆಗಳ ಮೇಲಿನ ಲಾಭವನ್ನು ಮತ್ತಷ್ಟು ಹೆಚ್ಚಳ ಮಾಡಲು ಸಾಧ್ಯವೇ? ಹೀಗೊಂದು ಪ್ರಶ್ನೆ ನಿಮ್ಮಲ್ಲೂ ಮೂಡಿರಬಹುದು ಅಲ್ಲವೇ?
ಬಹುತೇಕರು ಸಾಮಾನ್ಯವಾಗಿ ತಿಂಗಳಿಗೊಮ್ಮೆ ಎಸ್ಐಪಿ ಹೂಡಿಕೆ ಮಾಡುತ್ತಾರೆ. ಆದರೆ ಎಷ್ಟು ದಿನಗಳಿಗೊಮ್ಮೆ ಎಸ್ಐಪಿ ಮಾಡಿದರೆ ಲಾಭ ಜಾಸ್ತಿ? ಪ್ರತಿದಿನ ಅಥವಾ ವಾರಕ್ಕೊಮ್ಮೆ ಎಸ್ಐಪಿ ಮಾಡುವುದರಿಂದ ಹೆಚ್ಚು ಲಾಭಾಂಶ ದಕ್ಕುತ್ತದೆಯೇ? ಯಾವ ದಿನಾಂಕಕ್ಕೆ ಎಸ್ಐಪಿ ಆರಂಭಿಸಿದರೆ ಅನುಕೂಲ? ಎಸ್ಐಪಿ ಹೂಡಿಕೆಯು ಒಂದೇ ಬಾರಿಗೆ ಮಾಡುವ ಹೂಡಿಕೆಗಿಂತ ಹೆಚ್ಚು ಲಾಭ ತಂದುಕೊಡುತ್ತದೆಯಾ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಯತ್ನ ನಡೆಸೋಣ.
1. ಎಷ್ಟು ದಿನಗಳಿಗೊಮ್ಮೆ ಎಸ್ಐಪಿ?: ಪ್ರತಿ ತಿಂಗಳು ಎಸ್ಐಪಿ ಮಾಡುವುದರಿಂದ ಲಾಭವಾಗುವುದಾದರೆ ಪ್ರತಿದಿನ ಅಥವಾ ವಾರಕ್ಕೊಮ್ಮೆ ಎಸ್ಐಪಿ ಮಾಡಿದರೆ ಹೆಚ್ಚು ಲಾಭ ಆಗಲೇಬೇಕಲ್ಲವೇ? ವಾರ ಅಥವಾ ಪ್ರತಿದಿನ ಎಸ್ಐಪಿ ಮಾಡುವುದರಿಂದ ಮಾರುಕಟ್ಟೆ ಸೂಚ್ಯಂಕಗಳ ಏರಿಳಿತದ ಲಾಭ ಹೆಚ್ಚು ದೊರೆತು ಮ್ಯೂಚುವಲ್ ಫಂಡ್ ಯೂನಿಟ್‌ಗಳ ಖರೀದಿಯ ಸರಾಸರಿ ಬೆಲೆ ತಗ್ಗುತ್ತದೆ ಅಲ್ಲವೇ? ಮೇಲ್ನೋಟಕ್ಕೆ ಈ ಮಾತು ನಿಜ ಅನಿಸುತ್ತದೆ. ಆದರೆ ಪ್ರಾಯೋಗಿಕವಾಗಿ ನೋಡಿದಾಗ ಪ್ರತಿ ದಿನ, ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಎಸ್ಐಪಿ ಮಾಡುವುದರಿಂದ ಲಾಭಾಂಶದಲ್ಲಿ ಹೆಚ್ಚು ವ್ಯತ್ಯಾಸವಾಗುವುದಿಲ್ಲ ಎಂಬುದು ಗೊತ್ತಾಗುತ್ತದೆ.
2013ರ ಏಪ್ರಿಲ್‌ನಿಂದ 2023ರ ಏಪ್ರಿಲ್‌ವರೆಗಿನ ನಿಫ್ಟಿ–50 ಸೂಚ್ಯಂಕ, ನಿಫ್ಟಿ ಮಿಡ್ ಕ್ಯಾಪ್ 150 ಸೂಚ್ಯಂಕ ಮತ್ತು ನಿಫ್ಟಿ ಸ್ಮಾಲ್ ಕ್ಯಾಪ್ 250 ಸೂಚ್ಯಂಕದ ದತ್ತಾಂಶ ನೋಡಿದಾಗ ಈ ಲೆಕ್ಕಾಚಾರ ಖಚಿತವಾಗುತ್ತದೆ. 2013ರ ಏಪ್ರಿಲ್‌ನಿಂದ 2023ರ ಏಪ್ರಿಲ್‌ವರೆಗಿನ ಅವಧಿಯಲ್ಲಿ ನಿಫ್ಟಿ–50 ಸೂಚ್ಯಂಕ ಆಧರಿಸಿ ಪ್ರತಿದಿನ ಎಸ್ಐಪಿ ಮಾಡಿದ್ದರೆ ನಿಮಗೆ ಶೇ 12.44ರಷ್ಟು ಲಾಭ ಸಿಗುತ್ತಿತ್ತು. ವಾರದ ಆಧಾರದಲ್ಲಿ ಎಸ್ಐಪಿ ಮಾಡಿದ್ದರೆ ಶೇ 12.45ರಷ್ಟು ಲಾಭ ಲಭಿಸುತ್ತಿತ್ತು.
ತಿಂಗಳ ಲೆಕ್ಕಾಚಾರದಲ್ಲಿ ಎಸ್ಐಪಿ ಮಾಡಿದ್ದರೆ ಶೇ 12.44ರಷ್ಟು ಲಾಭ ದಕ್ಕುತ್ತಿತ್ತು. ಇನ್ನು 2013ರ ಏಪ್ರಿಲ್‌ನಿಂದ 2023ರ ಏಪ್ರಿಲ್‌ವರೆಗಿನ ನಿಫ್ಟಿ ಮಿಡ್ ಕ್ಯಾಪ್ 150 ಮತ್ತು ನಿಫ್ಟಿ ಸ್ಮಾಲ್ ಕ್ಯಾಪ್ 250 ಸೂಚ್ಯಂಕ ನೋಡಿದಾಗಲೂ ದಿನ, ವಾರ ಅಥವಾ ಮಾಸಿಕ ಎಸ್ಐಪಿಗಳ ಲಾಭದಲ್ಲಿ ಹೆಚ್ಚು ವ್ಯತ್ಯಾಸವಿಲ್ಲ ಎನ್ನುವುದು ಪಕ್ಕಾ ಆಗುತ್ತದೆ. ಇದಲ್ಲದೆ ಬಹುತೇಕ ಹೂಡಿಕೆ ಆ್ಯಪ್‌ಗಳು ಪ್ರತಿದಿನ ಅಥವಾ ವಾರಕ್ಕೊಮ್ಮೆ ಎಸ್ಐಪಿ ಮಾಡಲು ಅವಕಾಶ ಕೊಡುವುದಿಲ್ಲ. ಈ ರೀತಿ ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯುವಾಗ ತೆರಿಗೆ ಲೆಕ್ಕಾಚಾರವೂ ಕಷ್ಟ. ಹಾಗಾಗಿ ತಿಂಗಳ ಎಸ್ಐಪಿಗೆ ಅಂಟಿಕೊಳ್ಳುವುದು ಹೆಚ್ಚು ಸೂಕ್ತ.
2. ಯಾವ ದಿನಾಂಕ ಸೂಕ್ತ?: ಬಹುತೇಕರು ಸಂಬಳ ಪಡೆದ ಮೊದಲ ವಾರದಲ್ಲಿ ಎಸ್ಐಪಿ ಮಾಡುತ್ತಾರೆ. ಬೇರೆಯ ದಿನ ಅಂದರೆ, ತಿಂಗಳ ಮಧ್ಯಭಾಗದಲ್ಲಿ ಅಥವಾ ಕೊನೆಯಲ್ಲಿ ಎಸ್ಐಪಿ ಮಾಡಿದರೆ ಹೆಚ್ಚು ಲಾಭ ಸಿಗುವುದೇ ಎನ್ನುವ ಪ್ರಶ್ನೆ ನಿಮ್ಮಲ್ಲಿರಬಹುದು. ಆದರೆ 2013ರ ಮಾರ್ಚ್‌ನಿಂದ 2023ರ ಮಾರ್ಚ್‌ವರೆಗಿನ ಅಂಕಿ–ಅಂಶ ನೋಡಿದಾಗ ಯಾವ ದಿನ ಎಸ್ಐಪಿ ಮಾಡಿದರೂ ಹೆಚ್ಚು ವ್ಯತ್ಯಾಸವಾಗುವುದಿಲ್ಲ ಎನ್ನುವುದು ಖಚಿತವಾಗುತ್ತದೆ. ಹಾಗಾಗಿ ಯಾವ ದಿನ ಎಸ್ಐಪಿ ಮಾಡಬೇಕು ಎನ್ನುವುದನ್ನು ನಿಮ್ಮ ಅಗತ್ಯ ಮತ್ತು ಅನುಕೂಲಕ್ಕೆ ತಕ್ಕಂತೆ ತೀರ್ಮಾನಿಸುವುದು ಉತ್ತಮ.
3. ಮಾರುಕಟ್ಟೆ ಕುಸಿದಾಗ?: ಮಾರುಕಟ್ಟೆ ಕುಸಿತ ಕಂಡಾಗ ಮಾಡುವ ಎಸ್‌ಐಪಿ ಹೆಚ್ಚು ಲಾಭ ಕೊಡುತ್ತದೆಯೇ ಎನ್ನುವ ಪ್ರಶ್ನೆ ನಿಮ್ಮಲ್ಲಿರಬಹುದು. ಮಾರುಕಟ್ಟೆ ಕುಸಿದಾಗ ಮಾಡುವ ಎಸ್ಐಪಿ ದೀರ್ಘಾವಧಿಯಲ್ಲಿ ಕೊಂಚ ಜಾಸ್ತಿ ಲಾಭ ತಂದುಕೊಡುತ್ತದೆ. ಆದರೆ, ಮಾರುಕಟ್ಟೆ ಕುಸಿದಾಗ ಮಾತ್ರ ಹೂಡಿಕೆ ಮಾಡುತ್ತೇವೆ ಎನ್ನುವುದಕ್ಕಿಂತ ಎಸ್ಐಪಿ ಜೊತೆಗೆ ಮಾರುಕಟ್ಟೆ ಕುಸಿದಾಗ ಹೆಚ್ಚುವರಿ ಹೂಡಿಕೆ ಮಾಡಿದರೆ ಲಾಭ ಜಾಸ್ತಿ.
4. ಎಸ್ಐಪಿ ಅಥವಾ ಒಂದೇ ಬಾರಿಗೆ ಹೂಡಿಕೆ – ಯಾವುದು ಲಾಭ?: ಸಾಮಾನ್ಯವಾಗಿ ಎಸ್ಐಪಿ ಹೂಡಿಕೆಯಿಂದ ಮಾತ್ರ ಹೆಚ್ಚು ಲಾಭ ಸಿಗುತ್ತದೆ ಎಂದು ಭಾವಿಸಿರುತ್ತೇವೆ. ಆದರೆ ವಾಸ್ತವದಲ್ಲಿ ಎಸ್ಐಪಿ ಅಥವಾ ಒಂದೇ ಬಾರಿಗೆ ಹೂಡಿಕೆ ನಡುವೆ ಹೆಚ್ಚು ಲಾಭವನ್ನು ಯಾವುದು ತಂದುಕೊಡುತ್ತದೆ ಎಂಬುದು ಮಾರುಕಟ್ಟೆಯ ಏರಿಳಿತದ ಸ್ಥಿತಿಯನ್ನು ಅವಲಂಬಿಸಿರುತ್ತದೆ. ನಿಯಮಿತವಾಗಿ ಎಸ್ಐಪಿ ಮಾಡುವುದರ ಜೊತೆಗೆ ಮಾರುಕಟ್ಟೆ ಹೆಚ್ಚು ಕುಸಿತ ಕಂಡಾಗ ಹೆಚ್ಚುವರಿಯಾಗಿ ಹೂಡಿಕೆ ಮಾಡಿದಾಗ ದೀರ್ಘಾವಧಿಯಲ್ಲಿ ಹೆಚ್ಚು ಲಾಭ ಸಿಗುತ್ತದೆ. ಹಾಗಾಗಿ ಎರಡರ ಮಿಶ್ರಣ ಮಾಡುವುದು ಒಳ್ಳೆಯ ಹೂಡಿಕೆ ತಂತ್ರಗಾರಿಕೆ.
(ಲೇಖಕಿ ಚಾರ್ಟರ್ಡ್ ಅಕೌಂಟೆಂಟ್)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.