ಮಂಗಳವಾರ, ಡಿಸೆಂಬರ್ 10, 2019
19 °C

ಆದಾಯ ತೆರಿಗೆ ಸರಳೀಕರಣ: ಸಲಹೆಗಳಿಗೆ ಕೇಂದ್ರ ಸರ್ಕಾರ ಆಹ್ವಾನ

Published:
Updated:
Prajavani

ನವದೆಹಲಿ: ಮುಂದಿನ ಹಣಕಾಸು ವರ್ಷದ ಬಜೆಟ್‌ನಲ್ಲಿ ನೇರ ಮತ್ತು ಪರೋಕ್ಷ ತೆರಿಗೆಗಳಲ್ಲಿ ತರಬಹುದಾದ ಬದಲಾವಣೆಗಳ ಬಗ್ಗೆ ಹಣಕಾಸು ಸಚಿವಾಲಯ ಸಲಹೆಗಳನ್ನು ಆಹ್ವಾನಿಸಿದೆ.

ಹಣಕಾಸು ಸಚಿವಾಲಯದ ರೆವಿನ್ಯೂ ಇಲಾಖೆಯು ಬಹುಶಃ ಇದೇ ಮೊದಲ ಬಾರಿಗೆ ಈ ಕ್ರಮಕ್ಕೆ ಮುಂದಾಗಿದೆ. ವೈಯಕ್ತಿಕ ಆದಾಯ, ಕಂಪನಿಗಳ ತೆರಿಗೆ, ಎಕ್ಸೈಸ್‌ ಮತ್ತು ಕಸ್ಟಮ್ಸ್‌ ಡ್ಯೂಟಿಗಳ ಸರಳೀಕರಣಕ್ಕೆ ಸಂಬಂಧಿಸಿದಂತೆ ಸಲಹೆ ನೀಡಲು ವಾಣಿಜ್ಯೋದ್ಯಮ ಸಂಘ–ಸಂಸ್ಥೆಗಳಿಗೆ ಕೇಳಿಕೊಳ್ಳಲಾಗಿದೆ.

ಇದನ್ನೂ ಓದಿ: ಆದಾಯ ತೆರಿಗೆ ವಿನಾಯ್ತಿ ಇಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

ತೆರಿಗೆ ಸ್ವರೂಪ, ದರ ಸರಳೀಕರಣ ಮತ್ತು ತೆರಿಗೆ ವ್ಯಾಪ್ತಿ ವಿಸ್ತರಣೆ ಕುರಿತು ಇದೇ 21ರ ಒಳಗೆ ಸಲಹೆಗಳನ್ನು ಒದಗಿಸಬೇಕು. ಸಲಹೆ ಮತ್ತು ಅಭಿಪ್ರಾಯಗಳನ್ನು ಸಮರ್ಥಿಸುವಂತಹ  ಪೂರಕ ಅಂಕಿ ಅಂಶಗಳನ್ನೂ ಒದಗಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೆಪ್ಟೆಂಬರ್ ತಿಂಗಳಲ್ಲಿ ಕಂಪನಿಗಳ ತೆರಿಗೆಯನ್ನು ಶೇ 30 ರಿಂದ ಶೇ 22ಕ್ಕೆ ಇಳಿಸಿದ್ದಾರೆ. ಹೆಚ್ಚುವರಿ ಕರಗಳನ್ನು ಪರಿಗಣಿಸಿದರೆ ಈ ತೆರಿಗೆ ದರ ಶೇ 25.2ರಷ್ಟಾಗಲಿದೆ. ಅಕ್ಟೋಬರ್‌ 1ರಿಂದ ಅಸ್ತಿತ್ವಕ್ಕೆ ಬಂದಿರುವ ಸರಕುಗಳ ತಯಾರಿಕಾ ಕಂಪನಿಗಳ ಮೇಲಿನ ಕಾರ್ಪೊರೇಟ್‌ ಆದಾಯ ತೆರಿಗೆಯು ಶೇ 25 ರಿಂದ ಶೇ 17ರಷ್ಟಕ್ಕೆ ತಗ್ಗಿಸಲಾಗಿದೆ.

ಈ ಹಿನ್ನೆಲೆಯಲ್ಲಿ, ವೈಯಕ್ತಿಕ ಆದಾಯ ತೆರಿಗೆ ದರಗಳಲ್ಲಿ ಕಡಿತಗೊಳಿಸಬೇಕು ಎನ್ನುವ ಬೇಡಿಕೆ ಕೇಳಿಬರುತ್ತಿದೆ. ಸರಕುಗಳ ಬಳಕೆ ಹೆಚ್ಚಿಸಿ ಆರ್ಥಿಕತೆಗೆ ಚೇತರಿಕೆ ನೀಡಲು ಜನರ ಬಳಿ ಹೆಚ್ಚು ಹಣ ಇರುವಂತೆ ಮಾಡಲು ತೆರಿಗೆ ದರ ಅಗ್ಗವಾಗಬೇಕಾಗಿದೆ ಎನ್ನುವ ಅಭಿಪ್ರಾಯವೂ ಇದೆ.

‘ಜಿಎಸ್‌ಟಿ’ಗೆ ಸಂಬಂಧಿಸಿದ ಸಲಹೆಗಳನ್ನು ಬಜೆಟ್‌ನ ಭಾಗವಾಗಿ ಪರಿಗಣಿಸಲಾಗುವುದಿಲ್ಲ. ಸರಕು ಮತ್ತು ಸೇವೆಗಳ ತೆರಿಗೆ ಬದಲಾವಣೆಗೆ ಸಂಬಂಧಿಸಿದಂತೆ ಜಿಎಸ್‌ಟಿ ಮಂಡಳಿಯೇ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು