ಮಾರ್ಚ್ ವೇಳೆಗೆ ಶೇ 9.8ಕ್ಕೆ ಎನ್‌ಪಿಎ ಪ್ರಮಾಣ: ಆರ್‌ಬಿಐ

ಮುಂಬೈ: ಬ್ಯಾಂಕುಗಳ ಒಟ್ಟು ಅನುತ್ಪಾದಕ ಆಸ್ತಿಯ ಪ್ರಮಾಣವು ಮುಂದಿನ ವರ್ಷದ ಮಾರ್ಚ್ ತಿಂಗಳ ವೇಳೆಗೆ ಶೇಕಡ 9.8ಕ್ಕೆ ಹೆಚ್ಚಳ ಕಾಣುವ ಸಾಧ್ಯತೆ ಇದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೇಳಿದೆ. ಈ ವರ್ಷದ ಮಾರ್ಚ್‌ನಲ್ಲಿ ಎನ್‌ಪಿಎ ಪ್ರಮಾಣವು ಶೇ 7.48ರಷ್ಟು ಇತ್ತು.
ಮುಂದಿನ ದಿನಗಳಲ್ಲಿ ಯಾವುದೇ ಬದಲಾವಣೆ ಆಗದಿದ್ದರೆ ಎನ್‌ಪಿಎ ಪ್ರಮಾಣದಲ್ಲಿ ಇಷ್ಟು ಹೆಚ್ಚಳ ಆಗಲಿದೆ ಎಂದು ಆರ್‌ಬಿಐನ ಹಣಕಾಸು ಸ್ಥಿರತೆ ವರದಿಯಲ್ಲಿ ಹೇಳಲಾಗಿದೆ. ಬ್ಯಾಂಕ್‌ಗಳ ಮೇಲೆ ಮುಂದಿನ ದಿನಗಳಲ್ಲಿ ತೀರಾ ಒತ್ತಡ ಉಂಟಾದರೆ, ಎನ್‌ಪಿಎ ಪ್ರಮಾಣವು ಶೇ 11.22ರ ಮಟ್ಟಕ್ಕೆ ಏರಬಹುದು ಎಂದೂ ವರದಿಯಲ್ಲಿ ಎಚ್ಚರಿಸಲಾಗಿದೆ. ವರದಿಯನ್ನು ಗುರುವಾರ ಬಿಡುಗಡೆ ಮಾಡಲಾಗಿದೆ.
ಈ ವರ್ಷದ ಜನವರಿಯಲ್ಲಿ ಬಿಡುಗಡೆ ಮಾಡಿದ್ದ ಹಣಕಾಸು ಸ್ಥಿರತೆ ವರದಿಯು, ‘ಪರಿಸ್ಥಿತಿಯಲ್ಲಿ ಬದಲಾವಣೆ ಆಗದೆ ಇದ್ದರೆ ಎನ್‌ಪಿಎ ಪ್ರಮಾಣವು ಸೆಪ್ಟೆಂಬರ್ ವೇಳೆಗೆ ಶೇ 13.5ರಷ್ಟಾಗಬಹುದು’ ಎಂದು ಅಂದಾಜು ಮಾಡಿತ್ತು. ಆದರೆ, ‘ಬ್ಯಾಂಕ್‌ಗಳ ಬಳಿ ಸಾಕಷ್ಟು ಬಂಡವಾಳ ಸಂಗ್ರಹ ಇದೆ’ ಈಗ ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಲಾಗಿದೆ.
‘ಸುಧಾರಿಸುತ್ತಿದೆ’: ಕೊರೊನಾ ವೈರಾಣುವಿನ ಎರಡನೆಯ ಅಲೆಗೆ ದೇಶವು ಬಹಳ ದೊಡ್ಡ ಬೆಲೆ ತೆರಬೇಕಾಯಿತು. ಆದರೆ, ಕುಸಿದಿದ್ದ ಆರ್ಥಿಕ ಚಟುವಟಿಕೆಗಳು ಮೇ ತಿಂಗಳ ಕೊನೆಯ ವೇಳೆಗೆ ಸುಧಾರಿಸಿಕೊಳ್ಳಲು ಆರಂಭಿಸಿದವು ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ವರದಿಯ ಮುನ್ನುಡಿಯಲ್ಲಿ ಬರೆದಿದ್ದಾರೆ.
ಬಳಕೆದಾರರ ದತ್ತಾಂಶ ಸೋರಿಕೆ ಆಗುತ್ತಿರುವುದು, ಸೈಬರ್ ದಾಳಿಗಳು ಹೆಚ್ಚುತ್ತಿರುವುದು ಅರ್ಥ ವ್ಯವಸ್ಥೆಗೆ ಎದುರಾಗಿರುವ ಅಪಾಯಗಳಲ್ಲಿ ಒಂದು ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ. ಬ್ಯಾಂಕ್‌ಗಳ ಹಣಕಾಸಿನ ಸ್ಥಿತಿಯ ಮೇಲೆ ಮೊದಲು ಅಂದಾಜಿಸಿದಷ್ಟು ಕೆಟ್ಟ ಪರಿಣಾಮ ಉಂಟಾಗಿಲ್ಲ ಎಂದು ದಾಸ್ ಅವರು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.