ಸೋಮವಾರ, ಸೆಪ್ಟೆಂಬರ್ 20, 2021
23 °C
ಬೆಳೆಗಾರರಿಗೆ ಕೈಗೆ ಬಂದ ತುತ್ತು ಬಾಯಿಗೆ ಸಿಗದ ಪರಿಸ್ಥಿತಿ

₹ 40 ಸಾವಿರ ದಾಟಿದ ಕೆಂಪಡಿಕೆ ದರ

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಕೆಂಪಡಿಕೆ ದರ ಕ್ವಿಂಟಲ್‌ವೊಂದಕ್ಕೆ ₹40,000 ದಾಟುವ ಮೂಲಕ ಅಡಿಕೆ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ. ಗುರುವಾರದ ವಹಿವಾಟಿನ ಅಂತ್ಯದಲ್ಲಿ ಶಿರಸಿ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ ಕೆಂಪಡಿಕೆಗೆ ಗರಿಷ್ಠ ₹ 40,200 ದಾಖಲಾಗಿದ್ದರೆ, ಯಲ್ಲಾಪುರ ಮಾರುಕಟ್ಟೆಯಲ್ಲಿ ₹ 43,900 ಬೆಲೆ ದೊರೆತಿದೆ.

ಈ ಬಾರಿ ಹಂಗಾಮಿನ ಆರಂಭದಲ್ಲೇ ಕೆಂಪಡಿಕೆಗೆ ಉತ್ತಮ ದರ ಬಂದಿರುವುದರಿಂದ ರೈತರು ಉತ್ಸಾಹದಿಂದ ಕೆಂಪಡಿಕೆ ಸಿದ್ಧಪಡಿಸುತ್ತಿದ್ದಾರೆ. ಆದರೆ, ಶೇ 40–50ರಷ್ಟು ಬೆಳೆ ಕಡಿಮೆಯಾಗಿರುವುದರಿಂದ ಬೆಲೆ ಇದ್ದರೂ, ಉತ್ಪನ್ನವಿಲ್ಲದೇ ಕೈ ಹೊಸಕಿಕೊಳ್ಳುತ್ತಿದ್ದಾರೆ.

ಕೆಂಪಡಿಕೆಗೆ 2014–15ರ ಜುಲೈ ವೇಳೆಗೆ ಕ್ವಿಂಟಲ್‌ಗೆ ಗರಿಷ್ಠ ₹ 81ಸಾವಿರ ದರ ದೊರೆತಿತ್ತು. ಆನಂತರದ ವರ್ಷಗಳಲ್ಲಿ ಸರಾಸರಿ ₹35 ಸಾವಿರ ದರಕ್ಕೆ ರೈತರು ತೃಪ್ತಿಪಟ್ಟುಕೊಳ್ಳಬೇಕಾಗಿತ್ತು. 2017ರಲ್ಲಿ ಒಮ್ಮೆ ಮಾತ್ರ ಕೆಂಪಡಿಕೆ ದರ ಏರುಗತಿಯಲ್ಲಿ ಸಾಗಿ ₹ 49 ಸಾವಿರ ತಲುಪಿತ್ತು.

‘ಸಾಮಾನ್ಯವಾಗಿ ಹಂಗಾಮಿನ ಕೊನೆಯಲ್ಲೇ ಬೆಲೆ ಹೆಚ್ಚಳವಾಗುತ್ತದೆ. ಐದು ವರ್ಷಗಳ ಹಿಂದೆ ಬೆಲೆ ಏರಿಕೆಯಾದಾಗಲೂ ಸಣ್ಣ ಹಿಡುವಳಿದಾರರಿಗೆ ಈ ದರ ಸಿಕ್ಕಿರಲಿಲ್ಲ. ಈ ಬಾರಿ ಮಳೆಗಾಲದಲ್ಲಿ ಕೊಳೆರೋಗದಿಂದ ಶೇ 25ರಷ್ಟು ಬೆಳೆ ಮಾತ್ರ ಉಳಿದಿದೆ. ವರ್ಷಕ್ಕೆ ಸರಾಸರಿ ಆರು ಕ್ವಿಂಟಲ್ ಸಿಗುತ್ತಿದ್ದ ಕೆಂಪಡಿಕೆ, ಈ ಬಾರಿ ಒಂದು ಕ್ವಿಂಟಲ್‌ ಆಗಿದೆ’ ಎನ್ನುತ್ತಾರೆ ಬೆಳೆಗಾರ ರಾಮಕೃಷ್ಣ ಹೆಗಡೆ.

‘ಈ ವರ್ಷ ಏಪ್ರಿಲ್–ಮೇನಲ್ಲಿ ಮಳೆಯಾಗಿಲ್ಲ. ನಂತರ ಅತಿಯಾದ ಮಳೆಯಿಂದ ಬೆಳೆ ನಷ್ಟವಾಗಿದೆ. ಉತ್ತರ ಕನ್ನಡ ಮಾತ್ರವಲ್ಲ, ಶಿವಮೊಗ್ಗ ಭಾಗದಲ್ಲೂ ಶೇ 25ರಷ್ಟು ಅಡಿಕೆ ಬೆಳೆ ಕಡಿಮೆಯಿದೆ. ಅಲ್ಲದೇ ಈ ಬಾರಿ ಒಟ್ಟು ಬೆಳೆಯಲ್ಲಿ ಶೇ 20ರಷ್ಟು ಮಾತ್ರ ಕೆಂಪಡಿಕೆ ತಯಾರಾಗಿದೆ. ಈ ಕಾರಣಕ್ಕೆ ದರ ಏರಿಕೆಯಾಗಿರಬಹುದು. ಹಾಗೆಂದು, ಹೊರ ರಾಜ್ಯಗಳಲ್ಲಿ ಅಡಿಕೆ ಬೇಡಿಕೆ ಹೆಚ್ಚಾಗಿಲ್ಲ. ಆವಕ ಇಳಿಮುಖವಾಗಿರುವುದರಿಂದ ಮಾರುಕಟ್ಟೆಯಲ್ಲಿ ದರ ಸ್ಥಿರತೆ ಸಾಧ್ಯವಾಗಬಹುದು. ಟಿಎಸ್‌ಎಸ್‌ನಲ್ಲಿ ಕಳೆದ ವರ್ಷ ಡಿಸೆಂಬರ್‌ನಿಂದ ಫೆಬ್ರುವರಿವರೆಗೆ 3,000 ಕ್ವಿಂಟಲ್ ಕೆಂಪಡಿಕೆ ಖರೀದಿಯಾಗಿದ್ದರೆ, ಈ ಬಾರಿ ಇಲ್ಲಿಯ ತನಕ 1,000 ಕ್ವಿಂಟಲ್ ಖರೀದಿಯಾಗಿದೆ’ ಎನ್ನುತ್ತಾರೆ ಇಲ್ಲಿನ ಪ್ರಮುಖ ಅಡಿಕೆ ಮಾರುಕಟ್ಟೆಯಾಗಿರುವ ಟಿಎಸ್‌ಎಸ್‌ನ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ.

*
ಸಾಲದ ಭಾರ ಹೊಂದಿರುವ ಕೆಲವರು ಈ ದರಕ್ಕೆ ತೃಪ್ತಿಪಟ್ಟುಕೊಂಡು ಉತ್ಪನ್ನ ಮಾರಾಟ ಮಾಡುತ್ತಾರೆ. ಇನ್ನು ಕೆಲವರು ಬಡ್ಡಿ ಹೆಚ್ಚಿದರೂ ತೊಂದರೆಯಿಲ್ಲವೆಂದು ದರ ಹೆಚ್ಚಳಕ್ಕೆ ಕಾಯುತ್ತಾರೆ. ಅದು ರೈತರ ಮನಃಸ್ಥಿತಿಯ ಮೇಲೆ ನಿರ್ಧರಿತವಾಗುತ್ತದೆ
–ರಾಮಕೃಷ್ಣ ಹೆಗಡೆ, ಅಡಿಕೆ ಬೆಳೆಗಾರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು