ಬುಧವಾರ, ಆಗಸ್ಟ್ 4, 2021
21 °C

ಬ್ಯಾಂಕ್‌ಗಳಲ್ಲಿ ನಗದು ಕೊರತೆ ಇಲ್ಲ, ಸಾಲ ಕೇಳುವವರೇ ಇಲ್ಲ: ಎಸ್‌ಬಿಐ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಬ್ಯಾಂಕ್‌ಗಳಲ್ಲಿ ನಗದು ಕೊರತೆ ಇಲ್ಲ. ಆದರೆ, ಕೊರೊನಾದಿಂದಾಗಿ ಖಾಸಗಿ ವಲಯದಿಂದ ಸಾಲಕ್ಕೆ ಬೇಡಿಕೆಯೇ ಇಲ್ಲದಂತಾಗಿದೆ’ ಎಂದು ಎಸ್‌ಬಿಐನ ಡೆಪ್ಯುಟಿ ಮ್ಯಾನೇಜಿಂಗ್‌ ಡೈರೆಕ್ಟರ್‌ ಸುಜಿತ್‌ ವರ್ಮಾ ತಿಳಿಸಿದ್ದಾರೆ.

‘ಸದ್ಯದ ಪರಿಸ್ಥಿತಿಯಲ್ಲಿ ಬ್ಯಾಂಕ್‌ಗಳು ಬಹಳ ಎಚ್ಚರಿಕೆಯಿಂದ ಸಾಲ ನೀಡುವ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ವಿವೇಚನಾರಹಿತವಾಗಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ’ ಎಂದು ಪಿಎಚ್‌ಡಿ ಚೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರಿ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಅವರು ಹೇಳಿದ್ದಾರೆ.

‘ಎಲ್ಲೆಲ್ಲಿ ಹಣಕಾಸಿನ ಅಗತ್ಯವಿದೆಯೋ ಅಲ್ಲಿ ನೆರವಾಗಲು ನಾವು ಸಿದ್ಧರಿದ್ದೇವೆ. ದೇಶದ ಅತಿದೊಡ್ಡ ಬ್ಯಾಂಕ್‌ ಆಗಿರುವ ಎಸ್‌ಬಿಐ, ವಿವಿಧ ಉದ್ದಿಮೆಗಳು ಮತ್ತು ಒಟ್ಟಾರೆ ಆರ್ಥಿಕತೆಗೆ ನೆರವಾಗಲು ಸಂಪೂರ್ಣ ಬೆಂಬಲ ಮತ್ತು ಸಹಕಾರ ನೀಡಲಿದೆ.

'ಉದ್ಯಮದಲ್ಲಿ ಹೊಸ ಹೂಡಿಕೆಯ ಕೊರತೆ ಎದುರಾಗಿದೆ. ದುಡಿಯುವ ಬಂಡವಾಳದ ಹೊರತಾಗಿ ಕಂಪನಿಗಳು ಹೊಸ ಹೂಡಿಕೆಗಾಗಿ ಬ್ಯಾಂಕ್‌ಗಳನ್ನು ಸಂಪರ್ಕಿಸುತ್ತಿಲ್ಲ. ಆದರೆ, ಬ್ಯಾಂಕ್‌ಗಳ ಬಳಿ ಸಾಕಷ್ಟು ನಗದು ಲಭ್ಯವಿದೆ. ಹೀಗಾಗಿ, ಬ್ಯಾಂಕ್‌ಗಳು ಬಡ್ಡಿ  ಗಳಿಸುವ ಉದ್ದೇಶದಿಂದ ಆರ್‌ಬಿಐನಲ್ಲಿ ₹ 6 ಲಕ್ಷದಿಂದ ₹ 7 ಲಕ್ಷದವರೆಗೆ ನಗದನ್ನು ಇಡುತ್ತಿವೆ’ ಎಂದು ಅವರು ವಿವರಿಸಿದ್ದಾರೆ.

ರೆಪೊ, ರಿವರ್ಸ್‌ ರೆಪೊ: ಬ್ಯಾಂಕ್‌ಗಳು ಆರ್‌ಬಿಐನಿಂದ ಪ‍ಡೆಯುವ ಸಾಲಕ್ಕೆ ವಿಧಿಸುವ ಬಡ್ಡಿದರಕ್ಕೆ ರೆಪೊ ದರ ಎಂದು ಕರೆಯಲಾಗುತ್ತದೆ. ಬ್ಯಾಂಕ್‌ಗಳು ಆರ್‌ಬಿಐನಲ್ಲಿ ಇಡುವ ಹಣಕ್ಕೆ ಪಡೆಯುವ ಬಡ್ಡಿದರಕ್ಕೆ ರಿವರ್ಸ್‌ ರೆಪೊ ಎಂದು ಕರೆಯಲಾಗುತ್ತದೆ.

‘ಒಟ್ಟಾರೆ ದೇಶದ ಬ್ಯಾಂಕಿಂಗ್‌ ವಲಯದ ದೃಷ್ಟಿಯಿಂದ ನೋಡುವುದಾದರೆ, ಈಗಿನ ಪರಿಸ್ಥಿತಿಯಲ್ಲಿ ನಾವು ಬಹಳ ಎಚ್ಚರಿಕೆಯಿಂದ ಸಾಲ ನೀಡಬೇಕು. ಸಾಲ ನೀಡದೇ ಇರಲು ಸಾಧ್ಯವೇ ಇಲ್ಲ. ಹಾಗೆಂದು ಆತುರದ ಅಥವಾ ವಿವೇಚನೆ ಇಲ್ಲದೇ ಸಾಲ ನೀಡುತ್ತೇವೆ ಎಂದು ನಿರೀಕ್ಷಿಸುವುದೂ ಸರಿಯಲ್ಲ’ ಎಂದು ಹೇಳಿದ್ದಾರೆ.

‘ಈಗಿನ ಪರಿಸ್ಥಿತಿಯು 2011–12ರ ಜಾಗತಿಕ ಆರ್ಥಿಕ ಬಿಕ್ಕಟ್ಟಿಗಿಂತಲೂ ಭಿನ್ನವಾಗಿದೆ. ಆಗ ಸರ್ಕಾರಗಳ ವಿತ್ತೀಯ ಉತ್ತೇಜನ ಕೊಡುಗೆಯ ಭಾಗವಾಗಿ ಬ್ಯಾಂಕ್‌ಗಳ ಸಾಲ ನೀಡಿಕೆಯು ಗಣನೀಯವಾಗಿ ಹೆಚ್ಚಾಗಿತ್ತು’ ಎಂದಿದ್ದಾರೆ.

ಸರ್ಕಾರ ಮತ್ತು ಆರ್‌ಬಿಐ ನೀಡಿರುವ ಪರಿಹಾರ ಕೊಡುಗೆಯ ಸದ್ಬಳಕೆ ಮಾಡಿಕೊಳ್ಳುವಂತೆ ಉದ್ದಿಮೆಗಳಿಗೆ ಅವರು ಸಲಹೆ ನೀಡಿದ್ದಾರೆ.

ವೆಚ್ಚ ಪರಿಶೀಲನೆ ನಡೆಸಿ ಅತಿ ಅಗತ್ಯವಲ್ಲದ ವೆಚ್ಚಗಳನ್ನು ಕಡಿತಗೊಳಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಅಗತ್ಯವಿದೆ ಎಂದೂ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು