ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ಪರಿಹಾರ: ರಾಜ್ಯಗಳಿಗೆ ₹ 14,103 ಕೋಟಿ ಬಿಡುಗಡೆ

ಕೊರೊನಾದ ಆರ್ಥಿಕ ಬಿಕ್ಕಟ್ಟು ಎದುರಿಸಲು ಕೇಂದ್ರ ಸರ್ಕಾರದ ಕ್ರಮ
Last Updated 8 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ನವದೆಹಲಿ: ಜಿಎಸ್‌ಟಿಯಿಂದ ರಾಜ್ಯಗಳಿಗೆ ಆಗಲಿರುವ ವರಮಾನ ನಷ್ಟ ತುಂಬಿಕೊಳ್ಳಲುಕೇಂದ್ರ ಹಣಕಾಸು ಸಚಿವಾಲಯವು ಪರಿಹಾರ ಸೆಸ್‌ ರೂಪದಲ್ಲಿ ₹ 14,103 ಕೋಟಿ ಬಿಡುಗಡೆ ಮಾಡಿದೆ.

ಕೊರೊನಾದಿಂದಾಗಿ ರಾಜ್ಯಗಳ ಆರ್ಥಿಕ ಬಿಕ್ಕಟ್ಟು ಹೆಚ್ಚಾಗುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಅಕ್ಟೋಬರ್‌–ನವೆಂಬರ್‌ ಅವಧಿಗೆ ರಾಜ್ಯಗಳಿಗೆ ಒಟ್ಟಾರೆ ₹ 34,053 ಕೋಟಿ ಮೊತ್ತದ ಪರಿಹಾರ ನೀಡಿದಂತಾಗಿದೆ. ಮೊದಲ ಕಂತಿನಲ್ಲಿ ₹ 19,950 ಕೋಟಿ ನೀಡಲಾಗಿತ್ತು.

ಡಿಸೆಂಬರ್‌ ಮತ್ತು ಜನವರಿ ಅವಧಿಗೆ ರಾಜ್ಯಗಳಿಗೆ ನೀಡಬೇಕಿರುವ ಬಾಕಿ ಮೊತ್ತವನ್ನೂ ಹಂತ ಹಂತವಾಗಿ ಶೀಘ್ರವೇ ನೀಡುವ ಬಗ್ಗೆ ಸಚಿವಾಲಯ ಚಿಂತನೆ ನಡೆಸುತ್ತಿದೆ.

ಕೇಂದ್ರ ಸರ್ಕಾರವು ಇದುವರೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟಾರೆ ₹1.35 ಲಕ್ಷ ಕೋಟಿಗಳಷ್ಟು ಜಿಎಸ್‌ಟಿ ಪರಿಹಾರ ಸೆಸ್‌ ಬಿಡುಗಡೆ ಮಾಡಿದೆ.

ಮಾರ್ಚ್‌ನಲ್ಲಿ ಜಿಎಸ್‌ಟಿ ಸಂಗ್ರಹವು ₹ 1 ಲಕ್ಷ ಕೋಟಿಯಿಂದ ಕೆಳಕ್ಕಿಳಿದಿದ್ದು, ₹97,597 ಕೋಟಿಗಳಷ್ಟಾಗಿದೆ. ಕೊರೊನಾದಿಂದಾಗಿ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಈಗಾಗಲೇ ಮಂದಗತಿಯಲ್ಲಿ ಸಾಗುತ್ತಿರುವ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಹೆಚ್ಚಿಸಿದೆ.

ಸಾಲ ಪಡೆಯಲು ಅನುಮತಿ

ಏಪ್ರಿಲ್‌–ಡಿಸೆಂಬರ್‌ ಅವಧಿಯಲ್ಲಿ ಮಾರುಕಟ್ಟೆಯಿಂದ ₹ 3.20 ಲಕ್ಷ ಕೋಟಿ ಸಾಲ ಪಡೆಯಲು ಹಣಕಾಸು ಸಚಿವಾಲಯವು ಎಲ್ಲ ರಾಜ್ಯಗಳಿಗೂ ಅವಕಾಶ ಕಲ್ಪಿಸಿದೆ.

ಕೋವಿಡ್‌ ನಿಯಂತ್ರಿಸಲು ಗರಿಷ್ಠ ನೆರವು ನೀಡುವಂತೆ ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸುತ್ತಿವೆ. ಹೀಗಾಗಿ ಸಚಿವಾಲಯ ಈ ನಿರ್ಧರಕ್ಕೆ ಬಂದಿದೆ.

2020–21ನೇ ಹಣಕಾಸು ವರ್ಷಕ್ಕೆ ರಾಜ್ಯಗಳ ನಿವ್ವಳ ಸಾಲ ಮಿತಿಯ ಆಧಾರದ ಮೇಲೆ ಶೇ 50ರಷ್ಟನ್ನು ಮಾರುಕಟ್ಟೆಯಿಂದ ಪಡೆಯಲು ಅನುಮತಿ ನೀಡಲು ನಿರ್ಧರಿಸಲಾಗಿದೆ ಎಂದು ಸಚಿವಾಲಯವು ಆರ್‌ಬಿಐಗೆ ಪತ್ರ ಬರೆದಿದೆ.

ಮುಕ್ತ ಮಾರುಕಟ್ಟೆಯಿಂದ ಬಂಡವಾಳ ಸಂಗ್ರಹಿಸಲು ರಾಜ್ಯಗಳಿಗೆ ಅಗತ್ಯವಾದ ನೆರವು ನೀಡುವಂತೆ ಆರ್‌ಬಿಐಗೆ ಮನವಿ ಮಾಡಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಕೆಲವು ರಾಜ್ಯಗಳ ವಿವರ

ರಾಜ್ಯ; ಮೊತ್ತ (ಕೋಟಿಗಳಲ್ಲಿ)

ಮಹಾರಾಷ್ಟ್ರ; ₹46,182

ಕರ್ನಾಟಕ; ₹27,054

ಗುಜರಾತ್; ₹26,112

ಪಶ್ಚಿಮ ಬಂಗಾಳ; ₹20,362

ರಾಜಸ್ಥಾನ; ₹16,387

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT