ಬುಧವಾರ, ಮಾರ್ಚ್ 22, 2023
19 °C

ಹೊಸ ಇ–ವಾಣಿಜ್ಯ ನಿಯಮದ ಬಗ್ಗೆ ಟಾಟಾ, ಅಮೆಜಾನ್ ಕಳವಳ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಆನ್‌ಲೈನ್‌ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಕಠಿಣ ನಿಯಮಗಳನ್ನು ಜಾರಿಗೆ ತರುವುದರಿಂದ ಇ–ವಾಣಿಜ್ಯ ವಹಿವಾಟಿನ ಮೇಲೆ ಕೆಟ್ಟ ಪರಿಣಾಮ ಉಂಟಾಗಬಹುದು ಎಂದು ಟಾಟಾ ಸಮೂಹ ಹಾಗೂ ಅಮೆಜಾನ್ ಕಂಪನಿ ಪ್ರತಿನಿಧಿಗಳು ಕೇಂದ್ರ ಸರ್ಕಾರಕ್ಕೆ ಹೇಳಿದ್ದಾರೆ.

ಇ–ವಾಣಿಜ್ಯ ವಹಿವಾಟಿಗೆ ಸಂಬಂಧಿಸಿದಂತೆ ಜಾರಿಗೆ ತರಲು ಕೇಂದ್ರವು ಪ್ರಸ್ತಾಪ ಮಾಡಿರುವ ಹೊಸ ನಿಯಮಗಳ ವಿಚಾರವಾಗಿ ಈ ಪ್ರತಿನಿಧಿಗಳು ತಮ್ಮಲ್ಲಿ ಇರುವ ಗೊಂದಲ ಹಾಗೂ ಕಳವಳವನ್ನು ಹಂಚಿಕೊಂಡಿದ್ದಾರೆ, ಪ್ರಸ್ತಾವಿತ ನಿಯಮಗಳಿಗೆ ಪ್ರತಿಕ್ರಿಯೆ ಸಲ್ಲಿಸಲು ನಿಗದಿ ಮಾಡಿರುವ ಗಡುವನ್ನು (ಜುಲೈ 6) ವಿಸ್ತರಿಸಬೇಕು ಎಂದು ಮನವಿ ಮಾಡಿದ್ದಾರೆ.

ಗ್ರಾಹಕರಿಗೆ ಹೆಚ್ಚಿನ ರಕ್ಷಣೆ ನೀಡುವ ಉದ್ದೇಶದಿಂದ ಜೂನ್‌ 21ರಂದು ಪ್ರಕಟಿಸಿರುವ ನಿಯಮಗಳ ಬಗ್ಗೆ ಇ–ಕಾಮರ್ಸ್ ಕಂಪನಿಗಳು ಕಳವಳ ವ್ಯಕ್ತಪಡಿಸಿವೆ. ಫ್ಲ್ಯಾಶ್‌ ಸೇಲ್‌ಗಳ ಮೇಲೆ ನಿಯಂತ್ರಣ ಹೇರುವುದು, ತಪ್ಪುದಾರಿಗೆ ಎಳೆಯುವ ಜಾಹೀರಾತುಗಳನ್ನು ನಿರ್ಬಂಧಿಸುವುದು ಹಾಗೂ ದೂರು ಸಲ್ಲಿಸುವ ವ್ಯವಸ್ಥೆಯೊಂದು ಕಡ್ಡಾಯವಾಗಿ ಇರಬೇಕು ಎಂಬ ಪ್ರಸ್ತಾವನೆಗಳು ಅಮೆಜಾನ್, ಫ್ಲಿಪ್‌ಕಾರ್ಟ್‌ನಂತಹ ಕಂಪನಿಗಳು ತಮ್ಮ ವಹಿವಾಟಿನ ಸ್ವರೂಪದ ಬಗ್ಗೆ ಮರುಪರಿಶೀಲನೆ ನಡೆಸುವ ಅಗತ್ಯವನ್ನು ಸೃಷ್ಟಿಸಬಹುದು.

‘ಕೋವಿಡ್‌ನಿಂದಾಗಿ ಸಣ್ಣ ಪ್ರಮಾಣದ ವರ್ತಕರು ಈಗಾಗಲೇ ತೊಂದರೆಗೆ ಒಳಗಾಗಿದ್ದಾರೆ. ತನ್ನ ಮೂಲಕ ವಸ್ತುಗಳನ್ನು ಮಾರಾಟ ಮಾಡುವವರ ಮೇಲೆ ಹೊಸ ನಿಯಮಗಳು ಭಾರಿ ಪರಿಣಾಮ ಉಂಟುಮಾಡುತ್ತವೆ’ ಎಂಬ ಅಭಿಪ್ರಾಯವನ್ನು ಅಮೆಜಾನ್‌ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.

ಇ–ವಾಣಿಜ್ಯ ವಹಿವಾಟಿನಲ್ಲಿ ಇರುವ ಕಂಪನಿಗಳು ತಮಗೆ ಸಂಬಂಧಿಸಿದ ಇತರ ಕಂಪನಿಗಳ ವಸ್ತುಗಳನ್ನು ಮಾರಾಟ ಮಾಡುವಂತಿಲ್ಲ ಎಂದೂ ಹೊಸ ನಿಯಮಗಳಲ್ಲಿ ಹೇಳಲಾಗಿದೆ. ಇದರಿಂದಾಗಿ ಅಮೆಜಾನ್‌ಗೆ ತೊಂದರೆ ಆಗಲಿದೆ ಎನ್ನಲಾಗಿದೆ. ಅಮೆಜಾನ್ ಮೂಲಕ ವಸ್ತುಗಳನ್ನು ಮಾರಾಟ ಮಾಡುವ ಕ್ಲೌಡ್‌ಟೇಲ್‌ ಮತ್ತು ಅಪ್ಯಾರಿಯೊ ಕಂಪನಿಗಳಲ್ಲಿ ಅಮೆಜಾನ್ ಪರೋಕ್ಷವಾಗಿ ಪಾಲು ಹೊಂದಿದೆ.

ಹೊಸ ನಿಯಮಗಳಲ್ಲಿ ಸಮಸ್ಯೆಗಳಿವೆ. ಇದೇ ನಿಯಮ ಜಾರಿಗೆ ಬಂದರೆ ಟಾಟಾದ ಆನ್‌ಲೈನ್‌ ಮಾರುಕಟ್ಟೆ ಮೂಲಕ ಸ್ಟಾರ್‌ಬಕ್ಸ್‌ನ ಉತ್ಪನ್ನಗಳ ಮಾರಾಟವನ್ನು ನಿಲ್ಲಿಸಬೇಕಾಗುತ್ತದೆ. ಏಕೆಂದರೆ, ಅದರಲ್ಲಿ ಟಾಟಾದ ಪಾಲು ಇದೆ ಎಂದು ಟಾಟಾ ಸಮೂಹದ ಪ್ರತಿನಿಧಿಯೊಬ್ಬರು ಹೇಳಿದ್ದಾರೆ ಎಂದು ಗೊತ್ತಾಗಿದೆ. ಈ ಕುರಿತು ಪ್ರತಿಕ್ರಿಯೆಗೆ ಟಾಟಾ ಸಮೂಹ ನಿರಾಕರಿಸಿದೆ.

ಗ್ರಾಹಕರ ಹಿತ ರಕ್ಷಣೆಯನ್ನು ಗಮನದಲ್ಲಿ ಇರಿಸಿಕೊಂಡು ಈ ನಿಯಮಗಳನ್ನು ರೂಪಿಸಲಾಗಿದೆ. ಬೇರೆ ಕೆಲವು ದೇಶಗಳಲ್ಲಿ ಇರುವಷ್ಟು ಕಠಿಣವಾಗಿ ಇವು ಇಲ್ಲ ಎಂದು ಕೇಂದ್ರ ಗ್ರಾಹಕರ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಕಂಪನಿಗಳ ಪ್ರತಿನಿಧಿಗಳ ಬಳಿ ಹೇಳಿದ್ದಾರೆ ಎಂದು ಮೂಲಗಳು ವಿವರಿಸಿವೆ. ಈ ಕುರಿತು ಪ್ರತಿಕ್ರಿಯೆ ಕೇಳಿದಾಗ ಸಚಿವಾಲಯವು ಉತ್ತರಿಸಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು