ಮಂಗಳವಾರ, ಮೇ 26, 2020
27 °C

ಪ್ರಶ್ನೋತ್ತರ: ಉಳಿತಾಯ ವಿಚಾರದಲ್ಲಿ ಸಲಹೆ ನೀಡಿ..

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹೇಶ, ದಾವಣಗೆರೆ

ನಾನು ಶಿಕ್ಷಕ. 5 ವರ್ಷಗಳಿಂದ ಕ್ರಮವಾಗಿ ₹ 3 ಲಕ್ಷ ಹಾಗೂ ₹ 2 ಲಕ್ಷದಂತೆ ಷೇರು ಮಾರುಕಟ್ಟೆ ಹಾಗೂ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಾ ಬಂದಿದ್ದೇನೆ. ದೀರ್ಘಾವಧಿಯಲ್ಲಿ ಉತ್ತಮ ವರಮಾನ ಬರುತ್ತದೆ ಎನ್ನುವುದು ಷೇರು ಮಾರುಕಟ್ಟೆ ಹಾಗೂ ಮ್ಯೂಚುವಲ್ ಫಂಡ್‌ ಪರಿಣತರ ಸಲಹೆ. ಈಗ ಪ್ರಪಂಚ ಎದುರಿಸುತ್ತಿರುವ ಭಯಾನಕ ಪರಿಸ್ಥಿತಿಯಲ್ಲಿ ನನ್ನ ಹೂಡಿಕೆ ಬಹಳ ನಷ್ಟಕ್ಕೆ ಒಳಗಾಗಿದೆ. ಮಾರುಕಟ್ಟೆ ಕುಸಿದಿರುವ ಈ ಸಂದರ್ಭದಲ್ಲಿ ಇನ್ನೂ ಸ್ವಲ್ಪ ಹೂಡಿಕೆ ಮಾಡಿ ದೀರ್ಘಾವಧಿಯಲ್ಲಿ ಈಗ ಅನುಭವಿಸಿರುವ ನಷ್ಟದಿಂದ ಹೊರಬಂದು ಲಾಭ ಗಳಿಸಬಹುದು ಎನ್ನುವುದು ಸಲಹೆಗಾರರ ಅಭಿಪ್ರಾಯ. ನಾನು ನಿಮ್ಮ ಅಭಿಪ್ರಾಯ ಕೇಳುತ್ತಿದ್ದೇನೆ.

ಉತ್ತರ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿ ನಷ್ಟ ಅನುಭವಿಸಿದವರು ಷೇರಿನ ಬೆಲೆ ಕುಸಿದಾಗ ಇನ್ನೂ ಹೂಡಿಕೆ ಮಾಡುವುದು ಸರಿಯಲ್ಲ ಎನ್ನುವುದು ನನ್ನ ವೈಯಕ್ತಿಕ ವಿಚಾರ. ಷೇರು–ಮ್ಯೂಚುವಲ್‌ ಫಂಡ್‌ ಹೂಡಿಕೆಯು ಊಹೆ ಮತ್ತು ಹಲವು ಕಾರಣಗಳಿಂದ ಏರುಪೇರು ಆಗುತ್ತಿರುತ್ತದೆ. ಈಗ ಮಾರುಕಟ್ಟೆ ಕುಸಿದಿರುವುದು ನಿಜ. ಆದರೆ, ಭಾರತದಲ್ಲಿ ನಿರ್ವಹಿಸುವ ಕಂಪನಿಗಳು ಇನ್ನೂ ಎಷ್ಟು ವರ್ಷ ಸುಧಾರಿಸಿಕೊಳ್ಳಲು ಸಮಯ ತೆಗೆದುಕೊಳ್ಳಬಹುದು ಎನ್ನುವುದು ಎಂತಹ ಪರಿಣತರಿಂದಲೂ ಹೇಳಲು ಸಾಧ್ಯವಿಲ್ಲ. ಈಗಾಗಲೇ ಸುದೀರ್ಘ 5 ವರ್ಷ ನಿಮ್ಮ ಹೂಡಿಕೆ ಫಸಲು ತಂದಿಲ್ಲ. ಆದರೆ, ಹೆದರಿ ಮಾರಾಟ ಮಾಡಬೇಡಿ. ಸದ್ಯಕ್ಕೆ ಖರೀದಿಸುವುದೂ ಬೇಡ ಎನ್ನುವುದು ನನ್ನ ಅಭಿಪ್ರಾಯ.

***

ಎಚ್‌.ಎಸ್‌. ಚಂದ್ರಶೇಖರ್, ಬೆಂಗಳೂರು

ನಾನು ಬೆಸ್ಕಾಂನ ನಿವೃತ್ತ ಎಕ್ಸಿಕ್ಯುಟಿವ್‌ ಎಂಜಿನಿಯರ್. 2020–4–1ರಿಂದ ಸಣ್ಣ ಉಳಿತಾಯ ಅಂಚೆ ಕಚೇರಿ ಠೇವಣಿಗಳ ಬಡ್ಡಿ ದರ ಕಡಿಮೆಯಾಗಿದ್ದು, ಈಗಾಗಲೇ ಠೇವಣಿ ಇರಿಸಿದವರಿಗೆ  ಬಡ್ಡಿ ಕಡಿಮೆಯಾಗಬಹುದೇ ತಿಳಿಸಿ. ನಮ್ಮಂತಹ ಹಿರಿಯ ನಾಗರಿಕರಿಗೆ ನೀವು ಕೊಡುವ ಸಲಹೆ ತುಂಬಾ ಉಪಕಾರವಾಗುತ್ತದೆ.

ಉತ್ತರ: ಅಂಚೆ ಕಚೇರಿ ಸಣ್ಣ ಉಳಿತಾಯ ಠೇವಣಿಗಳು ಹಾಗೂ ಬ್ಯಾಂಕ್‌ ಠೇವಣಿಗಳಲ್ಲಿ ಹಣ ತೊಡಗಿಸಿದ ದಿನದಿಂದ ಅವಧಿ ಮುಗಿಯುವ ತನಕ ಠೇವಣಿಯಲ್ಲಿ ನಮೂದಿಸಿದ ಬಡ್ಡಿದರ ಕಡಿಮೆ ಮಾಡುವಂತಿಲ್ಲ. ಬಡ್ಡಿ ಕಡಿಮೆಯಾದಲ್ಲಿ ಗ್ರಾಹಕರು ಹಾಗೂ ಠೇವಣಿ ಇರಿಸಿಕೊಂಡ ಸಂಸ್ಥೆ ನಡುವೆ Breach of contract ಆಗುತ್ತದೆ. ಇದೇ ವೇಳೆ ಈ ತತ್ವ ಗ್ರಾಹಕ ಸಾಲ ಪಡೆದಲ್ಲಿ ಅನ್ವಯಿಸುವುದಿಲ್ಲ. ನಿಮ್ಮ ಪ್ರಶ್ನೆಯಿಂದ ಹಲವರಿಗೆ ಉತ್ತರ ದೊರೆತಂತಾಗಿದೆ. ನಿಮಗೆ ಧನ್ಯವಾದ.

 ***

ವಿದ್ಯಾಸಾಗರ, ಧಾರವಾಡ

ನನ್ನ ವಯಸ್ಸು 31. ಕಾಲೇಜಿನಲ್ಲಿ ಉಪನ್ಯಾಸಕ. ಸಂಬಳ ₹ 38,500. ಮದುವೆಯಾಗಿ ಒಂದು ಮಗುವಿದೆ. ಇದುವರೆಗೆ ಉಳಿತಾಯ ಮಾಡಿಲ್ಲ. ಕೆಲಸದಲ್ಲಿ ಭದ್ರತೆ ಇಲ್ಲ. ₹2.5 ಲಕ್ಷ ಬ್ಯಾಂಕ್‌ ಸಾಲ ಮಾಡಿ ಒಂದು ಸಣ್ಣ ಕಾರು ಪಡೆಯಬೇಕೆಂದಿದ್ದೇನೆ. ಇಎಂಐ ₹5 ಸಾವಿರ, ಉಳಿತಾಯ ವಿಚಾರದಲ್ಲಿ ಸಲಹೆ ನೀಡಿ.

ಉತ್ತರ: ನೀವು ಬಯಸಿದಂತೆ ₹ 2.50 ಲಕ್ಷ ಕೊಟ್ಟು ಬ್ಯಾಂಕ್‌ ಸಾಲದಿಂದ ಕಾರು ಕೊಳ್ಳಿರಿ. ನಿಮ್ಮ ವಯಸ್ಸು ಹಾಗೂ ಆದಾಯಕ್ಕೆ ಇದು ಅವಶ್ಯ. ಇದೊಂದು ಲಕ್ಸುರಿ ಅಲ್ಲ. ಪ್ರಾಯಶಃ ನಿಮ್ಮ ಕೆಲಸದಲ್ಲಿ ಭದ್ರತೆ ಇಲ್ಲವೆಂದು ಆರ್‌.ಡಿಯಂತಹ ಉಳಿತಾಯಕ್ಕೆ ನೀವು ಕೈ ಹಾಕಲಿಲ್ಲ ಎಂದೂ ಭಾವಿಸುವೆ. ನೀವು ಸ್ನಾತಕೋತ್ತರ ಪದವೀಧರರು. ಇಲ್ಲಿ ಅಲ್ಲದಿದ್ದರೆ ಇನ್ನೊಂದೆಡೆ ಕೆಲಸ ಸಿಕ್ಕಿಯೇ ಸಿಗುತ್ತದೆ. ನಿಮಗೆ ಮಗುವಿದೆ.

ಮುಂದಿನ ಭವಿಷ್ಯದ ಜವಾಬ್ದಾರಿ ಇದೆ. ತಕ್ಷಣ ₹ 10 ಸಾವಿರ ಆರ್‌.ಡಿ. 5 ವರ್ಷಗಳ ಅವಧಿಗೆ ಮಾಡಿ. ಒಂದು ವೇಳೆ ಈ ಠೇವಣಿ ಮುಂದುವರಿಸಲು ಆಗದೇ ಇರುವಲ್ಲಿ ಮಧ್ಯದಲ್ಲಿ ನಿಲ್ಲಿಸಿ ಬಡ್ಡಿ ಅಸಲು ಪಡೆಯಬಹುದು. ಸಾಧ್ಯವಾದರೆ ಪಿಎಚ್‌ಡಿ ಮಾಡಿ. ಇದು ನಿಮ್ಮ ಉದ್ಯೋಗಕ್ಕೆ ಇನ್ನಷ್ಟು ಭದ್ರತೆ ಒದಗಿಸುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು