ಶುಕ್ರವಾರ, ಮೇ 20, 2022
24 °C

25 ಸಾವಿರ ಟನ್ ಈರುಳ್ಳಿ ಆಮದು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ (ಪಿಟಿಐ): ವರ್ತಕರು ಆಮದು ಮಾಡಿಕೊಂಡಿರುವ ಏಳು ಸಾವಿರ ಟನ್ ಈರುಳ್ಳಿ ಹಾಗೂ ದೀಪಾವಳಿಗೂ ಮೊದಲು ದೇಶಕ್ಕೆ ಆಮದಾಗಲಿರುವ 25 ಸಾವಿರ ಟನ್ ಈರುಳ್ಳಿಯು ಬೆಲೆ ಏರಿಕೆಗೆ ತಡೆಯೊಡ್ಡಲಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪೀಯೂಷ್ ಗೋಯಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (ನಫೇದ್) ಕೂಡ ಈರುಳ್ಳಿ ಆಮದಿಗೆ ಮುಂದಾಗಲಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಈರುಳ್ಳಿಯ ಲಭ್ಯತೆ ಹೆಚ್ಚಿರಲಿದೆ. ಈರುಳ್ಳಿ ಮಾತ್ರವೇ ಅಲ್ಲದೆ, ಬಟಾಟೆಯನ್ನೂ ಆಮದು ಮಾಡಿಕೊಳ್ಳಲಾಗುತ್ತಿದೆ. ಬಟಾಟೆ ಮೇಲಿನ ಕಸ್ಟಮ್ಸ್ ಸುಂಕವನ್ನು ಜನವರಿವರೆಗೆ ಅನ್ವಯ ಆಗುವಂತೆ ಶೇಕಡ 10ಕ್ಕೆ ಇಳಿಕೆ ಮಾಡಲಾಗಿದೆ ಎಂದು ಗೋಯಲ್ ತಿಳಿಸಿದರು.

30 ಸಾವಿರ ಟನ್‌ಗಳಷ್ಟು ಬಟಾಟೆಯು ಭೂತಾನ್‌ ದೇಶದಿಂದ ಇನ್ನು ಎರಡು ದಿನಗಳಲ್ಲಿ ಆಮದಾಗಲಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈರುಳ್ಳಿ, ಬಟಾಟೆ ಮತ್ತು ಕೆಲವು ಧಾನ್ಯಗಳ ಬೆಲೆಯಲ್ಲಿ ಏರಿಕೆ ಆಗಿದ್ದರೂ, ಸರ್ಕಾರ ಒಂದಿಷ್ಟು ಕ್ರಮಗಳನ್ನು ಕೈಗೊಂಡ ನಂತರ ಅವುಗಳ ಬೆಲೆ ಸ್ಥಿರವಾಗಿದೆ ಎಂದರು.

ಈಗ ಅಖಿಲ ಭಾರತ ಮಟ್ಟದಲ್ಲಿ ಈರುಳ್ಳಿ ಚಿಲ್ಲರೆ ಮಾರಾಟ ದರವು ಕೆ.ಜಿ.ಗೆ ₹ 65ರ ಆಸುಪಾಸಿನಲ್ಲಿ ಇದೆ. ಬಟಾಟೆ ದರವು ಕೆ.ಜಿ.ಗೆ ₹ 43ರ ಆಸುಪಾಸಿನಲ್ಲಿ ಇದೆ ಎಂದು ಗೋಯಲ್ ಹೇಳಿದರು. ಹೀಗಿದ್ದರೂ, ಹಬ್ಬದ ಸಂದರ್ಭದಲ್ಲಿ ಗ್ರಾಹಕರಿಗೆ ಇವು ಕಡಿಮೆ ಬೆಲೆಗೆ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಇವುಗಳ ಆಮದಿಗೆ ಕೆಂದ್ರವು ಕ್ರಮ ಕೈಗೊಂಡಿದೆ ಎಂದರು. ದೇಶದ ಕೆಲವು ಚಿಲ್ಲರೆ ಮಾರುಕಟ್ಟೆಗಳಲ್ಲಿ ಈರುಳ್ಳಿ ದರವು ಕೆ.ಜಿ.ಗೆ ₹ 80ಕ್ಕಿಂತ ಹೆಚ್ಚಾಗಿರುವ ವರದಿಗಳು ಇವೆ.

ವರ್ತಕರು ಈರುಳ್ಳಿಯನ್ನು ಈಜಿಪ್ಟ್, ಅಫ್ಗಾನಿಸ್ತಾನ ಮತ್ತು ಟರ್ಕಿ ದೇಶಗಳಿಂದ ಆಮದು ಮಾಡಿಕೊಳ್ಳುತ್ತಾರೆ. ಆಮದು ಮಾಡಿಕೊಂಡ ಈರುಳ್ಳಿ ಜೊತೆಯಲ್ಲೇ ಮುಂದಿನ ತಿಂಗಳಲ್ಲಿ ಮುಂಗಾರು ಹಂಗಾಮಿನ ಈರುಳ್ಳಿ ಬೆಳೆ ಮಂಡಿಗಳಲ್ಲಿ ಲಭ್ಯವಾಗಲಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಈರುಳ್ಳಿ ಪೂರೈಕೆಯು ಉತ್ತಮಗೊಳ್ಳಲಿದ್ದು, ಬೆಲೆ ತಗ್ಗಲಿದೆ ಎಂಬ ವಿಶ್ವಾಸವನ್ನು ಗೋಯಲ್ ವ್ಯಕ್ತಪಡಿಸಿದರು.

1 ಲಕ್ಷ ಟನ್‌ ಈರುಳ್ಳಿಯನ್ನು ತನ್ನ ದಾಸ್ತಾನಿನಲ್ಲಿ ಸಂಗ್ರಹಿಸಿ ಇಟ್ಟುಕೊಂಡಿರುವ ನೆಫೇದ್ ಅದನ್ನು ಮಾರುಕಟ್ಟೆಗೆ ಪೂರೈಸಲಿದೆ. ಈವರೆಗೆ ಅದು ಒಟ್ಟು 36,488 ಟನ್ ಈರುಳ್ಳಿಯನ್ನು ಪೂರೈಸಿದೆ.

‘10 ಲಕ್ಷ ಟನ್ ಬಟಾಟೆಯನ್ನು ಆಮದು ಮಾಡಿಕೊಂಡು, ಬೆಲೆಯನ್ನು ನಿಯಂತ್ರಣಕ್ಕೆ ತರಲಿದ್ದೇವೆ’ ಎಂದು ಗೋಯಲ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು