ಗುರುವಾರ , ಜನವರಿ 28, 2021
14 °C

ಕೇಂದ್ರ ಸರ್ಕಾರದಿಂದ ಕೋವಿಡ್ ಸೆಸ್?

ಅನ್ನಪೂರ್ಣಾ ಸಿಂಗ್ Updated:

ಅಕ್ಷರ ಗಾತ್ರ : | |

ನವದೆಹಲಿ: ಅರ್ಥ ವ್ಯವಸ್ಥೆಯ ಪುನರ್‌ ನಿರ್ಮಾಣಕ್ಕೆ ಬಳಸಿಕೊಳ್ಳುವ ಉದ್ದೇಶದಿಂದ ಕೋವಿಡ್‌–19 ಸೆಸ್ ಸಂಗ್ರಹಿಸುವ ಪ್ರಸ್ತಾವನೆಯು ಕೇಂದ್ರ ಸರ್ಕಾರದ ಈ ಬಾರಿಯ ಬಜೆಟ್‌ನಲ್ಲಿ ಇರುವ ಸಾಧ್ಯತೆ ಇದೆ.

ಗರಿಷ್ಠ ಶೇಕಡ 2ರಷ್ಟು ಕೋವಿಡ್ ಸೆಸ್‌ ಸಂಗ್ರಹಿಸಬೇಕು ಎಂಬ ಪ್ರಸ್ತಾವನೆಯು ಕೇಂದ್ರ ಹಣಕಾಸು ಸಚಿವಾಲಯದ ಪರಿಶೀಲನೆಯಲ್ಲಿ ಇದೆ. ಇದು ಬಜೆಟ್‌ ಭಾಗವಾಗುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ. ಈ ಸೆಸ್‌ಅನ್ನು ₹ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಆದಾಯದ ಮೇಲೆ ಹೇರುವ ನಿರೀಕ್ಷೆ ಇದೆ. ₹ 10 ಲಕ್ಷಕ್ಕಿಂತ ಹೆಚ್ಚಿನ ಆದಾಯದ ಮೇಲೆ ಶೇ 2ರಷ್ಟು ಆರೋಗ್ಯ ಮತ್ತು ಶಿಕ್ಷಣ ಸೆಸ್‌ಅನ್ನು ಈಗಾಗಲೇ ವಿಧಿಸಲಾಗಿದೆ.

ಕೆಲವು ಅರ್ಥಶಾಸ್ತ್ರಜ್ಞರು ಮತ್ತು ವೈದ್ಯರು ಕೂಡ ಸಿಗರೇಟ್‌ ಹಾಗೂ ತಂಬಾಕಿನ ಇತರ ಉತ್ಪನ್ನಗಳ ಮೇಲೆ ಇಂತಹ ಸೆಸ್ ವಿಧಿಸಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದರು. ಹೀಗೆ ಮಾಡುವುದರಿಂದ ಹೆಚ್ಚುವರಿಯಾಗಿ ₹ 50 ಸಾವಿರ ಕೋಟಿ ಸಂಗ್ರಹಿಸಲು ಸಾಧ್ಯವಿದೆ ಎಂದು ಅವರು ಅಂದಾಜಿಸಿದ್ದರು.

ಈ ಸೆಸ್ ಮೂಲಕ ಸಂಗ್ರಹವಾಗುವ ಹಣವನ್ನು ಸಾಂಕ್ರಾಮಿಕದಿಂದಾಗಿ ಎದುರಾಗಿರುವ ಹೆಚ್ಚುವರಿ ವೆಚ್ಚಗಳನ್ನು ನಿಭಾಯಿಸಲು ಬಳಸಿಕೊಳ್ಳಲಾಗುತ್ತದೆ. ಲಸಿಕೆ ನೀಡಲು ತಗಲುವ ವೆಚ್ಚವನ್ನು ಕೂಡ ಇದರಿಂದಲೇ ಭರಿಸಬಹುದು ಎಂದು ಮೂಲಗಳು ಹೇಳಿವೆ. ‘ಹಿಂದೆಂದೂ ಕಾಣದಂತಹ ಬಜೆಟ್ ನೀಡುವ’ ಭರವಸೆ ಕೊಟ್ಟಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಆರೋಗ್ಯ ಸೇವೆಗಳು ಹಾಗೂ ಆರೋಗ್ಯ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಗೆ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಾಗದರಹಿತ: ಈ ಬಾರಿಯ ಕೇಂದ್ರ ಬಜೆಟ್‌ ಕಾಗದರಹಿತ ಆಗಿರಲಿದೆ. ‘ಬಜೆಟ್‌ನ ಪ್ರತಿಗಳ ಮುದ್ರಣ ಈ ಬಾರಿ ಬೇಡ, ಬಜೆಟ್‌ ಪ್ರತಿಯನ್ನು ಡಿಜಿಟಲ್ ಸ್ವರೂಪದಲ್ಲಿ ನೀಡಬಹುದು’ ಎಂಬ ಆಲೋಚನೆ ಸಚಿವಾಲಯಕ್ಕೆ ಇದೆ. ‘ಅಂತರ ಕಾಯ್ದುಕೊಳ್ಳಬೇಕಿರುವುದು ಸೇರಿದಂತೆ ಕೊರೊನಾ ವೈರಾಣು ಹಲವು ಬದಲಾವಣೆಗಳನ್ನು ತಂದಿದೆ. ಈ ಬಾರಿ ಬಜೆಟ್‌ನ ಒಂದೇ ಒಂದು ಪ್ರತಿಯನ್ನೂ ಮುದ್ರಿಸುವುದು ಬೇಡವೆಂದು ನಿರ್ಧರಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಬಜೆಟ್‌ನ ಮುದ್ರಿತ ಪ್ರತಿಯನ್ನು ಪತ್ರಕರ್ತರಿಗೆ ನೀಡುವ ಪದ್ಧತಿಯನ್ನು ಸಚಿವಾಲಯ ಹಿಂದೆಯೇ ಕೈಬಿಟ್ಟಿದೆ. ಆದರೆ ಸಂಸತ್ ಸದಸ್ಯರಿಗೆ ಮುದ್ರಿತ ಪ್ರತಿ ನೀಡಲಾಗುತ್ತಿತ್ತು. ಈ ವರ್ಷದಿಂದ ಅವರಿಗೂ ಡಿಜಿಟಲ್ ಪ್ರತಿ ಮಾತ್ರ ಸಿಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು