ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಏರ್ ಇಂಡಿಯಾ –ಟಾಟಾ ಲಿಮಿಟೆಡ್‌ನಿಂದ ₹2,300 ಕೋಟಿ ಹೂಡಿಕೆಗೆ ಅಂಕಿತ

ಟಾಟಾದಿಂದ ರಾಜ್ಯದಲ್ಲಿ ಪ್ರಥಮ ವಿಮಾನ ನಿರ್ವಹಣೆ ಘಟಕ ಸ್ಥಾಪನೆ
Published 19 ಫೆಬ್ರುವರಿ 2024, 12:46 IST
Last Updated 19 ಫೆಬ್ರುವರಿ 2024, 12:46 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ವಿವಿಧ ಯೋಜನೆಯಡಿ ಏರ್ ಇಂಡಿಯಾ ಮತ್ತು ಟಾಟಾ ಅಡ್ವಾನ್ಸ್ಡ್ ಸಿಸ್ಟಂ ಲಿಮಿಟೆಡ್‌ನಿಂದ ಒಟ್ಟು ₹2,300 ಕೋಟಿ ಹೂಡಿಕೆಗೆ ನಿರ್ಧರಿಸಿದ್ದು, ಸೋಮವಾರ ಈ ಕುರಿತ ಒಡಂಬಡಿಕೆಗೆ ವಿಧಾನಸೌಧದಲ್ಲಿ ಸಹಿ ಹಾಕಲಾಯಿತು.

ಟಾಟಾ ಸಮೂಹದ ಈ ಹೂಡಿಕೆಯಿಂದ ನೇರವಾಗಿ 1,650 ಉದ್ಯೋಗಗಳು ಸೃಷ್ಟಿಯಾಗಲಿವೆ.

ಸರ್ಕಾರದ ಪರ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಏರ್ ಇಂಡಿಯಾದ ಮುಖ್ಯ ವಾಣಿಜ್ಯ ವ್ಯವಹಾರ ಅಧಿಕಾರಿ ನಿಪುಣ್ ಅಗರವಾಲ್ ಹಾಗೂ ಟಿಎಎಸ್ಎಲ್ ಸಿಇಒ ಸುಕರಣ್ ಸಿಂಗ್ ಅವರು, ಒಡಂಬಡಿಕೆ ಪತ್ರಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹಾಜರಿದ್ದರು.

ಬಳಿಕ ಮಾತನಾಡಿದ ಸಚಿವ ಎಂ.ಬಿ. ಪಾಟೀಲ, ‘ಒಟ್ಟು ಹೂಡಿಕೆಯ ಪೈಕಿ ಏರ್ ಇಂಡಿಯಾ ಕಂಪನಿಯು ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಓವರ್-ಹಾಲ್ (ಎಂಆರ್‌ಒ) ಘಟಕ ಸ್ಥಾಪನೆಗೆ ₹1,300 ಕೋಟಿ ಹೂಡುತ್ತಿದೆ’ ಎಂದು ತಿಳಿಸಿದರು.

‘ಇದರಿಂದ 1,200 ಜನರಿಗೆ ನೇರವಾಗಿ ಉದ್ಯೋಗ ಸಿಗಲಿದೆ. ಪರೋಕ್ಷವಾಗಿ 25 ಸಾವಿರಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ. ದೇಶದಲ್ಲಿ ಇಂತಹ ಮೊಟ್ಟಮೊದಲ ಯೋಜನೆ ಇದಾಗಿದೆ’ ಎಂದರು.

ಟಾಟಾ ಅಡ್ವಾನ್ಸ್ಡ್ ಸಿಸ್ಟಂ (ಟಿಎಎಸ್ಎಲ್) ಕಂಪನಿಯು ಮೂರು ಯೋಜನೆಗಳಿಗೆ ₹1,030 ಕೋಟಿ ಬಂಡವಾಳ ಹೂಡಲಿದೆ. ಈ ಪೈಕಿ ನಾಗರಿಕ ವಿಮಾನಗಳನ್ನು ಸರಕು ಸಾಗಣೆ ವಿಮಾನಗಳನ್ನಾಗಿ ಪರಿವರ್ತಿಸುವ ಘಟಕ ಸ್ಥಾಪನೆಗೆ ₹420 ಕೋಟಿ ವಿನಿಯೋಗಿಸಲಿದೆ ಎಂದು ತಿಳಿಸಿದರು.

₹310 ಕೋಟಿ ಹೂಡಿಕೆಯೊಂದಿಗೆ ಗನ್ ತಯಾರಿಕೆ ಘಟಕ ಮತ್ತು ₹300 ಕೋಟಿ ವೆಚ್ಚದಲ್ಲಿ ವಿಮಾನಯಾನ ಮತ್ತು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಿದೆ. ಇದರಿಂದ 450 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದರು. 

ಕಾರ್ಯಕ್ರಮದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಮುಖ್ಯಮಂತ್ರಿ ಅವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ, ಏರ್ ಇಂಡಿಯಾದ ಉನ್ನತಾಧಿಕಾರಿಗಳಾದ ಮನನ್ ಚೌಹಾಣ್, ಕಾರ್ತಿಕೇಯ ಭಟ್, ಅತುಲ್ ಶುಕ್ಲ, ಟಿಎಎಸ್ಎಲ್ ಉನ್ನತಾಧಿಕಾರಿಗಳಾದ ಗುರು ದತ್ತಾತ್ರೇಯ, ಅರ್ಜುನ್ ಮೈನೆ, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವ್ಯವಸ್ಥಾಪಕ ನಿರ್ದೇಶಕ ಹರಿ ಮಾರಾರ್, ಸಿಒಒ ಸಾತ್ಯಕಿ ರಘುನಾಥ್, ಸಿಎಫ್ಒ ಭಾಸ್ಕರ್ ರವೀಂದ್ರ ಹಾಜರಿದ್ದರು. 

ಗನ್‌ ತಯಾರಿಕೆ ಘಟಕ

ಟಾಟಾ ಅಡ್ವಾನ್ಸ್ಡ್ ಸಿಸ್ಟಂ ಕಂಪನಿಯು ದೇವನಹಳ್ಳಿ ವಿಮಾನ ನಿಲ್ದಾಣದ ಸಮೀಪ ಮತ್ತು ಕೋಲಾರದಲ್ಲಿ ಗನ್ ತಯಾರಿಕೆ ಘಟಕ ಸ್ಥಾಪಿಸಲಿದೆ. ಆ ಮೂಲಕ ತನಗೆ ಅಗತ್ಯವಿರುವ 13 ಸಾವಿರ ಬಿಡಿಭಾಗಗಳ ಪೈಕಿ ಶೇ  50ರಷ್ಟನ್ನು ಪೂರೈಸಿಕೊಳ್ಳುವ ಆಲೋಚನೆ ಹೊಂದಿದೆ. ಇದರಿಂದಾಗಿ 300ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ 2ರಿಂದ 3 ಸಾವಿರ ಜನರಿಗೆ ಉದ್ಯೋಗ ಲಭಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT