ಗುರುವಾರ , ಸೆಪ್ಟೆಂಬರ್ 23, 2021
22 °C
ಆರ್‌ಬಿಐ ಮೇಲೆ ಬಲ ಪ್ರಯೋಗಕ್ಕೆ ಮುಂದಾಯ್ತೇ ಕೇಂದ್ರ?

ರಿಸರ್ವ್ ಬ್ಯಾಂಕ್‌ ಮೇಲೆ ಇದೇ ಮೊದಲ ಬಾರಿ ‘ಸೆಕ್ಷನ್ 7’ ಜಾರಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ರಿಸರ್ವ್‌ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಜತೆ ಉಂಟಾಗಿರುವ ಬಿಕ್ಕಟ್ಟಿನ ನಿವಾರಣೆ ಸಲುವಾಗಿ ಮೊತ್ತ ಮೊದಲ ಬಾರಿ ಕೇಂದ್ರ ಸರ್ಕಾರ ಆರ್‌ಬಿಐ ಕಾಯ್ದೆಯ 7ನೇ ಸೆಕ್ಷನ್ ಅನ್ವಯ ಸೂಚನೆಗಳನ್ನು ರವಾನಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಪ್ರಧಾನಿ ಮೋದಿಗೆ ಸುಸ್ತಿದಾರರ ಪಟ್ಟಿ ನೀಡಿದ್ದ ರಘುರಾಮ್ ರಾಜನ್​

ಸರ್ಕಾರ ಸೆಕ್ಷನ್ 7ರ ಅನ್ವಯ ನಿರ್ಧಾರಗಳನ್ನು ಹೇರಿದರೆ ಆರ್‌ಬಿಐ ಗ‌ವನರ್ನರ್ ಊರ್ಜಿತ್ ಪಟೇಲ್ ರಾಜೀನಾಮೆಗೆ ಮುಂದಾಗಲಿದ್ದಾರೆ ಎಂಬ ವರದಿಗಳು ಬುಧವಾರ ಮುಂಜಾನೆಯಿಂದ ರಾಷ್ಟ್ರೀಯ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇದರ ಬೆನ್ನಲ್ಲೇ ಸರ್ಕಾರ ಸೆಕ್ಷನ್ 7ರ ಜಾರಿ ಪ್ರಕ್ರಿಯೆ ಆರಂಭಿಸಿದೆ.

1991 ಹಾಗೂ 2008ರಲ್ಲಿ ಮಹಾ ಆರ್ಥಿಕ ಬಿಕ್ಕಟ್ಟು ಉಂಟಾದಾಗಲೂ ಕೇಂದ್ರ ಸರ್ಕಾರ ಸೆಕ್ಷನ್ 7 ಜಾರಿ ಮಾಡಿರಲಿಲ್ಲ.

ಇದನ್ನೂ ಓದಿ: ಕೇಂದ್ರ ಸರ್ಕಾರ–ಆರ್‌ಬಿಐ ಬಿಕ್ಕಟ್ಟು ಉಲ್ಬಣ: ಊರ್ಜಿತ್ ಪಟೇಲ್ ರಾಜೀನಾಮೆ ಸಾಧ್ಯತೆ

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಹಾಗೂ ಅನುತ್ಪಾದಕ ಸಾಲಗಳ ನಿರ್ವಹಣೆ, ಮಾರುಕಟ್ಟೆ ನಗದು ನಿರ್ವಹಣೆ ವಿಷಯಕ್ಕೆ ಸಂಬಂಧಿಸಿ ಸರ್ಕಾರ ಮತ್ತು ಆರ್‌ಬಿಐ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎನ್ನಲಾಗಿದೆ.

ಕಳೆದ ಕೆಲವು ವಾರಗಳಲ್ಲಿ ಹಣಕಾಸು ಸಚಿವಾಲಯ ಆರ್‌ಬಿಐಗೆ ಮೂರು ಪ್ರತ್ಯೇಕ ಪತ್ರಗಳನ್ನು ಬರೆದಿದೆ. ನಗದು ನಿರ್ವಹಣೆ ವಿಷಯಕ್ಕೆ ಸಂಬಂಧಿಸಿ ಪ್ರಾಂಪ್ಟ್‌ ಕರೆಕ್ಟಿವ್ ಆ್ಯಕ್ಷನ್ (ಪಿಸಿಎ) ಅನ್ವಯ ರೂಪುರೇಷೆ ಸಿದ್ಧಪಡಿಸುವ ವಿಷಯಕ್ಕೆ ಸಂಬಂಧಿಸಿ ಆರ್‌ಬಿಐ ಕಾಯ್ದೆಯ 7ನೇ ಸೆಕ್ಷನ್ ಅನ್ವಯ ಸಮಾಲೋಚನೆ ನಡೆಸಲು ಪತ್ರದಲ್ಲಿ ಕೋರಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಆರ್‌ಬಿಐ ಸ್ವಾತಂತ್ರ್ಯ ಗೌರವಿಸದಿದ್ದರೆ ಕುಸಿಯಲಿದೆ ಆರ್ಥಿಕತೆ: ವಿ.ವಿ. ಆಚಾರ್ಯ

ಅನುತ್ಪಾದಕ ಸಾಲದ ಘೋಷಣೆ ವೇಳೆ ವಿದ್ಯುತ್ ಕಂಪನಿಗಳಿಗೆ ಪಿಸಿಎ ಅನ್ವಯ ಆರ್‌ಬಿಐ ವಿನಾಯಿತಿ ನೀಡಬೇಕು ಎಂದು ಸರ್ಕಾರ ಮೊದಲ ಪತ್ರದಲ್ಲಿ ಕೋರಿದೆ. ಮಾರುಕಟ್ಟೆಯ ನಗದು ನಿರ್ವಹಣೆಗೆ ಆರ್‌ಬಿಐಯ ಮೀಸಲು ಬಂಡವಾಳವನ್ನು ಬಳಸಬೇಕು ಎಂದು ಎರಡನೇ ಪತ್ರದಲ್ಲಿಯೂ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಾಲ ನೀಡಿಕೆ ನಿರ್ಬಂಧಗಳನ್ನು ನಿವಾರಿಸಬೇಕು ಎಂದು ಮೂರನೇ ಪತ್ರದಲ್ಲಿ ಕೋರಿದೆ ಎನ್ನಲಾಗಿದೆ. 

ಏನಿದು ಸೆಕ್ಷನ್‌ 7?

ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಗಂಭೀರ ವಿಷಯಗಳಲ್ಲಿ ಆರ್‌ಬಿಐಗೆ ನಿರ್ದೇಶನ ನೀಡುವ ಅಧಿಕಾರವನ್ನು ಆರ್‌ಬಿಐ ಕಾಯ್ದೆಯ 7ನೇ ಸೆಕ್ಷನ್ ಕೇಂದ್ರ ಸರ್ಕಾರಕ್ಕೆ ನೀಡುತ್ತದೆ. ದೇಶದ ಇತಿಹಾಸದಲ್ಲಿ ಈ ಸೆಕ್ಷನ್ ಅನ್ನು ಇದುವರೆಗೂ ಜಾರಿ ಮಾಡಲಾಗಿಲ್ಲ.

ಎರಡು ಅಂಶಗಳಿವೆ: ಎರಡು ವಿಭಾಗಗಳಲ್ಲಿ ಸೆಕ್ಷನ್‌ 7 ಅನ್ನು ಜಾರಿ ಮಾಡಲಾಗುತ್ತದೆ. ಮೊದಲ ಹಂತದಲ್ಲಿ, ಸೆಕ್ಷನ್‌ 7 ಜಾರಿ ಮಾಡುವ ಬಗ್ಗೆ ಆರ್‌ಬಿಐ ಗವರ್ನರ್ ಜತೆ ಕೇಂದ್ರ ಸರ್ಕಾರ ಸಮಾಲೋಚನೆ ನಡೆಸುತ್ತದೆ. ಎರಡನೇ ಹಂತದಲ್ಲಿ, ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿ ನಿರ್ದಿಷ್ಟ ನಿರ್ಧಾರ ಕೈಗೊಳ್ಳುವಂತೆ ಆರ್‌ಬಿಐಗೆ ಸೂಚನೆ ನೀಡಲಾಗುತ್ತದೆ. ಸ್ವಾಯತ್ತ ಸಂಸ್ಥೆಯಾದರೂ ಆರ್‌ಬಿಐ ಈ ಸೂಚನೆಯನ್ನು ಪಾಲಿಸಲೇಬೇಕಾಗುತ್ತದೆ. ಸದ್ಯ ಸೆಕ್ಷನ್‌ 7ಕ್ಕೆ ಸಂಬಂಧಿಸಿದ ಸಮಾಲೋಚನೆ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

*****

ಸೆಕ್ಷನ್‌ 7 ಜಾರಿಗೆ ಸರ್ಕಾರ ಮುಂದಾಗಿರುವುದು ನಿಜವೇ ಆದಲ್ಲಿ; ಸರ್ಕಾರ ಹತಾಶವಾಗಿದೆ ಮತ್ತು ಆರ್ಥಿಕತೆಗೆ ಸಂಬಂಧಿಸಿದ ವಾಸ್ತವಾಂಶಗಳನ್ನು ಮುಚ್ಚಿಡುತ್ತಿದೆ ಎಂದು ಭಾವಿಸಬೇಕಾಗುತ್ತದೆ.

– ಪಿ.ಚಿದಂಬರಂ, ಕೇಂದ್ರದ ಮಾಜಿ ಹಣಕಾಸು ಸಚಿವ

ಇನ್ನಷ್ಟು...

ಆರ್‌ಬಿಐ ನಿಲುವು: ಜೇಟ್ಲಿ ಟೀಕೆ

ನೋಟು ರದ್ದತಿ ನಂತರ ಮನೆಯಲ್ಲಿ ನಗದು ಇಟ್ಟುಕೊಳ್ಳುವ ಪ್ರಮಾಣ ಹೆಚ್ಚಳ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು