ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್ ಶಾಪಿಂಗ್ ವೇಳೆ ಎಚ್ಚರ: ಹೆಚ್ಚಾಗಿದೆ ನಕಲಿ ಇ–ಕಾಮರ್ಸ್‌ ತಾಣಗಳ ಕಾಟ

Last Updated 6 ಅಕ್ಟೋಬರ್ 2021, 11:39 IST
ಅಕ್ಷರ ಗಾತ್ರ

ನವದೆಹಲಿ: ಪ್ರಮುಖ ಇ–ಕಾಮರ್ಸ್‌ ತಾಣಗಳು ಹಬ್ಬದ ಅವಧಿಯ ಮಾರಾಟ ಪೈಪೋಟಿಯಲ್ಲಿ ತೊಡಗಿರುವ ಸಂದರ್ಭದಲ್ಲೇ, ಹಲವು ನಕಲಿ ತಾಣಗಳು ಜನರನ್ನು ವಂಚಿಸುತ್ತಿರುವ ಬಗ್ಗೆ ವರದಿಯಾಗಿದೆ.

ಸ್ಮಾರ್ಟ್‌ಫೋನ್‌ಗಳಿಂದ ತೊಡಗಿ ದುಬಾರಿ ವಾಚ್‌ಗಳ ವರೆಗೆ ವಿವಿಧ ವಸ್ತುಗಳ ಮಾರಾಟದ ನೆಪದಲ್ಲಿ ನಕಲಿ ತಾಣಗಳು ಜನರನ್ನು ವಂಚಿಸುತ್ತಿವೆ. ಅನೇಕರು ಈಗಾಗಲೇ ಹಣ ಕಳೆದುಕೊಂಡಿದ್ದಾರೆ.

wellbuymall.com ಎಂಬ ನಕಲಿ ಇ–ಕಾಮರ್ಸ್ ತಾಣದ ಮೂಲಕ ವಸ್ತುಗಳನ್ನು ಖರೀದಿಸಲು ಮುಂದಾಗಿ ಸಾವಿರಾರು ಜನ ಈಗಾಗಲೇ ಮೋಸ ಹೋಗಿದ್ದಾರೆ. ಸದ್ಯ ಈ ಪೋರ್ಟಲ್‌ ಕ್ಲಿಕ್ ಮಾಡಿದಾಗ ಚೀನಾ ಭಾಷೆಯಲ್ಲಿ ‘ಸೈಟ್ ನಾಟ್ ಫೌಂಡ್’ ಎಂಬ ಸಂದೇಶ ಕಾಣಿಸುತ್ತಿದೆ.

ಇಂಥ ನಕಲಿ ತಾಣಗಳು, ಗ್ರಾಹಕರು ವಸ್ತುಗಳ ಖರೀದಿ ಪ್ರಕ್ರಿಯೆ ಮುಂದುವರಿಸಿ ಹಣ ಪಾವತಿಸುವ ವರೆಗೆ ಚಾಲ್ತಿಯಲ್ಲಿರುತ್ತವೆ. ಹಣ ಪಾವತಿಯಾದ ಬಳಿಕ ಗ್ರಾಹಕರಿಗೆ ಯಾವುದೇ ಸಂದೇಶವಾಗಲೀ ಪ್ರತಿಕ್ರಿಯೆಯಾಗಲೀ ಬರುವುದಿಲ್ಲ.

‘ನಾನು ವಸ್ತುವೊಂದರ ಖರೀದಿಗೆ ಆರ್ಡರ್ ಮಾಡಿ ಹಣವನ್ನೂ ಪಾವತಿಸಿದ್ದೆ. ಅವರು ವಸ್ತುವನ್ನೂ ಕಳುಹಿಸಿಲ್ಲ. ಯಾವುದೇ ಪ್ರತಿಕ್ರಿಯೆಯೂ ಬಂದಿಲ್ಲ’ ಎಂದು ವಂಚನೆಗೊಳಗಾಗಿರುವ ಸುಜಿತ್ ವರ್ಮಾ ಎಂಬವರು ‘ಸ್ಕ್ಯಾಮ್‌ಅಡ್ವೈಸರ್ ಡಾಟ್‌ ಕಾಂ’ನಲ್ಲಿ (scamadviser.com) ಬರೆದುಕೊಂಡಿದ್ದಾರೆ.

‘ನಾನು ಎಸ್‌ಎಸ್‌ಡಿ ಆರ್ಡರ್ ಮಾಡಿ ಹಣವನ್ನೂ ಪಾವತಿಸಿದ್ದೆ. ಅದು ನಕಲಿ ಇ–ಕಾಮರ್ಸ್ ತಾಣವಾಗಿದೆ. ದುರದೃಷ್ಟವೆಂದರೆ, ಅಂಥ ಇ–ಕಾಮರ್ಸ್ ತಾಣಗಳ ಜಾಹೀರಾತನ್ನು ಫೇಸ್‌ಬುಕ್ ಬೆಂಬಲಿಸುತ್ತಿದೆ. ಫೇಸ್‌ಬುಕ್‌ನಲ್ಲೇ ನಕಲಿ ಇ–ಕಾಮರ್ಸ್ ತಾಣಗಳ ಜಾಹೀರಾತು ಬರುತ್ತಿವೆ. ಹಣ ಪಾವತಿಸಿದ ಬಳಿಕ ಅವುಗಳಿಂದ ಯಾವುದೇ ಪ್ರತಿಕ್ರಿಯೆ ಇಲ್ಲ’ ಎಂದು ಸುನಿಲ್ ಗುಪ್ತಾ ಎಂಬವರು ತಿಳಿಸಿದ್ದಾರೆ.

ಗುರುಗ್ರಾಮ ಮೂಲದ ಆಯುಚ್ ಎಂಬವರಿಗೂ ಇದೇ ರೀತಿಯ ಅನುಭವವಾಗಿದೆ. ಸ್ಮಾರ್ಟ್‌ಫೋನ್‌ಗಾಗಿ ಮಿನಿ–ಪಾಕೆಟ್ ಚಾರ್ಜರ್ ಖರೀದಿಸಲು ಮುಂದಾಗಿದ್ದ ಅವರು ಇ–ಕಾಮರ್ಸ್ ತಾಣವೊಂದಕ್ಕೆ ₹1,668 ಪಾವತಿಸಿದ್ದರು. ಆಮೇಲೆ ಅದು ನಕಲಿ ಎಂಬುದು ಅವರ ಗಮನಕ್ಕೆ ಬಂದಿದೆ. ಈ ಕುರಿತು ಗುರುಗ್ರಾಮ ಪೊಲೀಸ್‌ ಠಾಣೆಯ ಸೈಬರ್ ಅಪರಾಧ ಸೆಲ್‌ಗೆ ಅವರು ದೂರು ನೀಡಿದ್ದಾರೆ.

ಹೆಚ್ಚಿನ ನಕಲಿ ತಾಣಗಳು ಸಾಮಾಜಿಕ ಮಾಧ್ಯಮ ಫೇಸ್‌ಬುಕ್‌ನಲ್ಲಿ ಖಾತೆ ಸೃಷ್ಟಿಸಿ ಗ್ರಾಹಕರನ್ನು ವಂಚಿಸುತ್ತಿವೆ.

ಆರ್ಡರ್ ಮಾಡಿದ ವಸ್ತುಗಳು ಬಾರದೇ ಇರುವಾಗ, ತುಂಬಾ ವಿಳಂಬವಾದಾಗ ಅನುಮಾನಗೊಂಡ ಗ್ರಾಹಕರು ಫೇಸ್‌ಬುಕ್‌ಗೆ ವರದಿ ಮಾಡುತ್ತಾರೆ. ಅದು ನಿಜವಾದ ಜಾಹೀರಾತುದಾರರೇ ಅಥವಾ ನಕಲಿ ತಾಣಗಳೇ ಎಂಬುದನ್ನು ಫೇಸ್‌ಬುಕ್ ದೃಢೀಕರಿಸಿಕೊಳ್ಳುವ ಹೊತ್ತಿಗೆ ಅನೇಕರು ವಂಚನೆಗೊಳಗಾಗಿರುತ್ತಾರೆ. ತ್ವರಿತವಾಗಿ ಹಣ ಮಾಡುವ ನಕಲಿ ತಾಣಗಳು ಬಳಿಕ ಫೇಸ್‌ಬುಕ್‌ನಲ್ಲಿ ಖಾತೆಯನ್ನು ಮುಚ್ಚಿಬಿಡುತ್ತಿವೆ ಎನ್ನಲಾಗಿದೆ.

ಜಾಹೀರಾತು ನೀಡುವ ತಾಣಗಳ ಬಗ್ಗೆ ಜನರಿಂದ ಅಭಿಪ್ರಾಯ ಸಂಗ್ರಹಿಸಿ ಅವು ಅಸಲಿಯೇ ನಕಲಿಯೇ ಎಂದು ಫೇಸ್‌ಬುಕ್ ನಿರ್ಧಾರಕ್ಕೆ ಬರುವ ಪ್ರಕ್ರಿಯೆಗೆ ಸುಮಾರು ಒಂದು ತಿಂಗಳು ಬೇಕಾಗುತ್ತದೆ. ಈ ಅವಧಿಯನ್ನು ಸೈಬರ್‌ ವಂಚಕರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸೈಬರ್ ತಜ್ಞರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT