ಶನಿವಾರ, ಏಪ್ರಿಲ್ 4, 2020
19 °C

ಪುತ್ತೂರು-ವಿಟ್ಲ ರಾಜ್ಯ ಹೆದ್ದಾರಿಯಲ್ಲಿ ಬಯೊ ಡೀಸೆಲ್ ಬಂಕ್

ಸಹನಾ ಕಾಂತಬೈಲು Updated:

ಅಕ್ಷರ ಗಾತ್ರ : | |

Prajavani

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು-ವಿಟ್ಲ ರಾಜ್ಯ ಹೆದ್ದಾರಿಯಲ್ಲಿ ಸುಮಾರು 9 ಕಿ.ಮೀ. ದೂರ ಕ್ರಮಿಸಿದರೆ, ಅಳಕೆಮಜಲು ಎಂಬ ಪುಟ್ಟ ಊರು ಸಿಗುತ್ತದೆ. ಈ ಊರಿನಲ್ಲಿರುವ‘ಜಯಚಂದ್ರ ಬಯೊ ಫ್ಯುಯೆಲ್ ಸ್ಟೇಷನ್‌’ ಎಲ್ಲರ ಗಮನ ಸೆಳೆಯುತ್ತಿದೆ.

‘ಇಂಧನ ಪೂರೈಸುವ ಈ ಸ್ಟೇಷನ್‌ನಲ್ಲಿ ಅಂಥ ವಿಶೇಷ ಏನಿದೆ’ ಎನ್ನುತ್ತೀರಾ. ಅಲ್ಲೇ ಇರೋದು ವಿಶೇಷ. ಈ ಫ್ಯೂಯೆಲ್ ಸ್ಟೇಷನ್‌ಲ್ಲಿ ಮಾಮೂಲಿ ಪೆಟ್ರೋಲ್‌, ಡೀಸೆಲ್ ಮಾರುವುದಿಲ್ಲ. ಇಲ್ಲಿ ಮಾರುವುದು ಪರಿಸರ ಸ್ನೇಹಿ ಜೈವಿಕ ಇಂಧನ ಅರ್ಥಾತ್ ಬಯೊ ಡೀಸೆಲ್‌. ಈ ಸ್ಟೇಷನ್ ಮಾಲೀಕ ನಲ್ವತ್ತರ ಆಸುಪಾಸಿನ ಕೇಶವಮೂರ್ತಿ. 

ಬರಿದಾಗುವ ಪೆಟ್ರೋಲಿಯಂ ಉತ್ಪನ್ನಗಳಿಗೆ ಪರ್ಯಾಯವೇ ಜೈವಿಕ ಇಂಧನ. ಇದು ಭವಿಷ್ಯದ ಭರವಸೆಯ ಇಂಧನ ಸಂಪನ್ಮೂಲವೂ ಹೌದು. ಜೈವಿಕ ಇಂಧನ ತಯಾರಿಕೆ, ಸಂಶೋಧನೆಗೆ ಸರ್ಕಾರ ಅಪಾರ ಹಣವನ್ನೇನೋ ಖರ್ಚು ಮಾಡುತ್ತಿದೆ. ಆದರೆ ಆ ಇಂಧನದ ಬಂಕ್ ಸ್ಥಾಪಿಸಿ ಜನರಿಗೆ ಸಿಗುವ ಹಾಗೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿಲ್ಲ. ಇಂಥ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಬಯೊ ಡೀಸೆಲ್ ಬಂಕ್ ಆರಂಭಿಸುವ ಮೂಲಕ ಸರ್ಕಾರ ಮಾಡದ ಕೆಲಸವನ್ನು ಕೇಶವಮೂರ್ತಿ ಮಾಡಿದ್ದಾರೆ.

ಹಳ್ಳಿಯ ಯುವಕ, ಎಂ.ಟೆಕ್‌ ಎಂಜಿನಿಯರ್
ಕೇಶವಮೂರ್ತಿ, ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ಸಮೀಪದ ಕುಕ್ಕುಜಡ್ಕದವರು. ಕೃಷಿ ಕುಟುಂಬದ ಹಿನ್ನೆಲೆಯವರು. 10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದವರು. ಪಿಯುಸಿ ಮುಗಿದ ಮೇಲೆ ಬಿ.ಇ., ಎಂ. ಟೆಕ್ ಮಾಡಿ ಕಂಪ್ಯೂಟರ್ ಕನ್ಸಲ್ಟೆಂಟ್ ಆಗಿ ಬೆಂಗಳೂರಿನಲ್ಲಿ 2 ವರ್ಷ ನಂತರ ಸಿಂಗಪುರದಲ್ಲಿ ಒಂದು ವರ್ಷ ಕೆಲಸ ಮಾಡಿ, ಕೊನೆಗೆ ಇಂಗ್ಲೆಂಡಿನಲ್ಲಿ 16 ವರ್ಷ ಇದ್ದರು. ಕೋಟಿ ಸಂಪಾದನೆ ಇದ್ದರೂ ಹುಟ್ಟೂರಿನ ಸೆಳೆತ ಅವರನ್ನು ಮರಳಿ ಭಾರತಕ್ಕೆ ಕರೆತಂದಿತು. ಎರಡೂವರೆ ವರ್ಷದ ಹಿಂದೆ ಭಾರತಕ್ಕೆ ಬಂದ ಅವರು ವಿಟ್ಲದ ಅಳಕೆಮಜಲಿನಲ್ಲಿ ಒಂದು ಎಕರೆ ಜಾಗ ಖರೀದಿಸಿದರು.

ಪೆಟ್ರೋಲ್‌–ಡೀಸೆಲ್‌ ಬಳಕೆಯಿಂದ ಪರಿಸರಕ್ಕೆ ಆಗುತ್ತಿದ್ದ ಹಾನಿಯನ್ನು ಅರಿತಿದ್ದ ಅವರು, ಮೊದಲಿನಿಂದಲೂ ‘ಪರಿಸರಕ್ಕೆ ತನ್ನಿಂದ ಏನಾದರೂ ಕೊಡುಗೆ ಕೊಡಬೇಕು’ ಎಂಬ ತುಡಿತ ಹೊಂದಿದ್ದರು. ಆ ತುಡಿತವೇ ‘ಬಯೊ ಫ್ಯುಯೆಲ್ ಸ್ಟೇಷನ್‌’ ಆರಂಭಕ್ಕೆ ಪ್ರೇರಣೆಯಾಯಿತು. ಆ ಒಂದು ಎಕರೆ ಜಾಗದಲ್ಲಿ ಸ್ಟೇಷನ್ ನಿರ್ಮಾಣ ಮಾಡಿದರು. ‘ನಮ್ಮ ರಾಜ್ಯದಲ್ಲಿ ಬಯೊ ಡೀಸೆಲ್ ತಯಾರಿಸಿ ಪೆಟ್ರೋಲ್ ಬಂಕ್‍ಗಳಿಗೆ ಮಾರಾಟ ಮಾಡುವವರಿದ್ದಾರೆ. ಆದರೆ ಬಯೊ ಡೀಸೆಲ್‌ಗಾಗಿ ಪ್ರತ್ಯೇಕ ಬಂಕ್ ಎಲ್ಲೂ ಇಲ್ಲ. ನಮ್ಮದು ಕರ್ನಾಟಕದಲ್ಲೇ (ಬಹುಶಃ ದಕ್ಷಿಣ ಭಾರತದಲ್ಲೂ ಆಗಿರಬಹುದು) ಪ್ರಥಮ ಬಯೊ ಡೀಸೆಲ್ ಬಂಕ್’ ಎನ್ನುತ್ತಾರೆ ಕೇಶವಮೂರ್ತಿ.

ಪ್ರೇರಣೆ, ಐಡಿಯಾ ಹೇಗೆ?
ಅವರು ಯೂರೋಪ್‌ನಲ್ಲಿದ್ದಾಗ, ಸಾರ್ವಜನಿಕ ಸಾರಿಗೆಗೆ ಬಯೊ ಡೀಸೆಲ್ ಬಳಸುವುದನ್ನು ಗಮನಿಸಿದ್ದರು. ಜೈವಿಕ ಇಂಧನ ಬಳಕೆಯಿಂದ ಹೊಗೆ, ಮಸಿ ಎಲ್ಲವೂ ಕಡಿಮೆಯಾಗಿ, ವಾಯು ಮಾಲಿನ್ಯದ ಸಮಸ್ಯೆಯನ್ನು ನಿವಾರಿಸಲು ಸಾಧ್ಯವಿದೆ ಎಂಬುದನ್ನು ಅರಿತಿದ್ದರು. ಇದೇ ಬಯೊ ಡೀಸೆಲ್ ಬಂಕ್ ತೆರೆಯಲು ಮುಖ್ಯ ಪ್ರೇರಣೆ. ತರಕಾರಿ ತ್ಯಾಜ್ಯ, ಜೋಳ, ಪಾಮ್, ಸಸ್ಯಬೀಜಗಳು, ಸೋಯಾ, ಜತ್ರೋಫಾ ಮುಂತಾದ ಸಸ್ಯಜನ್ಯ ಮೂಲಗಳಿಂದ ಬಯೊ ಡೀಸೆಲ್ ಪಡೆಯಲಾಗುತ್ತದೆ. ಇದು ಡೀಸೆಲ್‌ಗೆ ಪರ್ಯಾಯ. ಸಂಪೂರ್ಣ ಪರಿಸರಸ್ನೇಹಿ. ಡೀಸೆಲ್‍ಗಿಂತ ಹೆಚ್ಚು ದಪ್ಪ, ಮೈಲೇಜ್ ಜಾಸ್ತಿ (ಶೇ 15 ದಿಂದ ಶೇ 20). 100 ಲೀಟರ್ ಬಯೊ ಡೀಸೆಲ್ ಹಾಕಿದರೆ 15 ರಿಂದ 20ಕಿ.ಮೀ. ಮೈಲೇಜ್‌ ಹೆಚ್ಚು ಬರುತ್ತದೆ ಎಂಬುದು ಅವರ ಲೆಕ್ಕಾಚಾರ.

ಇದನ್ನೆಲ್ಲ ಅಂದಾಜಿಸಿ, ಒಂದು ಕೋಟಿ ರೂಪಾಯಿ ಬಂಡವಾಳ ಹಾಕಿ ಈ ಬಂಕ್‌ ಸ್ಥಾಪಿಸಿದ್ದಾರೆ. ಸದ್ಯ, ಚೆನ್ನೈ, ಗುಜರಾತ್ ಹಾಗೂ ಆಂಧ್ರಪ್ರದೇಶದಿಂದ ಬಯೊ ಡೀಸೆಲ್‌ ತರಿಸಿಕೊಳ್ಳುತ್ತಾರೆ. ‘ಇಲ್ಲಿ ಸಿಗುವುದು ಬಿ6 ಗ್ರೇಡ್ ಡೀಸೆಲ್. ಅಂದರೆ ಇದನ್ನು ಡೀಸೆಲ್ ಬಳಸುವ ಕಾರಿಗೂ ಉಪಯೋಗಿಸಬಹುದು. ಸದ್ಯ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ನಿತ್ಯ 2 ಸಾವಿರ ಲೀಟರ್ ಮಾರಾಟವಾಗುತ್ತಿದೆ‘ ಎಂದು ವಹಿವಾಟನ್ನು ಹಂಚಿಕೊಳ್ಳುತ್ತಾರೆ ಅವರು.

ಲಾರಿ ಹಾಗೂ ಜೆಸಿಬಿಯವರು ಹೆಚ್ಚಾಗಿ ಬಯೊ ಡೀಸೆಲ್‌ ಬಳಸುತ್ತಿದ್ದಾರೆ. ಸುಳ್ಯ ಆಸುಪಾಸಿನವರು ಜೆಸಿಬಿಗಳಿಗಾಗಿ ಈ ಬಯೊ ಡೀಸೆಲ್‌ ಅನ್ನು ಡ್ರಮ್‌ಗಳಲ್ಲಿ ತುಂಬಿಕೊಂಡು ಪಾರ್ಸೆಲ್‌ ಒಯ್ಯುತ್ತಾರಂತೆ. ಉಡುಪಿ, ಕುಂದಾಪುರ, ಪುತ್ತೂರು, ಬಿಸಿರೋಡ್, ಮೂಲ್ಕಿ, ಕಾರ್ಕಳ, ಬೆಳ್ತಂಗಡಿ, ಪಡುಬಿದ್ರಿ, ಸುಳ್ಯ, ಉಜಿರೆ ಮತ್ತಿತರ ಕಡೆಗಳಲ್ಲಿ ಬಂಕ್ ತೆರೆಯುವುದಕ್ಕೆ ಬೇಡಿಕೆ ಬಂದಿದೆಯಂತೆ. ‘ಬೇಡಿಕೆ ಇರುವ ಕಡೆಗಳಲ್ಲಿ ಬಂಕ್ ಆರಂಭಿಸುವ ಜತೆಗೆ, ಶೀಘ್ರವೇ ಮೊಬೈಲ್ (ಸಂಚಾರಿ) ಡೀಸೆಲ್ ಬಂಕ್‍ ತೆರೆಯಲಿದ್ದೇನೆ’ ಎನ್ನುತ್ತಾರೆ ಕೇಶವಮೂರ್ತಿ.

ಬಯೊ ಡೀಸೆಲ್‌ನಿಂದ ಅನುಕೂಲ
ಬಯೊಡೀಸೆಲ್ ಬಳಸುವ ವಾಹನಗಳು ಚಲಿಸುವಾಗ ಶಬ್ದ ಕಡಿಮೆ ಇರುತ್ತದೆ. ಎಂಜಿನ್‌ ಭಾಗಗಳ ಸವಕಳಿ ಕಡಿಮೆ. ಪರಿಸರ ಮಾಲಿನ್ಯವಾಗುವುದಿಲ್ಲ. ಕಾರ್ಬನ್ ಮಾನಾಕ್ಸೈಡ್ ಮತ್ತಿತರ ಮಾಲಿನ್ಯಕಾರಕ ಅನಿಲಗಳ ಹೊರಸೂಸುವಿಕೆ ತುಂಬ ಕಡಿಮೆ. ಆದರೆ, ಮಾಮೂಲಿ ಡೀಸೆಲ್ ಬಳಕೆಯಿಂದ ಪರಿಸರಕ್ಕೆ ವಿಷಯುಕ್ತ ಹೊಗೆ ಬಿಡುಗಡೆಯಾಗುತ್ತದೆ. ಇದರಿಂದ ಉಸಿರಾಟದ ಸಮಸ್ಯೆ, ಅಸ್ತಮಾ ಇತ್ಯಾದಿ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಬರುತ್ತವೆ. ಬಯೊ ಡೀಸೆಲ್‌ಗೆ ಬೆಲೆಯೂ ಕಡಿಮೆ (ಡೀಸೆಲ್‍ ಲೀಟರಿಗೆ ₹67 ಇದ್ದರೆ ಬಯೊ ಡೀಸೆಲ್‍ಗೆ ₹ 65.50 ಇರುತ್ತದೆ). ಈ ಎಲ್ಲ ಕಾರಣಗಳಿಂದ ಜೈವಿಕ ಇಂಧನ ಬಳಸುವುದು ಒಳ್ಳೆಯದು ಎಂಬುದು ಅವರ ಸಲಹೆ.

‘ನಾವು ಬಳಸುವ ಕಚ್ಚಾತೈಲದ ಬಹುಪಾಲನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಬಯೊ ಡೀಸೆಲ್ ಉಪಯೋಗ ಹೆಚ್ಚಾದರೆ, ದೊಡ್ಡ ಮೊತ್ತದ ವಿದೇಶೀ ವಿನಿಮಯ ಉಳಿಯುತ್ತದೆ’ ಎನ್ನುತ್ತಾರೆ ಕೇಶವಮೂರ್ತಿ. ದೇಶದಲ್ಲೇ ಬೆಳೆಯಬಹುದಾದ ಸಸ್ಯಜನ್ಯ ಮೂಲಗಳಿಂದ ಬಯೊ ಡೀಸೆಲ್ ತಯಾರಿಸಿ ಬಳಸಿದರೆ, ಹೊಗೆಯೂ ಕಡಿಮೆ; ಸ್ವಾವಲಂಬನೆ, ಸುಸ್ಥಿರ ಬದುಕಿನತ್ತ ಹೆಜ್ಜೆ ಇಟ್ಟಂತಾಗುತ್ತದೆ ಎನ್ನುವುದು ಅವರ ಅಭಿಪ್ರಾಯ.

ಲೆಕ್ಕಾಚಾರ
ಜೆಸಿಬಿ ಕೆಲಸ ಮಾಡಲು ಗಂಟೆಗೆ ಸುಮಾರು ನಾಲ್ಕು ಲೀಟರ್‌ ಡೀಸೆಲ್‌ ಬೇಕು. ಬಯೊ ಡೀಸೆಲ್ ಬಳಸಿದರೆ ಸುಮಾರು ಎರಡೂ ಮುಕ್ಕಾಲು ಲೀಟರ್‌ ಸಾಕು. ಇನೋವಾ ಕಾರಿಗೆ ₹ 1,000 ಬೆಲೆಯ  ಡೀಸೆಲ್ ಹಾಕಿದರೆ 180 ಕಿ.ಮೀ.ವರೆಗೆ ಓಡುತ್ತದೆ. ಇದರ ಬದಲಿಗೆ ಬಯೊ ಡೀಸೆಲ್‌ನಲ್ಲಾದರೆ 230 ಕಿ.ಮೀ. ತನಕ ಓಡುತ್ತದೆ. ಬಸ್‌ಗೆ 100 ಲೀ. ಡೀಸೆಲ್ ಹಾಕುವಲ್ಲಿ ಜೈವಿಕ ಇಂಧನವನ್ನು 80ಲೀ. ಹಾಕಿದರೆ ಸಾಕಾಗುತ್ತದೆ ಎಂದು ಲೆಕ್ಕಾಚಾರ ಕೊಡುತ್ತಾರೆ ಕೇಶವಮೂರ್ತಿ.

ಸಂಪರ್ಕ ಸಂಖ್ಯೆ– 9449607538

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು