ಸೋಮವಾರ, ಆಗಸ್ಟ್ 8, 2022
24 °C

ಅದಾನಿ ಸಮೂಹ ಸಂಸ್ಥೆಗಳ 3 ಎಫ್‌ಪಿಐ ಖಾತೆಗಳ ಮುಟ್ಟುಗೋಲು: ಷೇರು ಮೌಲ್ಯ ಭಾರಿ ಕುಸಿತ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಅದಾನಿ ಸಮೂಹದ ಕಂಪನಿಗಳಲ್ಲಿ ಹೂಡಿಕೆ ಮಾಡಿರುವ ಕೆಲವು ವಿದೇಶಿ ಬಂಡವಾಳ ಹೂಡಿಕೆದಾರರ (ಎಫ್‌ಪಿಐ) ಖಾತೆಗಳನ್ನು ನ್ಯಾಷನಲ್‌ ಸೆಕ್ಯುರಿಟೀಸ್ ಡೆಪಾಸಿಟರಿ ಲಿಮಿಟೆಡ್‌ (ಎನ್‌ಎಸ್‌ಡಿಎಲ್‌) ಮುಟ್ಟುಗೋಲು ಹಾಕಿಕೊಂಡಿದೆ ಎನ್ನುವ ವರದಿಗಳಿಂದಾಗಿ ಕಂಪನಿಗಳ ಷೇರುಗಳ ಮೌಲ್ಯವು ಸೋಮವಾರದ ವಹಿವಾಟಿನ ಆರಂಭದಲ್ಲಿ ಶೇಕಡ 25ರವರೆಗೂ ಕುಸಿದಿತ್ತು.

ಮುಂಬೈ ಷೇರುಪೇಟೆಯಲ್ಲಿ ಅದಾನಿ ಎಂಟರ್‌ಪ್ರೈಸಸ್‌ ಷೇರು ಶೇ 24.99ರಷ್ಟು ಕುಸಿತ ಕಂಡು ಪ್ರತಿ ಷೇರಿನ ಬೆಲೆ ₹ 1,201.10ಕ್ಕೆ ಇಳಿಕೆ ಆಗಿತ್ತು. ವಹಿವಾಟಿನ ಅಂತ್ಯದ ವೇಳೆಗೆ ಇಳಿಕೆ ಪ್ರಮಾಣವು ಶೇ 6.26ಕ್ಕೆ ಬಂದು ಪ್ರತಿ ಷೇರಿನ ಬೆಲೆ ₹ 1,501.25ಕ್ಕೆ ತಲುಪಿತು. ಅದಾನಿ ಪೋರ್ಟ್ಸ್ ಆ್ಯಂಡ್ ಸ್ಪೆಷಲ್ ಎಕನಾಮಿಕ್ ಜೋನ್ ಷೇರು ಮೌಲ್ಯ ಶೇ 18.75ರಷ್ಟು ಕುಸಿದು ₹ 681.50ಕ್ಕೆ ತಲುಪಿತ್ತು. ದಿನದ ಅಂತ್ಯಕ್ಕೆ ಕುಸಿತವು ಶೇ 8.36ರಷ್ಟಾಗಿ, ಷೇರು ಬೆಲೆ ₹ 768.70ಕ್ಕೆ ತಲುಪಿತು. ಸಮೂಹದ ಬೇರೆ ಬೇರೆ ಕಂಪನಿಗಳ ಷೇರುಮೌಲ್ಯ ದಿನದ ವಹಿವಾಟಿನ ಆರಂಭದಲ್ಲಿ ಇಳಿಕೆ ಕಂಡರೂ, ನಂತರ ಏರಿಕೆ ದಾಖಲಿಸಿದವು.

ಅದಾನಿ ಸಮೂಹದ ಕಂಪನಿಗಳಲ್ಲಿ ಷೇರು ಹೊಂದಿರುವ ಮೂರು ಎಫ್‌ಪಿಐ ಖಾತೆಗಳನ್ನು ಮೇ 31 ಅಥವಾ ಅದಕ್ಕೂ ಮೊದಲೇ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ವರದಿಗಳಲ್ಲಿ ಹೇಳಲಾಗಿತ್ತು.

ಓದಿ: 

ಕಂಪನಿಗಳಲ್ಲಿ ಇರುವ ಪ್ರಮುಖ 12 ಹೂಡಿಕೆದಾರರಲ್ಲಿ ಈ ಮೂರು ಹೂಡಿಕೆದಾರರು ಸೇರಿದ್ದಾರೆ. ಅದಾನಿ ಸಮೂಹದ ಐದು ಕಂಪನಿಗಳಲ್ಲಿ ಈ ಹೂಡಿಕೆದಾರರು ಶೇ 2.1ರಿಂದ ಶೇ 8.91ರವರೆಗೆ ಷೇರುಪಾಲು ಹೊಂದಿದ್ದಾರೆ. ಸೋಮವಾರದ ಕುಸಿತಕ್ಕೂ ಮುನ್ನ ಈ ಮೂರು ಎಫ್‌ಪಿಐಗಳು ಅದಾನಿ ಸಮೂಹದ ಐದು ಕಂಪನಿಗಳಲ್ಲಿ ಹೊಂದಿರುವ ಷೇರು ಮೌಲ್ಯವು ₹ 57,019 ಕೋಟಿಗಳಷ್ಟಿತ್ತು.

ಮುಟ್ಟುಗೋಲು ಇಲ್ಲ: ಅದಾನಿ ಸಮೂಹ

ವಿದೇಶಿ ಹೂಡಿಕೆದಾರರ (ಎಫ್‌ಪಿಐ) ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿಲ್ಲ ಎನ್ನುವುದಕ್ಕೆ ಲಿಖಿತ ರೂಪದ ದೃಢೀಕರಣ ಹೊಂದಿರುವುದಾಗಿ ಅದಾನಿ ಸಮೂಹ ಹೇಳಿದೆ. ವರದಿಯು ಹೂಡಿಕೆದಾರರನ್ನು ತಪ್ಪುದಾರಿಗೆ ಎಳೆಯುವಂಥದ್ದು ಎಂದು ಅದು ಪ್ರತಿಕ್ರಿಯಿಸಿದೆ.

‘ವಿದೇಶಿ ಹೂಡಿಕೆದಾರರ ಡಿಮ್ಯಾಟ್ ಖಾತೆಗಳ ಸ್ಥಿತಿ ಕುರಿತು ಮಾಹಿತಿ ನೀಡುವಂತೆ ರಿಜಿಸ್ಟ್ರಾರ್ ಮತ್ತು ವರ್ಗಾವಣೆ ಏಜೆಂಟರಿಗೆ ಮನವಿ ಮಾಡಿದ್ದೆವು. ಅದರಂತೆ, ಡಿಮ್ಯಾಟ್‌ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿಲ್ಲ ಎಂದು ಇ–ಮೇಲ್‌ ಮೂಲಕ ಸೋಮವಾರ ದೃಢೀಕರಣ ಬಂದಿದೆ’ ಎಂದು ಸಮೂಹವು ತಿಳಿಸಿದೆ.

ದಾಖಲೆ ವಹಿವಾಟು: ಷೇರುಪೇಟೆಗಳು ಸೋಮವಾರ ದಾಖಲೆ ಮಟ್ಟದಲ್ಲಿ ವಹಿವಾಟು ಅಂತ್ಯಗೊಳಿಸಿದವು. ಮುಂಬೈ ಷೇರುಪೇಟೆ ಸೂಚ್ಯಂಕ 77 ಅಂಶ ಹೆಚ್ಚಾಗಿ 52,551ಕ್ಕೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 12 ಅಂಶ ಹೆಚ್ಚಾಗಿ 15,881 ಅಂಶಗಳಿಗೆ ತಲುಪಿತು.

ಜಾಗತಿಕ ಮಟ್ಟದಲ್ಲಿ ಸಕಾರಾತ್ಮಕ ಅಂಶಗಳು ಮತ್ತು ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಕೆಯು ಸಕಾರಾತ್ಮಕ ವಹಿವಾಟಿಗೆ ಕಾರಣವಾಗಿವೆ ಎಂದು ವರ್ತಕರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು