ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನ ಖರೀದಿ ಜೋರು ನಿರೀಕ್ಷೆ

ಅಕ್ಷಯ ತೃತೀಯದ ಖರೀದಿ ಪ್ರಭಾವಿಸಲಿರುವ ಸ್ಥಿರ ಬೆಲೆ
Last Updated 5 ಮೇ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಸಮೃದ್ಧಿ ಮತ್ತು ಅದೃಷ್ಟದ ಪವಿತ್ರ ದಿನ ಎಂದು ಪರಿಗಣಿಸಲಾಗಿರುವ ಅಕ್ಷಯ ತೃತೀಯ (ಮಂಗಳವಾರ) ಸಂದರ್ಭದಲ್ಲಿ ಈ ಬಾರಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಚಿನ್ನಾಭರಣಗಳ ಖರೀದಿ ಭರ್ಜರಿಯಾಗಿ ನಡೆಯಲಿದೆ ಎಂದು ವರ್ತಕರು ನಿರೀಕ್ಷಿಸಿದ್ದಾರೆ.

ನೋಟು ರದ್ದತಿ ಮತ್ತು ಜಿಎಸ್‌ಟಿ ನಂತರ ಮಾರುಕಟ್ಟೆಯಲ್ಲಿ ಸ್ಥಿರತೆ ಕಂಡು ಬಂದಿರುವುದರಿಂದ ಈ ಬಾರಿ ನಡೆಯಲಿರುವ ಖರೀದಿ ಬಗ್ಗೆ ಚಿನ್ನಾಭರಣ ಮಾರಾಟ ಸಂಸ್ಥೆಗಳಲ್ಲಿ ಹೆಚ್ಚಿನ ನಿರೀಕ್ಷೆ ಮನೆ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಸ್ಥಿರವಾಗಿರುವುದು ಕೂಡ ಸಹಜವಾಗಿಯೇ ಗ್ರಾಹಕರ ಉತ್ಸಾಹವನ್ನೂ ಹೆಚ್ಚಿಸಿದೆ.

‘ಮಾರುಕಟ್ಟೆಯಲ್ಲಿನ ಒಂದು ವಾರದಿಂದೀಚೆಗಿನ ಚಟುವಟಿಕೆಗಳನ್ನು ಗಮನಿಸಿದರೆ, ಈ ಬಾರಿಯ ವಹಿವಾಟು ತುಂಬ ಚೆನ್ನಾಗಿರಲಿದೆ. ಚಿನ್ನದ ಬೆಲೆ ಶೇ 8ರಷ್ಟು ಕಡಿಮೆಯಾಗಿರುವುದು ಖಂಡಿತವಾಗಿಯೂ ಗ್ರಾಹಕರನ್ನು ಉತ್ತೇಜಿಸಲಿದೆ’ ಎಂದು ಬೆಂಗಳೂರು ಚಿನ್ನಾಭರಣ ವರ್ತಕರ ಸಂಘದ ಅಧ್ಯಕ್ಷ ವೆಂಕಟೇಶ್‌ ಬಾಬು ಹೇಳಿದ್ದಾರೆ.

ದೀರ್ಘ ಸಮಯದ ನಂತರ ವಹಿವಾಟು ಎರಡಂಕಿಯ ಪ್ರಗತಿ ಕಾಣಲಿದೆ ಎನ್ನುವುದು ಚಿನಿವಾರ ಪೇಟೆಯ ವರ್ತಕರ ಎಣಿಕೆಯಾಗಿದೆ. ಸದ್ಯಕ್ಕೆ ಚಿನ್ನದ ಚಿಲ್ಲರೆ ಮಾರಾಟ ದರವು ತಲಾ 10 ಗ್ರಾಂಗಳಿಗೆ ₹ 31,600ರ ಮಟ್ಟದಲ್ಲಿ ಇದೆ.

ಹಿಂದಿನ ವರ್ಷದ ಅಕ್ಷಯ ತೃತೀಯ ದಿನ ಚಿನ್ನದ ಬೆಲೆ ₹ 31,310ರಷ್ಟಿತ್ತು. ಈ ವರ್ಷದ ಫೆಬ್ರುವರಿ ತಿಂಗಳ ಮಧ್ಯಭಾಗದಲ್ಲಿ ಬೆಲೆಮಟ್ಟ ₹ ₹ 33,700ರ ಆಸುಪಾಸಿನಲ್ಲಿತ್ತು. ಅದಕ್ಕೆ ಹೋಲಿಸಿದರೆ ಸದ್ಯದ ಬೆಲೆ ₹ 2 ಸಾವಿರದಷ್ಟು ಅಗ್ಗವಾಗಿದೆ. ಶೇ 3ರಷ್ಟು ಜಿಎಸ್‌ಟಿ ಸೇರ್ಪಡೆಯಾಗಲಿರುವುದರಿಂದ ಬೆಲೆ ಮಟ್ಟವು ಕೊಂಚ ವ್ಯತ್ಯಾಸಗೊಳ್ಳಲಿದೆ.

ಆಕರ್ಷಕ ಕೊಡುಗೆ: ಸಂಘಟಿತ ರಿಟೇಲ್‌ ವರ್ತಕರು ಗ್ರಾಹಕರನ್ನು ಸೆಳೆಯಲು ಪೈಪೋಟಿ ಮೇಲೆ ಆಕರ್ಷಕ ಕೊಡುಗೆಗಳನ್ನು ಪ್ರಕಟಿಸಿರುವುದು ಕೂಡ ವಹಿವಾಟು ಹೆಚ್ಚಳಕ್ಕೆ ಉತ್ತೇಜನಕಾರಿಯಾಗಿದೆ.

ಕೆಲ ಸಂಸ್ಥೆಗಳು ಮುಂಚಿತವಾಗಿಯೇ ಬುಕಿಂಗ್‌ ಸೌಲಭ್ಯ ಒದಗಿಸಿವೆ. ಗ್ರಾಹಕರು ತಮಗಿಷ್ಟದ ಆಭರಣಗಳನ್ನು ಅಕ್ಷಯ ತೃತೀಯ ದಿನ ಖರೀದಿಸಲು ಇದು ನೆರವಾಗಲಿದೆ. ಮುಂಗಡ ಖರೀದಿ ದಿನದ ಬೆಲೆಗೆ ಹೋಲಿಸಿದರೆ ಮಂಗಳವಾರದ ಚಿನ್ನದ ಬೆಲೆ
ಕಡಿಮೆಯಾಗಿದ್ದರೆ ಅದರ ಲಾಭವನ್ನೂ ಗ್ರಾಹಕರಿಗೆ ವರ್ಗಾಯಿಸಲೂ ಕೆಲ ಸಂಸ್ಥೆಗಳು ಮುಂದಾಗಿವೆ.

ಈ ನಿರೀಕ್ಷಿತ ಸಂಭ್ರಮಕ್ಕೆ ಇನ್ನಷ್ಟು ಮೆರುಗು ನೀಡಲು ಕೆಲ ಚಿನ್ನಾಭರಣ ಮಾರಾಟ ಸಂಸ್ಥೆಗಳು ಗ್ರಾಹಕರನ್ನು ಸೆಳೆಯಲು ನವ ನವೀನ ವಿನ್ಯಾಸಗಳ ಆಭರಣಗಳನ್ನೂ ಪರಿಚಯಿಸಿವೆ. ಮಳಿಗೆಗಳಲ್ಲಿ ವಿಶೇಷ ಪೂಜೆಗೂ ವ್ಯವಸ್ಥೆ ಮಾಡಿವೆ. ತನಿಷ್ಕದ ಪಾಲುದಾರಿಕಾ ಸಂಸ್ಥೆ ಕ್ಯಾರಟ್‌ಲೇನ್‌ ಸಂಸ್ಥೆಯು 5 ಸಾವಿರ ಬಗೆಯ ಹೊಸ ವಿನ್ಯಾಸದ ಆಭರಣಗಳನ್ನು ಪರಿಚಯಿಸಿದೆ.

ರಿಲಯನ್ಸ್ ಜ್ಯುವೆಲ್ಸ್, ಚಿನ್ನ ಖರೀದಿ ಸಂಭ್ರಮ ಹೆಚ್ಚಿಸಲು ದೇವಾಲಯ ಮಾದರಿಯ ಆಕರ್ಷಕ ವಿನ್ಯಾಸದ ಚಿನ್ನದ ಆಭರಣಗಳ ಸಂಗ್ರಹ 'ಅಪೂರ್ವಂ' ಪರಿಚಯಿಸಿದೆ. ಚಿನ್ನ ಮತ್ತು ವಜ್ರಾಭರಣಗಳ ಮೇಕಿಂಗ್ ಮೇಲೆ ಶೇ 25 ಕಡಿತ ಪ್ರಕಟಿಸಿದೆ. ವಜ್ರಾಭರಣ ಸಂಸ್ಥೆ ಕೀರ್ತಿಲಾಲ್‌, ಪ್ರತಿ ಕ್ಯಾರಟ್‌ ವಜ್ರಕ್ಕೆ ₹ 14 ಸಾವಿರ ಕಡಿತ ಘೋಷಿಸಿದೆ.

***

ಬೆಲೆ ಸ್ಥಿರತೆ ಮತ್ತು ಗ್ರಾಹಕರ ಖರೀದಿ ಆಸಕ್ತಿಯ ಕಾರಣಕ್ಕೆ ಚಿನ್ನಾಭರಣಗಳಿಗೆ ಶೇ 10ರಷ್ಟು ಬೇಡಿಕೆ ಹೆಚ್ಚುವ ಅಂದಾಜಿದೆ

-ಅನಂತ್‌ ಪದ್ಮನಾಭನ್‌, ಅಖಿಲ ಭಾರತ ಚಿನ್ನಾಭರಣ ಮಂಡಳಿ ಅಧ್ಯಕ್ಷ

ಚಿನ್ನಾಭರಣಗಳಿಗೆ ಶೇ 15ರಿಂದ 20ರಷ್ಟು ಬೇಡಿಕೆ ಹೆಚ್ಚಳಗೊಳ್ಳುವ ನಿರೀಕ್ಷೆ ಇದೆ
-ಸೌರಭ್‌ ಗಾಡ್ಗೀಳ್‌,ಭಾರತ ಚಿನ್ನಾಭರಣ ಸಂಘದ ರಾಷ್ಟ್ರೀಯ ಅಧ್ಯಕ್ಷ

ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಮುಂಗಡ ಬುಕಿಂಗ್‌ ಪ್ರಮಾಣ ಶೇ 30ರಷ್ಟು ಹೆಚ್ಚಳಗೊಂಡಿದೆ
-ಟಿ. ಎಸ್‌. ಕಲ್ಯಾಣರಾಮನ್‌,ಕಲ್ಯಾಣ್‌ ಜುವೆಲ್ಲರ್ಸ್‌ ಅಧ್ಯಕ್ಷ

ಚಿನ್ನದ ಬೆಲೆ ಶೇ 8ರಷ್ಟು ಕಡಿಮೆಯಾಗಿರುವುದರಿಂದ ವಾರದಿಂದೀಚೆಗೆ ಚಿನ್ನಾಭರಣ ಮಾರುಕಟ್ಟೆಯಲ್ಲಿ ಚಟುವಟಿಕೆ ಜೋರಾಗಿದೆ
-ವೆಂಕಟೇಶ್‌ ಬಾಬು,ಬೆಂಗಳೂರು ಚಿನ್ನಾಭರಣ ವರ್ತಕರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT