ಬುಧವಾರ, ಅಕ್ಟೋಬರ್ 21, 2020
24 °C
ಅಡಿಕೆ ಧಾರಣೆ ಸ್ಥಿರವಾಗಿದ್ದರೂ ಒಲವು ತೋರದ ಬೆಳೆಗಾರರು

ಶಿವಮೊಗ್ಗ: ವಹಿವಾಟು ಆರಂಭವಾಗಿ 3 ದಿನವಾದರೂ ಅಡಿಕೆಗಿಲ್ಲ ಬೇಡಿಕೆ

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಒಂದೂವರೆ ತಿಂಗಳ ನಂತರ ಅಡಿಕೆ ವಹಿವಾಟು ಆರಂಭವಾದರೂ ಮಾರಾಟಕ್ಕೆ ಬೆಳೆಗಾರರು ಒಲವು ತೋರಿಲ್ಲ. ಸಹಕಾರ ಸಂಸ್ಥೆಗಳು, ಎಪಿಎಂಸಿ ಮಂಡಿಗಳೂ ಸೇರಿ ಮೂರು ದಿನಗಳಲ್ಲಿ 30 ಚೀಲ ಅಡಿಕೆ ಖರೀದಿಸಲೂ ಸಾಧ್ಯವಾಗಿಲ್ಲ.

ಮೂರು ವರ್ಷಗಳ ನಂತರ ಅಡಿಕೆ ಧಾರಣೆ ಚೇತರಿಸಿಕೊಂಡು ₹ 40 ಸಾವಿರ ತಲುಪಿತ್ತು. ಬೆಲೆ ಇನ್ನಷ್ಟು ಏರಿಕೆ ಕಾಣಬಹುದು ಎಂಬ ನಿರೀಕ್ಷೆಗೆ ಕೊರೊನಾ ಸಂಕಷ್ಟ ತಣ್ಣೀರು ಎರಚಿತ್ತು.

ಅಡಿಕೆ ವರ್ತಕರ ಸಂಘ, ಅಡಿಕೆ ಟಾಸ್ಕ್‌ಫೋರ್ಸ್‌, ಮ್ಯಾಮ್‌ಕೋಸ್‌ ಸೇರಿ ಸಹಕಾರ ಸಂಸ್ಥೆಗಳ ಪ್ರಯತ್ನದ ಫಲವಾಗಿ ಜಿಲ್ಲೆಯಲ್ಲಿ ಮೇ 11ರಿಂದ ವಹಿವಾಟು ಆರಂಭವಾಗಿದೆ. ಕೇಂದ್ರ ಸರ್ಕಾರ ಷರತ್ತುಗಳಿಗೆ ಒಳಪಡಿಸಿ ಗುಟ್ಕಾ, ಪಾನ್‌ ಮಸಾಲ ಉತ್ಪಾದನೆ, ಮಾರಾಟಕ್ಕೂ ಅವಕಾಶ ನೀಡಿದ ಕಾರಣ ಪಾನ್ ಮಸಾಲ ಕಾರ್ಖಾನೆಗಳು ಬಾಗಿಲು ತೆರೆದಿವೆ. ಹಾಗಾಗಿ, ವಹಿವಾಟು ವೇಗ ಪಡೆಯಬಹುದು ಎಂದು ನಿರೀಕ್ಷಿಸಲಾಗಿತ್ತು.

ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘ ಮೊದಲ ದಿನವೇ ರೈತರಿಂದ ಅಡಿಕೆ ಖರೀದಿಸಲು ಉತ್ಸಾಹ ತೋರಿತ್ತು.  ಅಡಿಕೆ ಮಾರುಕಟ್ಟೆ ಸ್ಥಗಿತವಾಗುವ ಮೊದಲು ಇದ್ದ ಕ್ವಿಂಟಲ್‌ಗೆ ₹ 36 ಸಾವಿರ ಗರಿಷ್ಠ ದರವನ್ನೂ ಟೆಂಡರ್‌ನಲ್ಲಿ ನಮೂದಿಸಿತ್ತು. ಮ್ಯಾಮ್‌ಕೋಸ್‌ ಪ್ರಾಂಗಣಕ್ಕೆ 140 ಮೂಟೆ ಅಡಿಕೆ ಬಂದರೂ, ನಮೂದಿತ ದರಕ್ಕೆ ಅಡಿಕೆ ಮಾರಾಟ ಮಾಡಿದ್ದು ಕೇವಲ 14 ಚೀಲ. ಅತ್ತ ಎಪಿಎಂಸಿ ಮಂಡಿಗಳಲ್ಲೂ ರೈತರು 10 ಚೀಲ ಅಡಿಕೆ ಮಾರಾಟ ಮಾಡಿಲ್ಲ.

ಮೂರು ದಿನಕ್ಕೇ ಧಾರಣೆ ಕುಸಿತ: ಮೊದಲ ದಿನ ಕ್ವಿಂಟಲ್‌ ಅಡಿಕೆಗೆ ಗರಿಷ್ಠ 36 ಸಾವಿರ ಇದ್ದ ಧಾರಣೆ ಎರಡನೇ ದಿನಕ್ಕೆ ₹ 2 ಸಾವಿರ ಕುಸಿದಿದೆ. ಬುಧವಾರ ಮತ್ತೆ ₹ 1 ಸಾವಿರ ಏರಿಕೆಯಾಗಿದೆ. ಒಂದು ಕಡೆ ಮಾರಾಟ ಮಾಡಲು ರೈತರು ಒಲವು ತೋರಿಲ್ಲ. ಮತ್ತೊಂದು ಕಡೆ ನಿರೀಕ್ಷಿತ ಸಂಖ್ಯೆಯ ವ್ಯಾಪಾರಿಗಳು ಟೆಂಡರ್‌ನಲ್ಲಿ ಭಾಗವಹಿಸಿಲ್ಲ. 

ಮಂದಗತಿ ಉತ್ಪಾದನೆ: ಪಾನ್‌ಮಸಾಲ ಕಂಪನಿಗಳಲ್ಲಿ ಸದ್ಯ ಶೇ 30ರಷ್ಟು ಉತ್ಪಾದನೆ ನಡೆಯುತ್ತಿದೆಯಷ್ಟೆ. ಪೂರ್ಣ ಪ್ರಮಾಣದಲ್ಲಿ ಉತ್ಪಾದನೆ ಆರಂಭವಾದರೆ ಧಾರಣೆ ಏರಿಕೆ ಕಾಣಬಹುದು ಎಂಬ ನಿರೀಕ್ಷೆ ಬೆಳೆಗಾರರಲ್ಲಿದೆ.

‘ಕೊರೊನಾ ನಿರ್ಬಂಧಗಳು ಪೂರ್ಣ ಪ್ರಮಾಣದಲ್ಲಿ ತೆರವಾದ ನಂತರ ಮಾರುಕಟ್ಟೆ ಚೇತರಿಸಿಕೊಳ್ಳುತ್ತದೆ. ರೈತರು ಆತಂಕ ಪಡುವ ಅಗತ್ಯವಿಲ್ಲ’ ಎನ್ನುತ್ತಾರೆ ಶಿವಮೊಗ್ಗ ಅಡಿಕೆ ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಸಿ.ಮಲ್ಲಿಕಾರ್ಜುನ್.

ತೆರಿಗೆ ಕಡಿಮೆ ಮಾಡಲು ಒತ್ತಾಯ

ಅಡಿಕೆ ಖರೀದಿಯ ಮೇಲೆ ಶೇ 5ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಎಪಿಎಂಸಿ ಸೆಸ್‌ ಶೇ 1.5 ಇದೆ. ದಲ್ಲಾಳಿ ಕಮಿಷನ್ ಶೇ 2 ನೀಡಬೇಕು. ಪ್ಯಾಕಿಂಗ್, ಪಾರ್ಸಲ್‌ ಎಂದು ಶೇ 10ರಷ್ಟು ಹಣ ವ್ಯಯವಾಗುತ್ತದೆ. ಮೂರು ಕ್ವಿಂಟಲ್ ಅಡಿಕೆ ಖರೀದಿಸಿದರೆ ಸುಮಾರು ₹ 10 ಸಾವಿರ ನೀಡಬೇಕು. ಹಾಗಾಗಿ, ಕೆಲವರು ತೆರಿಗೆ ಉಳಿಸಲು ರೈತರ ಮನೆ ಬಾಗಿಲಲ್ಲೇ ಕೈ ವ್ಯಾಪಾರ ನಡೆಸುತ್ತಾರೆ. ಸರ್ಕಾರ ತೆರಿಗೆ ಹೊರೆ ಕಡಿಮೆ ಮಾಡಿದರೆ ಅನುಕೂಲವಾಗುತ್ತದೆ ಎನ್ನುತ್ತಾರೆ ಎಪಿಎಂಸಿ ವರ್ತಕರು.

***

ಅಡಿಕೆ ಧಾರಣೆ ಏರಿಕೆ ಕಾಣದ ಹೊರತು ಮಾರಾಟ ಮಾಡುವ ಪ್ರಶ್ನೆಯೇ ಇಲ್ಲ. ಇನ್ನಷ್ಟು ದಿನ ಕಾದು ನೋಡುತ್ತೇವೆ.
– ಎನ್‌.ಎಸ್.ರುದ್ರೇಶ್, ಅಡಿಕೆ ಬೆಳೆಗಾರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು