ಹಣ್ಣಿನ ಕಾರ್ಬೊನೇಟೆಡ್ ಪೇಯ: ಮೈಸೂರಿನ ‘ಸಿಎಫ್‌ಟಿಆರ್‌ಐ’ನ ಆರೋಗ್ಯಕರ ಉತ್ಪನ್ನ

7

ಹಣ್ಣಿನ ಕಾರ್ಬೊನೇಟೆಡ್ ಪೇಯ: ಮೈಸೂರಿನ ‘ಸಿಎಫ್‌ಟಿಆರ್‌ಐ’ನ ಆರೋಗ್ಯಕರ ಉತ್ಪನ್ನ

Published:
Updated:
Deccan Herald

ಮೈಸೂರು: ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಕೇಂದ್ರ (ಸಿಎಫ್‌ಟಿಆರ್‌ಐ) ಸಿದ್ಧಪಡಿಸಿರುವ ತಾಜಾ ಹಣ್ಣಿನ ಕಾರ್ಬೊನೇಟೆಡ್ ಪೇಯ ಮಾರುಕಟ್ಟೆಗೆ ಲಗ್ಗೆ ಹಾಕಲು ಸಿದ್ಧವಾಗಿದೆ.

ಪೆಪ್ಸಿ, ಕೋಕ ಕೋಲಾ ಮಾದರಿಯ ತಂಪು ಪಾನೀಯಗಳಲ್ಲಿ ರಾಸಾಯನಿಕಗಳನ್ನು ಬಳಸುವ ಕಾರಣ ಆರೋಗ್ಯಕ್ಕೆ ಹಾನಿಕಾರಕ. ಆದರೆ, ಸಿಎಫ್‌ಟಿಆರ್‌ಐ ಸಿದ್ಧಪಡಿಸಿರುವ ಹಣ್ಣಿನ ರಸ ಆರೋಗ್ಯಪರವಾಗಿದೆ.

ಪೆಪ್ಸಿ, ಕೋಕ ಕೋಲಾದಂತೆ ಈ ಪೇಯದಲ್ಲೂ ಕಾರ್ಬೊನೇಟೆಡ್ ನೀರು (ಸೋಡಾ– ಇಂಗಾಲಾಮ್ಲ ಮಿಶ್ರಿತ) ಇದೆ. ಆದರೆ, ರಾಸಾಯನಿಕ ಸ್ವಾದಾಂಶಗಳಿಗೆ ಬದಲಾಗಿ ತಾಜಾ ಹಣ್ಣಿನ ರಸವನ್ನೇ ಬಳಸಿರುವುದು ವಿಶೇಷ.

ಕೃತಕ ಸ್ವಾದಾಂಶಗಳಲ್ಲಿ ಯಾವ ಪೌಷ್ಟಿಕಾಂಶವೂ ಇರುವುದಿಲ್ಲ. ಅಲ್ಲದೇ, ಕ್ಯಾರಮೆಲ್‌, ಕೆಫಿನ್, ಕಾರ್ಬೋನಿಕ್‌ ಆಸಿಡ್, ಫಾಸ್ಫರಿಕ್‌ ಆಸಿಡ್‌ಗಳನ್ನು ಬಳಸಲಾಗುತ್ತದೆ. ಇದೇ ಕಾರಣಕ್ಕಾಗಿ ಕೆಲವು ರೈತರು ಈ ಪೇಯಗಳನ್ನು ಕೀಟನಾಶಕಗಳಾಗಿ ಬಳಸುವುದೂ ಉಂಟು. ಈ ಹಾನಿಕಾರಕ ಅಂಶಗಳನ್ನು ಗಮನಿಸಿದ ‘ಸಿಎಫ್‌ಟಿಆರ್‌ಐ’ನ ಹಣ್ಣು ಮತ್ತು ತರಕಾರಿ ತಂತ್ರಜ್ಞಾನ ವಿಭಾಗವು, ಕೃತಕ ಸ್ವಾದಾಂಶಗಳಿಗೆ ಬದಲಾಗಿ ತಾಜಾ ಹಣ್ಣಿನ ರಸವನ್ನೇ ಬಳಸಿಕೊಳ್ಳಲು ಮೂರು ವರ್ಷಗಳಿಂದ ಸತತಪ್ರಯತ್ನ ನಡೆಸಿದ್ದು, ಇದೀಗ ಯಶಸ್ಸು ಕಂಡಿದೆ.

ಯಾವ ಹಣ್ಣು?: ದ್ರಾಕ್ಷಿ, ನಿಂಬೆ, ಮಾವು, ಸೇಬು, ಸೀಬೆ, ದಾಳಿಂಬೆ, ಕಿತ್ತಲೆ, ನೇರಳೆ ಹಣ್ಣುಗಳ ರಸವನ್ನು ಪೇಯಕ್ಕೆ ಸೇರಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ.

‘ಸಾಮಾನ್ಯವಾಗಿ ತಾಜಾ ಹಣ್ಣಿನ ರಸವನ್ನು ಕಾರ್ಬೊನೇಟೆಡ್ ನೀರಿಗೆ ಸೇರಿಸುವುದಿಲ್ಲ. ಆದರೆ, ನಾವು ಈ ಪ್ರಯೋಗ ಮಾಡಿ ಯಶಸ್ಸು ಕಂಡಿದ್ದೇವೆ. ಇದರಿಂದ ಹಣ್ಣಿನ ರಸವನ್ನು ಸೋಡಾ ರುಚಿಯೊಂದಿಗೆ ಸವಿಯುವುದು ಸಾಧ್ಯವಾಗಿದೆ. ಹಣ್ಣುಗಳ ಪೌಷ್ಟಿಕಾಂಶವೂ ಸಿಗಲಿದೆ’ ಎಂದು ವಿಭಾಗದ ಮುಖ್ಯ ವಿಜ್ಞಾನಿ ಡಾ.ಪಿ.ವಿಜಯಾನಂದ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಭಾರತೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಮಾನ್ಯತೆಯೂ ಸಿಕ್ಕಿದೆ. ಶೀಘ್ರದಲ್ಲಿಯೇ ಮಾರುಕಟ್ಟೆಗೆ ಬರಲಿದೆ. ನಾವು ಪೇಯ ಉತ್ಪಾದಿಸುವುದಿಲ್ಲ. ಬದಲಿಗೆ ತಂತ್ರಜ್ಞಾನವನ್ನು ಕಡಿಮೆ ಬೆಲೆಗೆ ಸಂಸ್ಥೆಗಳಿಗೆ ಮಾರುತ್ತೇವೆ’ ಎಂದು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !