ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆಜಾನ್ ಫುಡ್ ಡೆಲಿವರಿ ಸೇವೆ; ಸ್ವಿಗ್ಗಿ, ಜೊಮ್ಯಾಟೊದಿಂದ ಆಲ್ಕೊಹಾಲ್ ಡೆಲಿವರಿ

Last Updated 22 ಮೇ 2020, 3:04 IST
ಅಕ್ಷರ ಗಾತ್ರ

ನವದೆಹಲಿ: ಇ-ಕಾಮರ್ಸ್ ದೈತ್ಯ ಅಮೆಜಾನ್ ಇದೀಗ ಫುಡ್ ಡೆಲಿವರಿಗೂ ತನ್ನ ಸೇವೆಯನ್ನು ವಿಸ್ತರಿಸಿದೆ. ಅಮೆಜಾನ್ ಫುಡ್ ಎಂಬ ವಿತರಣಾ ಸೇವೆಯನ್ನು ಆರಂಭಿಸಿದ್ದು, ಬೆಂಗಳೂರಿನ ಕೆಲವು ಆಯ್ದ ಪಿನ್‌ಕೋಡ್‌ಗಳಲ್ಲಿ ಸಿದ್ಧಪಡಿಸಿದ ಆಹಾರವನ್ನು ಗ್ರಾಹಕರಿಗೆ ತಲುಪಿಸಲಿದೆ.

'ಶುಚಿತ್ವದ ಖಾತ್ರಿಯಿರುವ ರೆಸ್ಟೊರೆಂಟ್‌ಗಳಿಂದ ಯಾರ ಸಂಪರ್ಕಕ್ಕೂ ಬಾರದಂತೆ ಜೋಪಾನವಾಗಿ ಆಹಾರ ಸಂಗ್ರಹಿಸಿ, ಉಚಿತವಾಗಿ ಗ್ರಾಹಕರಿಗೆ ಒದಗಿಸುತ್ತೇವೆ' ಎಂದು ಅಮೆಜಾನ್ ತನ್ನ ಆಪ್‌ನಲ್ಲಿ ಎದ್ದು ಕಾಣುವಂತೆ ಪ್ರಕಟಿಸಿದೆ.

ಬೆಂಗಳೂರಿನ ಆಯ್ದ ಪಿನ್‌ಕೋಡ್‌ಗಳಲ್ಲಿ ನಾವು ಅಮೆಜಾನ್ ಫುಡ್ ಸೇವೆಯನ್ನು ಪ್ರಾರಂಭಿಸುತ್ತಿದ್ದೇವೆ. ಸ್ಥಳೀಯ ರೆಸ್ಟೋರೆಂಟ್‌ಗಳಿಂದ ಮತ್ತು ನಮ್ಮ ಉನ್ನತ ನೈರ್ಮಲ್ಯ ಪ್ರಮಾಣೀಕರಣವನ್ನು ದೃಢೀಕರಿಸಿದ ಕ್ಲೌಡ್ ಅಡುಗೆ ಮನೆಗಳಿಂದ ಆಹಾರವನ್ನು ಆರ್ಡರ್ ಮಾಡಲು ಗ್ರಾಹಕರಿಗೆ ಅವಕಾಶ ಮಾಡಿಕೊಡುತ್ತದೆ. ನಮ್ಮ ಗ್ರಾಹಕರು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ನಾವು ಸುರಕ್ಷತೆಯ ಉನ್ನತ ಮಾನದಂಡಗಳಿಗೆ ಬದ್ಧರಾಗಿದ್ದೇವೆ' ಎಂಬ ಅಮೆಜಾನ್ ವಕ್ತಾರರ ಹೇಳಿಕೆಯನ್ನು ಜಾಲತಾಣವೊಂದು ವರದಿ ಮಾಡಿದೆ.

ಆಪ್‌ನ ಪ್ರಕಾರ, ಬೆಂಗಳೂರಿನ ಬೆಳ್ಳಂದೂರು, ಹರಳೂರು, ಮಾರತ್‌ಹಳ್ಳಿ ಮತ್ತು ವೈಟ್‌ಫೀಲ್ಡ್‌ನ ಕೆಲವು ಭಾಗಗಳಲ್ಲಿ ಈ ಸೇವೆ ಆರಂಭವಾಗಿದೆ. ಆದಾಗ್ಯೂ, ಕಂಪನಿಯು ತನ್ನ ಆಹಾರ ಸೇವೆಗಳನ್ನು ನಗರದ ಉಳಿದ ಭಾಗಗಳಲ್ಲಿ ವಿಸ್ತರಿಸುತ್ತದೆಯೇ ಎನ್ನುವ ಕುರಿತು ಸ್ಪಷ್ಟವಾಗಿಲ್ಲ.

ಕಳೆದ ಫೆಬ್ರುವರಿಯಲ್ಲಿಯೇ ಅಮೆಜಾನ್ ಫುಡ್ ಸೇವೆಯನ್ನು ಪ್ರಾರಂಭಿಸಬೇಕಾಗಿತ್ತು, ಆದರೆ ಕೊರೊನಾ ವೈರಸ್ ಕಾರಣದಿಂದಾಗಿ ವಿಳಂಬವಾಯಿತು ಎಂದು ವರದಿಗಳು ತಿಳಿಸಿವೆ.

ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಸ್ವಿಗ್ಗಿ, ಜೊಮ್ಯಾಟೊ, ಬಿಗ್ ಬಾಸ್ಕೆಟ್ ಮತ್ತು ಗ್ರೋಫರ್ಸ್‌ನಂತಹ ಇತರ ಸೇವೆಗಳು ಕೂಡ ಹೆಚ್ಚಿನ ಪ್ರಮಾಣದಲ್ಲಿ ಅಗತ್ಯ ವಸ್ತುಗಳ ವಿತರಣೆಯನ್ನು ಮಾಡುತ್ತಿವೆ.

ಈ ಮಧ್ಯೆ, ಸ್ವಿಗ್ಗಿ ಮತ್ತು ಜೊಮ್ಯಾಟೊ ಜಾರ್ಖಂಡ್‌ ರಾಜಧಾನಿ ರಾಂಚಿನಲ್ಲಿ ಆಲ್ಕೊಹಾಲ್ ಮತ್ತು ಆಲ್ಕೊಹಾಲ್‌ಯುಕ್ತ ಪಾನೀಯಗಳ ವಿತರಣಾ ಸೇವೆಯನ್ನು ಪ್ರಾರಂಭಿಸಿವೆ. ಈ ವಾರದಲ್ಲಿ ಜಾರ್ಖಂಡ್‌ನ ಇತರ ನಗರಗಳಲ್ಲಿಯೂ ತಮ್ಮ ಸೇವೆಯನ್ನು ವಿಸ್ತರಿಸಲು ಯೋಜನೆ ರೂಪಿಸಿದ್ದಾರೆ.

ಸ್ವಿಗ್ಗಿಯಲ್ಲಿ ವೈನ್ ಶಾಪ್ಸ್ ಎಂಬ ಹೊಸ ಆಪ್ಶನ್ ಅನ್ನು ಹೊಂದಿದ್ದು, ಗ್ರಾಹಕರು ಅಲ್ಲಿಂದ ಮನೆಗೆ ಮದ್ಯವನ್ನು ಆರ್ಡರ್ ಮಾಡಬಹುದಾಗಿದೆ.

"ಸುರಕ್ಷಿತ ಮತ್ತು ಜವಾಬ್ದಾರಿಯುತ ರೀತಿಯಲ್ಲಿ ಮದ್ಯವನ್ನು ಮನೆಗೆ ವಿತರಿಸಲು ಸಕ್ರಿಯಗೊಳಿಸುವ ಮೂಲಕ, ಜನಸಂದಣಿ ಸಮಸ್ಯೆಯನ್ನು ಪರಿಹರಿಸುತ್ತಲೇ ನಾವು ಚಿಲ್ಲರೆ ಮಾರಾಟ ಮಳಿಗೆಗಳಿಗೆ ಹೆಚ್ಚುವರಿ ವ್ಯವಹಾರವನ್ನು ಮಾಡಿಕೊಡಬಹುದು. ಇದರಿಂದಾಗಿ ಅಂತರ ಕಾಯ್ದುಕೊಳ್ಳುವಿಕೆಯನ್ನು ಉತ್ತೇಜಿಸಬಹುದು ಎಂದು ವಿಪಿ ಪ್ರಾಡಕ್ಟ್ಸ್‌ನ ಅನುಜ್ ರಾತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಲ್ಕೊಹಾಲ್ ಬೇಕೆಂದು ಆರ್ಡರ್ ಮಾಡುವ ಗ್ರಾಹಕರು ತಮ್ಮ ವಯಸ್ಸನ್ನು ಸರ್ಕಾರ ವಿತರಿಸಿರುವ ಗುರುತಿನ ಪತ್ರ ಮತ್ತು ಸೆಲ್ಫಿಯೊಂದಿಗೆ ದೃಢೀಕರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT