ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳ ಮಾರುಕಟ್ಟೆ | ಷೇರು ಹೂಡಿಕೆ: ತೆರಿಗೆ ಹೊರೆ ಎಷ್ಟು?

Published 21 ಏಪ್ರಿಲ್ 2024, 20:11 IST
Last Updated 21 ಏಪ್ರಿಲ್ 2024, 20:11 IST
ಅಕ್ಷರ ಗಾತ್ರ

ತೆರಿಗೆ ಕಟ್ಟಲು ಯಾರಿಗೂ ಇಷ್ಟವಿರುವುದಿಲ್ಲ. ಆದರೆ, ಷೇರು ಹೂಡಿಕೆ ಮಾಡುವಾಗ ತೆರಿಗೆ ಕಟ್ಟುವುದು ಅನಿವಾರ್ಯ. ತೆರಿಗೆ ನಿಯಮಗಳ ಬಗ್ಗೆ ಸರಿಯಾದ ಅರಿವಿದ್ದಾಗ ಷೇರುಪೇಟೆಯಲ್ಲಿ ಹೂಡಿಕೆಯನ್ನು ಸರಿಯಾಗಿ ಯೋಜಿಸಿಕೊಳ್ಳಬಹುದು.

ಷೇರು ಖರೀದಿ ಮತ್ತು ಮಾರಾಟಕ್ಕೆ ಕೆಲ ತೆರಿಗೆಗಳು ಅನ್ವಯಿಸಿದರೆ, ಷೇರು ಹೂಡಿಕೆ ಮೇಲಿನ ಗಳಿಕೆಗೂ ಕೆಲವು ತೆರಿಗೆ ಕಟ್ಟಬೇಕಾಗುತ್ತದೆ. ಬನ್ನಿ, ಷೇರು ಹೂಡಿಕೆಯಲ್ಲಿ ಬರುವ ಐದು ಮಾದರಿಯ ತೆರಿಗೆ ಬಗ್ಗೆ ವಿವರವಾಗಿ ತಿಳಿಯೋಣ.

ಷೇರುಗಳ ವಹಿವಾಟು ತೆರಿಗೆ: ಷೇರುಪೇಟೆಯಲ್ಲಿ ಷೇರು ಖರೀದಿಸುವಾಗ ಮತ್ತು ಮಾರಾಟ ಮಾಡುವಾಗ ಒಂದು ತೆರಿಗೆ ಕಟ್ಟುತ್ತೇವೆ. ಆದರೆ, ಷೇರುಗಳ ವಹಿವಾಟು ತೆರಿಗೆ ಬಗ್ಗೆ ಬಹುಪಾಲು ಮಂದಿಗೆ ತಿಳಿದಿರುವುದಿಲ್ಲ. ಸದ್ಯ ಷೇರುಗಳ ವಹಿವಾಟು ತೆರಿಗೆ ಶೇ 0.01ರಷ್ಟಿದ್ದು, ಒಟ್ಟು ವಹಿವಾಟು ಮೊತ್ತದ ಮೇಲೆ ಈ ತೆರಿಗೆ ಅನ್ವಯಿಸುತ್ತದೆ.

ಉದಾಹರಣೆಗೆ ‘ಬಿ’ ಎನ್ನುವ ಕಂಪನಿಯ 100 ಷೇರುಗಳನ್ನು ಪ್ರತಿ ಷೇರಿಗೆ ₹1,650ರಂತೆ ₹1.65 ಲಕ್ಷ ಕೊಟ್ಟು ಖರೀದಿಸಿದ್ದೀರಿ ಎಂದುಕೊಳ್ಳಿ. ಈ ವೇಳೆ ಒಟ್ಟು ₹1.65 ಲಕ್ಷದ ಮೇಲೆ ಶೇ 0.01ರಷ್ಟು ತೆರಿಗೆ ಅಂದರೆ, ₹165 ತೆರಿಗೆ ಅನ್ವಯಿಸುತ್ತದೆ. ಇದೇ ಲೆಕ್ಕಾಚಾರದಲ್ಲಿ ಷೇರು ಮಾರಾಟ ಮಾಡುವಾಗಲೂ ತೆರಿಗೆ ಕಟ್ಟಬೇಕಾಗುತ್ತದೆ.

ಡೇ ಟ್ರೇಡಿಂಗ್ ಅಂದರೆ ಅದೇ ದಿನ ಷೇರು ಖರೀದಿಸಿ, ಅದೇ ದಿನ ಮಾರಾಟ ಮಾಡಿದರೆ ಮಾರಾಟ ಮಾಡುವಾಗ ಮಾತ್ರ ಒಟ್ಟು ಮೌಲ್ಯದ ಮೇಲೆ ಶೇ 0.025ರಷ್ಟು ತೆರಿಗೆ ಬರುತ್ತದೆ.

ಸರಕು ಮತ್ತು ಸೇವಾ ತೆರಿಗೆ: ಷೇರುಗಳ ಖರೀದಿ ಮತ್ತು ಮಾರಾಟ ಮಾಡುವ ಸ್ಥಳವೇ ಷೇರುಪೇಟೆ. ಷೇರುಗಳ ಖರೀದಿ ಮತ್ತು ಮಾರಾಟ ಸೇವೆಯನ್ನು ಷೇರು ಬ್ರೋಕರೇಜ್ ಸಂಸ್ಥೆಗಳು ಒದಗಿಸುವುದರಿಂದ ಸರಕು ಮತ್ತು ಸೇವಾ ತೆರಿಗೆ ಅನ್ವಯಿಸುತ್ತದೆ.

ಷೇರು ವಹಿವಾಟಿನಲ್ಲಿ ಒಟ್ಟು ಮೂರು ವೆಚ್ಚಗಳನ್ನು ಆಧರಿಸಿ ಸರಕು ಮತ್ತು ಸೇವಾ ತೆರಿಗೆಯನ್ನು ವಿಧಿಸಲಾಗುತ್ತದೆ. ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಶುಲ್ಕ, ಬ್ರೋಕರೇಜ್ ಶುಲ್ಕ ಮತ್ತು ವಹಿವಾಟು ಶುಲ್ಕದ ಮೇಲೆ ಸರಕು ಮತ್ತು ಸೇವಾ ತೆರಿಗೆ ವಿಧಿಸುತ್ತದೆ. ಸದ್ಯ ಷೇರು ಹೂಡಿಕೆಯ ಮೇಲೆ ಶೇ 18ರಷ್ಟು ಜಿಎಸ್‌ಟಿ ಇದೆ. 

ಮುದ್ರಾಂಕ ಶುಲ್ಕ: ಷೇರುಗಳ ಮಾರಾಟ ಮತ್ತು ವರ್ಗಾವಣೆಗೆ ಮುದ್ರಾಂಕ ಶುಲ್ಕ ಅನ್ವಯಿಸುತ್ತದೆ. ಕೇಂದ್ರ ಸರ್ಕಾರವು ಷೇರು ಖರೀದಿದಾರನಿಂದ ಮುದ್ರಾಂಕ ಶುಲ್ಕ ಪಡೆಯುತ್ತದೆ. ಸದ್ಯ ಷೇರಿನ ಮಾರುಕಟ್ಟೆ ಮೌಲ್ಯದ ಶೇ 0.015ರಷ್ಟು ಮುದ್ರಾಂಕ ಶುಲ್ಕ ಪಡೆಯಲಾಗುತ್ತಿದೆ.

ಅಂದರೆ ಪ್ರತಿ ₹10 ಸಾವಿರದ ವಹಿವಾಟಿಗೆ ₹1.5 ಮುದ್ರಾಂಕ ಶುಲ್ಕ ಕಟ್ಟಬೇಕಾಗುತ್ತದೆ. ಇಂಟ್ರಾ ಡೇ ಅಂದರೆ ಅಂದೇ ಷೇರು ಖರೀದಿಸಿ ಅಂದೇ ಮಾರಾಟ ಮಾಡಿದರೆ ಶೇ 0.003ರಷ್ಟು ಮುದ್ರಾಂಕ ಶುಲ್ಕ ಅನ್ವಯಿಸುತ್ತದೆ.

ಬಂಡವಾಳ ಗಳಿಕೆ ತೆರಿಗೆ: ಷೇರು ಹೂಡಿಕೆ ಮೇಲಿನ ಗಳಿಕೆಗೆ ಕಟ್ಟಬೇಕಾಗಿ ಬರುವ ತೆರಿಗೆಯನ್ನು ಬಂಡವಾಳ ಗಳಿಕೆ ತೆರಿಗೆ ಎನ್ನಲಾಗುತ್ತದೆ. ಎಷ್ಟು ಅವಧಿಗೆ ಷೇರುಗಳಲ್ಲಿ ಹೂಡಿಕೆ ಮಾಡಿದ್ದೀರಿ ಎನ್ನುವುದನ್ನು ಆಧರಿಸಿ ಬಂಡವಾಳ ಗಳಿಕೆ ತೆರಿಗೆಯನ್ನು ನಿಗದಿ ಮಾಡಲಾಗುತ್ತದೆ. ಬಂಡವಾಳ ಗಳಿಕೆ ತೆರಿಗೆಯಲ್ಲಿ ಅಲ್ಪಾವಧಿ ಬಂಡವಾಳ ಗಳಿಕೆ ತೆರಿಗೆ (ಎಸ್‌ಟಿಸಿಜಿ) ಮತ್ತು ದೀರ್ಘಾವಧಿ ಬಂಡವಾಳ ಗಳಿಕೆ ತೆರಿಗೆ (ಎಲ್‌ಟಿಸಿಜಿ) ಎಂಬ ಎರಡು ವಿಧಗಳಿವೆ.

ಅಲ್ಪಾವಧಿ ಬಂಡವಾಳ ಗಳಿಕೆ ತೆರಿಗೆ: ಷೇರು ಹೂಡಿಕೆ ಮಾಡಿದ ಒಂದು ವರ್ಷದ ಒಳಗಾಗಿ ಷೇರುಗಳನ್ನು ಮಾರಾಟ ಮಾಡಿ ಲಾಭ ಗಳಿಸಿದರೆ ಶೇ 15ರಷ್ಟು ಅಲ್ಪಾವಧಿ ಬಂಡವಾಳ ಗಳಿಕೆ ತೆರಿಗೆ ಕಟ್ಟಬೇಕಾಗುತ್ತದೆ. ಉದಾಹರಣೆಗೆ 2024ರ ಜನವರಿಯಲ್ಲಿ ‘ಎ’ ಎನ್ನುವ ಷೇರಿನ ಮೇಲೆ ರಾಜು ₹50 ಸಾವಿರ ಹೂಡಿಕೆ ಮಾಡಿದ್ದಾರೆ ಎಂದು ಭಾವಿಸಿ. ಆ ‘ಎ’ ಷೇರಿನ ಮೇಲೆ ಹೂಡಿಕೆ ಮಾಡಿರುವ ₹50 ಸಾವಿರದ ಮೇಲೆ ಅದೇ ವರ್ಷದ ಏಪ್ರಿಲ್‌ನಲ್ಲಿ ರಾಜು ಅವರು ₹10 ಸಾವಿರ ಲಾಭ ಗಳಿಸಿದ್ದಾರೆ ಎಂದುಕೊಳ್ಳಿ. ಇಂತಹ ಸಂದರ್ಭದಲ್ಲಿ ₹10 ಸಾವಿರ ಗಳಿಕೆ ಮೇಲೆ ರಾಜು, ಶೇ 15ರಷ್ಟು ತೆರಿಗೆ ಅಂದರೆ ₹1,500 ಕಟ್ಟಬೇಕಾಗುತ್ತದೆ.

ದೀರ್ಘಾವಧಿ ಬಂಡವಾಳ ಗಳಿಕೆ ತೆರಿಗೆ: ಷೇರು ಹೂಡಿಕೆ ಮಾಡಿದ ಒಂದು ವರ್ಷದ ನಂತರ ಷೇರುಗಳನ್ನು ಮಾರಾಟ ಮಾಡಿ ₹1 ಲಕ್ಷಕ್ಕಿಂತ ಹೆಚ್ಚಿನ ಲಾಭ ಗಳಿಸಿದರೆ ಶೇ 10ರಷ್ಟು ದೀರ್ಘಾವಧಿ ಬಂಡವಾಳ ಗಳಿಕೆ ತೆರಿಗೆ ಅನ್ವಯಿಸುತ್ತದೆ. ಅಂದರೆ ಮೊದಲ ₹1 ಲಕ್ಷಕ್ಕೆ ತೆರಿಗೆ ಕಟ್ಟಬೇಕಾಗಿ ಬರುವುದಿಲ್ಲ.

ಉದಾಹರಣೆಗೆ 2023ರ ಏಪ್ರಿಲ್‌ನಲ್ಲಿ ₹5 ಲಕ್ಷವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದೀರಿ ಎಂದು ಭಾವಿಸಿ. 2024ರ ಮೇ ತಿಂಗಳಿನಲ್ಲಿ ₹5 ಲಕ್ಷದ ಹೂಡಿಕೆ ಮೇಲೆ ₹1.5 ಲಕ್ಷ ಲಾಭ ಬಂದಿದೆ ಎಂದುಕೊಳ್ಳಿ. ಹೀಗಿರುವಾಗ ₹1 ಲಕ್ಷದ ವರೆಗಿನ ಗಳಿಕೆಗೆ ಯಾವುದೇ ತೆರಿಗೆ ಬರುವುದಿಲ್ಲ. ನಂತರದ ₹50 ಸಾವಿರ ಗಳಿಕೆಗೆ ಶೇ 10ರ ದರದಲ್ಲಿ ಅಂದರೆ ₹5 ಸಾವಿರ ದೀರ್ಘಾವಧಿ ಬಂಡವಾಳ ಗಳಿಕೆ ತೆರಿಗೆ ಕಟ್ಟಬೇಕಾಗುತ್ತದೆ.

ಲಾಭಾಂಶ ಗಳಿಕೆ ಮೇಲಿನ ತೆರಿಗೆ: ಕಂಪನಿಯು ಈಗಾಗಲೇ ಷೇರು ಹೂಂದಿರುವ ಹೂಡಿಕೆದಾರರಿಗೆ ತನ್ನ ಲಾಭದ ಪಾಲನ್ನು ಹಂಚುವಾಗ ಅನ್ವಯಿಸುವ ತೆರಿಗೆಗೆ ಲಾಭಾಂಶ ಗಳಿಕೆ ಮೇಲಿನ ತೆರಿಗೆ ಎನ್ನಲಾಗುತ್ತದೆ. ನೀವು ಹೂಡಿಕೆ ಮಾಡಿರುವ ಷೇರು ಕಂಪನಿಗಳು ನಿಮಗೆ ಡಿವಿಡೆಂಡ್ ಕೊಟ್ಟಾಗ ಈ ತೆರಿಗೆ
ಕಟ್ಟಬೇಕಾಗುತ್ತದೆ.

ನಿಮ್ಮ ಆದಾಯ ತೆರಿಗೆ ವ್ಯಾಪ್ತಿಗೆ (ಸ್ಲ್ಯಾಬ್) ಅನುಗುಣವಾಗಿ ಲಾಭಾಂಶ ಮೇಲಿನ ತೆರಿಗೆ ಬರುತ್ತದೆ. ಉದಾಹರಣೆಗೆ ಶೇ10ರ ತೆರಿಗೆ ವ್ಯಾಪ್ತಿಯಲ್ಲಿ ಬಂದರೆ ಶೇ10ರಷ್ಟು ತೆರಿಗೆ, ಹಾಗೆಯೇ ಶೇ 20ರ ವ್ಯಾಪ್ತಿಯಲ್ಲಿ ಬಂದರೆ ಶೇ 20 ಮತ್ತು ಶೇ 30ರ ವ್ಯಾಪ್ತಿಯಲ್ಲಿ ಬಂದರೆ ಶೇ 30ರಷ್ಟು ತೆರಿಗೆ ಬರುತ್ತದೆ.

ಒಂದೇ ಕಂಪನಿಯ ಲಾಭಾಂಶ ಹಂಚಿಕೆಯು ₹5 ಸಾವಿರ ಮೀರಿದರೆ ನಿರ್ದಿಷ್ಟ ಕಂಪನಿಯು ಮೂಲದಲ್ಲೇ ಶೇ 10ರಷ್ಟು ತೆರಿಗೆಯನ್ನು ಕಡಿತ ಮಾಡುತ್ತದೆ.

ಭಾರಿ ಕುಸಿತ ಕಂಡ ಸೂಚ್ಯಂಕಗಳು

ಏಪ್ರಿಲ್ 19ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಭಾರಿ ಕುಸಿತ ದಾಖಲಿಸಿವೆ. 73,088 ಅಂಶಗಳಲ್ಲಿ ವಹಿವಾಟನ್ನು ಮುಗಿಸಿದ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 1.56ರಷ್ಟು ಇಳಿಕೆ ಕಂಡಿದೆ.

22,147 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ನಿಫ್ಟಿ ಶೇ 1.65ರಷ್ಟು ಕುಗ್ಗಿದೆ. ಮಾರ್ಚ್ 15ರ ನಂತರ ಕಂಡಿರುವ ವಾರದ ಅತಿ ದೊಡ್ಡ ಕುಸಿತ ಇದಾಗಿದೆ.

ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಹಿಂಜರಿಕೆ, ಇಸ್ರೇಲ್–ಇರಾನ್ ಬಿಕ್ಕಟ್ಟು ಸೇರಿ ಹಲವು ಅಂಶಗಳು ಷೇರುಪೇಟೆಯ ಕುಸಿತಕ್ಕೆ ಕಾರಣವಾಗಿವೆ. ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹20 ಸಾವಿರ ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ವಲಯವಾರು ಪ್ರಗತಿಯಲ್ಲಿ ಎಲ್ಲ 12 ಸೂಚ್ಯಂಕಗಳು ಕುಸಿತ ದಾಖಲಿಸಿವೆ. ನಿಫ್ಟಿ ಮಾಹಿತಿ ತಂತ್ರಜ್ಞಾನ ಶೇ 5.45, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 4.9, ಫಾರ್ಮಾ ಶೇ 3.73, ರಿಯಲ್ ಎಸ್ಟೇಟ್ ಶೇ 3.61, ನಿಫ್ಟಿ ಬ್ಯಾಂಕ್ ಶೇ 2.88ರಷ್ಟು ಕುಸಿತ ಕಂಡಿವೆ.

ನಿಫ್ಟಿಯಲ್ಲಿ ಏರ್‌ಟೆಲ್ ಶೇ 5.23, ಒಎನ್‌ಜಿಸಿ ಶೇ 3.76, ಮಾರುತಿ ಸುಜುಕಿ ಶೇ 3.22, ಹಿಂಡಾಲ್ಕೋ ಇಂಡಸ್ಟ್ರೀಸ್ ಶೇ 2.84, ಪವರ್ ಗ್ರಿಡ್ ಶೇ 2.36, ಐಷರ್ ಮೋಟರ್ಸ್ ಶೇ 0.82 ಮತ್ತು ಎಚ್‌ಡಿಎಫ್‌ಸಿ ಶೇ 0.82ರಷ್ಟು ಗಳಿಸಿಕೊಂಡಿವೆ.

ಅದಾನಿ ಎಂಟರ್ ಪ್ರೈಸಸ್ ಶೇ 5.7, ಟಾಟಾ ಮೋಟರ್ಸ್ ಶೇ 5.42, ಹೀರೊ ಮೊಟೊಕಾರ್ಪ್‌ ಶೇ 5.18, ಇನ್ಫೊಸಿಸ್ ಶೇ 4.95, ಎಚ್‌ಸಿಎಲ್ ಶೇ 4.66, ಬಜಾಜ್ ಫಿನ್‌ಸರ್ವ್ ಶೇ 4.62, ಶ್ರೀರಾಮ್ ಫೈನಾನ್ಸ್ ಶೇ 4.61, ಕೋಲ್ ಇಂಡಿಯಾ ಶೇ 4.47, ಟಿಸಿಎಸ್ ಶೇ 4.32 ಮತ್ತು ಎಲ್ ಆ್ಯಂಡ್‌ ಟಿ ಶೇ 4.32ರಷ್ಟು ಕುಸಿದಿವೆ.

ಮುನ್ನೋಟ: ಈ ವಾರ ರಿಲಯನ್ಸ್, ಹಿಂದುಸ್ಥಾನ್ ಯೂನಿಲಿವರ್, ಎಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಮಾರುತಿ ಸುಜುಕಿ, ಎಚ್‌ಸಿಎಲ್ ಟೆಕ್, ಬಜಾಜ್ ಫಿನ್‌ಸರ್ವ್, ನೆಸ್ಲೆ ಇಂಡಿಯಾ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತಿವೆ. ಉಳಿದಂತೆ ಇಸ್ರೇಲ್–ಇರಾನ್ ಬಿಕ್ಕಟ್ಟು, ಜಾಗತಿಕ ವಿದ್ಯಮಾನಗಳು ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ.

(ಲೇಖಕಿ: ಚಾರ್ಟರ್ಡ್ ಅಕೌಂಟೆಂಟ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT