ಷೇರು ವಿಕ್ರಯ ರದ್ದು: ಅದಾನಿ ಎಂಟರ್‌ಪ್ರೈಸಸ್ ನಿರ್ಧಾರ

ನವದೆಹಲಿ: ಮಾರುಕಟ್ಟೆಯಲ್ಲಿನ ಸ್ಥಿತ್ಯಂತರದ ಹಿನ್ನೆಲೆಯಲ್ಲಿ ಅದಾನಿ ಸಮೂಹವು ₹ 20 ಸಾವಿರ ಕೋಟಿ ಮೌಲ್ಯದ ಷೇರು ವಿಕ್ರಯ ಪ್ರಕ್ರಿಯೆಯನ್ನು ಹಿಂಪಡೆಯಲು ತೀರ್ಮಾನಿಸಿದೆ.
ಮುಂದುವರಿದ ಷೇರು ವಿಕ್ರಯ (ಎಫ್‌ಪಿಒ) ಪ್ರಕ್ರಿಯೆಯನ್ನು ಕೈಬಿಡಲು ನಿರ್ಧರಿಸಿದ್ದು, ಮೊತ್ತವನ್ನು ಹೂಡಿಕೆದಾರರಿಗೆ ಹಿಂದಿರುಗಿಸಲಾಗುವುದು ಎಂದು ಕಂಪನಿಯ ಹೇಳಿಕೆ ತಿಳಿಸಿದೆ. ಮಂಗಳವಾರವಷ್ಟೇ ಎಫ್‌ಪಿಒ ಷೇರು ಪೂರ್ಣ ಪ್ರಮಾಣದಲ್ಲಿ ಮಾರಾಟವಾಗಿತ್ತು. ಒಂದು ದಿನದ ಬಳಿಕ ಈ ಪ್ರಕ್ರಿಯೆಯನ್ನು ರದ್ದುಪಡಿಸುವ ಹೇಳಿಕೆ ಹೊರಬಿದ್ದಿದೆ.
ಮಾರುಕಟ್ಟೆ ಸ್ಥಿತಿಯ ಹಿನ್ನೆಲೆಯಲ್ಲಿ ಹೂಡಿಕೆದಾರರ ಸಮುದಾಯದ ಹಿತರಕ್ಷಿಸುವ ಕ್ರಮವಾಗಿ ಷೇರುಗಳ ಮುಂದುವರಿದ ಮಾರಾಟ ಕೈಬಿಡಲಾಗಿದೆ ಎಂದು ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಸಂಸ್ಥೆಯು ಹೇಳಿಕೆಯಲ್ಲಿ ತಿಳಿಸಿದೆ.
ಹಿಂಡನ್‌ಬರ್ಗ್ ರಿಸರ್ಚ್ ಸಂಸ್ಥೆಯು ಅದಾನಿ ಸಮೂಹದ ಕುರಿತು ವರದಿಯನ್ನು ಪ್ರಕಟಿಸಿದ ನಂತರದಲ್ಲಿ ಸಮೂಹದ ಕಂಪನಿಗಳ ಷೇರು ಮೌಲ್ಯ ಕುಸಿತ ಕಾಣುತ್ತಿದೆ. ಬುಧವಾರದ ವಹಿವಾಟಿನ ಕೊನೆಯಲ್ಲಿ, ಸಮೂಹದ ಎಲ್ಲ ಕಂಪನಿಗಳ ಷೇರುಮೌಲ್ಯವು ಕುಸಿತ ಕಂಡಿದೆ.
ಕಳೆದ ಐದು ವಹಿವಾಟು ದಿನಗಳಲ್ಲಿ ಸಮೂಹದ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯವು ₹ 7 ಲಕ್ಷ ಕೋಟಿಗಿಂತ ಹೆಚ್ಚಿನ ಕುಸಿತ ಕಂಡಿದೆ.
ಅದಾನಿ ಎಂಟರ್‌ಪ್ರೈಸಸ್ ಶೇ 28.45ರಷ್ಟು, ಅದಾನಿ ಪೋರ್ಟ್ಸ್ ಆ್ಯಂಡ್ ಸ್ಪೆಷನ್ ಎಕನಾಮಿಕ್ ಜೋನ್ ಶೇ 19.69ರಷ್ಟು, ಅದಾನಿ ಟೋಟಲ್ ಗ್ಯಾಸ್ ಶೇ 10ರಷ್ಟು, ಅದಾನಿ ಗ್ರೀನ್ ಎನರ್ಜಿ ಶೇ 5.78ರಷ್ಟು, ಅದಾನಿ ವಿಲ್ಮರ್ ಶೇ 4.99ರಷ್ಟು, ಅದಾನಿ ಪವರ್ ಶೇ 4.98ರಷ್ಟು, ಅದಾನಿ ಟ್ರಾನ್ಸ್‌ಮಿಷನ್ ಶೇ 2.46ರಷ್ಟು ಇಳಿಕೆ ಕಂಡಿವೆ. ಅಂಬುಜಾ ಸಿಮೆಂಟ್ಸ್ ಶೇ 16.56ರಷ್ಟು, ಎಸಿಸಿ ಶೇ 6.34ರಷ್ಟು ಹಾಗೂ ಎನ್‌ಡಿಟಿವಿ ಶೇ 4.98ರಷ್ಟು ಕುಸಿದಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.