ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಮುಳುವಾದ ಮಾನದಂಡ– ಗುಣಮಟ್ಟದ ಕೊಬ್ಬರಿಯಷ್ಟೇ ಖರೀದಿ

ಖರೀದಿ ಕೇಂದ್ರದಲ್ಲಿ ಗಾತ್ರ, ಎಣ್ಣೆ ಅಂಶ ಪರೀಕ್ಷೆ
Published 18 ಏಪ್ರಿಲ್ 2024, 21:07 IST
Last Updated 18 ಏಪ್ರಿಲ್ 2024, 21:07 IST
ಅಕ್ಷರ ಗಾತ್ರ

ಹಿರೀಸಾವೆ (ಹಾಸನ ಜಿಲ್ಲೆ): ಹೋಬಳಿಯಲ್ಲಿ ತೆರೆದಿರುವ ಖರೀದಿ ಕೇಂದ್ರಗಳಲ್ಲಿ ಸರ್ಕಾರದ ಮಾನದಂಡದಂತೆ ನಿಗದಿತ ಗಾತ್ರ ಮತ್ತು ಎಣ್ಣೆ ಅಂಶವುಳ್ಳ ಉಂಡೆ ಕೊಬ್ಬರಿಯನ್ನಷ್ಟೇ ಖರೀದಿಸಲಾಗುತ್ತಿದೆ. 

ಹಾಗಾಗಿ, ಸಣ್ಣ ಕೊಬ್ಬರಿಯನ್ನು ರೈತರು ಮನೆಗೆ ವಾಪಸು ತೆಗೆದುಕೊಂಡು ಹೋಗುವುದು ಅನಿವಾರ್ಯವಾಗಿದೆ. ಗುಣಮಟ್ಟದ ಕೊಬ್ಬರಿಗಷ್ಟೇ ಬೆಲೆ ಎನ್ನುವಂತಾಗಿದೆ. ಈ ಮಾನದಂಡವು ಬಹುತೇಕ ರೈತರಿಗೆ ಮುಳುವಾಗಿದೆ.

ಹೆಸರು ನೋಂದಾಯಿಸಿದ ರೈತರಿಂದ ಹೋಬಳಿಯ ಬೂಕನಬೆಟ್ಟದಲ್ಲಿ 15 ದಿನಗಳಿಂದ ಕೊಬ್ಬರಿ ಖರೀದಿಸಲಾಗುತ್ತಿದೆ. ಏಪ್ರಿಲ್‌ 30ರ ವರೆಗೆ ವೇಳಾಪಟ್ಟಿಯನ್ನೂ ಪ್ರಕಟಿಸಿರುವುದರಿಂದ ರೈತರಿಗೆ ಅನುಕೂಲವಾಗಿದೆ. ಸರದಿಯಂತೆ ರೈತರು ಕೊಬ್ಬರಿ ತಂದರೂ ಸರ್ಕಾರದ ಸಾಗಣೆ ಲಾರಿ ಬಂದರಷ್ಟೇ ಕೊಬ್ಬರಿ ಖರೀದಿಸಲು ಸಾಧ್ಯ. ಇಲ್ಲದಿದ್ದರೆ, ರೈತರು ಕೊಬ್ಬರಿಯೊಂದಿಗೆ ದಿನಗಟ್ಟಲೆ ಅಲ್ಲಿಯೇ ಕಾಯುವ ಪರಿಸ್ಥಿತಿ ತಲೆದೋರಿದೆ.

ಕುಡಿಯುವ ನೀರು, ಬೆಳಕಿನ ವ್ಯವಸ್ಥೆ ಇಲ್ಲ. ಮಳೆ ಬಂದರೆ ಕೊಬ್ಬರಿ ತೋಯುತ್ತದೆ. ತೂಕ ಆಗುವರೆಗೆ ರೈತರೇ ಜವಾಬ್ದಾರರು. ನಿಯಮದಂತೆ 75 ಎಂ.ಎಂ. ಸುತ್ತಳತೆ ಮತ್ತು ಎಣ್ಣೆ ಅಂಶ ಇರುವುದನ್ನು ಪರೀಕ್ಷೆ ಮಾಡಿ ಸಣ್ಣದ್ದನ್ನು ನಿರಾಕರಿಸಲಾಗುತ್ತಿದೆ.

‘ನಿತ್ಯ 100 ರಿಂದ 150 ಕ್ವಿಂಟಲ್ ತೂಕ ಮಾಡುತ್ತಾರೆ. ಹೋಬಳಿಯಲ್ಲಿ ತೆಂಗು ಮಳೆಯಾಶ್ರಿತ ಬೆಳೆಯಾಗಿದ್ದು, ಈ ಭಾಗದಲ್ಲಿ ದಪ್ಪ ಕೊಬ್ಬರಿ ಬರುವುದು ಕಡಿಮೆ. 50 ರಿಂದ 60 ಎಂ.ಎಂ ಸುತ್ತಳತೆ ಕೊಬ್ಬರಿಯೇ ಹೆಚ್ಚು. ಈಗಿನ ನಿಯಮದಿಂದ ನಷ್ಟವೇ ಹೆಚ್ಚು. 60 ಎಂ.ಎಂ. ಗಿಂತ ಹೆಚ್ಚಿನ ಗಾತ್ರದ ಕೊಬ್ಬರಿಯನ್ನಾದರೂ ಖರೀದಿಸಿದರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ರೈತರು.

‘ಕೊಬ್ಬರಿ ಅಳತೆಗೆ ಮತ್ತು ಎಣ್ಣೆ ಅಂಶ ಪರೀಕ್ಷೆ ಮಾಡಲು ನಾಫೆಡ್‌ ಸಲಕರಣೆ ನೀಡಿದೆ. ಈ ಭಾಗದ ಕೊಬ್ಬರಿಯಲ್ಲಿ ಎಣ್ಣೆ ಅಂಶ ಚೆನ್ನಾಗಿದೆ. ರೈತರು ಸಣ್ಣ ಕೊಬ್ಬರಿಯನ್ನು ಸಾಧ್ಯವಾದಷ್ಟು ವಿಂಗಡಣೆ ಮಾಡಿ ತಂದರೆ ಒಳ್ಳೆಯದು’ ಎನ್ನುತ್ತಾರೆ ಗ್ರೇಡ್ ಪರೀಕ್ಷೆ ಮಾಡುವ ಅಧಿಕಾರಿ ಅನ್ನದಾನಿ.

‘ಖರೀದಿ ಕೇಂದ್ರದ ಬಳಿ ನೀರು ಸೇರಿದಂತೆ ಮೂಲ ಸೌಲಭ್ಯಗಳಿಲ್ಲದೇ ಸಮಸ್ಯೆ ಎದುರಿಸುತ್ತಿದ್ದೇವೆ. ಮಳೆ ಬಂದರೆ ಕೊಬ್ಬರಿ ತೋಯುತ್ತದೆ’ ಎಂದು ಬೂಕನಬೆಟ್ಟದ ನವೀನ್ ತಿಳಿಸಿದರು.

‘ನಿತ್ಯ ಇಲ್ಲಿಂದ ಕೊಬ್ಬರಿ ಸಾಗಿಸಲು ಒಂದು ಲಾರಿಯ ಬದಲು ಎರಡು ಲಾರಿಗಳು ಬೇಕು. ಒಂದು ಕಡೆ ತೂಕ ಮಾಡುವ ಬದಲು, ಎರಡು ಕಡೆ ತೂಕ ಮಾಡಿದರೆ, ರೈತರು ದಿನಗಟ್ಟಲೆ ಕಾಯುವುದು ತಪ್ಪುತ್ತದೆ’ ಎಂದು ಹಿರೀಸಾವೆ ಎಚ್.ಪಿ. ಶಂಕರ್ ಹಾಗೂ ಯಾಳನಹಳ್ಳಿಯ ಬಲರಾಮು ಆಗ್ರಹಿಸಿದರು.

ಹಿರೀಸಾವೆ ಹೋಬಳಿಯ ಬೂಕನಬೆಟ್ಟದಲ್ಲಿ ಉಂಡೆ ಕೊಬ್ಬರಿಯ ಗ್ರೇಡ್ ಪರೀಕ್ಷೆ ಮಾಡುತ್ತಿರುವುದು
ಹಿರೀಸಾವೆ ಹೋಬಳಿಯ ಬೂಕನಬೆಟ್ಟದಲ್ಲಿ ಉಂಡೆ ಕೊಬ್ಬರಿಯ ಗ್ರೇಡ್ ಪರೀಕ್ಷೆ ಮಾಡುತ್ತಿರುವುದು
ಹಿರೀಸಾವೆ ಹೋಬಳಿಯ ಬೂಕನಬೆಟ್ಟದಲ್ಲಿ ರೈತರಿಂದ ಉಂಡೆ ಕೊಬ್ಬರಿ ಖರೀದಿ
ಹಿರೀಸಾವೆ ಹೋಬಳಿಯ ಬೂಕನಬೆಟ್ಟದಲ್ಲಿ ರೈತರಿಂದ ಉಂಡೆ ಕೊಬ್ಬರಿ ಖರೀದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT