ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಣ ದ್ರಾಕ್ಷಿಗೆ ಬೇಕಿದೆ ಶೀತಲ ಘಟಕ: ಮಹಾರಾಷ್ಟ್ರದತ್ತ ಮುಖ ಮಾಡುವ ಬೆಳೆಗಾರರು

ಮಹಾರಾಷ್ಟ್ರದತ್ತ ಮುಖ ಮಾಡುವ ದ್ರಾಕ್ಷಿ ಬೆಳೆಗಾರರು
Published 29 ಜೂನ್ 2023, 23:31 IST
Last Updated 29 ಜೂನ್ 2023, 23:31 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹವಾಮಾನ ವೈಪರೀತ್ಯ, ಅಕಾಲಿಕ ಮಳೆ ಮಧ್ಯೆ ಒಣ ದ್ರಾಕ್ಷಿ ಸಿದ್ಧಪಡಿಸುವುದು ರೈತರಿಗೆ ಸವಾಲು. ಒಣ ದ್ರಾಕ್ಷಿ ಶೇಖರಿಸಿಡಲು ಶೀತಲ ಘಟಕಗಳು (ಕೋಲ್ಡ್ ಸ್ಟೋರೇಜ್) ಕೊರತೆ ಇರುವುದರಿಂದ ಬಹುತೇಕ ರೈತರು ಮಹಾರಾಷ್ಟ್ರದತ್ತ ಮುಖ ಮಾಡುತ್ತಿದ್ದಾರೆ.

ರಾಜ್ಯದ 32,473 ಹೆಕ್ಟೇರ್‌ ಪ್ರದೇಶದಲ್ಲಿ ವರ್ಷಕ್ಕೆ 8.21 ಲಕ್ಷ ಮೆಟ್ರಿಕ್‌ ಟನ್‌ ದ್ರಾಕ್ಷಿ ಬೆಳೆದರೆ, ವಿಜಯಪುರ, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ 25,637 ಹೆಕ್ಟೇರ್‌ ಪ್ರದೇಶದಲ್ಲಿ 6.64 ಲಕ್ಷ ಮೆಟ್ರಿಕ್‌ ಟನ್‌ ದ್ರಾಕ್ಷಿ ಬೆಳೆಯಲಾಗುತ್ತದೆ. ಶೇ 90ರಷ್ಟು ಒಣ ದ್ರಾಕ್ಷಿ ಇಲ್ಲಿಯೇ ಸಿದ್ಧವಾಗುತ್ತದೆ.

‘1.25 ಲಕ್ಷ ಮೆಟ್ರಿಕ್‌ ಟನ್ ಒಣ ದ್ರಾಕ್ಷಿಗೆ ಶೀತಲ ಘಟಕ ಬೇಕು. ಆದರೆ, ಮೂರು ಜಿಲ್ಲೆ ಸೇರಿ 40 ಸಾವಿರ ಮೆಟ್ರಿಕ್‌ ಟನ್‌ ಮಾತ್ರ ಒಣ ದ್ರಾಕ್ಷಿಯನ್ನು ಶೀತಲ ಘಟಕಗಳಲ್ಲಿ ಶೇಖರಿಸಿಡಬಹುದು. ಇನ್ನುಳಿದ 85 ಸಾವಿರ ಮೆಟ್ರಿಕ್‌ ಟನ್‌ ಒಣ ದ್ರಾಕ್ಷಿಗೆ ಶೀತಲ ಘಟಕದ ವ್ಯವಸ್ಥೆ ಕಲ್ಪಿಸಬೇಕು’ ಎಂಬುದು ಒಣ ದ್ರಾಕ್ಷಿ ಉತ್ಪಾದಕರ ಒತ್ತಾಯ.

‘ಶೀತಲ ಘಟಕಗಳ ಕೊರತೆ ಇರುವ ಕಾರಣ ಬಹುತೇಕ ರೈತರು ಮಹಾರಾಷ್ಟ್ರದತ್ತ ಮುಖ ಮಾಡುತ್ತಾರೆ. ಇದರಿಂದ ಶೇ 80ರಷ್ಟು ಒಣದ್ರಾಕ್ಷಿ ಅಲ್ಲಿಯೇ ಸಂಗ್ರಹಿಸಿಡಲಾಗುತ್ತದೆ. ಒಂದು ಲಕ್ಷ ಟನ್‌ ಒಣದ್ರಾಕ್ಷಿ ಮಾರಾಟವಾಗಿ, ₹2 ಸಾವಿರ ಕೋಟಿ ವ್ಯಾಪಾರ ನಡೆಯುತ್ತದೆ. ಇದರಿಂದ ರಾಜ್ಯಕ್ಕೂ ಆರ್ಥಿಕ ನಷ್ಟ’ ಎಂದು ಒಣ ದ್ರಾಕ್ಷಿ ಉತ್ಪಾದಕರು ತಿಳಿಸಿದರು.

ಘೋಷಿಸಿದ್ದು ₹35 ಕೋಟಿ; ಕೊಟ್ಟಿದ್ದು ₹2 ಕೋಟಿ: ‘ವಿಜಯಪುರದಲ್ಲಿರುವ ರಾಜ್ಯ ದ್ರಾಕ್ಷಿ ಮತ್ತು ದ್ರಾಕ್ಷಾರಸ ಮಂಡಳಿಯ 145 ಎಕರೆ ಜಾಗದಲ್ಲಿ ಶೀತಲ ಘಟಕ ನಿರ್ಮಾಣಕ್ಕೆ ಕಳೆದ ಸಾಲಿನ ಬಜೆಟ್‌ನಲ್ಲಿ ₹ 35 ಕೋಟಿ ಅನುದಾನ ಸರ್ಕಾರ ಘೋಷಿಸಿತು. ಆದರೆ ₹ 2 ಕೋಟಿಯಷ್ಟೇ ಕೊಟ್ಟಿತು’ ಎಂದು ಕರ್ನಾಟಕ ದ್ರಾಕ್ಷಿ ಬೆಳೆಗಾರರ ಅಸೋಷಿಯೇಷನ್‌ ಅಧ್ಯಕ್ಷ ಅಭಯಕುಮಾರ್‌ ಎಸ್‌. ನಾಂದ್ರೇಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಅಭಯಕುಮಾರ್‌ ಎಸ್‌. ನಾಂದ್ರೇಕರ್‌
ಅಭಯಕುಮಾರ್‌ ಎಸ್‌. ನಾಂದ್ರೇಕರ್‌
12 ವರ್ಷಗಳಿಂದ ಹೆಚ್ಚುವರಿ ಶೀತಲ ಘಟಕಗಳ ನಿರ್ಮಾಣಕ್ಕೆ ಒತ್ತಡ ಹೇರುತ್ತಿದ್ದೇವೆ. ಉತ್ತರ ಕರ್ನಾಟಕ ಭಾಗದ ಜನಪ್ರತಿನಿಧಿಗಳ ಹಿತಾಸಕ್ತಿ ಕೊರತೆಯಿಂದ ಬೇಡಿಕೆ ಈಡೇರಿಲ್ಲ
– ಅಭಯಕುಮಾರ್‌ ಎಸ್‌. ನಾಂದ್ರೇಕರ್‌ ಅಧ್ಯಕ್ಷ ಕರ್ನಾಟಕ ದ್ರಾಕ್ಷಿ ಬೆಳೆಗಾರರ ಅಸೋಷಿಯೇಷನ್‌ ವಿಜಯಪುರ

‘ಶೀತಲ ಘಟಕ ನಿರ್ಮಾಣಕ್ಕೆ ನಬಾರ್ಡ್ ನೆರವು’

‘ಶೀತಲ ಘಟಕಗಳ ನಿರ್ಮಾಣಕ್ಕೆ ನಬಾರ್ಡ್ ಸಂಸ್ಥೆಯು ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿಯಡಿ ₹ 40.75 ಕೋಟಿ ಆರ್ಥಿಕ ನೆರವು ನೀಡಿದೆ. ಈ ನಿಟ್ಟಿನಲ್ಲಿ ಮುಂದಿನ ಹಂತದ ಪ್ರಕ್ರಿಯೆ ಪ್ರಗತಿಯಲ್ಲಿದೆ’ ಎಂದು ಕರ್ನಾಟಕ ರಾಜ್ಯ ದ್ರಾಕ್ಷಿ ಮತ್ತು ದ್ರಾಕ್ಷಾರಸ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಟಿ.ಸೋಮು ತಿಳಿಸಿದರು. ‘ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದಡಿ (ಕೆಪೆಕ್‌) 1 ಕೆ.ಜಿ ಒಣ ದ್ರಾಕ್ಷಿಯನ್ನು 1 ವರ್ಷ ಶೀತಲ ಘಟಕಗಳಲ್ಲಿ ಸಂಗ್ರಹಿಸಿಡಲು 47 ಪೈಸೆ ದರ ಇದೆ. ಖಾಸಗಿ ಶೀತಲ ಘಟಕಗಳಲ್ಲಿ 55 ರಿಂದ 75 ಪೈಸೆ ದರ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT