ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕಿ ಜ್ವರದ ವದಂತಿಗೆ ಕುಸಿದ ಕೋಳಿ ಮಾರಾಟ

ಕೋಳಿ ಮಾಂಸ ದರ ಕಡಿಮೆ, ಸಾಕಾಣಿಕೆದಾರರಿಗೆ ನಷ್ಟ: ಇಲಾಖೆಯಿಂದ ಮುಂಜಾಗೃತಾ ಕ್ರಮ
Last Updated 17 ಜನವರಿ 2021, 19:30 IST
ಅಕ್ಷರ ಗಾತ್ರ

ಹಾಸನ: ಹಲವು ರಾಜ್ಯಗಳಲ್ಲಿ ಹಕ್ಕಿ ಜ್ವರ (ಕೋಳಿ ಶೀತ ಜ್ವರ) ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲೆಯ ಕುಕ್ಕುಟಉದ್ಯಮಕ್ಕೂ ಬಿಸಿ ತಟ್ಟಿದ್ದು, ಕೋಳಿ ಮಾಂಸ ಮಾರಾಟ ವಹಿವಾಟು ಕೊಂಚ ಕುಸಿತವಾಗಿದೆ.

ಹಾಸನ ಕೃಷಿ ಪ್ರಧಾನ ಜಿಲ್ಲೆ. ಕೃಷಿಯ ಜೊತೆಗೆ ರೈತರು ಹೈನುಗಾರಿಕೆ, ಕೋಳಿ, ಕುರಿ ಸಾಕಾಣಿಕೆಯಂತ ಉಪಕಸುಬುಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ ಕೋಳಿ ಮಾಂಸ ತಿನ್ನುವುದರಿಂದ ಕೋವಿಡ್‌ ಬರುತ್ತದೆ ಎಂಬ ವದಂತಿಯಿಂದ ಸಾಕಷ್ಟು ಕೋಳಿ ಸಾಕಣಿಕೆದಾರರು ನಷ್ಟ ಅನುಭವಿಸಿದರು. ಈಗ ಹಕ್ಕಿ ಜ್ವರ ರಾಜ್ಯಕ್ಕೆ ಕಾಲಿಟ್ಟಿಲ್ಲ. ಆದರೂ, ವಹಿವಾಟಿನ ಮೇಲೆ ಪರಿಣಾಮ ಬೀರಿದೆ.

ಹಿರೀಸಾವೆ ಭಾಗದಲ್ಲಿ ಹಕ್ಕಿ ಜ್ವರದಿಂದ ಶೇಕಡಾ 30 ರಷ್ಟು ಕೋಳಿ ವ್ಯಾಪಾರ ಕುಸಿತವಾಗಿದೆ. ಒಂದು ಕೆ.ಜಿಮಾಂಸದ ಬೆಲೆ ₹30 ರಿಂದ ₹40 ಕಡಿಮೆಯಾಗಿದೆ. ಫಾರಂ ಕೋಳಿಗಳು ಮೈಸೂರು, ದೊಡ್ಡಬಳ್ಳಾಪುರದಿಂದ ಪೂರೈಕೆ ಆಗುತ್ತದೆ. ಬಾಯ್ಲರ್ ಕೋಳಿ ಸ್ಥಳೀಯ ಫಾರಂಗಳಿಂದ ಸರಬರಾಜು ಆಗುತ್ತದೆ. ಹಕ್ಕಿಜ್ವರ ಹೆಸರಿನಲ್ಲಿ ಕೋಳಿ ಮಾಂಸ ಬೆಲೆ ಕಡಿಮೆ ಮಾಡಲಾಗುತ್ತಿದೆ. ಇದರಿಂದ ವ್ಯಾಪಾರಿಗಳಿಗೆ ಸಾಕಷ್ಟು ನಷ್ಟವಾಗುತ್ತದೆ ಎನ್ನುತ್ತಾರೆ ಕೋಳಿ ವ್ಯಾಪಾರಿ ಅಂತನಹಳ್ಳಿ ಮಂಜುನಾಥ್.

ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ 46 ಕೋಳಿ ಸಾಕಾಣಿಕೆ ಪೌಲ್ಟ್ರಿ ಫಾರಂಗಳಿವೆ. ಶೇಕಡಾ 15 ರಿಂದ 20 ರಷ್ಟು ಕೋಳಿ ಮಾಂಸ ಮಾರಾಟ ಕಡಿಮೆಯಾಗಿದೆ ಎನ್ನುತ್ತಾರೆ ಕೋಳಿ ಮಾಂಸ ಮಾರಾಟಗಾರರು. ಬೇಲೂರು ಮತ್ತು ಸಕಲೇಶಪುರ ತಾಲ್ಲೂಕಿನಲ್ಲಿ ಕೋಳಿ ಮಾಂಸದ ಮಾರಾಟದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಎಂದಿನಂತೆ ವಹಿವಾಟು ನಡೆಯುತ್ತಿದೆ. ಕೋಳಿ ಮಾಂಸ ಮತ್ತು ಮೊಟ್ಟೆ ವಹಿವಾಟು ಚೆನ್ನಾಗಿಯೇ ಇದೆ.


ಜಿಲ್ಲೆಯಲ್ಲಿ 14785 ಪೌಲ್ಟ್ರಿ ಫಾರ್ಮ್‌ಗಳಿದ್ದು, 30 ಲಕ್ಷ ಮಾಂಸದ ಕೋಳಿ ಮತ್ತು 1 ಲಕ್ಷದ 64 ಸಾವಿರ ಮೊಟ್ಟೆ ಕೋಳಿಗಳಿವೆ. ಜಿಲ್ಲೆಗೆ ಬೇಕಾದ ಕೋಳಿ ಮಾಂಸ ಸ್ಥಳೀಯವಾಗಿಯೇ ಉತ್ಫಾದನೆಯಾಗುತ್ತಿದೆ. ಅನ್ಯ ರಾಜ್ಯ ಅಥವಾ ಜಿಲ್ಲೆಗಳಿಂದ ಹಾಸನಕ್ಕೆ ಕೋಳಿ ಆಮದು ಮಾಡಿಕೊಳ್ಳುತ್ತಿಲ್ಲ.

‘ಚಳಿಗಾಲದ ಸಂದರ್ಭದಲ್ಲಿ ಜಿಲ್ಲೆಗೆ ದೇಶ, ವಿದೇಶಗಳಿಂದ ಹಕ್ಕಿಗಳು ವಲಸೆ ಬರುತ್ತವೆ. ಹಾಗಾಗಿ ಅರಣ್ಯ ಇಲಾಖೆಯ ಸಹಯೋಗದಲ್ಲಿ ಎಲ್ಲಾ ಕಡೆ ಸರ್ವೇ ಕಾರ್ಯ ನಡೆಸಲಾಗುತ್ತಿದೆ. ಈವರೆಗೂ ಯಾವುದೇ ಪಕ್ಷಿ ಅಥವಾ ಕೋಳಿಗಳು ಸತ್ತಿರುವ ವರದಿಯಾಗಿಲ್ಲ. ಪಕ್ಷಿ ಮೃತಪಟ್ಟರೆ ಅದನ್ನು ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಅನಿಮಲ್‌ ಹೆಲ್ತ್ ಪ್ರಯೋಗಾಲಯಕ್ಕೆ ಕಳಿಸಲಾಗುವುದು. ಅಲ್ಲಿ ರೋಗ ಲಕ್ಷಣ ಕಂಡು ಬಂದಲ್ಲಿ ನಂತರ ಭೂಪಾಲ್‌ನ ಐ ಸೆಕ್ಯೂರಿಟಿ ಲ್ಯಾಬ್‌ಗೆ ಕಳಿಸಲಾಗುವುದು. ಇದುವರೆಗೂ ಜಿಲ್ಲೆಯಲ್ಲಿ ಹಕ್ಕಿಜ್ವರ ಪತ್ತೆಯಾಗಿಲ್ಲ. ಕೋಳಿ ಮಾಂಸವನ್ನು ಬೇಯಿಸಿ ತಿನ್ನುವುದರಿಂದ ಏನೂ ಸಮಸ್ಯೆ ಇಲ್ಲ’ ಎಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಕೆ.ಆರ್‌. ರಮೇಶ್‌ ತಿಳಿಸಿದರು.

ಹಕ್ಕಿ ಜ್ವರ ಸೋಂಕು ತಗುಲಿದ ಕೋಳಿಗಳು ಹೆಚ್ಚು ಚಟುವಟಿಕೆಯಿಂದ ಇರುವುದಿಲ್ಲ ಮತ್ತು ಕಡಿಮೆ ಆಹಾರ ಸೇವಿಸುತ್ತವೆ. ಜತೆಗೆ ಮೊಟ್ಟೆ ಉತ್ಪತ್ತಿ ಕಡಿಮೆಯಾಗುತ್ತದೆ. ಕಾಲು ಹಾಗೂ ಪುಕ್ಕರಹಿತ ಭಾಗದಲ್ಲಿ ಚರ್ಮ ನೀಲಿಗಟ್ಟುವುದು. ಮುಖ್ಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕೋಳಿಗಳು ಮೃತಪಡುವುದು ಸೋಂಕಿನ ಪ್ರಮುಖ ಲಕ್ಷಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT